
ಮುಂಬೈ(ಏ.20) ಕಳೆದ 5 ವರ್ಷಗಳಲ್ಲಿ ಭಾರೀ ರಾಜಕೀಯ ಬದಲಾವಣೆಗೆ ಸಾಕ್ಷಿಯಾದ ಮಹಾರಾಷ್ಟ್ರದಲ್ಲಿ ಶೀಘ್ರವೇ ಮತ್ತೊಂದು ಮಹಾವಿಲೀನದ ಸಾಧ್ಯತೆ ಕಂಡುಬಂದಿದೆ. 2005ರಲ್ಲಿ ಪರಸ್ಪರ ಬೇರಾಗಿದ್ದ ಶಿವಸೇನೆ (ಉದ್ಧವ್ ಬಣ) ಮತ್ತು ಸೋದರ ಸಂಬಂಧಿ ರಾಜ್ ಠಾಕ್ರೆ (ಎಂಎನ್‌ಎಸ್) ಮತ್ತೆ ಒಂದಾಗುವ ಸುಳಿವು ನೀಡಿದ್ದಾರೆ. ಇಬ್ಬರೂ ನಾಯಕರೂ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜ್ ಠಾಕ್ರೆ, ‘ನನ್ನ ಮತ್ತು ಉದ್ಧವ್ ಠಾಕ್ರೆ ನಡುವಿನ ವೈಮನಸ್ಯ ಸಣ್ಣದು. ಉಳಿದೆಲ್ಲದ್ದಕ್ಕಿಂತ ಮಹಾರಾಷ್ಟ್ರ ವಿಷಯ ದೊಡ್ಡದು. ನಮ್ಮ ನಡುವಿನ ಭಿನ್ನಾಭಿಪ್ರಾಯ ಮಹಾರಾಷ್ಟ್ರ ಮತ್ತು ಮರಾಠಿ ಜನರ ಅಸ್ತಿತ್ವಕ್ಕೆ ಪೆಟ್ಟು ನೀಡಿದೆ. ಹೀಗಾಗಿ ಇಲ್ಲಿ ನಾನು ಎಂಬುದನ್ನು ಬಿಟ್ಟು ವಿಶಾಲ ದೃಷ್ಟಿಕೋನದಿಂದ ನೋಡಿದರೆ ಎಲ್ಲರೂ ಒಂದಾಗಬಹುದು. ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇರುವ ಮರಾಠಿಗಳು ಒಂದಾಗಬೇಕು ಮತ್ತು ಒಂದೇ ರಾಜಕೀಯ ಪಕ್ಷ ಸ್ಥಾಪನೆ ಮಾಡಬೇಕು ಎಂದು ಹೇಳಿದ್ದಾರೆ.
ಅಘಾಡಿ ಜೊತೆ ಬಂದರೆ ಸಿಎಂ ಹುದ್ದೆ : ಶಿಂಧೆ, ಅಜಿತ್ ಪವಾರ್‌ಗೆ ಕಾಂಗ್ರೆಸ್ ಆಫರ್
ಇದೇ ವೇಳೆ ಉದ್ಧವ್ ಠಾಕ್ರೆ ಕೂಡಾ ಇಂಥ ಪ್ರಸ್ತಾವಕ್ಕೆ ತಮ್ಮ ಷರತ್ತುಬದ್ಧ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಲು ನಾನು ಸಿದ್ಧ. ಮಹಾರಾಷ್ಟ್ರದ ಹಿತಾಸಕ್ತಿ ಕಾಪಾಡಲು ಎಲ್ಲಾ ಮರಾಠಿಗರು ಒಂದಾಗಬೇಕು ಎಂದು ನಾನು ಕರೆ ಕೊಡುತ್ತೇನೆ. ಆದರೆ ಇದಕ್ಕೊಂದು ಷರತ್ತಿದೆ. ಎಲ್ಲಾ ಕೈಗಾರಿಕೆಗಳನ್ನೂ ಗುಜರಾತ್‌ಗೆ ವರ್ಗಾಯಿಸಲಾಗುತ್ತಿದೆ ಎಂದು ನಾವು ಸಂಸತ್ತಿನಲ್ಲಿ ಪ್ರಸ್ತಾಪಿಸಿದಾಗ ನಾವೆಲ್ಲಾ ಒಂದಾಗಿದ್ದರೆ, ಮಹಾರಾಷ್ಟ್ರಕ್ಕೆ ಲಾಭ ತರುವ ಸರ್ಕಾರವನ್ನು ನಾವು ರಚಿಸಬಹುದಿತ್ತು. ಇದು ಸಾಧ್ಯವಾಗಬೇಕಾದರೆ ನಾವು ಅತ್ತಿಂದಿತ್ತ ಪಕ್ಷ ಬದಲಾವಣೆ ಮಾಡಬಾರದು. ಒಂದು ದಿನ ಅವರನ್ನು ಬೆಂಬಲಿಸುವುದು, ಇನ್ನೊಂದು ದಿನ ಅವರನ್ನು ವಿರೋಧಿಸುವುದು ಮತ್ತೆ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಆಗಬಾರದು ಎಂದು. ಈ ವಿಷಯದಲ್ಲಿ ಖಚಿತ ನಿಲವು ಹೊಂದಿದ್ದರೆ ನಾವು ಮುಂದಿನ ಹೆಜ್ಜೆ ಇಡಬಹುದು ಎಂದು ಹೇಳಿದ್ದಾರೆ.
ರಾಜ್ ಠಾಕ್ರೆ ಅವರ ಎಂಎನ್ಎಸ್ ರಾಜಕೀಯಕ್ಕಿಂತ ಇತರ ವಿಷಗಳಲ್ಲಿ ಮುಂದಿದೆ. ಮರಾಠಿ ಭಾಷಿಗರ ಅಸ್ಮಿತೆ, ಮರಾಠಿ ಹೋರಾಟ, ನೆಲ ಜಲ, ಭಾಷೆ ವಿಚಾರಗಳಲ್ಲಿ ರಾಜ್ ಠಾಕ್ರೆ ಅವರ ಎಂಎನ್ಎಸ್ ಪ್ರಬಲ ಹೋರಾಟ ನಡೆಸುತ್ತಿದೆ. ಆದರೆ ರಾಜಕೀಯವಾಗಿ ದುರ್ಬಲಗೊಳ್ಳುತ್ತಿದೆ. ಇತ್ತ ಉದ್ಧವ್ ಠಾಕ್ರೆ ಬಣದ ಶಿವಸೇನೆ ಕಾಂಗ್ರೆಸ್, ಎನ್‌ಸಿಪಿ ಜೊತೆ ಸೇರಿಕೊಂಡು ಸರ್ಕಾರ ರಚಿಸಿತ್ತು. ಬಿಜೆಪಿ ಸಖ್ಯ ತೊರೆದು ಮಹಾವಿಕಾಸ್ ಅಘಾಡಿ ಸಮಿಶ್ರ ಸರ್ಕಾರ ನಡೆಸಿತ್ತು. ಹಿಂದುತ್ವ ಅಜೆಂಡಾ ಬದಿಗೊತ್ತಿದ ಶಿವಸೇನೆ ಎಲ್ಲರಲ್ಲಿ ಅಚ್ಚರಿ ಮೂಡಿಸಿತತ್ತು. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿಯೂ ಅಧಿಕಾರ ನಿರ್ವಹಿಸಿದ್ದರು.ಆದರೆ ಶಿವಸೇನೆ ಬಣದ ಏಕನಾಥ್ ಶಿಂಧೆ ಹಾಗೂ ನಾಯಕರು ಬಿಜೆಪಿ ಜೊತೆ ಸೇರಿ ಉದ್ಧವ್ ಠಾಕ್ರೆ ಸರ್ಕಾರ ಉರುಳಿಸಿದ್ದರು. ಪ್ರಖರ ಹಿಂದುತ್ವದಿಂದ ದೂರ ಸರಿದ ಶಿವಸೇನೆ ಇದೀಗ ಕಳೆಗುಂದಿದೆ. ಇದೀಗ ಹಿಂದುತ್ವದಿಂದ ದೂರ ಉಳಿದಿರುವ ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಜೊತೆ ಸೇರಿ ಮರಾಠಿ ವಿಚಾರ ಮುಂದಿಟ್ಟು ಒಗ್ಗಟ್ಟಾಗಿ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಶಿಂಧೆ ಬಣದ ಶಾಸಕರ ಭದ್ರತೆ ಕಡಿತ: ಮಹಾಯುತಿಯಲ್ಲಿ ಮಹಾ ಬಿರುಕು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ