Caste Census: ಜಾತಿ ಗಣತಿ ಅಂಗೀಕರಿಸಿ ಮುಂದಿನ ಚುನಾವಣೆ ನಡೆಸಿ

By Kannadaprabha NewsFirst Published Feb 23, 2022, 3:40 AM IST
Highlights

* ಕೂಡಲೇ ಜಾತಿ ಗಣತಿ ಅಂಗೀಕರಿಸಿ ಸುಪ್ರೀಂಕೋರ್‌್ಟಗೆ ತಿಳಿಸಿ: ಸಿದ್ದು

*  ಇದರಿಂದ ಸ್ಥಳೀಯ ಸಂಸ್ಥೆಗಳ ಮೀಸಲು ಸಮಸ್ಯೆಗೆ ಪರಿಹಾರ

* ಪ್ರತಿಪಕ್ಷ ನಾಯಕರು, ಕಾನೂನು ತಜ್ಞರ ಸಭೆ ಕರೆಯಿರಿ: ಸರ್ಕಾರಕ್ಕೆ ಸಲಹೆ

ಬೆಂಗಳೂರು( ಫೆ. 23)  ಸುಪ್ರೀಂಕೋರ್ಟ್‌ (Supreme Court) ಆದೇಶದಿಂದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳ ನ್ಯಾಯಯುತ ರಾಜಕೀಯ ಮೀಸಲಾತಿಗೆ ಅಪಾಯ ಎದುರಾಗಲಿದೆ. ಇದನ್ನು ತಪ್ಪಿಸಲು ಸರ್ಕಾರ ಕೂಡಲೇ ಪ್ರತಿಪಕ್ಷಗಳ ಜತೆ ಚರ್ಚೆ ನಡೆಸಿ ನಮ್ಮ ಅವಧಿಯಲ್ಲಿ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಜನಗಣತಿ) (caste census) ವರದಿ ಆಧಾರದ ಮೇಲೆ ಮೀಸಲಾತಿ ನೀಡಿ ಚುನಾವಣೆ (Election) ನಡೆಸುತ್ತೇವೆ ಎಂದು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮೀಸಲಾತಿ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ತಾಲ್ಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಚುನಾವಣೆ ಮುಂದೂಡಲು  ನೆಪ ಮಾಡಿಕೊಳ್ಳಬಾರದು. ಬದಲಿಗೆ ಕೂಡಲೇ ಪ್ರತಿಪಕ್ಷ ನಾಯಕರು, ಕಾನೂನು ತಜ್ಞರ ಸಭೆ ಕರೆದು ಬಿಕ್ಕಟ್ಟು ಬಗೆಹರಿಸಿ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Latest Videos

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನ ಇತ್ತೀಚಿನ ಆದೇಶದಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿನ ಹಿಂದುಳಿದ ಜಾತಿಯ ರಾಜಕೀಯ ಮೀಸಲಾತಿಗೆ ಅಡ್ಡಿ ಉಂಟಾಗಲಿದೆ. ಇದನ್ನು ತಪ್ಪಿಸಲು ನಮ್ಮ ಅವಧಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ (ಜಾತಿ ಜನಗಣತಿ) ವರದಿಯಿಂದ ಸಾಧ್ಯವಿದೆ. ಮೂರು ಹಂತದ ಪರಿಶೀಲನೆ ನಡೆಸಿ ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿಯನ್ನು ರೂಪಿಸಬೇಕೆಂದು ಸುಪ್ರೀಂಕೋರ್ಟ್‌ ಹೇಳಿದ್ದು, ಜಾತಿ ಜನಗಣತಿ ವರದಿಯಲ್ಲಿ ಮೂರೂ ಅಂಶಗಳೂ ಉಲ್ಲೇಖವಾಗಿರುವುದರಿಂದ ವರದಿ ಆಧರಿಸಿ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಬೇಕು. ಇದನ್ನು ನ್ಯಾಯಾಲಯದ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಕುಮಾರಸ್ವಾಮಿ ಆರೋಪಕ್ಕೆ ಅಂಕಿ-ಅಂಶದ ಸಮೇತ ಉತ್ತರ

ಕಳೆದ ವರ್ಷದ ಡಿಸೆಂಬರ್‌ನಲ್ಲಿ ನೀಡಿರುವ ಆದೇಶದಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಲು ಆಯೋಗ ರಚಿಸಲು ಹೇಳಿರುವ ಸುಪ್ರೀಂಕೋರ್ಟ್‌, ರಾಜ್ಯ ಸರ್ಕಾರಗಳು ಈಗಾಗಲೇ ನಡೆಸಿರುವ ಸಮೀಕ್ಷೆಯ ಅಂಕಿ-ಅಂಶ ಮತ್ತು ಮಾಹಿತಿಯನ್ನು ಹೊಸ ಆಯೋಗಕ್ಕೆ ನೀಡಬಹುದು. ಆ ಮಾಹಿತಿಯನ್ನು ಆಧರಿಸಿ ಎರಡು ವಾರಗಳ ಅವಧಿಯೊಳಗೆ ಆಯೋಗ ಹಿಂದುಳಿದ ಜಾತಿಗಳ ಮೀಸಲಾತಿ ಬಗ್ಗೆ ಮಧ್ಯಂತರ ವರದಿಯನ್ನು ನೀಡಬಹುದು ಎಂದು ಕೂಡಾ ಹೇಳಿದೆ. ಹೀಗಾಗಿ ವರದಿಯನ್ನು ಕೂಡಲೇ ಒಪ್ಪಿಕೊಂಡು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೇಳಿದರು.

2010ರಲ್ಲಿಯೇ ಸುಪ್ರೀಂಕೋರ್ಟ್‌ ರಾಜಕೀಯ ಮೀಸಲಾತಿಗೆ ಪ್ರತ್ಯೇಕ ಮಾನದಂಡ ರೂಪಿಸುವಂತೆ ಆದೇಶಿಸಿತ್ತು. ಆ ಆದೇಶವನ್ನು ಪರಿಶೀಲಿಸಲು ನಾನು ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದೆ. ಅದೇ ಸಮಿತಿಯನ್ನು ಪುನರ್‌ರಚಿಸಿ ಈಗಿನ ಬಿಕ್ಕಟ್ಟಿಗೆ ಪರಿಹಾರಕ್ಕೆ ಪ್ರಯತ್ನಿಸಬೇಕು. ರಾಜ್ಯ ಸರ್ಕಾರವು ರಾಜಕೀಯ ಬದಿಗಿಟ್ಟು ವರದಿ ಅಂಗೀಕರಿಸಿದರೆ ರಾಜ್ಯ ಆತಂಕಪಡಬೇಕಾಗಿಲ್ಲ ಎಂದರು.

 

click me!