ರಾಮ ಆಯ್ತು ಈಗ ಕೃಷ್ಣ ಜನ್ಮಭೂಮಿ ವಿವಾದ ಆರಂಭ..!

By Kannadaprabha NewsFirst Published Aug 7, 2020, 9:41 AM IST
Highlights

ರಾಮ ಮಂದಿರಕ್ಕೆ ಅಯೋಧ್ಯೆಯಲ್ಲಿ ಅಡಿಗಲ್ಲು ಹಾಕಿದ ಬೆನ್ನಲ್ಲೇ  ಉತ್ತರ ಪ್ರದೇಶದ ಇನ್ನೊಂದು ವಿವಾದಿತ ಸ್ಥಳವಾದ ಮಥುರಾದಲ್ಲಿ ಕೃಷ್ಣನ ದೇಗುಲ ವಿಮೋಚನೆಗೆ ಸಿದ್ಧತೆಗಳು ಆರಂಭವಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

"

ಮಥುರಾ(ಆ.07): ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ವಿವಾದ ಬಗೆಹರಿದು ರಾಮಮಂದಿರಕ್ಕೆ ಶಂಕುಸ್ಥಾಪನೆಯೂ ನಡೆಯುತ್ತಿದ್ದಂತೆ ಉತ್ತರ ಪ್ರದೇಶದ ಇನ್ನೊಂದು ವಿವಾದಿತ ಸ್ಥಳವಾದ ಮಥುರಾದಲ್ಲಿ ಕೃಷ್ಣನ ದೇಗುಲಕ್ಕೆ ಜಾಗ ದೊರಕಿಸಿಕೊಡಲು ಶ್ರೀ ಕೃಷ್ಣ ಜನ್ಮಭೂಮಿ ನಿರ್ಮಾಣ ನ್ಯಾಸ ಸ್ಥಾಪನೆಯಾಗಿದೆ. ದೇಶದ 14 ರಾಜ್ಯಗಳ 80 ಸಂತರು ಇದರಲ್ಲಿದ್ದು, ವೃಂದಾವನದ 11 ಸಂತರು ಟ್ರಸ್ಟಿಗಳಾಗಿದ್ದಾರೆ.

ಆಚಾರ್ಯ ದೇವಮುರಾರಿ ಬಾಪು ಈ ಟ್ರಸ್ಟ್‌ನ ಅಧ್ಯಕ್ಷರಾಗಿದ್ದು, ‘ಜುಲೈ 23ರಂದೇ ‘ಹರ್ಯಾಲಿ ತೀಜ್‌’ ಶುಭದಿನದಂದು ಟ್ರಸ್ಟ್‌ ನೋಂದಣಿಯಾಗಿದೆ. ಫೆಬ್ರವರಿ ತಿಂಗಳಲ್ಲೇ ನಾವು ಆಂದೋಲನ ಆರಂಭಿಸಿದ್ದೆವು. ಆದರೆ ಲಾಕ್‌ಡೌನ್‌ನಿಂದಾಗಿ ಮುಂದುವರೆಸಿರಲಿಲ್ಲ. ಈಗ ದೇಶದ ಎಲ್ಲ ಸಂತರಿಂದ ಸಹಿ ಸಂಗ್ರಹ ಚಳವಳಿ ಆರಂಭಿಸಿ ಕೃಷ್ಣ ಜನ್ಮಭೂಮಿಯನ್ನು ‘ಬಿಡುಗಡೆಗೊಳಿಸುವ’ ಕಾರ್ಯಕ್ಕೆ ವೇಗ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

"

ರಾಮ ಮಂದಿರ ಕೆಡವಿ ಮತ್ತೆ ಮಸೀದಿ ನಿರ್ಮಿಸುತ್ತೇವೆ; ಎಚ್ಚರಿಕೆ ನೀಡಿದ ಮುಸ್ಲಿಂ ಮೌಲ್ವಿ!

ಇದು ಅಯೋಧ್ಯೆಗಿಂತ ಭಿನ್ನ:

ಹಿಂದೆ ಪಿ.ವಿ.ನರಸಿಂಹರಾವ್‌ ಸರ್ಕಾರ ಜಾರಿಗೊಳಿಸಿದ ಪೂಜಾ ಸ್ಥಳಗಳ ಕಾಯ್ದೆ-1991ರ ಪ್ರಕಾರ ದೇವಸ್ಥಾನ, ಚರ್ಚ್‍, ಮಸೀದಿಯಂತಹ ಧಾರ್ಮಿಕ ಕೇಂದ್ರಗಳಿಗೆ ಸೇರಿದ ಜಾಗವನ್ನು ಇತರ ಧರ್ಮಗಳಿಗೆ ನೀಡುವುದು ನಿಷಿದ್ಧವಾಗಿದೆ. ಪೂಜಾ ಸ್ಥಳಗಳಿಗೆ ಸೇರಿದ ಜಾಗದ ವಿಷಯದಲ್ಲಿ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಯಾವ ಸ್ಥಿತಿಯಿತ್ತೋ ಅದೇ ಸ್ಥಿತಿ ಶಾಶ್ವತವಾಗಿ ಇರಬೇಕು. ಇದಕ್ಕೆ ಸಂಬಂಧಿಸಿದ ವಿವಾದಗಳನ್ನು ಕೋರ್ಟ್‌ಗಳು ಕೂಡ ವಿಚಾರಣೆ ನಡೆಸುವಂತಿಲ್ಲ. ಇದನ್ನು ಉಲ್ಲಂಘಿಸಿ ಭೂಪರಿವರ್ತನೆ ಮಾಡಿದರೆ 3 ವರ್ಷ ಜೈಲುಶಿಕ್ಷೆ ವಿಧಿಸಬಹುದು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಆದರೆ, ರಾಮಜನ್ಮಭೂಮಿ - ಬಾಬ್ರಿ ಮಸೀದಿ ವಿವಾದಕ್ಕೆ ಮಾತ್ರ ಈ ಕಾಯ್ದೆಯಿಂದ ವಿನಾಯ್ತಿ ನೀಡಲಾಗಿತ್ತು. ಹೀಗಾಗಿ ಮಥುರಾ ವಿವಾದ ಹೇಗೆ ಮುಂದುವರೆಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.

"

ಏನಿದು ಕೃಷ್ಣ ಜನ್ಮ ಸ್ಥಳ ವಿವಾದ?

ಮಥುರಾದ ಕೃಷ್ಣ ಜನ್ಮಸ್ಥಾನದಲ್ಲಿ ಈಗಾಗಲೇ ದೇವಸ್ಥಾನವಿದೆ. ಆದರೆ, ಅದಕ್ಕೆ ತಾಗಿಕೊಂಡು ಶಾಹಿ ಈದ್ಗಾ ಮೈದಾನವಿದೆ. ಈ ಮೈದಾನದ ಜಾಗ ಐತಿಹಾಸಿಕವಾಗಿ ಕೃಷ್ಣ ದೇವಸ್ಥಾನಕ್ಕೆ ಸೇರಿದ್ದಾಗಿದೆ ಎಂಬುದು ಕೃಷ್ಣ ಜನ್ಮಭೂಮಿ ಟ್ರಸ್ಟ್‌ನ ವಾದ. ದೇವಸ್ಥಾನಕ್ಕೆ ತಾಗಿಕೊಂಡಿರುವ ಮಸೀದಿಯ ಪಕ್ಕ ಇರುವ ಈ 4.5 ಎಕರೆ ಜಾಗವನ್ನು ವಿಶೇಷ ದಿನಗಳಲ್ಲಿ ರಂಗ ಮಂಚವಾಗಿ ಬಳಸಲು ಅನುಮತಿ ನೀಡಬೇಕೆಂದು ಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಕೇಳುತ್ತಾ ಬಂದಿದೆ. ವಿಶ್ವ ಹಿಂದು ಪರಿಷತ್‌ ಕೂಡ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ನಂತರ ತಮ್ಮ ಮುಂದಿನ ಗುರಿ ಮಥುರಾ ಹಾಗೂ ಕಾಶಿ ವಿಶ್ವನಾಥ ದೇಗುಲ ಎಂದು ಹೇಳುತ್ತಾ ಬಂದಿತ್ತು.
 

click me!