
ಬತಿಂದಾ(ಫೆ.10) ಮುಸ್ಲಿಮ್ ಸಮುದಾದ ಸಶ್ಮಾನದ ಸುತ್ತಲೂ ಇತರ ಸಮುದಾಯದ ರೈತರ ಜಮೀನುಗಳು. ಮುಸ್ಲಿಮರು ಅಂತ್ಯಸಂಸ್ಕಾರ ಮಾಡಲು ಪಾರ್ಥೀವ ಶರೀರ ಹೊತ್ತು ಕಾಲ್ನಡಿಗೆ ಮೂಲಕ ಜಮೀನುಗಳ ಬದುಗಳ ಮೂಲಕ ಸಾಗಬೇಕು. ರಸ್ತೆ ಸಂಪರ್ಕ ಇಲ್ಲ. ಇದು ಅಸಾಧ್ಯವೂ ಆಗಿತ್ತು. ಕಳೆದ 70 ವರ್ಷಗಳಿಂದ ಮುಸ್ಲಿಮ್ ಸಮುದಾಯ ಈ ಸಂಕಷ್ಟದಲ್ಲೇ ದಿನದೂಡಿತ್ತು. ಆದರೆ ಇವರ ಸಂಕಷ್ಟಕ್ಕೆ ಮಿಡಿದ ಸಿಖ್ ಸಮುದಾಯ ತಮ್ಮ ಜಮೀನಿನ ಅರ್ಧ ಭಾಗವನ್ನೇ ಮುಸ್ಲಿಮರಿಗೆ ದಾನವಾಗಿ ನೀಡಿದ ಸೌಹಾರ್ಧತೆ ಘಟನೆ ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ನಡೆದಿದೆ.
ಮೆಹನಾ ಗ್ರಾಮದ ಮುಸ್ಲಿಂ ಕುಟುಂಬಗಳು ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದೆ ಕಳೆದ 70 ವರ್ಷದಿಂದ ನರಕಯಾತನೆ ಅನುಭವಿಸುತ್ತಿದ್ದರು. ಅದರಲ್ಲೂ ಮಳೆಗಾಲದಲ್ಲಿ ಮುಸ್ಲಿಮ್ ಕುಟುಂಬಗಳ ಸಂಕಷ್ಟ ಹೇಳತೀರದು. ಇತ್ತೀಚೆಗೆ ಅಧಿಕಾರಿಯೊಬ್ಬರ ತಾಯಿಯ ಮೃತದೇಹ ಹೊತ್ತು ಸಾಗಿದ ಮುಸ್ಲಿಮ್ ಕುಟುಂಬ ಸ್ಮಶಾನ ತಲುಪಲು ತೀವ್ರ ಪರದಾಡಿತ್ತು. ಇದನ್ನು ಕಣ್ಣಾರೆ ಕಂಡ ರೈತ ಜಗದೀಶ್ ಸಿಂಗ್ ಹಾಗೂ ಆತನ ಸಹೋದರರು ಮಾನವೀಯತೆ ಮೆರೆದಿದ್ದಾರೆ. ತಮ್ಮ ಜಮೀನಿನ ಅರ್ಧ ಭಾಗವನ್ನು ಮುಸ್ಲಿಮರ ಸ್ಮಶಾನಕ್ಕೆ ಹೋಗಲು ರಸ್ತೆಗಾಗಿ ದಾನವಾಗಿ ನೀಡಿದ್ದಾರೆ.
ರೈತ ಜಗದೀಶ್ ಸಿಂಗ್, ಸಹೋದರರಾದ ಸಂಶೇರ್ ಸಿಂಗ್ ಹಾಗೂ ರಾಜವಿಂದರ್ ಸಿಂಗ್ ಒಮ್ಮತದ ಮೂಲಕ ತಮ್ಮ ಜಮೀನನ ಅರ್ಧ ಭಾಗವನ್ನು ಮುಸ್ಲಿಮರಿಗೆ ದಾನವಾಗಿ ನೀಡಿದ್ದಾರೆ. ದಾನವಾಗಿ ನೀಡುವಾಗ ತಮಗೆ ಇದಕ್ಕೆ ಬದಲಾಗಿ ಹಣ, ಇತರ ಜಮೀನು ಬೇಡ. ತಮ್ಮ ಕೃಷಿ ಭೂಮಿಯ ಸುಮಾರು 90 ಅಡಿ ಜಾಗವನ್ನು ಮುಸ್ಲಿಮರಿಗೆ ದಾನವಾಗಿ ನೀಡಿದ್ದಾರೆ.
ಮುಸ್ಲಿಮ್ ಕುಟುಂಬ ಅಧಿಕಾರಿಯೊಬ್ಬರ ತಾಯಿ ಅಂತ್ಯಸಂಸ್ಕಾರಕ್ಕೆ ಮೃತದೇಹ ಹೊತ್ತು ಸಾಗುತ್ತಿದ್ದ ಘಟನೆಯನ್ನು ಜಗದೀಶ್ ಸಿಂಗ್ ಕಣ್ಣಾರೆ ಕಂಡಿದ್ದರು. ಜನವರಿ 25ರಂದು ಈ ಅಂತ್ಯಸಂಸ್ಕಾರ ನಡೆದಿತ್ತು. ಮೃತರ ಅಂತ್ಯಸಂಸ್ಕಾರ ಅತ್ಯಂತ ಗೌರವಯುತವಾಗಿ, ಶಾಂತಿಯುತವಾಗಿ ಆಗಬೇಕು. ಹೊತ್ತುಕೊಂಡು, ಪರಾದಾಡುತ್ತಾ ಸಾಗುವುದು ಮೃತರ ಘನತಕ್ಕೆ ಧಕ್ಕೆ ತರುವ ವಿಚಾರವಾಗಿದೆ. ಹೀಗಾಗಿ ಭೂಮಿಯನ್ನು ದಾನವಾಗಿ ನೀಡಲು ನಿರ್ಧರಿಸಿದ್ದೆ ಎಂದು ಜಗದೀಶ್ ಸಿಂಗ್ ಹೇಳಿದ್ದಾರೆ.
ಈ ಸೌಹಾರ್ಧತೆ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮೆಹನಾ ಗ್ರಾಮದ ಮುಸ್ಲಿಮ್ ಮೌಲ್ವಿ ಆಸ್ ಮೊಹಮ್ಮದ್, ಈ ಸೌಹಾರ್ಧತೆಗೆ ಧನ್ಯವಾದ ಹೇಳಿದ್ದಾರೆ. ಮಂದಿನ ಮುಸ್ಲಿಮ್ ಸಮುದಾಯ ಈ ಮಹತ್ ಕಾರ್ಯವನ್ನು ನೆನಪಿಸಿಕೊಳ್ಳುತ್ತದೆ ಎಂದಿದ್ದಾರೆ. ಇದೇ ವೇಳೆ ಹಲವರು ಸಿಖ್ ಕುಟುಂಬಕ್ಕೆ ಮೆಚ್ಚುಗೆ ಸುರಿಮಳೆಗೈದಿದ್ದಾರೆ. ಪಂಚಾಯತ್, ಸರ್ಕಾರಗಳು ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಿತ್ತು. ಆದರೆ ಒರ್ವ ರೈತ, ಸಿಖ್ ಸಮುದಾಯದ ವ್ಯಕ್ತಿ ಮಾನವೀಯತೆ ಮೆರೆಯುವ ಮೂಲಕ ಸಮಸ್ಯೆಗೆ ಪರಿಹಾರ ನೀಡಿದೆ. ಇದು ನಿಜವಾದ ಭಾರತ ಎಂದು ಹೊಗಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ