
ನವದೆಹಲಿ: ಅನರ್ಹ ಮತದಾರರ ಹೆಸರನ್ನು ರದ್ದುಗೊಳಿಸಿ, ಮತಪಟ್ಟಿಯನ್ನು ಅತ್ಯಂತ ನಿಖರಬದ್ಧವಾಗಿ ಇಡುವ ಉದ್ದೇಶ ಹೊಂದಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್ಐಆರ್)ಯನ್ನು ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರಂಭಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.
ಮೊದಲ 2 ಸುತ್ತಿನಲ್ಲಿ ಬಿಹಾರ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗೋವಾ, ಛತ್ತೀಸ್‌ಗಢ, ಗುಜರಾತ್, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ಅಸ್ಸಾಂ ಮತ್ತು ಪುದುಚೇರಿಗಳಲ್ಲಿ ಪ್ರಕ್ರಿಯೆ ನಡೆಸಲಾಗಿತ್ತು. 2ನೇ ಹಂತದಲ್ಲಿ 12 ರಾಜ್ಯಗಳಲ್ಲಿ ನಡೆದ ಪರಿಷ್ಕರಣೆ ಬಳಿಕ 50.99 ಕೋಟಿ ಮತದಾರರ ಪೈಕಿ 5.18 ಕೋಟಿ ರದ್ದಾಗಿತ್ತು. ಇದಕ್ಕೆ ಅನರ್ಹ, ಡೂಪ್ಲಿಕೇಟ್, ವಿಳಾಸ ಬದಲು ಮೊದಲಾದವುಗಳು ಕಾರಣವಾಗಿದ್ದವು.
ಇದೀಗ 3ನೇ ಸುತ್ತಿನ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭದ ಕುರಿತು ಕೇಂದ್ರ ಚುನಾವಣಾ ಆಯೋಗ ಗುರುವಾರ ಆದೇಶ ಹೊರಡಿಸಿದೆ.
19 ರಾಜ್ಯಗಳಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ಪ್ರಕ್ರಿಯೆ ನಡೆದು ವಿವಿಧ ಹಂತದ ಪರಿಷ್ಕರಣೆ, ಪುನರ್‌ಪರಿಶೀಲನೆ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಪರಿಷ್ಕರಣೆಗೆ ಒಳಪಡುವ 19 ರಾಜ್ಯಗಳಲ್ಲಿ ಒಟ್ಟು 36.73 ಕೋಟಿ ಮತದಾರರಿದ್ದು, ಇವರ ದಾಖಲೆಗಳನ್ನು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಇವರಿಗೆ ವಿವಿಧ ರಾಜಕೀಯ ಪಕ್ಷಗಳಿಂದ ನೇಮಕವಾಗುವ 3.42 ಲಕ್ಷ ಬೂತ್ ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) ನೆರವಾಗಲಿದ್ದಾರೆ.
ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಲ್ಲಿ ಪ್ರಕ್ರಿಯೆಗೆ ಎದುರಾಗಬಹುದಾದ ಕೆಲವೊಂದು ಸಮಸ್ಯೆಗಳನ್ನು ಪರಿಗಣಿಸಿ ಅವುಗಳನ್ನು ಬಳಿಕ ಸೂಕ್ತ ಸಮಯದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ.
ಬಿಹಾರದಲ್ಲಿ ಕಳೆದ ವರ್ಷ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಸಲಾಗಿತ್ತು. ಈ ವೇಳೆ ಹಲವು ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಬಳಿಕ ಇತ್ತೀಚಿಗೆ ಚುನಾವಣೆ ನಡೆದ ಪಂಚ ರಾಜ್ಯಗಳಲ್ಲಿ ಇದೇ ರೀತಿಯ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಈ ಪೈಕಿ ಬಂಗಾಳದಲ್ಲಿ 29 ಲಕ್ಷಕ್ಕೂ ಹೆಚ್ಚು ಅನರ್ಹ ಮತದಾರರನ್ನು ನಾನಾ ಕಾರಣ ನೀಡಿ ರದ್ದುಗೊಳಿಸಲಾಗಿತ್ತು. ಜೊತೆಗೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಟಿಎಂಸಿ ಸೇರಿದಂತೆ ಹಲವು ಸಂಘಟನೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವಾದರೂ, ಪ್ರಕ್ರಿಯೆ ಮುಂದುವರೆಸಲು ಸುಪ್ರೀಂಕೋರ್ಟ್ ಆದೇಶಿಸಿತ್ತು.
ಕರ್ನಾಟಕ ಅಂಕಿ ಅಂಶಗಳು
ಹೇಗಿರಲಿದೆ ಎಸ್‌ಐಆರ್?
- ಅಧಿಕಾರಿಗಳು ಮನೆಮನೆಗೆ ತೆರಳಿ ಮತದಾರರ ಹೆಸರು, ವಿಳಾಸ ದೃಢೀಕರಿಸುತ್ತಾರೆ. ಅರ್ಜಿ ಕೊಟ್ಟು ಸಂಗ್ರಹಿಸುತ್ತಾರೆ
- ದಾಖಲೆ ಪರಿಶೀಲಿಸಿ ನಕಲಾಗಿರಬಹುದಾದ, ವಿಳಾಸ ಬದಲಾಗಿರುವ ಮತದಾರರು, ಮೃತಪಟ್ಟವರ ಹೆಸರು ಖಚಿತಪಡಿಸಿಕೊಳುತ್ತಾರೆ
-ಯಾವುದಾದರೂ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗಿದ್ದರೆ ಅದನ್ನು ಸೇರಿಸುವ ಕೆಲಸವನ್ನು ಮಾಡುತ್ತಾರೆ
ಕರ್ನಾಟಕದಲ್ಲಿ ಪ್ರಕ್ರಿಯೆ ಹೀಗಿರುತ್ತೆ?
ಎಲ್ಲೆಲ್ಲಿ ಪ್ರಕ್ರಿಯೆ?
ಕರ್ನಾಟಕ, ದೆಹಲಿ, ಒಡಿಶಾ, ಮಿಜೋರಂ, ಸಿಕ್ಕಿಂ, ಮಣಿಪುರ, ಉತ್ತರಾಖಂಡ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಹರ್ಯಾಣ, ತೆಲಂಗಾಣ, ಪಂಜಾಬ್, ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್, ನಾಗಾಲ್ಯಾಂಡ್, ತ್ರಿಪುರಾ, ದಾದರ್ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ಹಾಗೂ ಚಂಡೀಗಢ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ