
ಕೆಲ ದಿನಗಳ ಹಿಂದಷ್ಟೇ ರೀಲ್ಸ್‌ಗಾಗಿ ರಸ್ತೆ ಮೇಲೆ ವಾಹನದಲ್ಲಿ ಸ್ಟಂಟ್ ಮಾಡಲು ಹೋಗಿ ಹುಬ್ಬಳ್ಳಿಯಲ್ಲಿ 15 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ನಡೆದಿತು. ಇದೇ ರೀತಿಯ ಮತ್ತೊಂದು ಘಟನೆ ಈಗ ಹರ್ಯಾಣದ ನುಹ್‌ನಲ್ಲಿ ನಡೆದಿದೆ. ರಸ್ತೆ ಬದಿ ರೀಲ್ಸ್ ಮಾಡುತ್ತಿದ್ದ ಯುವಕನಿಗೆ ವೇಗವಾಗಿ ಬಂದ ಟ್ರಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿತೀಯ ಪಿಯುಸಿ ಓದುತ್ತಿದ್ದ 18 ವರ್ಷದ ತರುಣ ದಾರುಣವಾಗಿ ಸಾವನ್ನಪ್ಪಿದ್ದಾನೆ. ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೌದು ಕೆಲ ದಿನಗಳ ಹಿಂದಷ್ಟೇ ರಾಜ್ಯದ ಹುಬ್ಬಳ್ಳಿಯಲ್ಲಿ ರವಿನಗರದ ನಿವಾಸಿ, ಬಿಜೆಪಿ ಮುಖಂಡ ವೀರೇಶ ಸಂಗಳದ ಅವರ ಪುತ್ರ ನಮಿಷ್ ಸಂಗಳದ ಕಾರು ಮತ್ತು ಸ್ಕೂಟಿ ಮಧ್ಯೆ ಆ್ಯಕ್ಷನ್ ಬ್ರೇಕ್ ರೀಲ್ಸ್ ಮಾಡಲು ಹೋಗಿ ಅಪಘಾತವಾಗಿದ್ದು, ಸಾವನ್ನಪ್ಪಿದ ಘಟನೆ ರಾಜ್ಯದ ಗಮನ ಸೆಳೆದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅದೇ ರೀತಿ ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡಲು ಹೋಗಿ ಹರ್ಯಾಣದ ನುಹ್‌ನಲ್ಲೂ ಓರ್ವ ತರುಣ ಬಲಿಯಾಗಿದ್ದಾನೆ.
ಮೊಹಮ್ಮದ್ ಮೊಯಿನ್ ಮೃತ ವಿದ್ಯಾರ್ಥಿ, ಮೊಹಮ್ಮದ್ ಮೊಯಿನ್ ನುಹ್‌ನಲ್ಲಿರುವ ಶಹಪುರ್ ನಂಗ್ಲಿ ಗ್ರಾಮದ ನಿವಾಸಿ. ಘಟನೆಯಲ್ಲಿ ತನ ಸ್ನೇಹಿತ ಎಂಡಿ ಶಾದ್ ಹಾಗೂ ಕ್ಯಾಮರಾಮ್ಯಾನ್‌ಗೆ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂವರು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಇನ್ಸ್ಟಾಗ್ರಾಮ್‌ಗಾಗಿ ರೀಲ್ಸ್ ಶೂಟಿಂಗ್ ಮಾಡುವ ವೇಳೆ ಈ ದುರಂತ ಸಂಭವಿಸಿದ್ದು, ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಇಬ್ಬರು ರಸ್ತೆ ಬದಿ ಕೈಯಲ್ಲಿ ರೆಡ್ ಬುಲ್ ಟಿನ್ ಬಾಟಲ್ ಹಿಡಿದುಕೊಂಡು ಕ್ಯಾಮರಾಗೆ ಫೋಸ್ ನೀಡುತ್ತಾ ನಡೆದು ಬರುತ್ತಿದ್ದರೆ ಹಿಂದಿನಿಂದ ಬಂದ ಟ್ರಕ್ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರಲ್ಲಿ ಒಬ್ಬ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.
ವಿಪರ್ಯಾಸ ಎಂದರೆ ಮೊಹಮ್ಮದ್ ಮೊಯಿನ್ ಅವರ ಕೊನೆಕ್ಷಣ ಸ್ನೇಹಿತರ ಕ್ಯಾಮರಾದಲ್ಲಿ ಸೆರೆಯಾಗಿದೆ. ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೃಶ್ಯ ನೋಡಿದ ಜನ ಟ್ರಕ್ ಚಾಲಕ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಂತೆ ಕಾಣುತ್ತಿದೆ ಅವರು ರಸ್ತೆ ಪಕ್ಕದಲ್ಲಿ ಇದ್ದರೂ ಮಿತಿ ಮೀರಿರಲಿಲ್ಲ, ಆದರೂ ಟ್ರಕ್ ಚಾಲಕ ಉದ್ದೇಶಪೂರ್ವಕವಾಗಿ ಅವರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇಡೀ ಘಟನೆಯನ್ನು ಸ್ಥಳದಲ್ಲಿದ್ದ ಸ್ನೇಹಿತರೊಬ್ಬರು ರೆಕಾರ್ಡ್ ಮಾಡುತ್ತಿದ್ದ ರೀಲ್‌ನಲ್ಲಿ ಸೆರೆಹಿಡಿಯಲಾಗಿದೆ. ಅವರು ಎಕ್ಸ್‌ಪ್ರೆಸ್‌ವೇಯ ಉದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದರು, ಇದು ನಿರ್ಬಂಧಿತ ಪ್ರದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೋರ್ಟ್ ನಡೆಯುತ್ತಿದ್ದಾಗಲೇ ದುರಂತ: ಮಹಿಳಾ ನ್ಯಾಯಾಧೀಶರ ತಲೆ ಮೇಲೆ ಬಿದ್ದ ಸೀಲಿಂಗ್ ಫ್ಯಾನ್
ಸದರ್ ಫಿರೋಜ್‌ಪುರ್ ಝಿರ್ಕಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಸುಭಾಷ್ ಚಂದ್ ಮಾತನಾಡಿ, ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಹದಿಹರೆಯದ ತರುಣ ಹಲವಾರು ಅಡಿಗಳಷ್ಟು ಎತ್ತರಕ್ಕೆ ಗಾಳಿಯಲ್ಲಿ ಎಸೆಯಲ್ಪಟ್ಟರು. ಅವರು ಶೂಟಿಂಗ್ ರೀಲ್‌ನಲ್ಲಿ ಎಷ್ಟು ಮಗ್ನರಾಗಿದ್ದರು ಎಂದರೆ, ತನ್ನ ಸ್ಮಾರ್ಟ್‌ಫೋನ್‌ನಿಂದ ರೀಲ್‌ನಲ್ಲಿ ಶೂಟ್ ಮಾಡುತ್ತಿದ್ದವರಿಗೂ ಟ್ರಕ್ ಇತರ ವಾಹನಗಳು ಸ್ನೇಹಿತರಿಗೆ ಡಿಕ್ಕಿ ಹೊಡೆಯುವಂತೆ ಬರುತ್ತಿದೆ ಎಂದು ಅವರನ್ನು ಎಚ್ಚರಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
ದಾರಿಯಲ್ಲಿ ಸಾಗುತ್ತಿದ್ದವರು ಯಾರೋ ಈ ಮೂವರನ್ನು ಆಸ್ಪತ್ರೆಗ ದಾಖಲಿಸಿದ್ದಾರೆ. ದುರಂತದಲ್ಲಿ ಮೊಯಿನ್ ಆಸ್ಪತ್ರೆ ತಲುಪುವ ಮೊದಲೇ ಸಾವನ್ನಪ್ಪಿದರೆ ಇನ್ನಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕಾಗಿ ಅಪಾಯಕಾರಿ ಸ್ಥಳಗಳಲ್ಲಿ ಶೂಟ್ ಮಾಡುವ ಮೂಲಕ ಯುವಕರು ಜೀವವನ್ನೇ ಪಣಕ್ಕಿಡುತ್ತಿದ್ದಾರೆ.
ಇದನ್ನೂ ಓದಿ: ಅಮೆರಿಕಾ ಪಾಕ್ ಮೇಲೆ ದಾಳಿ ಮಾಡಿದರೆ ಪಾಕ್ ಭಾರತದ ಮೇಲೆ ದಾಳಿ ಮಾಡಲಿದೆ ಎಂದ ಪಾಕ್ ಮಾಜಿ ಹೈಕಮೀಷನರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ