
ಹೈದರಾಬಾದ್(ನ.27) ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಆಕ್ರೋಶಭರಿತ ಮಾತುಗಳನ್ನು ಹಲವು ಬಾರಿ ಆಡಿದ್ದಾರೆ. ಖರ್ಗೆ ಏರು ಧ್ವನಿಯ ಮಾತುಗಳಿಗೆ ಕಾಂಗ್ರೆಸ್‌ನಲ್ಲಿ ಭರ್ಜರಿ ಚಪ್ಪಾಳೆಗಳು ಬಿದ್ದಿದೆ. ಆದರೆ ಈ ಬಾರಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಪಕ್ಷದ ಸಭೆಯಲ್ಲಿ ಗರಂ ಆಗಿದ್ದಾರೆ. ಸುಮ್ಮನೆ ಕೇಳೋದಾದರೆ ಕೇಳಿ, ಇಲ್ಲಾ ಎದ್ದೋಗಿ ಎಂದು ಖಡಕ್ ಆಗಿ ಮಾತುಗಳನ್ನಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಲ್ವಾಕುರ್ತಿಯಲ್ಲಿ ಆಯೋಜಿಸಿದ ಸಮಾವೇಶದಲ್ಲಿ ಖರ್ಗೆ ಈ ಮಾತುಗಳನ್ನಾಡಿದ್ದಾರೆ. ಈ ವಿಡಿಯೋ ಹಂಚಿಕೊಂಡಿರುವ ಬಿಜೆಪಿ, ಕಾಂಗ್ರೆಸ್‌ನಲ್ಲಿ ಖರ್ಗೆ ಪಾಡು ಇದು ಎಂದು ವ್ಯಂಗ್ಯವಾಡಿದೆ.
ಕಲ್ವಕುರ್ತಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಆಯೋಜಿಸಿತ್ತು. ಘಟಾನುಘಟಿ ನಾಯಕರು ವೇದಿಕೆಯಲ್ಲಿದ್ದರು. ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಕೆಲ ಘೋಷಣೆಗಳನ್ನು ಕೂಗಿದ್ದಾರೆ. ಇದು ಮಲ್ಲಿಕಾರ್ಜುನ ಖರ್ಗೆಯನ್ನು ಕೆರಳಿಸಿದೆ. ಒಂದೆರಡು ಬಾರಿ ಸಹಿಸಿಕೊಂಡ ಖರ್ಗೆ, ನೇರವಾಗಿ ಕಾಂಗ್ರೆಸ್ ಕಾರ್ಯಕರ್ತರು, ಸ್ಥಳೀಯ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಸುಮ್ಮನೆ ಕುಳಿತುಕೊಳ್ಳಿ, ನಿಮಗೆ ಕೇಳಲು ಆಗುತ್ತಿಲ್ಲ ಎಂದಾದರೆ, ಹೊರನಡೆಯರಿ. ನಿಮಗೆ ನ್ಯಾಷನಲ್ ಕಾಂಗ್ರೆಸ್ ನಾಯಕನೊಬ್ಬ ಮಾತನಾಡುತ್ತಿರುವುದು ಕಾಣಿಸುತ್ತಿಲ್ಲವೇ? ನಿಮ್ಮ ಬಾಯಿಗೆ ಏನು ಬರುತ್ತಿದೆ ಅದನ್ನು ಬೊಗಳುವುದಲ್ಲ, ಕೇಳುವುದಾದರೆ ಕೇಳಿ, ಇಲ್ಲಾ ಜಾಗ ಖಾಲಿ ಮಾಡಿ ಎಂದು ಖರ್ಗೆ ಹೇಳಿದ್ದಾರೆ.
ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ದೂರು
ಖರ್ಗೆ ಈ ಆಕ್ರೋಶದ ಮಾತುಗಳ ವಿಡಿಯೋವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹಂಚಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಪಕ್ಷದಲ್ಲಿ ಗೌರವ ನೀಡುತ್ತಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪೋಸ್ಟರ್ ಮಾತ್ರ ರಾರಾಜಿಸುತ್ತಿದೆ. ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಫೋಟೋ ಎಲ್ಲೂ ಕಾಣುತ್ತಿಲ್ಲ. ಹೆಜ್ಜೆ ಹೆಜ್ಜೆಗೂ ಖರ್ಗೆಗೆ ಅವಮಾನವಾಗುತ್ತಿದೆ ಎಂದು ಅಮಿತ್ ಮಾಳವಿಯಾ ಹೇಳಿದ್ದಾರೆ.
ಇದು ಅಸಾಮಾನ್ಯ ಸಂಗತಿಯಲ್ಲ. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ, ಸಾರ್ವಜನಕಿ ಸಭೆಯಲ್ಲಿ ಹೆಚ್ಚು ಅವಮಾನಕ್ಕೊಳಗಾಗುತ್ತಿದ್ದಾರೆ. ಇದರಿಂದ ಖರ್ಗೆ ಅಸಾಹಾಯಕರಾಗಿ ತಮ್ಮದೇ ಪಕ್ಷದ ಕಾರ್ಯಕರ್ತರ ವಿರುದ್ಧ ಗರಂ ಆಗುತ್ತಿದ್ದಾರೆ. ಗಾಂಧಿ ಕುಟುಂಬ, ಖರ್ಗೆಯವರನ್ನು ರಬ್ಬರ್ ಸ್ಟಾಂಪ್ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಎಲ್ಲಾ ವಿಧಾಾನಸಭಾ ಚುನಾವಣೆಯ ಪ್ರಚಾರ, ಪೋಸ್ಟರ್‌ಗಳಲ್ಲಿ ಖರ್ಗೆ ಫೋಟೋಗಳು ಕಾಣೆಯಾಗಿದೆ. ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ಹಾಗೂ ಅಶೋಕ್ ಗೆಹ್ಲೋಟ್ ಫೋಟೋಗಳು ಮಾತ್ರ ಕಾಣಿಸುತ್ತಿದೆ. ಖರ್ಗೆ ಫೋಟೋ ಸ್ಟಾಂಪ್ ಗಾತ್ರಕ್ಕೆ ಕುಗ್ಗಿದೆ. ದಲಿತ ಅನ್ನೋ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಅವಮಾನಿಸುತ್ತಿದಯೇ? ಎಂದು ಅಮಿತ್ ಮಾಳವಿಯಾ ಹೇಳಿದ್ದಾರೆ.
ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ: ಖರ್ಗೆ ಹೇಳಿಕೆ ವೈರಲ್; ಬಿಜೆಪಿ ಲೇವಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ