ರೈಲಲ್ಲಿ ಧೂಮಪಾನಕ್ಕೆ ದಂಡ ಭಾರಿ ಹೆಚ್ಚಳ, ಜೈಲು?

By Kannadaprabha NewsFirst Published Mar 21, 2021, 8:09 AM IST
Highlights

ರೈಲಲ್ಲಿ ಧೂಮಪಾನಕ್ಕೆ ದಂಡ ಭಾರಿ ಹೆಚ್ಚಳ, ಜೈಲು?| ರೈಲ್ವೆ ಇಲಾಖೆ ಗಂಭೀರ ಚಿಂತನೆ: ಮೂಲಗಳು| ಶತಾಬ್ದಿ ಎಕ್ಸ್‌ಪ್ರೆಸ್‌ ಬೆಂಕಿಗೆ ಸಿಗರೆಟ್‌ ಕಾರಣ

ನವದೆಹಲಿ(ಮಾ.21): ರೈಲ್ವೆ ಬೋಗಿಯೊಳಗೆ ಅಥವಾ ಶೌಚಾಲಯದೊಳಗೆ ಬೀಡಿ ಅಥವಾ ಸಿಗರೆಟ್‌ ಸೇದುವುದು ಕಂಡುಬಂದರೆ ಈಗ ವಿಧಿಸುತ್ತಿರುವ 100 ರು. ದಂಡವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲು ರೈಲ್ವೆ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಕೆಲ ಪ್ರಕರಣಗಳಲ್ಲಿ ಜೈಲುಶಿಕ್ಷೆ ಕೂಡ ವಿಧಿಸಲು ಅವಕಾಶವಿರುವಂತೆ ನಿಯಮಗಳಿಗೆ ತಿದ್ದುಪಡಿ ತರುವುದಕ್ಕೂ ಮುಂದಾಗಿದೆ.

ಮಾ.13ರಂದು ಉತ್ತರಾಖಂಡದ ರೈವಾಲಾದಲ್ಲಿ ದೆಹಲಿ-ಡೆಹ್ರಾಡೂನ್‌ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನ ಎಸ್‌5 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪ್ರಾಥಮಿಕ ತನಿಖೆಯ ವೇಳೆ ಆ ಘಟನೆಗೆ ಯಾರೋ ಬೋಗಿಯ ಶೌಚಾಲಯದ ಡಸ್ಟ್‌ಬಿನ್‌ಗೆ ಬೀಡಿ ಅಥವಾ ಸಿಗರೆಟ್‌ನ ತುಂಡನ್ನು ಎಸೆದಿರುವುದು ಕಾರಣವೆಂದು ತಿಳಿದುಬಂದಿದೆ. ಜೋರಾಗಿ ಚಲಿಸುವ ರೈಲಿನಲ್ಲಿ ಗಾಳಿಯ ಸಂಚಾರವೂ ವೇಗವಾಗಿ ಇದ್ದುದರಿಂದ ಕಸದ ಬುಟ್ಟಿಯಲ್ಲಿದ್ದ ಕಾಗದಕ್ಕೆ ಬೆಂಕಿ ಹೊತ್ತಿಕೊಂಡು ಅದು ಎಲ್ಲೆಡೆ ವ್ಯಾಪಿಸಿದೆ ಎಂದು ಹೇಳಲಾಗಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆ, ರೈಲಿನಲ್ಲಿ ಧೂಮಪಾನ ಮಾಡಿದರೆ ವಿಧಿಸುವ ದಂಡವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಹಾಗೂ ಕೆಲ ಪ್ರಕರಣಗಳಲ್ಲಿ ಜೈಲುಶಿಕ್ಷೆ ಕೂಡ ವಿಧಿಸಲು ಚಿಂತನೆ ನಡೆಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸದ್ಯ ರೈಲ್ವೆ ಕಾಯ್ದೆಯ ಸೆಕ್ಷನ್‌ 167ರ ಪ್ರಕಾರ ಬೋಗಿಯಲ್ಲಿ ಯಾರಾದರೂ ಧೂಮಪಾನ ಮಾಡುತ್ತಿರುವುದು ಕಂಡುಬಂದರೆ ಅಥವಾ ಸಹ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ ಮೇಲೂ ಧೂಮಪಾನ ಮಾಡಿದರೆ 100 ರು.ವರೆಗೆ ದಂಡ ವಿಧಿಸಲು ಅವಕಾಶವಿದೆ.

click me!