ನವದೆಹಲಿ(ಮಾ.13): ಪಂಚ ರಾಜ್ಯಗಳ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ದೆಹಲಿಯಲ್ಲಿ ಪರಾಮರ್ಶೆ ಸಭೆ ನಡೆಸುತ್ತಿದೆ. ಕಾಂಗ್ರೆಸ್ ಡಿಸಿಶನ್ ಮೇಕಿಂಗ್ ಬಾಡಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಿ ಮಹತ್ವದ ಚರ್ಚೆ ನಡೆಸುತ್ತಿದೆ. ಸಭೆಯಲ್ಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕ ರಾಹುಲ್ ಗಾಂಧಿ ಸೇರಿ ಹಲವರು ಭಾಗಿಯಾಗಿದ್ದಾರೆ. ಈ ಸಭೆಗೂ ಮುನ್ನ ಕಾಂಗ್ರೆಸ್ ಜಿ23 ಬಂಡಾಯ ನಾಯಕರು ಹೊಸ ಅಧ್ಯಕ್ಷನ ಹೆಸರನ್ನು ಸೂಚಿಸಿದೆ. ಹೀಗಾಗಿ ಇಂದಿನ ಸಭೆ ಮತ್ತಷ್ಟು ಕಗ್ಗಂಟಾಗಿದೆ.
ಪಂಚ ರಾಜ್ಯಗಳ ಸೋಲು ಕಾಂಗ್ರೆಸ್ ಪಕ್ಷಕ್ಕೆ ಇನ್ನಿಲ್ಲದ ಹಿನ್ನಡೆ ತಂದುಕೊಟ್ಟಿದೆ. ಪಂಜಾಬ್‌ನಲ್ಲಿ ಅಧಿಕಾರವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಮುಂಬರವು ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಮಾರ್ಗಸೂಚಿಗಳನ್ನು ರೂಪಿಸಲು ಹಾಗೂ ಪಕ್ಷದಲ್ಲಿನ ಭಿನ್ನಮತ ಶಮನಗೊಳಿಸಲು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ.
ಕಾಂಗ್ರೆಸ್ ಸದಸ್ಯತ್ವ ಅಭಿಯಾನ ವೇಳೆ ಕಾರ್ಯಕರ್ತರಿಂದ ಗಲಾಟೆ
ಈ ಸಭೆಗೂ ಮುನ್ನ ಜಿ23 ಬಂಡಾಯ ನಾಯಕರು ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ನಿವಾಸದಲ್ಲಿ ಸಭೆ ಸೇರಿ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಹಿರಿಯನ ನಾಯಕ ಮುಕುಲ್ ವಾಸ್ನಿಕ್‌ಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟಲು ಬಂಡಾಯ ನಾಯಕರು ಸೂಚಿಸಿದ್ದಾರೆ.
ದೇಶದಲ್ಲಿ ಗಾಂಧಿ ನಾಯಕತ್ವಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿರುವುದು ಪ್ರತಿ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಗಾಂಧಿ ಪರಿವಾರದಲ್ಲಿ ಸೂಕ್ತ ನಾಯಕರಿಲ್ಲದೇ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ. ಸಭೆಗೂ ಮುನ್ನ ಕಾಂಗ್ರೆಸ್ ಹಿರಿಯ ನಾಯಕ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿಕೆ ಬಾರಿ ಸಂಚಲನ ಮೂಡಿಸಿತ್ತು. ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಬೇಕು. ರಾಹುಲ್ ಕಾಂಗ್ರೆಸ್ ಪಕ್ಷವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲಿದ್ದಾರೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಇದು ಸಾರ್ವಜನಿಕ ವಲಯದಲ್ಲೂ ಭಾರಿ ಟೀಕೆಗೆ ಕಾರಣವಾಗಿದೆ.
Five State Election Result: ಹುಮ್ಮಸ್ಸಿನಲ್ಲಿದ್ದ ಕರ್ನಾಟಕ ಕಾಂಗ್ರೆಸ್‌ಗೆ ಪಂಚರಾಜ್ಯ ಶಾಕ್..!
ಪಕ್ಷದ ಮುಖ್ಯ ಕಚೇರಿಯಲ್ಲಿ ಭಾನುವಾರ ಸಂಜೆ 4 ಗಂಟೆಗೆ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಿಡಬ್ಲ್ಯುಸಿ ಸಭೆ ಆರಂಭಗೊಂಡಿದೆ. ಸಭೆಯಲ್ಲಿ ಪಂಚರಾಜ್ಯ ಚುನಾವಣೆ ಸೋಲಿಗೆ ಕಾರಣಗಳನ್ನು ಪರಾಮರ್ಶ ನಡೆಯುತ್ತಿದೆ. ಜೊತೆಗೆ ಸತತ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವದ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿರುವ ಕಾರಣ ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿರುವ ಆಂತರಿಕ (ಅಧ್ಯಕ್ಷೀಯ) ಚುನಾವಣೆಯನ್ನು ಅದಕ್ಕೂ ಮುನ್ನವೇ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ.
ಅಲ್ಲದೆ ಪುದುಚೇರಿ, ಅಸ್ಸಾಂ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲುಂಡಾಗ ಜಿ-23 ಬಂಡಾಯ ನಾಯಕರು ಪಕ್ಷದೊಳಗೆ ಆಮೂಲಾಗ್ರ ಸಾಂಸ್ಥಿಕ ಬದಲಾವಣೆ ಆಗ್ರಹಿಸಿದ್ದರು. ಆದರೆ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ಸೋನಿಯಾ ಗಾಂಧಿ ಖಂಡತುಂಡವಾಗಿ ಹೇಳಿದ್ದರು. ಆದರೆ ಈ ಬಾರಿ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್ ಅಸ್ತಿತ್ವವೇ ಇಲ್ಲದಂತೆ ದಯನೀಯ ಸೋಲು ಕಂಡಿದೆ. ಹೀಗಾಗಿ ಈಗ ಜಿ-23 ನಾಯಕರು ಮತ್ತೊಮ್ಮೆ ಸಿಡಿದೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಪಂಚರಾಜ್ಯ ಚುನಾವಣೆಯಲ್ಲಿನ ಸೋಲಿಗೆ ಹೊಣೆ ಯಾರು ಎಂಬ ಬಗ್ಗೆಯೂ ಚರ್ಚೆ ನಡೆಯಲಿದ್ದು, ಸೋಲಿನ ಹೊಣೆಯನ್ನು ನಿರ್ದಿಷ್ಟನಾಯಕರಿಗೆ ಹೊರಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
ಈ ನಡುವೆ ಪಕ್ಷದೊಳಗೆ ಸಾಂಸ್ಥಿಕ ಬದಲಾವಣೆಗೆ ಆಗ್ರಹಿಸುತ್ತಿರುವ ಜಿ-23 ನಾಯಕರು ಶುಕ್ರವಾರ ಸಂಜೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಸಭೆ ನಡೆಸಿ ನಿರ್ಣಾಯಕ ಸಿಡಬ್ಲ್ಯುಸಿ ಸಭೆಗೆ ಮುನ್ನ ತಮ್ಮ ಕಾರ್ಯತಂತ್ರವನ್ನು ರೂಪಿಸಿದ್ದಾರೆ. ಪಕ್ಷದ ಪುನರುಜ್ಜೀವನಕ್ಕೆ ಯಾವ ಕ್ರಮ ಕೈಗೊಳ್ಳಬಹುದೂ ಎಂಬ ಬಗ್ಗೆ ಚರ್ಚೆ ಸಹ ನಡೆಸಿದ್ದಾರೆ ಎನ್ನಲಾಗಿದೆ.