ಕಾಂಗ್ರೆಸ್ ಗೆದ್ದರೆ ಪ್ರತಿ ಬಡ ಮಹಿಳೆಗೆ ಒಂದು ಲಕ್ಷ: 5 ನಾರಿ ನ್ಯಾಯ ಗ್ಯಾರಂಟಿ ಘೋಷಿಸಿದ ರಾಹುಲ್

By Kannadaprabha NewsFirst Published Mar 14, 2024, 7:25 AM IST
Highlights

ಕರ್ನಾಟಕ ಹಾಗೂ ಕೆಲ ರಾಜ್ಯಗಳಲ್ಲಿ ಮಹಿಳೆಯರೂ ಸೇರಿದಂತೆ ವಿವಿಧ ವರ್ಗಗಳಿಗೆ ಪ್ರತಿ ತಿಂಗಳು ಹಣ ನೀಡುವ ‘ಗ್ಯಾರಂಟಿ’ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್‌ ಪಕ್ಷ ಇದೀಗ ಕೇಂದ್ರದಲ್ಲೂ ಇದೇ ಪ್ರಯೋಗಕ್ಕೆ ದೊಡ್ಡ ಮಟ್ಟದಲ್ಲಿ ಕೈಹಾಕಿದೆ.

ಪಿಟಿಐ ಧುಳೆ/ನವದೆಹಲಿ:  ಕರ್ನಾಟಕ ಹಾಗೂ ಕೆಲ ರಾಜ್ಯಗಳಲ್ಲಿ ಮಹಿಳೆಯರೂ ಸೇರಿದಂತೆ ವಿವಿಧ ವರ್ಗಗಳಿಗೆ ಪ್ರತಿ ತಿಂಗಳು ಹಣ ನೀಡುವ ‘ಗ್ಯಾರಂಟಿ’ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್‌ ಪಕ್ಷ ಇದೀಗ ಕೇಂದ್ರದಲ್ಲೂ ಇದೇ ಪ್ರಯೋಗಕ್ಕೆ ದೊಡ್ಡ ಮಟ್ಟದಲ್ಲಿ ಕೈಹಾಕಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ಕಡು ಬಡ ಕುಟುಂಬದ ತಲಾ ಒಬ್ಬ ಮಹಿಳೆಗೆ ‘ಮಹಾಲಕ್ಷ್ಮೀ ಗ್ಯಾರಂಟಿ’ ಯೋಜನೆಯಡಿ ಪ್ರತಿ ವರ್ಷ 1 ಲಕ್ಷ ರು. ನಗದು ನೀಡುವುದಾಗಿ ಪಕ್ಷದ ನಾಯಕ ರಾಹುಲ್‌ ಗಾಂಧಿ ಘೋಷಿಸಿದ್ದಾರೆ.

ಇದರ ಜೊತೆಗೆ, ಕೇಂದ್ರ ಸರ್ಕಾರದ ನೌಕರಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವುದು, ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟದ ನೌಕರರಿಗೆ ನೀಡುವ ಕೇಂದ್ರ ಸರ್ಕಾರದ ವೇತನವನ್ನು ದುಪ್ಪಟ್ಟು ಮಾಡುವುದು, ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಹಾಸ್ಟೆಲ್‌ ತೆರೆಯುವುದು ಹಾಗೂ ಎಲ್ಲಾ ಪಂಚಾಯ್ತಿಗಳಲ್ಲೂ ಅರೆ ನ್ಯಾಯಾಂಗ ಅಧಿಕಾರಿಯೊಬ್ಬರನ್ನು ನೇಮಿಸಿ ಮಹಿಳೆಯರಿಗೆ ಅವರ ಹಕ್ಕುಗಳನ್ನು ಪಡೆದುಕೊಳ್ಳಲು ನೆರವಾಗುವ ಒಟ್ಟು ಐದು ಗ್ಯಾರಂಟಿಗಳನ್ನು ‘ನಾರಿ ನ್ಯಾಯ’ ಹೆಸರಿನಲ್ಲಿ ರಾಹುಲ್‌ ಗಾಂಧಿ ಪ್ರಕಟಿಸಿದ್ದಾರೆ.

ಇಂದು ಕ್ಯಾಬಿನೆಟ್‌ನಲ್ಲಿ ಸಿಎಎ ಜಾರಿ ಕುರಿತು ಚರ್ಚೆ: ಸಿಎಂ ಸಿದ್ದರಾಮಯ್ಯ

ಮಹಾರಾಷ್ಟ್ರದ ಧುಳೆಯಲ್ಲಿ ಬುಧವಾರ ನಡೆದ ಮಹಿಳಾ ಸಮಾವೇಶದಲ್ಲಿ ರಾಹುಲ್‌ ಈ ಘೋಷಣೆಗಳನ್ನು ಮಾಡುತ್ತಿದ್ದಂತೆ ಈ ಬಗ್ಗೆ ‘ಎಕ್ಸ್‌’ನಲ್ಲಿ ಹೇಳಿಕೆ ನೀಡಿರುವ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ನಮ್ಮ ಭರವಸೆಗಳು ಬರೀ ಭರವಸೆಗಳಲ್ಲ. ಇವುಗಳನ್ನು ನಾವು ಜಾರಿಗೊಳಿಸುವುದು ಶಿಲಾಶಾಸನದಷ್ಟೇ ಸತ್ಯ. ನಾರಿ ನ್ಯಾಯ ಗ್ಯಾರಂಟಿಗಳೊಂದಿಗೆ ನಮ್ಮ ಪಕ್ಷವು ದೇಶದ ಮಹಿಳೆಯರಿಗಾಗಿ ಹೊಸ ಅಜೆಂಡಾ ನಿಗದಿಪಡಿಸುತ್ತಿದೆ’ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಕೂಡ ಈ ಕುರಿತು ಹೇಳಿಕೆ ನೀಡಿ, ‘ನಮ್ಮ ಪಕ್ಷ ನಾರಿ ನ್ಯಾಯ ಯೋಜನೆಯಡಿ ಇಂದು ಮಹಿಳೆಯರಿಗಾಗಿ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಈಗಾಗಲೇ ನಾವು ರೈತರಿಗಾಗಿ ಕಿಸಾನ್‌ ನ್ಯಾಯ, ಹಿಸೆದಾರಿ ನ್ಯಾಯ ಹಾಗೂ ಯುವಕರಿಗಾಗಿ ಯುವ ನ್ಯಾಯ ಕಾರ್ಯಕ್ರಮಗಳನ್ನು ಘೋಷಿಸಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್‌ದು ಕೇವಲ ಚುನಾವಣೆ ಗಿಮಿಕ್ ಅಷ್ಟೇ: ಎಂಟಿಬಿ ನಾಗರಾಜ್ 
 

ಕಾಂಗ್ರೆಸ್‌ನ ಐದು ಗ್ಯಾರಂಟಿಗಳು

1. ಮಹಾಲಕ್ಷ್ಮೀ ಗ್ಯಾರಂಟಿ: ದೇಶದ ಎಲ್ಲಾ ಕಡು ಬಡ ಕುಟುಂಬದ ತಲಾ ಒಬ್ಬ ಮಹಿಳೆಗೆ ಪ್ರತಿ ವರ್ಷ 1 ಲಕ್ಷ ರು.ಗಳನ್ನು ನೇರ ನಗದು ವರ್ಗಾವಣೆಯಡಿ ಬ್ಯಾಂಕ್‌ ಖಾತೆಗೆ ಜಮಾ ಮಾಡುವುದು.

2. ಆಧಿ ಆಬಾದಿ, ಪೂರಾ ಹಕ್‌: ಕೇಂದ್ರ ಸರ್ಕಾರದ ಎಲ್ಲಾ ಹುದ್ದೆಗಳಿಗೆ ಇನ್ನುಮುಂದೆ ಮಾಡಿಕೊಳ್ಳುವ ನೇಮಕಾತಿಯಲ್ಲಿ ಶೇ.50ರಷ್ಟನ್ನು ಮಹಿಳೆಯರಿಗೆ ಮೀಸಲು ಇರಿಸುವುದು.

3. ಶಕ್ತಿ ಕಾ ಸಮ್ಮಾನ್‌: ಆಶಾ, ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಯೂಟದ ನೌಕರರಿಗೆ ನೀಡುವ ಗೌರವಧನದಲ್ಲಿ ಕೇಂದ್ರ ಸರ್ಕಾರದ ಪಾಲನ್ನು ದುಪ್ಪಟ್ಟುಗೊಳಿಸುವುದು.

4. ಅಧಿಕಾರ ಮೈತ್ರಿ: ಎಲ್ಲಾ ಪಂಚಾಯ್ತಿಗಳಲ್ಲಿ ಒಬ್ಬ ಅರೆ ನ್ಯಾಯಾಂಗ ಅಧಿಕಾರಿಯನ್ನು ನೇಮಿಸಿ, ಮಹಿಳೆಯರಿಗೆ ಕಾನೂನಿನಡಿ ಇರುವ ಹಕ್ಕುಗಳನ್ನು ತಿಳಿದುಕೊಳ್ಳಲು ಮತ್ತು ಅವುಗಳ ಅನುಕೂಲ ಪಡೆಯಲು ನೆರವು ನೀಡುವುದು.

5. ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್‌: ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಹಾಸ್ಟೆಲ್‌ ಇರುವಂತೆ ನೋಡಿಕೊಳ್ಳುವುದು ಮತ್ತು ಈಗಿರುವ ಹಾಸ್ಟೆಲ್‌ಗಳನ್ನು ದ್ವಿಗುಣಗೊಳಿಸುವುದು.
 

click me!