100 ಕೋಟಿ ಹಫ್ತಾ: ಮಹಾರಾಷ್ಟ್ರ ಸಚಿವನ ಡೀಲ್!

By Kannadaprabha NewsFirst Published Mar 21, 2021, 7:54 AM IST
Highlights

ಮಹಾ ಮಿನಿಸ್ಟರ್‌ ವಿರುದ್ಧ 100 ಕೋಟಿ ಹಫ್ತಾ ಬಾಂಬ್‌| ಮುಂಬೈನಲ್ಲಿ ಪ್ರತಿ ತಿಂಗಳೂ ವಸೂಲಿಗೆ ಗುರಿ ನಿಗದಿ| ಉದ್ಧವ್‌ಗೆ ಪೊಲೀಸ್‌ ಅಧಿಕಾರಿ ದೂರು: ಸಂಚಲನ| ರಾಜೀನಾಮೆಗೆ ಬಿಜೆಪಿ ತೀವ್ರ ಆಗ್ರಹ

ಮುಂಬೈ(ಮಾ.21): ‘ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆಯ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣದಲ್ಲಿ ಬಂಧಿತರಾಗಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಚಿನ್‌ ವಾಝೆಗೆ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರು ಬಾರ್‌-ರೆಸ್ಟೋರೆಂಟ್‌ಗಳಿಂದ ತಿಂಗಳಿಗೆ 100 ಕೋಟಿ ರು. ಹಫ್ತಾ ವಸೂಲಿ ಮಾಡುವ ಗುರಿ ನೀಡಿದ್ದರು’ ಎಂದು ಮುಂಬೈನ ನಿರ್ಗಮಿತ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಸ್ಫೋಟಕ ಆರೋಪ ಮಾಡಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಶನಿವಾರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಇ-ಮೇಲ್‌ ಮೂಲಕ ಪತ್ರವೊಂದನ್ನು ಬರೆದಿರುವ ಪರಮ್‌ ಬೀರ್‌ ಸಿಂಗ್‌, ‘ಗೃಹ ಸಚಿವ ಅನಿಲ್‌ ದೇಶಮುಖ್‌ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಇದರಿಂದಾಗಿ ಉದ್ಧವ್‌ ಸರ್ಕಾರದ ವಿರುದ್ಧ ಕತ್ತಿ ಮಸೆಯುತ್ತಿದ್ದ ಬಿಜೆಪಿಗೆ ಬಹುದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ‘ಇದು ಗಂಭೀರ ಆರೋಪ. ದೇಶಮುಖ್‌ ರಾಜೀನಾಮೆ ನೀಡಬೇಕು ಹಾಗೂ ಕೇಂದ್ರ ಸರ್ಕಾರದ ಸ್ವತಂತ್ರ ತನಿಖಾ ಸಂಸ್ಥೆಯಿಂದ ಆರೋಪಗಳ ವಿಚಾರಣೆ ನಡೆಯಬೇಕು’ ಎಂದು ಅದು ಆಗ್ರಹಿಸಿದೆ. ಆದರೆ, ‘ಆರೋಪ ಸುಳ್ಳು’ ಎಂದಿರುವ ದೇಶಮುಖ್‌, ‘ಮಾನಹಾನಿ ದಾವೆ ಹೂಡುವೆ’ ಎಂದಿದ್ದಾರೆ.

ಇದರ ನಡುವೆಯೇ, ‘ಪತ್ರದ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ. ಏಕೆಂದರೆ ಅದು ಅಧಿಕೃತ ಇ-ಮೇಲ್‌ನಿಂದ ಬಂದಿಲ್ಲ. ಅದಕ್ಕೆ ಸಿಂಗ್‌ ಸಹಿ ಇಲ್ಲ’ ಎಂದು ಮುಖ್ಯಮಂತ್ರಿ ಸಚಿವಾಲಯ ಹೇಳಿದೆ. ಇದರ ಬೆನ್ನಲ್ಲೇ ತಡರಾತ್ರಿ ಪ್ರತಿಕ್ರಿಯಿಸಿರುವ ಸಿಂಗ್‌, ‘ಆ ಪತ್ರ ನನ್ನದೇ. ಸಹಿ ಇರುವ ಇನ್ನೊಂದು ಪತ್ರ ಕಳಿಸುವೆ’ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇಡೀ ಪ್ರಕರಣ ಕುತೂಹಲ ಕೆರಳಿಸಿದ್ದು, ವಿವಾದ ತಾರಕಕ್ಕೇರಿದರೆ ದೇಶಮುಖ್‌ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಪತ್ರದಲ್ಲಿ ಏನಿದೆ?:

‘ಪ್ರತಿ ತಿಂಗಳು 100 ಕೋಟಿ ರು. ವಸೂಲಿ ಮಾಡುವ ಗುರಿಯನ್ನು ಸಚಿನ್‌ ವಾಝೆಗೆ ಗೃಹ ಸಚಿವರು ನೀಡಿದ್ದರು. ಈ ಗುರಿಯನ್ನು ಸಾಧಿಸುವ ಸಲುವಾಗಿ ಮುಂಬೈನಲ್ಲಿರುವ 1750 ಬಾರ್‌, ರೆಸ್ಟೋರೆಂಟ್‌ ಮತ್ತು ಇತರ ಅಂಗಡಿ ಮುಂಗಟ್ಟುಗಳನ್ನು ಗುರಿಯಾಗಿಸಿಕೊಳ್ಳುವಂತೆಯೂ ವಾಝೆಗೆ ಗೃಹ ಸಚಿವರು ಸೂಚಿಸಿದ್ದರು. ಪ್ರತಿಯೊಂದು ಬಾರ್‌ ರೆಸ್ಟೋರೆಂಟ್‌ಗಳಿಂದ 2ರಿಂದ 3 ಲಕ್ಷ ರು. ವಸೂಲಿ ಮಾಡಿದರೆ ತಿಂಗಳಿಗೆ 40ರಿಂದ 50 ಕೋಟಿ ರು. ಸಂಗ್ರಹಿಸಬಹುದು. ಇತರ ಮೂಲಗಳಿಂದ 50 ಕೋಟಿ ರು. ಸಂಗ್ರಹಿಸಬಹುದು ಎಂಬುದಾಗಿ ಗೃಹ ಸಚಿವರು ತಿಳಿಸಿದ್ದರು’ ಎಂದು ಉದ್ಧವ್‌ ಠಾಕ್ರೆಗೆ ಬರೆದಿರುವ ಪತ್ರದಲ್ಲಿ ಸಿಂಗ್‌ ತಿಳಿಸಿದ್ದಾರೆ.

ಇದೇ ವೇಳೆ ‘ಮುಕೇಶ್‌ ಅಂಬಾನಿ ಅವರ ಮನೆಯ ಬಳಿಕ ಸ್ಫೋಟಕ ಪತ್ತೆಯಾದ ದಿನದಂದು ಉದ್ಧವ್‌ ಠಾಕ್ರೆ ಅವರ ಜೊತೆ ನಡೆದ ಮಾತುಕತೆಯ ಸಂದರ್ಭದಲ್ಲಿಯೂ ಈ ಸಂಗತಿಯನ್ನು ಉಲ್ಲೇಖಿಸಿದ್ದೆ. ಗೃಹ ಸಚಿವರ ಭ್ರಷ್ಟಾಚಾರದ ಬಗ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹಾಗೂ ಹಿರಿಯ ಸಚಿವರಿಗೂ ಮಾಹಿತಿ ನೀಡಿದ್ದೆ’ ಎಂದು ಪರಮ್‌ ಬೀರ್‌ ಸಿಂಗ್‌ ಹೇಳಿದ್ದಾರೆ.

ಆರೋಪ ಸುಳ್ಳು- ದೇಶಮುಖ್‌:

ಆದರೆ, ಈ ಆರೋಪವನ್ನು ನಿರಾಕರಿಸಿರುವ ಗೃಹ ಸಚಿವ ದೇಶಮುಖ್‌, ‘ಕಾರಿನಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಪರಮ್‌ ಬೀರ್‌ ಸಿಂಗ್‌ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ. ಅವರ ವಿರುದ್ಧ ಮಾನಹಾನಿ ದಾವೆ ಹೂಡುವೆ’ ಎಂದು ಹೇಳಿದ್ದಾರೆ.

click me!