
ಮುಂಬೈ: ಖ್ಯಾತ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ‘ದ್ರೋಹಿ’ ಎಂದು ಕರೆದದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರಿಂದ ಸಿಟ್ಟಿಗೆದ್ದ ಶಿವಸೇನಾ ಕಾರ್ಯಕರ್ತರು ಕಾಮ್ರಾ ಕಾರ್ಯಕ್ರಮ ನಡೆಸಿದ ಸಭಾಂಗಣವನ್ನು ಪುಡಿಗಟ್ಟಿದ್ದಾರೆ. ಹೀಗಾಗಿ ಕೃತ್ಯ ಎಸಗಿದ 12 ಶಿವಸೇನಾ ಕಾರ್ಯಕರ್ತರನ್ನು ಬಂಧಿಸಿ ಬಳಿಕ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.
ಅತ್ತ ತಮ್ಮ ವಿಡಿಯೋ ವಿವಾದ ಹುಟ್ಟುಹಾಕುತ್ತಿದ್ದಂತೆ ಮುಂಬೈ ಬಿಟ್ಟಿದ್ದ ಕಾಮ್ರಾ ತಮಿಳುನಾಡಿನಲ್ಲಿ ಇರುವುದು ಪತ್ತೆಯಾಗಿದೆ. ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಪ್ರಕಣ ರಾಜಕೀಯ ವಾಗ್ಯುದ್ಧಕ್ಕೂ ಕಾರಣವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ನಿಂದನೆ ಸಲ್ಲದು. ಕಾಮ್ರಾ ಕ್ಷಮೆ ಕೇಳಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆಗ್ರಹಿಸಿದ್ದಾರೆ. ಆದರೆ ಶಿಂಧೆ ವಿರೋಧಿಯಾದ ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ, ಕಾಮ್ರಾ ಹೇಳಿಕೆ ಸಮರ್ಥಿಸಿದ್ದಾರೆ.
ಶಿವಸೇನೆಯಿಂದ ಮುಸ್ಲಿಂ ಮಹಿಳೆಯರಿಗೆ ಉಚಿತ ಬುರ್ಖಾ ಹಂಚಿಕೆ; ಶಿಂಧೆ ಬಣದ ವಿರುದ್ಧ ಸಂಜಯ್ ರಾವುತ್ ಕೆಂಡ!
ಆಗಿದ್ದೇನು?:
ಭಾನುವಾರ ರಾತ್ರಿ ಖಾರ್ ಪ್ರದೇಶದ ಕಾಂಟಿನೆಂಟಲ್ ಹೋಟೆಲ್‌ನ ಸ್ಟುಡಿಯೋದಲ್ಲಿ ನಡೆದ ‘ಹ್ಯಾಬಿಟ್ಯಾಟ್ ಕಾಮೆಡಿ ಕ್ಲಬ್’ ಹೆಸರಿನ ಹಾಸ್ಯ ಕಾರ್ಯಕ್ರಮದ ವೇಳೆ, 2022ರಲ್ಲಿ ಶಿವಸೇನೆ ಇಬ್ಭಾಗವಾದ ಬಗ್ಗೆ ಮಾತನಾಡತೊಡಗಿದ ಕಾಮ್ರಾ, ‘ಡಿಸಿಎಂ ಶಿಂಧೆ ಒಬ್ಬ ದ್ರೋಹಿ’ ಎಂದಿದ್ದಾರೆ. ಜೊತೆಗೆ, ’ದಿಲ್ ತೋ ಪಾಗಲ್ ಹೈ’ ಹಾಡಿನ ಸಾಹಿತ್ಯವನ್ನು ಬದಲಿಸಿ ಶಿಂಧೆ ಕುರಿತು ನಿಂದನೀಯವಾಗಿ ಹಾಡಿದ್ದಾರೆ.
ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಕುಪಿತರಾದ ಶಿವಸೇನೆಯ ಕಾರ್ಯಕರ್ತರು, ಕಾರ್ಯಕ್ರಮವನ್ನು ಚಿತ್ರೀಕರಿಸಲಾದ ಖಾರ್ ಪ್ರದೇಶದಲ್ಲಿರುವ ಯೂನಿಕಾಂಟಿನೆಂಟಲ್ ಹೋಟೆಲ್‌ನ ಹ್ಯಾಬಿಟಾಟ್ ಸ್ಟುಡಿಯೋವನ್ನು ಧ್ವಂಸ ಮಾಡಿದ್ದಾರೆ.
ಕಾಮ್ರಾಗೆ ವಿಡಿಯೋ ಮೂಲಕ ಎಚ್ಚರಿಕೆ ನೀಡಿರುವ ಸೇನೆಯ ಸಂಸದ ನರೇಶ್ ಮ್ಹಾಸ್ಕೆ, ‘ನಿಮ್ಮನ್ನು ದೇಶ ಬಿಡುವಂತೆ ಮಾಡಲಾಗುತ್ತದೆ’ ಎಂದಿದ್ದಾರೆ. ಶಿವಸೇನೆಯ ಮುಖಂಡ ರಾಹುಲ್ ಕನಾಲ್ ಮಾತನಾಡಿ, ‘ಇದು ಸ್ವಾಭಿಮಾನದ ವಿಷಯ. ನೀವು ಮುಂಬೈಗೆ ಬರುತ್ತಿದ್ದಂತೆ ಶಿವಸೇನೆ ಶೈಲಿಯ ಪಾಠ ಕಲಿಸಲಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. ಜೊತೆಗೆ, ಹೋಟೆಲ್ ಮೇಲೆಯೂ 6 ಎಫ್‌ಐಆರ್ ಇವೆ ಎಂದಿದ್ದಾರೆ.
ಖಾತೆಗಾಗಿ ಅಜಿತ್- ಶಿಂಧೆ ಬಣ ಜಟಾಪಟಿ : ಹಣಕಾಸು, ಗೃಹ ಖಾತೆಗೆ ಅಜಿತ್ ಬೇಡಿಕೆ
ಕಾರ್ಯಕರ್ತರ ಬಂಧನ, ಬಿಡುಗಡೆ:
ಅತ್ತ, ಕಾಮ್ರಾರ ಕಾರ್ಯಕ್ರಮ ನಡೆದ ಸಭಾಂಗಣ ಧ್ವಂಸಗೊಳಿಸಿದ ಸಂಬಂಧ ಕನಾಲ್ ಸೇರಿ 12 ಜನರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. 19 ಜನ ಕಾರ್ಯಕರ್ತರನ್ನು ಗುರುತಿಸಲಾಗಿದ್ದು, ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಖಾರ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದರ ಬಳಿಕ 12 ಬಂಧಿತರಿಗೆ ಜಾಮೀನು ದೊರಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ