ಎಮೆರ್ಜೆನ್ಸಿ ನೆನೆದು 2 ನಿಮಿಷದ ಮೌನ ಪ್ರಾರ್ಥನೆಗೆ ಕರೆಕೊಟ್ಟ ಸ್ಪೀಕರ್‌: ವಿಪಕ್ಷಗಳ ಗಲಾಟೆ ಕಲಾಪ ಮುಂದೂಡಿಕೆ

Published : Jun 26, 2024, 03:08 PM ISTUpdated : Jun 26, 2024, 03:23 PM IST
ಎಮೆರ್ಜೆನ್ಸಿ ನೆನೆದು  2 ನಿಮಿಷದ ಮೌನ ಪ್ರಾರ್ಥನೆಗೆ ಕರೆಕೊಟ್ಟ ಸ್ಪೀಕರ್‌: ವಿಪಕ್ಷಗಳ ಗಲಾಟೆ ಕಲಾಪ ಮುಂದೂಡಿಕೆ

ಸಾರಾಂಶ

ನೂತನವಾಗಿ ಆಯ್ಕೆಯಾದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತುರ್ತು ಪರಿಸ್ಥಿತಿಯ 50ನೇ ವರ್ಷಾಚರಣೆ ಹಿನ್ನೆಲೆ ಆ ದಿನಗಳಲ್ಲಿ ಮಡಿದವರಿಗಾಗಿ ಸದನದಲ್ಲಿ 2 ನಿಮಿಷಗಳ ಮೌನ ಪ್ರಾರ್ಥನೆಗೆ ಕರೆ ನೀಡಿದ್ದು, ಇದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯ್ತು.

ನವದೆಹಲಿ: ಲೋಕಸಭೆ ನೂತನ ಸ್ಪೀಕರ್ ಆಗಿ ಇಂದು ಓಂ ಬಿರ್ಲಾ ಅವರು 2ನೇ ಬಾರಿಗೆ ನೇಮಕಗೊಂಡರು ಇದಾದ ನಂತರ ಪ್ರಧಾನಿ ಮೋದಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ನೂತನ ಸ್ಪೀಕರ್‌ಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಇದಾದ ನಂತರ ಪ್ರಧಾನಿ ಮೋದಿ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪರಸ್ಪರ ಹಸ್ತಲಾಘವ ಮಾಡಿ ಅಚ್ಚರಿ ಮೂಡಿಸಿದರು. ಇವರ ಈ ಶೇಕ್ ಹ್ಯಾಂಡ್ ಕಲಾಪಕ್ಕೆ ಹೊಸ ಕಳೆ ನೀಡಲಿದೆ ಎಂದು ಬಣ್ಣಿಸಲಾಗಿತ್ತು. ಆದರೆ ಅದಾಗಿ ಸ್ವಲ್ಪ ಹೊತ್ತಿನಲ್ಲಿ ಸದನ ರಣಾಂಗಣವಾಗಿ ಮುಂದೂಡಿಕೆಯಾಗಿದೆ. ಇದಕ್ಕೆ ಕಾರಣವಾಗಿದ್ದು, ನೂತನ ಸ್ಪೀಕರ್ ಓಂ ಬಿರ್ಲಾ ಅವರ ಮಾತು. 

ನೂತನವಾಗಿ ಆಯ್ಕೆಯಾದ ಓಂ ಬಿರ್ಲಾ ಸದನವನ್ನು ಉದ್ದೇಶಿಸಿ ಮಾತನಾಡುತ್ತಾ ಸಂಸತ್ ಸದಸ್ಯರು ಎಲ್ಲರೂ ದೇಶಕ್ಕಾಗಿ ಜೊತೆಯಾಗಿಯೇ ಸಾಗಬೇಕು, ಸದಸ್ಯರು ಸದನದಲ್ಲಿ ಗೌರವವನ್ನು ಕಾಪಾಡಬೇಕು. ಸದನದಲ್ಲಿ ಪ್ರತಿಭಟನೆ ಮಾಡುವುದಕ್ಕೂ  ಬೀದಿಯಲ್ಲಿ ಪ್ರತಿಭಟನೆ ಮಾಡುವುದಕ್ಕೂ ವ್ಯತ್ಯಾಸವಿದೆ ಎಂದು ಹೇಳಿದರು. ಇದಾದ ನಂತರ ಅವರು ತುರ್ತು ಪರಿಸ್ಥಿತಿ ದಿನಗಳ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸದನದಲ್ಲಿ 2 ನಿಮಿಷಗಳ ಮೌನ ಪ್ರಾರ್ಥನೆಗೆ ಕರೆ ನೀಡಿದರು. ತುರ್ತು ಪರಿಸ್ಥಿತಿ ದಿನಗಳನ್ನು ಕರಾಳ ದಿನ ಎಂದು ಕರೆದ ಅವರು ಎರಡು ನಿಮಿಷಗಳ ಮೌನ ಪ್ರಾರ್ಥನೆಗೆ ಕರೆ ನೀಡಿದರು. ಇದು ವಿರೋಧ ಪಕ್ಷವನ್ನು ಕೆರಳಿಸಿದ್ದು, ಸದನದಲ್ಲಿ ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿದ ಹಿನ್ನೆಲೆಯಲ್ಲಿ ಕಲಾಪದಲ್ಲಿ ಮೊದಲ ದಿನವೇ ಗಲಾಟೆ ಆರಂಭವಾಗಿ ಸ್ಪೀಕರ್ ಕಲಾಪವನ್ನು ಮುಂದೂಡಿಕೆ ಮಾಡಿದರು.

ಇಬ್ಬರಲ್ಲ ಮೂವರಲ್ಲ ಇಂದು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಅಖಿಲೇಶ್ ಯಾದವ್‌ ಕುಟುಂಬದ ಐವರು...!

ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೂಲ ಹೇಳುವುದೇನೆಂದರೆ 'ಈ ವರ್ಷ ತುರ್ತು ಪರಿಸ್ಥಿತಿಗೆ 50ನೇ ವರ್ಷ. ಎಲ್ಲಾ ಐತಿಹಾಸಿಕ ಘಟನೆಗಳ ಬಗ್ಗೆ ಸಂಘಟಿತವಾಗಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ.  ಯುವ ತಲೆಮಾರುಗಳು ಪ್ರಜಾಪ್ರಭುತ್ವದ ಬಗ್ಗೆ ತಿಳಿದುಕೊಂಡರಷ್ಟೇ ಸಂವಿಧಾನದ ಬಗೆಗಿನ ಜಾಗೃತಿ  ಸಾಧ್ಯ'

ಆದರೆ ಸ್ಪೀಕರ್ ಅವರ ಎಮರ್ಜೆನ್ಸಿ ಮಾತಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದು, ಇದೊಂದು ದುರಾದೃಷ್ಟಕರ ವಿಚಾರ, ಸ್ಪೀಕರ್ ವಿಭಾಜಿಸುವ ಹೇಳಿಕೆ ಮೂಲಕ ಸಂಸತ್‌ನ ಒಮ್ಮತದ ಮನೋಭಾವವನ್ನು ಒಡೆದಿದ್ದಾರೆ. ಇದು ಅಗತ್ಯ ಇರಲಿಲ್ಲ, ಇದಾಗಿ 49 ವರ್ಷಗಳು ಕಳೆದಿವೆ ಎಂದು ಹೇಳಿದ್ದಾರೆ.

ಲೋಕಸಭಾ ನೂತನ ಸಭಾಪತಿ ಸ್ವಾಗತಿಸಿದ ಬಳಿಕ ರಾಹುಲ್,ಮೋದಿ ಪರಸ್ಪರ ಶೇಕ್‌ಹ್ಯಾಂಡ್

ಇದಕ್ಕೂ ಮೊದಲು ಕಲಾಪದಲ್ಲಿ ನೂತನ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿ ಮಾತನಾಡಿದ, ರಾಹುಲ್ ಗಾಂಧಿ ನೀವು ಜನರ ಧ್ವನಿಯ ಕೊನೆಯ ತೀರ್ಪುಗಾರ  ಸರ್ಕಾರ ರಾಜಕೀಯ ಶಕ್ತಿಯನ್ನು ಹೊಂದಿರಬಹುದು. ಆದರೆ ವಿರೋಧ ಪಕ್ಷ ಕೂಡ ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ. ವಿರೋಧಪಕ್ಷವೂ ನಿಮಗೆ ಕೆಲಸದಲ್ಲಿ ಸಹಾಯ ಮಾಡಲಿದೆ. ನೀವು ನಮಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಡುವಿರಿ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದರು. 

ಪ್ರಧಾನಿ ನರೇಂದ್ರ ಮೋದಿಯವರು ಕೂಡ ಓಂ ಬಿರ್ಲಾ ಅವರನ್ನು ಸ್ವಾಗತಿಸುತ್ತಾ,  ಮುಂದಿನ ಐದು ವರ್ಷಗಳ ಕಾಲ ನಿಮ್ಮ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿರುತ್ತೇವೆ ನಿಮ್ಮ ಸಿಹಿಯಾದ ನಗು ಇಡೀ ಸದನವನ್ನು ಖುಷಿಯಾಗಿಡುತ್ತದೆ ಎಂದು ಹೇಳಿದರು. ಆದರೆ ಇದಾಗಿ ಸ್ವಲ್ಪ ಹೊತ್ತಿನಲ್ಲಿ ಓಂ ಬಿರ್ಲಾ ಅವರ ಭಾಷಣದ ಕಾರಣಕ್ಕೆ ವಿರೋಧ ಪಕ್ಷ ಸಿಟ್ಟುಗೊಂಡು ಬೊಬ್ಬೆ ಹಾಕಲು ಶುರು ಮಾಡಿದ್ದು ಕಲಾಪ ಮುಂದೂಡಿಕೆ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?