ಮೇಘಸ್ಫೋಟದಿಂದಾಗಿ ಸಿಕ್ಕಿಂನ ತೀಸ್ತಾ ನದಿ ಉಕ್ಕೇರಿ ಹರಿದಿದ್ದರಿಂದಾಗಿ ಕಣ್ಮರೆಯಾಗಿರುವ 22 ಯೋಧರಿಗೆ ಸೇನಾ ಪಡೆಗಳು ತೀವ್ರ ಶೋಧ ಕಾರ್ಯ ನಡೆಸುತ್ತಿವೆ. ಈ ನಡುವೆ ಸಿಕ್ಕಿಂ ಜಲಪ್ರಳಯದಲ್ಲಿ ಬಲಿಯಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದರೆ, ನಾಪತ್ತೆಯಾದವರ ಸಂಖ್ಯೆ 102ಕ್ಕೆ ಮುಟ್ಟಿದೆ.
ಗ್ಯಾಂಗ್ಟಕ್: ಮೇಘಸ್ಫೋಟದಿಂದಾಗಿ ಸಿಕ್ಕಿಂನ ತೀಸ್ತಾ ನದಿ ಉಕ್ಕೇರಿ ಹರಿದಿದ್ದರಿಂದಾಗಿ ಕಣ್ಮರೆಯಾಗಿರುವ 22 ಯೋಧರಿಗೆ ಸೇನಾ ಪಡೆಗಳು ತೀವ್ರ ಶೋಧ ಕಾರ್ಯ ನಡೆಸುತ್ತಿವೆ. ಈ ನಡುವೆ ಸಿಕ್ಕಿಂ ಜಲಪ್ರಳಯದಲ್ಲಿ ಬಲಿಯಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದರೆ, ನಾಪತ್ತೆಯಾದವರ ಸಂಖ್ಯೆ 102ಕ್ಕೆ ಮುಟ್ಟಿದೆ.
ಸಿಕ್ಕಿಂನಲ್ಲಿ (Sikkim) ಮಳೆಯಾಗುತ್ತಿರುವುದರಿಂದ ತೀಸ್ತಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಹೀಗಾಗಿ ಕಣ್ಮರೆಯಾಗಿರುವ ಯೋಧರು ಹಾಗೂ ಸಾರ್ವಜನಿಕರ ಶೋಧ ಕಾರ್ಯಕ್ಕೆ ತೊಡಕಾಗಿದೆ. ಇದೆಲ್ಲದರ ನಡುವೆಯೂ ರಕ್ಷಣಾ ಪಡೆಗಳು 2011 ಮಂದಿಯನ್ನು ಅಪಾಯದಿಂದ ರಕ್ಷಿಸುವಲ್ಲಿ ಸಫಲವಾಗಿವೆ. 22034 ಮಂದಿ ಸಂತ್ರಸ್ತರಾಗಿದ್ದಾರೆ.
ಅಬಕಾರಿ ಹಗರಣ: ಬಂಧಿತ ಎಎಪಿ ಶಾಸಕ ಸಂಜಯ ಸಿಂಗ್ 5 ದಿನ ಇ.ಡಿ. ಕಸ್ಟಡಿಗ ...
ಕಣ್ಮರೆಯಾಗಿರುವ 22 ಯೋಧರಿಗಾಗಿ ತೀಸ್ತಾ ನದಿಯ (Tista River) ಕೆಳ ಭಾಗದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ತೀಸ್ತಾ ನದಿ ರಭಸದಿಂದ ಹರಿಯುತ್ತಿರುವುದರಿಂದ ಯೋಧರನ್ನು ಕೊಚ್ಚಿಕೊಂಡು ಹೋಗಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಕೆಳಭಾಗದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ತೀಸ್ತಾ ಪ್ರವಾಹದಿಂದ (Flood victim) ಸಂತ್ರಸ್ತರಾದವರನ್ನು 26 ನಿರಾಶ್ರಿತರ ಶಿಬಿರದಲ್ಲಿ ಇರಿಸಲಾಗಿದೆ. ತೀವ್ರ ಬಾಧಿತ ಪ್ರದೇಶಗಳಿಗೆ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್‌ಸಿಂಗ್ ತಾಮಂಗ್ ಅವರು ಭೇಟಿ ನೀಡಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. ಎಚ್ಚರಿಕೆಯಿಂದ ಇರುವಂತೆ ಹಾಗೂ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ನಾಗರಿಕರಿಗೆ ಅವರು ಕರೆ ನೀಡಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿಗಳು (Chief Minister) ಕೇಂದ್ರದ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿಯಲ್ಲಿ ಪ್ರೇಮ್ ಸಿಂಗ್ ಜತೆ ಮಾತುಕತೆ ನಡೆಸಿದ್ದು, ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಸಿಕ್ಕಿಂ ಪ್ರವಾಹದಿಂದಾಗಿ 11 ಸೇತುವೆಗಳು ಕೊಚ್ಚಿ ಹೋಗಿವೆ. 4 ಜಿಲ್ಲೆಗಳಲ್ಲಿ ನೀರಿನ ಪೈಪ್, ಒಳಚರಂಡಿ ಮಾರ್ಗ ಹಾಗೂ 277 ಮನೆಗಳಿಗೆ ಹಾನಿಯಾಗಿದೆ. ಚುಂಗ್‌ತಾಂಗ್ ಪಟ್ಟಣ ಶೇ.80ರಷ್ಟು ಬಾಧಿತವಾಗಿದೆ. ಸಿಕ್ಕಿಂನ ಜೀವನಾಡಿ ಎಂದೇ ಕರೆಯಲಾಗುವ ರಾಷ್ಟ್ರೀಯ ಹೆದ್ದಾರಿ 10ಕ್ಕೆ ಹಲವು ಸ್ಥಳಗಳಲ್ಲಿ ಭಾರಿ ಪ್ರಮಾಣದ ಹಾನಿಯಾಗಿದೆ. ಸಿಕ್ಕಿಂನ ವಿವಿಧೆಡೆ ಪ್ರವಾಸಿಗರು ಕೂಡ ಸಿಲುಕಿದ್ದು, ಅವರನ್ನು ಅಧಿಕಾರಿಗಳು ಸಂಪರ್ಕಿಸಿದ್ದಾರೆ.
ಲ್ಹೋನಾಕ್ ಸರೋವರದ ಬಳಿ ಮೇಘಸ್ಫೋಟವಾಗಿದ್ದರಿಂದ ತೀಸ್ತಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾಗಿತ್ತು. ಈ ನೀರು ಚುಂಗ್‌ತಾಂಗ್ ಅಣೆಕಟ್ಟಯತ್ತ ನುಗ್ಗಿದ್ದರಿಂದ ವಿದ್ಯುತ್ ಮೂಲಸೌಕರ್ಯಗಳನ್ನು ಕೊಚ್ಚಿಕೊಂಡು ಅಣೆಕಟ್ಟೆಯ ಕೆಳಭಾಗದ ನಗರ ಹಾಗೂ ಹಳ್ಳಿಗಳಿಗೆ ನೀರು ನುಗ್ಗಿ ದುರಂತ ಸಂಭವಿಸಿತ್ತು.
ಸೇನಾ ಶಸ್ತ್ರಾಸ್ತ್ರ ಪ್ರವಾಹ ಪಾಲು: ಜನರಿಗೆ ಸೇನೆ ಎಚ್ಚರಿಕೆ
ಗ್ಯಾಂಗ್ಟಕ್: ಸಿಕ್ಕಿಂನಲ್ಲಿ ಭೀಕರ ಪ್ರವಾಹದ ನೀರು ಇಲ್ಲಿನ ಚುಂಗ್‌ತಂಗ್ ಪ್ರದೇಶದ ಸೇನಾ ನೆಲೆಗೆ ನುಗ್ಗಿದೆ. ಇದರ ಪರಿಣಾಮ ಅದರಲ್ಲಿದ್ದ ಶಸ್ತ್ರಾಸ್ತ್ರಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿವೆ. ಆದ ಕಾರಣ ಜನರು ಯಾವುದೇ ಕಾರಣಕ್ಕೂ ನದಿ ಪಾತ್ರಕ್ಕೆ ತೆರಳದಂತೆ ಹಾಗೂ ಅಲ್ಲಿ ಯಾವುದಾದರೂ ಬಾಂಬ್ ಹಾಗೂ ಸೇನಾ ವಸ್ತುಗಳು ಸಿಕ್ಕಿದರೆ ಅವುಗಳನ್ನು ಬಳಸದಂತೆ ಸೂಚಿಸಿದೆ. ಈ ಕುರಿತು ಸೂಚನೆ ಹೊರಡಿಸಿರುವ ಸ್ಥಳೀಯ ಆಡಳಿತ, ಸೇನೆ ತಮ್ಮ ನೆಲೆಗೆ ನೀರು ನುಗ್ಗಿರುವುದಾಗಿ ತಿಳಿಸಿದೆ. ಅಲ್ಲಿ ಭಾರಿ ಶಸ್ತ್ರಾಸ್ತ್ರಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿದೆ. ಹಾಗಾಗಿ ಜನರು ಸುರಕ್ಷತೆಯನ್ನು ಕಾಪಾಡಬೇಕು. ಒಂದು ವೇಳೆ ಬಾಂಬ್ ಸಿಕ್ಕಿದರೆ, ಸ್ಫೋಟಗೊಂಡು ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಪ್ರಕಟಣೆ ತಿಳಿಸಿದೆ.