'ನಿಮ್ಮಂತ ಸುಂದರಿ ಯಾರೂ ಇಲ್ಲ ಮೇಡಂ'; ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಸಿಎಂ ಕೋಟಾದಡಿ IAS ಹುದ್ದೆ ಕೊಡಿಸ್ತೇನೆ!

Published : Sep 16, 2026, 01:35 PM IST
Uttar Pradesh Political Leader Offer IAS Post

ಸಾರಾಂಶ

ರಾಜಕೀಯ ನಾಯಕರು ಹೇಗೆಲ್ಲಾ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆಯೊಂದು ಸಾಕ್ಷಿಯಾಗಿದೆ. ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಮಹಿಳೆಗೆ ನೀವು ಅತ್ಯಂತ ಸುಂದರವಾಗಿದ್ದೀರಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಿಮಗೆ ಸಿಎಂ ಕೋಟಾದಡಿ IAS ಹುದ್ದೆ ಕೊಡಿಸುತ್ತೇನೆ ಎಂದು ಹೇಳಿದ್ದಾರೆ. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ (Samajwadi Party) ನಾಯಕರೊಬ್ಬರ ವಿವಾದಿತ ವಾಟ್ಸಾಪ್ ಚಾಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ರಾಜ್ಯದಲ್ಲಿ ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಮಹಿಳಾ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಮುದ್ದಾದ ಸಂದೇಶ ಕಳುಹಿಸಿರುವ ಎಸ್‌ಪಿ ನಾಯಕ, 'ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಕೋಟಾದಡಿ ನಿಮಗೊಬ್ಬರಿಗೆ ಐಎಎಸ್ (IAS) ಅಧಿಕಾರಿ ಹುದ್ದೆ ಕೊಡಿಸುತ್ತೇನೆ' ಎಂದು ಭರವಸೆ ನೀಡಿರುವುದು ಈಗ ವಿವಾದದ ಕೇಂದ್ರಬಿಂದುವಾಗಿದೆ.

ಮಥುರಾ ಮೂಲದ ಸಮಾಜವಾದಿ ಪಾರ್ಟಿ ನಾಯಕ ಡಾ. ರಾಜನ್ ರಿಜ್ವಿ (Dr Rajan Rizvi) ಮತ್ತು ಮಹಿಳೆಯೊಬ್ಬರ ನಡುವಿನ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಈಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿವೆ.

ವೈರಲ್ ವಾಟ್ಸಾಪ್ ಸಂದೇಶದಲ್ಲಿ ಏನಿದೆ?

ಪಾಯಲ್ ಎನ್ನುವ ಮಹಿಳೆಯನ್ನು ಉದ್ದೇಶಿಸಿ ಮಾಡಲಾಗಿರುವ ಈ ಮೆಸೇಜ್‌ನಲ್ಲಿ, ರಾಜನ್ ರಿಜ್ವಿ ತಮ್ಮ ಮಾತುಗಳಿಂದ ಆಕೆಯ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ. ಜತೆಗೆ ಆಕೆಯ ಸೌಂದರ್ಯ ಹಾಗೂ ವ್ಯಕ್ತಿತ್ವವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ಸಂದೇಶದಲ್ಲಿ, 'ಹಲೋ ಮೇಡಂ, ನನ್ನ ಮಾತುಗಳು ನಿಮ್ಮ ಮನಸ್ಸಿಗೆ ನೋವುಂಟು ಮಾಡಿದ್ದರೆ ಕ್ಷಮಿಸಿ. ನೀವು ಅಸಾಧಾರಣ ವ್ಯಕ್ತಿತ್ವ ಹೊಂದಿರುವ ಮಹಿಳೆ. ಸುಂದರವಾಗಿರುವುದರ ಜೊತೆಗೆ ನೀವು ಒಳ್ಳೆಯ ಸ್ವಭಾವದವರು ಮತ್ತು ನಿಮ್ಮ ಕೆಲಸದಲ್ಲಿ ಬಹಳ ನುರಿತವರು. ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ಪರಿಪೂರ್ಣ ಮಹಿಳೆ. ಈ ಉದ್ಯೋಗವು ನಿಮ್ಮ ವ್ಯಕ್ತಿತ್ವಕ್ಕೆ ಸರಿಹೋಗುವುದಿಲ್ಲ ಎಂದು ನನಗೆನಿಸುತ್ತದೆ. ಭವಿಷ್ಯದಲ್ಲಿ ನಾನು ರಾಜಕೀಯದಲ್ಲಿ ಮುಂದುವರಿದು, ಎಸ್‌ಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಮುಖ್ಯಮಂತ್ರಿಗಳ ಮೂಲಕ ಡೆಪ್ಯುಟೇಶನ್‌ನಲ್ಲಿ ನಿಮ್ಮನ್ನು IAS ಅಧಿಕಾರಿಯನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ. ನನ್ನ ಬಗ್ಗೆ ಸಕಾರಾತ್ಮಕ ಭಾವನೆ ಇಟ್ಟುಕೊಂಡು ನಮ್ಮ ಕೆಲಸವನ್ನು ಮಾಡಿಕೊಡುತ್ತೀರಿ ಎಂದು ನಂಬಿದ್ದೇನೆ' ಎಂದು ಬರೆಯಲಾಗಿದೆ.

ಪೊಲೀಸ್ ಮೆಟ್ಟಿಲೇರಿದ ಪ್ರಕರಣ:

ಈ ವೈರಲ್ ಚಾಟ್ ಕೇವಲ ರಾಜಕೀಯ ವಿವಾದಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಕಾನೂನು ಸ್ವರೂಪವನ್ನೂ ಪಡೆದುಕೊಂಡಿದೆ. ಮಹಿಳಾ ಬ್ಯಾಂಕ್ ಉದ್ಯೋಗಿಯೊಬ್ಬರು ಡಾ. ರಾಜನ್ ರಿಜ್ವಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅನಗತ್ಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಆರ್‌ಎಲ್‌ಡಿ (RLD) ವಾಗ್ದಾಳಿ:

ಈ ವಿವಾದದ ಬೆನ್ನಲ್ಲೇ ರಾಷ್ಟ್ರೀಯ ಲೋಕ ದಳ (RLD) ಮುಖಂಡರು ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಲ್‌ಡಿ ನಾಯಕ ರೋಹಿತ್ ಅಗರ್ವಾಲ್ ಪ್ರತಿಕ್ರಿಯಿಸಿ, 'ರಾಜ್ಯದಲ್ಲಿ ಎಸ್‌ಪಿ ಸರ್ಕಾರ ಇನ್ನೂ ಅಧಿಕಾರಕ್ಕೇ ಬಂದಿಲ್ಲ, ಆದರೆ ಆಗಲೇ ಅವರ ನಾಯಕರ ಅಸಲಿ ಬಣ್ಣ ಬಯಲಾಗಿದೆ!' ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಐಎಎಸ್ ಅಧಿಕಾರಿಗಳ ನೇಮಕಾತಿಗೆ ಸ್ಪಷ್ಟವಾದ ನಿಯಮಗಳಿರುತ್ತವೆ. ರಾಜಕೀಯ ಪ್ರಭಾವ ಬಳಸಿ ಹುದ್ದೆ ಕೊಡಿಸುವುದಾಗಿ ಹೇಳುವುದು ಎಸ್‌ಪಿ ನಾಯಕರ ಅಹಂಕಾರ ಮತ್ತು ವ್ಯವಸ್ಥೆಯ ಬಗ್ಗೆ ಇರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಸದ್ಯ ವೈರಲ್ ಆಗಿರುವ ಸ್ಕ್ರೀನ್‌ಶಾಟ್‌ಗಳ ನೈಜತೆ ಹಾಗೂ ಹಿನ್ನೆಲೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಕೋರ್ಟ್ ಇನ್ನುಳಿದ ವಿಚಾರಗಳ ಬಗ್ಗೆ ಅಂತಿಮ ತೀರ್ಪು ನೀಡಬೇಕಿದೆ. ಆದರೂ, ಚುನಾವಣೆಗೂ ಮುನ್ನ ಎಸ್‌ಪಿ ನಾಯಕನ ಈ ವಿವಾತದ ಆಫರ್ ಯುಪಿ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

"45 ವರ್ಷಗಳ ಹಳೆಯ ಚಿನ್ನದ ಕಳವು ಪ್ರಕರಣ: 80ರ ದಶಕದ AI ಫೋಟೋ ಟ್ರೆಂಡ್‌ನಿಂದ ಸಿಕ್ಕಿಬಿದ್ದ ಆರೋಪಿ!"
ಪೂಜೆ ಫಲ ಸಿಗಲಿಲ್ಲವೆಂದು ಪೂಜಾರಿ ಕಿಡ್ನಾಪ್‌: ₹1 ಲಕ್ಷಕ್ಕೆ ದುಡ್ಡಿಗೆ ಧಮ್ಕಿ, ಪುತ್ರನಿಂದ ಉಳಿಯಿತು ಜೀವ!