
ಆಯೋಧ್ಯೆ(ಅ.23): ಆಯೋಧ್ಯೆ ಭಾರತದ ಸಂಸ್ಕೃತಿಯ ಪ್ರತಿಂಬಿವಾಗಿದೆ. ಶ್ರೀರಾಮ ನಮ್ಮ ಆದರ್ಶ ಹಾಗೂ ಪ್ರೇರಣೆಯಾಗಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ. ಇದೇ ವೇಳೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ ಪ್ರಧಾನಿ ಮೋದಿ ಆಯೋಧ್ಯೆಯಲ್ಲಿ ಭಾಷಣ ಆರಂಭಿಸಿದರು. ಅಜಾದಿಕಾ ಅಮೃತ ಮಹೋತ್ಸವ ಸಂಭ್ರಮ ಇತ್ತೀಚೆಗಷ್ಟೆ ನಾವು ಮಾಡಿದ್ದೇವೆ. ಇದೇ ಸಂದರ್ಭದಲ್ಲಿ ಈ ಬಾರಿ ದೀಪಾವಳಿ ಬಂದಿದೆ. ಭಗವಾನ್ ಶ್ರೀರಾಮ, ತಮ್ಮ ಆಡಳಿತದಲ್ಲಿ,ವಿಚಾರಧಾರೆಯಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೂಲ ಮಂತ್ರವಾಗಿಟ್ಟಿದ್ದರು. ಶ್ರೀರಾಮ ಆದರ್ಶದಲ್ಲಿ ನಾವು ಮುನ್ನಡೆಯಬೇಕು. ಶ್ರೀರಾಮ ಅತ್ಯಂತ ಕಠಿಣ ಹಾದಿಯನ್ನು ಸವೆಸಿ ಯಶಸ್ಸು ಸಾಧಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಆಯೋಧ್ಯೆ ನದಿ ದಂಡಿಯಲ್ಲಿನ ದೀಪೋತ್ಸವದ ಪವಿತ್ರ ಸಂದರ್ಭದಲ್ಲಿ ನಾವು ಶ್ರೀರಾಮನ ಆದರ್ಶನ ಪಾಲಿಸುವತ್ತ ಗಮನ ನೀಡಬೇಕು. ಶ್ರೀರಾಮ ಮರ್ಯಾದ ಪುರುಷೋತ್ತಮನಾಗಿದ್ದಾನೆ. ಇದರ ಜೊತೆಗೆ ಇತರರಿಗೆ ಮರ್ಯಾದೆಯನ್ನು ತಿಳಿಸುವವನೂ ಆಗಿದ್ದ. ಶ್ರೀರಾಮ ಸಾಕ್ಷಾತ್ ಧರ್ಮದ ಅಂದರೆ ಕರ್ತವ್ಯದ ಸ್ವರೂಪವಾಗಿದ್ದಾನೆ. ಶ್ರೀರಾಮ ತನ್ನ ಕರ್ತವ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ರಾಮಲಲ್ಲಾ ದರ್ಶನ ಪಡೆದ ಪ್ರಧಾನಿ ಮೋದಿ, ಮಂದಿರ ನಿರ್ಮಾಣ ಕಾರ್ಯ ಪರಿಶೀಲನೆ!
ವನವಾಸ, ಸಿಂಹಾಸನ, ಲಂಕಾಗೆ ತೆರಳಿ ಸೀತೆಯ ರಕ್ಷಣೆ ಸೇರಿದಂತೆ ಎಲ್ಲಾ ಸಂದರ್ಭದಲ್ಲೂ ವಿಚಲಿತನಾಗದೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ವಿಶೇಷ ಸಾಮರ್ಥ್ಯ ಹೊಂದಿದ್ದರು. ಅಜಾದಿಕಾ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನಾವು ಗುಲಾಮಿ ಸಂಸ್ಕೃತಿಗೆ ಅಂತ್ಯಹಾಡಿದ್ದೇವೆ. ಶ್ರೀರಾಮ ಹೇಳಿದೆ ಒಂದು ಮಾತನ್ನು ನಾನಿಲ್ಲಿ ಹೇಳುತ್ತೇನೆ. ತಾಯಿ ಹಾಗೂ ಭೂಮಿ ಸ್ವರ್ಗಕ್ಕೆ ಸಮಾನ. ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ, ಸೇವಾ ಮನೋಭಾವ ರಾಷ್ಟ್ರ ವಿಕಾಸಕ್ಕೆ ನೆರವಾಗಲಿದೆ ಎಂದು ಮೋದಿ ಹೇಳಿದರು.
ಇದೇ ದೇಶದಲ್ಲಿ ಶ್ರೀರಾಮನ ಅಸ್ತಿತ್ವದ ಕುರಿತು ಹಲವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಹಲವು ಅಪಸ್ವರಗಳು ಬಂದಿದೆ. ಆದರೆ ಇದೇ ರಾಮಜನ್ಮಭೂಮಿಯಲ್ಲಿ ಭವ್ಯವಾದ ರಾಮಮಂದಿ ನಿರ್ಮಾಣವಾಗುವ ಕಾಲ ಸನ್ನಿಹಿತವಾಗಿದೆ. ನಮ್ಮ ನಂಬಿಕೆಯನ್ನು ಹಲವರು ಪ್ರಶ್ನಿಸಿದ್ದಾರೆ. ನಮ್ಮ ಶ್ರದ್ಧಾ ಕೇಂದ್ರಗಳನ್ನು ನಿರ್ಲಕ್ಷಿಸಲಾಗಿತ್ತು. ಆದರೆ ಸರ್ಕಾರ ಶ್ರದ್ಧಾ ಕೇಂದ್ರಗಳ ಪುನರುತ್ಥಾನ ಮಾಡಲಾಗುತ್ತಿದೆ. ಮಹಾಕಾಲೇಶ್ವರ, ಸೋಮನಾಥ, ಸೂರ್ಯ ದೇಗಲು, ಕಾಶಿ ವಿಶ್ವನಾಥ ಸೇರಿದಂತೆ ಭಾರತದ ಪರಂಪರೆ ಹಾಗೂ ಧರ್ಮವನ್ನ ರಕ್ಷಿಸುವ ಕೆಲಸವಾಗುತ್ತಿದೆ. ಇದೀಗ ಆಯೋಧ್ಯೆಯಲ್ಲಿ ಮತ್ತೆ ಗತವೈಭವ ಮರುಕಳಿಸುತ್ತಿದೆ. ಅಯೋಧ್ಯೆ ಅಭಿವೃದ್ಧಿ ಕಾಣುತ್ತಿದೆ.
ಅಯೋಧ್ಯೆಯಲ್ಲಿ 'ನಮೋ' ದೀಪಾವಳಿ: ಲಕ್ಷಾಂತರ ಹಣತೆಗಳಿಂದ ಬೆಳಗಲಿದೆ ರಾಮಜನ್ಮಭೂಮಿ
ಶ್ರೀರಾಮನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಆಯೋಧ್ಯೆಯಲ್ಲಿ ದಕ್ಷಿಣ ಕೊರಿಯಾ ಹಾಗೂ ಭಾರತದ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರ ರಾಮಾಯಣ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಾಗಿದೆ. ಇವೆಲ್ಲಾ ಆಯೋಧ್ಯೆಯಲ್ಲಿ ಹೊಸ ಅಭಿವೃದ್ಧಿಗೆ ಕಾರಣವಾಗಲಿದೆ. ಇಂದು ಆಯೋಧ್ಯೆ ನಗರದಿಂದ ದೇಶದ ಎಲ್ಲರಲ್ಲೂ ಒಂದು ಮನವಿ. ಆಯೋಧ್ಯೆ ದೇಶದ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಶ್ರೀರಾಮ ನಮಗೆ ಪ್ರೇರಣೆ ಹಾಗೂ ಆದರ್ಶ. ಭಗವಾನ್ ರಾಮನ ಆದರ್ಶ ಪಾಲಿಸುವುದು, ಮುನ್ನಡೆಯುವುದು ನಮ್ಮ ಕರ್ತವ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ.
ಆಯೋಧ್ಯೆಗೆ ಆಗಮಿಸುವ ಭಕ್ತರು ಸಂಖ್ಯೆ ದ್ವಿಗುಣವಾಗಲಿದೆ. ಆಯೋಧ್ಯೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಸ್ಥಳೀಯರು ಸ್ವಾಗತಿಸಬೇಕು. ಇಲ್ಲಿನ ನಗರ, ರಸ್ತೆ ಎಲ್ಲವೂ ಸ್ವಚ್ಚವಾಗಿರಬೇಕು. ಅತ್ಯುತ್ತಮ ಆತಿಥ್ಯ ಸಿಗಬೇಕು. ಇದಕ್ಕೆ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಕಾರ್ಯಗಳು ನಡೆಯುತ್ತಿದೆ. ಇದಕ್ಕೆ ನಾಗರೀಕರು ಕೈಜೋಡಿಸಬೇಕು ಎಂದು ಮೋದಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ