ನವದೆಹಲಿ(ಮಾರ್ಚ್.18):ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi) ಶೇಕಡಾ 43ಕ್ಕಿಂತ ಹೆಚ್ಚು ಅಪ್ರಾಪ್ತ ವಯಸ್ಕರು ವಾರಕ್ಕೆ ಎರಡರಿಂದ ನಾಲ್ಕು ಬಾರಿ ಮದ್ಯಪಾನ ಮಾಡುತ್ತಾರೆ ಮತ್ತು ಶೇಕಡಾ 89 ಕ್ಕಿಂತ ಹೆಚ್ಚು ಜನರು 21 ವರ್ಷಗಳ ಮೊದಲೇ ತಮ್ಮ ಮೊದಲ ಮದ್ಯಪಾನದ ರುಚಿ ನೋಡಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ. ದೆಹಲಿಯಲ್ಲಿ ಕಾನೂನುಬದ್ಧವಾಗಿ ಮದ್ಯಪಾನ ಮಾಡಲು 25 ವರ್ಷ ವಯಸ್ಸಾಗಿರಬೇಕು. ಸುಮಾರು 44.5 ಪ್ರತಿಶತದಷ್ಟು ಜನರು ಕುಡಿದ ನಂತರ ರಾಶ್ ಡ್ರೈವಿಂಗ್(Rash Driving), ಸ್ಪೀಡ್ ಬೈಕಿಂಗ್ (Speed Biking) ಮತ್ತು ಸ್ಟಂಟ್ ಬೈಕಿಂಗ್ (Stunt Biking) ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಸೀಟ್ ಬೆಲ್ಟ್‌ಗಳು ಮತ್ತು ಹೆಲ್ಮೆಟ್‌ಗಳನ್ನು ಧರಿಸುವಂತಹ ಸಂಚಾರಿ ಸುರಕ್ಷತಾ ನಿಯಮಗಳನ್ನು ((Traffic Safety Rule) ಅನುಸರಿಸುತ್ತಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.
ಸಮೀಕ್ಷೆಗೆ ಒಳಗಾದವರಲ್ಲಿ, 35.8 ಪ್ರತಿಶತದಷ್ಟು ಜನರು ತಾವು ಕುಡಿದು ಜಗಳವಾಡಿದ್ದಾಗಿ ಎಂದು ಒಪ್ಪಿಕೊಂಡಿದ್ದಾರೆ ಮತ್ತು 19.7 ಪ್ರತಿಶತದಷ್ಟು ಜನ ಕುಡಿದ ನಂತರ ಇತರ ವಿರುದ್ಧ ಲಿಂಗಗಳ (Gender) ಕಡೆಗೆ ಆಕ್ರಮಣಕಾರಿ ವರ್ತನೆ ಪ್ರದರ್ಶಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಕಮ್ಯುನಿಟಿ ಅಗೇನ್ಸ್ಟ್ ಡ್ರಂಕನ್ ಡ್ರೈವಿಂಗ್ (CADD) ಎಂಬ ಸಂಸ್ಥೆಯೂ ನವೆಂಬರ್ 20 ರಿಂದ ಡಿಸೆಂಬರ್ 31, 2021ರವರೆಗೆ 50 ಪ್ರಮುಖ ಮದ್ಯ ಮಾರಾಟ ಸಂಸ್ಥೆ, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳ ಹೊರಗೆ 10,000 ಜನರನ್ನು ಒಳಗೊಂಡು ಈ ಸಮೀಕ್ಷೆಯನ್ನು ನಡೆಸಿದೆ. ಇವರಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ 5976 ಪುರುಷರು ಮತ್ತು 4024 ಮಹಿಳೆಯರು ಸಮೀಕ್ಷೆಗೆ ಪ್ರತಿಕ್ರಿಯಿಸಿದವರಾಗಿದ್ದಾರೆ.
Greater Noida ಕುಡಿಯೋದ್ ಬಿಡು ಎಂದಿದ್ದಕ್ಕೆ ಅಕ್ಕನಿಗೆ ಗುಂಡಿಕ್ಕಿ ಕೊಂದ!
ಇದು ಅಪ್ರಾಪ್ತ ವಯಸ್ಕರಲ್ಲಿ ಆಲ್ಕೊಹಾಲ್ ಸೇವನೆಯ ಹೆಚ್ಚಳ, ಮದ್ಯದ ಮೇಲಿನ ವೆಚ್ಚದಲ್ಲಿ ಹೆಚ್ಚಳ ಮತ್ತು ಯುವಕರು ಯಾವುದೇ ತಪಾಸಣೆಯಿಲ್ಲದೆ ವಿವಿಧ ಸ್ಥಳಗಳಲ್ಲಿ ಮದ್ಯವನ್ನು ಖರೀದಿಸಲು ಮತ್ತು ಸೇವಿಸಲು ಸಾಧ್ಯವಿದೆ ಎಂಬುದನ್ನು ಈ ಸಮೀಕ್ಷೆ ಬಯಲು ಮಾಡಿದೆ. ಈ ಸಮೀಕ್ಷೆಯಲ್ಲಿ ಭಾಗಿಯಾದವರಲ್ಲಿ ಹದಿನೇಳು ಪ್ರತಿಶತದಷ್ಟು ಜನರು 13ರಿಂದ 15ನೇ ವರ್ಷಗಳಲ್ಲಿ ತಮ್ಮ ಮೊದಲ ಮದ್ಯಪಾನವನ್ನು ಮಾಡಿದ್ದಾರೆ. 37.1 ಪ್ರತಿಶತದಷ್ಟು ಜನರು 16 ರಿಂದ 18ನೇ ವರ್ಷ ವಯಸ್ಸಿನಲ್ಲೇ ಮೊದಲ ಮದ್ಯದ ರುಚಿ ನೋಡಿದ್ದಾರೆ.
ಗಾಬರಿಗೊಳಿಸುವ ಸಂಗತಿಯೆಂದರೆ, ಪ್ರತಿಕ್ರಿಯಿಸಿದವರಲ್ಲಿ ಸುಮಾರು 89.4 ಪ್ರತಿಶತದಷ್ಟು ಜನರು 21 ವರ್ಷಕ್ಕಿಂತ ಮುಂಚೆಯೇ ಮದ್ಯವನ್ನು ಸೇವಿಸಿದವರಾಗಿದ್ದರು. ಅಲ್ಲದೇ ಸುಮಾರು 73.4 ಪ್ರತಿಶತದಷ್ಟು ಜನರು ಬಾರ್‌ಗಳು, ಪಬ್‌ಗಳು ಮತ್ತು ಮದ್ಯ ಮಾರಾಟಗಾರರಿಂದ ಸುಲಭವಾಗಿ ಮದ್ಯವನ್ನು ಸಂಗ್ರಹಿಸಿದ್ದಾರೆ ಮತ್ತು 21.2 ಪ್ರತಿಶತದಷ್ಟು ಜನರು ತಮ್ಮ ಮನೆ ಅಥವಾ ಸ್ನೇಹಿತರ ಮನೆಯಿಂದ ತಮ್ಮ ಮದ್ಯವನ್ನು ಪಡೆದರು ಎಂದು ಸಮೀಕ್ಷೆಯ ವರದಿಯು ಹೇಳಿದೆ.
ವಯಸ್ಸಾಯ್ತಾ ? ಕುಡಿಯೋದೆ ನನ್ ವೀಕ್‌ನೆಸ್ಸು ಅನ್ನೋದನ್ನು ಬಿಟ್ಬಿಡಿ, ಇಲ್ದಿದ್ರೆ ಜೀವಕ್ಕೇ ತೊಂದ್ರೆ !
ಯಾವುದೇ ಮೇಲ್ವಿಚಾರಣೆಯಿಲ್ಲದೆ ಸುಲಭವಾಗಿ ಸಿಗುವ ಮದ್ಯದ ಲಭ್ಯತೆಯು ಅಪ್ರಾಪ್ತ ವಯಸ್ಕರ ಮದ್ಯ ಸೇವನೆಯ ದೊಡ್ಡ ಅಂಶವಾಗಿದೆ ಎಂಬುದು ಸಮೀಕ್ಷೆಯಿಂದ ತಿಳಿದಿದೆ. 43.1 ಪ್ರತಿಶತದಷ್ಟು ಜನರು ಬಾರ್, ಪಬ್ ಅಥವಾ ರೆಸ್ಟೋರೆಂಟ್‌ನಲ್ಲಿ ಮದ್ಯಪಾನ ಮಾಡಿದ್ದರೆ, ಸುಮಾರು 24.6ರಷ್ಟು ಜನರು ಕಾರು ಅಥವಾ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನವನ್ನು ಸೇವಿಸಿದ್ದಾರೆ ಎಂದು ಸಮೀಕ್ಷೆಯು ತಿಳಿಸಿದೆ. ವಾರದಲ್ಲಿ ಒಮ್ಮೆ ಆಲ್ಕೋಹಾಲ್ ಸೇವನೆಯು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಪ್ರತಿಕ್ರಿಯಿಸಿದವರಲ್ಲಿ ಸುಮಾರು 45.1 ಪ್ರತಿಶತದಷ್ಟು ಜನರು ವಾರದಲ್ಲಿ ಎರಡರಿಂದ ನಾಲ್ಕು ಬಾರಿ ಮತ್ತು 11.1 ಪ್ರತಿಶತದಷ್ಟು ಜನರು ವಾರಕ್ಕೆ ಆರು ಬಾರಿ ಆಲ್ಕೋಹಾಲ್ ಸೇವಿಸುತ್ತಾರೆ. ವಾರಾಂತ್ಯದಲ್ಲಿ ಯುವಕರು ಕುಡಿಯಲು ಹೆಚ್ಚು ಆದ್ಯತೆ ನೀಡುತ್ತಾರೆ ಎಂದು ಸಮೀಕ್ಷೆ ಹೇಳಿದೆ.
ಆದಾಗ್ಯೂ ಅವರಲ್ಲಿ ಹೆಚ್ಚಿನವರು ತಾವು ಕುಡಿಯಲು ಪ್ರಾರಂಭಿಸಿರುವುದರಿಂದ ಈಗ ಯಾವುದೇ ಸಂದರ್ಭದಲ್ಲಿಯೂ ಆಲ್ಕೊಹಾಲ್ ಸೇವಿಸಲು ಸಿದ್ಧರಿರುವುದಾಗಿ ಒಪ್ಪಿಕೊಂಡರು, 89.3 ರಷ್ಟು ಪ್ರತಿಕ್ರಿಯಿಸಿದವರು ಒಂದೇ ಸಮಯದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಗ್ಲಾಸ್ ಮದ್ಯ ಸೇವಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಹುಡುಗಿಯರು ಮತ್ತು ಹುಡುಗರು ಎಲ್ಲಾ ರೀತಿಯ ಮದ್ಯವನ್ನು ಸೇವಿಸುತ್ತಾರೆ. ಆದರೆ ಅವರು ಶಾಟ್‌ಗೆ ಆದ್ಯತೆ ನೀಡುತ್ತಾರೆ. ಅಪ್ರಾಪ್ತ ವಯಸ್ಕ ಗ್ರಾಹಕರು ತಮ್ಮ ಶೇಕಡಾ 90 ರಷ್ಟು ಆಲ್ಕೋಹಾಲ್ ಅನ್ನು ಬಿಂಜ್ ಡ್ರಿಂಕಿಂಗ್ ಮೂಲಕ ಹೊಂದಿದ್ದಾರೆ. ಇದು ಹಾನಿಕಾರಕವಾಗಿದೆ ಮತ್ತು ಮಾರಣಾಂತಿಕವಾಗಿದೆ ಎಂದು ವರದಿ ಹೇಳಿದೆ.
ಪ್ರತಿಕ್ರಿಯಿಸಿದವರಲ್ಲಿ ಯಾರೊಬ್ಬರೂ ಮದ್ಯವನ್ನು ಖರೀದಿಸುವ ಮೊದಲು ಯಾರೂ ತಮ್ಮಿಂದ ಗುರುತಿನ ಚೀಟಿಯನ್ನು ಕೇಳಲಿಲ್ಲ ಎಂದು ಹೇಳಿದ್ದು ಸಮೀಕ್ಷೆಯ ಗಮನಾರ್ಹ ಅಂಶವಾಗಿದೆ.ಅಲ್ಲದೇ ಅಪ್ರಾಪ್ತ ವಯಸ್ಕರಾಗಿದ್ದಾಗ ಮದ್ಯವನ್ನು ಖರೀದಿಸಿದ್ದು ಅಥವಾ ಸೇವಿಸಿದ್ದಕ್ಕಾಗಿ ಕಾನೂನು ಕ್ರಮಕ್ಕೆ ಯಾರೂ ಒಳಗಾಗಿಲ್ಲ. ಕೇವಲ 5.5 ಪ್ರತಿಶತದಷ್ಟು ಮಂದಿ ಮಾತ್ರ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಕಾನೂನು ಕ್ರಮಕ್ಕೆ ಒಳಗಾಗಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಈ ಸಮೀಕ್ಷೆ ನಡೆಸಿದ ಕಮ್ಯೂನಿಟಿ ಅಗನೆಸ್ಟ್ ಡ್ರಂಕನ್ ಡ್ರೈವಿಂಗ್ ಸಂಸ್ಥೆಯೂ ಸಮುದಾಯದ ಸಾಮಾಜಿಕ ಜವಾಬ್ದಾರಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಎನ್‌ಜಿಒ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ