
ದೆಹಲಿ ಸ್ಫೋಟ ಪ್ರಕರಣದ ಆರೋಪಿ ಮುಜಾಮಿಲ್ ಈಗ ತನ್ನ ಒಡನಾಡಿ ತನ್ನ ಕೃತ್ಯಗಳಲ್ಲಿ ಭಾಗಿಯಾದ ಶಹೀನಾ ಸೈಯದ್ ತನ್ನ ಪತ್ನಿ ತಾವಿಬ್ಬರು ಅಲ್ ಫಲಾಹ್‌ನ ವಿಶ್ವವಿದ್ಯಾಲಯದ ಬಳಿ ಇರುವ ಮಸೀದಿಯೊಂದರಲ್ಲಿ ಮದುವೆಯಾಗಿದ್ದೆವು ಎಂದು ಆತ ಹೇಳಿದ್ದಾನೆ ಎಂದು ವರದಿಯಾಗಿದೆ. ಈ ದೆಹಲಿ ಸ್ಫೋಟ ಹಾಗೂ ಹರ್ಯಾಣದ ಫರಿದಾಬಾದ್‌ನಲ್ಲಿ ಪತ್ತೆಯಾದ ಭಾರಿ ಪ್ರಮಾಣದ ಸ್ಫೋಟಕ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳವೂ ಈ ಶಹೀನಾ ಜೈಷ್, ಉಗ್ರ ಸಂಘಟನೆಗಾಗಿ 28 ಲಕ್ಷ ಹಣವನ್ನು ಸಂಗ್ರಹ ಮಾಡಿದ್ದಳು ಎಂದು ಹೇಳಿದೆ.
ದೆಹಲಿ ಕಾರು ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಡಾ. ಮುಜಮ್ಮಿಲ್ ಅಹ್ಮದ್ ಗನೈ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ಡಾ. ಶಾಹೀನ್ ಸೈಯದ್ ತನ್ನ ಗರ್ಲ್‌ಫ್ರೆಂಡ್ ಅಲ್ಲ, ಆಕೆ ನನ್ನ ಪತ್ನಿ ಎಂದು ಹೇಳಿಕೊಂಡಿದ್ದಾನೆ. ಇಲ್ಲಿಯವರೆಗೆ ವೈಟ್ ಕಾಲರ್ ಟೆರರ್ ಗ್ರೂಪ್ ಎಂದೇ ಗುರುತಿಸಲ್ಪಟ್ಟ ಭಯೋತ್ಪಾದನಾ ಘಟಕದಲ್ಲಿ ಮೇಡಂ ಸರ್ಜನ್ ಎಂದೇ ಕರೆಯಲ್ಪಡುವ ಶಾಹೀನಾ ಮುಜಮ್ಮಿಲ್‌ನ ಗರ್ಲ್‌ಫ್ರೆಂಡ್ ಎಂದೇ ನಂಬಲಾಗಿತ್ತು.
ಮದುವೆಗೆ 5-6 ಸಾವಿರ ರೂ.ಗಳ 'ಮೆಹರ್' ಒಪ್ಪಂದ
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವಾದ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, ಅದರ ಪ್ರಕಾರ, ಮುಜಮ್ಮಿಲ್ ಸೆಪ್ಟೆಂಬರ್ 2023ರಲ್ಲಿಯೇ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದ ಬಳಿಯ ಮಸೀದಿಯಲ್ಲಿ ಶಾಹೀನಾಳನ್ನು ಮದುವೆಯಾಗಿದ್ದ. ಷರಿಯಾ ಕಾನೂನಿನಡಿಯಲ್ಲಿ ಮದುವೆಯಾಗಿದ್ದು. ಈ ಮದುವೆಗೆಗ 5-6 ಸಾವಿರ ರೂ.ಗಳ 'ಮೆಹರ್' (ಬೇರ್ಪಟ್ಟರೆ ವಧುವಿಗೆ ಆರ್ಥಿಕ ಭದ್ರತೆಯಾಗಿ ನೀಡುವ ಹಣ) ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಜೈಶ್ ಮಾಡ್ಯೂಲ್‌ಗೆ 27 ರಿಂದ 28 ಲಕ್ಷ ರೂ. ನೀಡಿದ ಶಾಹೀನಾ:
ಮೂಲಗಳ ಪ್ರಕಾರ, ಡಾ. ಶಾಹೀನ್ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಖರೀದಿಸಲು ಜೈಶ್ ಮಾಡ್ಯೂಲ್‌ಗೆ 27 ರಿಂದ28 ಲಕ್ಷ ರೂ.ಗಳನ್ನು ನೀಡಿದ್ದಳು. 2023 ರಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮುಜಮ್ಮಿಲ್‌ಗೆ ಸುಮಾರು 6.5 ಲಕ್ಷ ರೂ.ಗಳನ್ನು ಮತ್ತು 2024 ರಲ್ಲಿ ಫೋರ್ಡ್ ಇಕೋ ಸ್ಪೋರ್ಟ್ ಕಾರು ಖರೀದಿಸಲು ಉಮರ್‌ಗೆ 3 ಲಕ್ಷ ರೂ.ಗಳನ್ನು ಸಾಲವಾಗಿ ಆಕೆ ನೀಡಲು ಮುಂದಾಗಿದ್ದರು.
ಕಾಶ್ಮೀರಿ ಹಣ್ಣುಗಳ ವ್ಯಾಪಾರದ ನೆಪದಲ್ಲಿ ಮನೆ ಬಾಡಿಗೆ ಪಡೆದಿದ್ದ ಮುಜಮ್ಮಿಲ್
ಫರಿದಾಬಾದ್‌ನ ಫತೇಪುರ್ ಟಾಗಾ ಮತ್ತು ಧೌಜ್ ಜೊತೆಗೆ ಅಲ್ ಫಲಾಹ್‌ನಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ಖೋರಿ ಜಮಾಲ್‌ಪುರ್ ಗ್ರಾಮದಲ್ಲಿ ಮೂರು ಮಲಗುವ ಕೋಣೆಗಳ ಮನೆಯನ್ನು ಮುಜಮ್ಮಿಲ್ ಬಾಡಿಗೆಗೆ ಪಡೆದಿದ್ದ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ. ಮಾಜಿ ಸರಪಂಚ್ ಕೂಡ ಆಗಿರುವ ಈ ಮನೆಯ ಮಾಲೀಕ ಜುಮ್ಮಾ ಮಾತನಾಡಿ, ಕಾಶ್ಮೀರಿ ಹಣ್ಣುಗಳ ವ್ಯಾಪಾರದ ನೆಪದಲ್ಲಿ ಮುಜಮ್ಮಿಲ್ ಮನೆಯನ್ನು ಬಾಡಿಗೆಗೆ ಪಡೆದಿದ್ದ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಾಂಗ್‌ಕಾಂಗ್: ಈ ಶತಮಾನದ ಭೀಕರ ಅಗ್ನಿ ದುರಂತಕ್ಕೆ ಬಲಿಯಾದವರ ಸಂಖ್ಯೆ 128ಕ್ಕೆ ಏರಿಕೆ, 280 ಮಂದಿ ನಾಪತ್ತೆ
ಎನ್ಐಎ ಮೂಲಗಳ ಪ್ರಕಾರ ಮಾಜಿ ಸರಪಂಚ್ ಜುಮ್ಮಾ ಅವರು, ಜಮಾಲ್ಪುರ್ ಗ್ರಾಮದ ರಸ್ತೆಬದಿಯಲ್ಲಿ ಪ್ಲಾಸ್ಟಿಕ್ ಕಚ್ಚಾ ವಸ್ತುಗಳ ಕಾರ್ಖಾನೆಯನ್ನು ಹೊಂದಿದ್ದಾರೆ. ಅದರ ಮೇಲೆ ಮೂರು ಮಲಗುವ ಕೋಣೆಗಳು, ಒಂದು ಹಾಲ್ ಮತ್ತು ಅಡುಗೆಮನೆ ಇರುವ ಮನೆ ಇದೆ. ಡಾ. ಮುಜಮ್ಮಿಲ್ ಈ ಮನೆಯನ್ನು ಏಪ್ರಿಲ್ 2025 ರಿಂದ ಜುಲೈ 2025 ರವರೆಗೆ ತಿಂಗಳಿಗೆ 8 ಸಾವಿರ ರೂಪಾಯಿಗಳಿಗೆ ಬಾಡಿಗೆಗೆ ಪಡೆದಿದ್ದ. ಮೂಲಗಳ ಪ್ರಕಾರ, ಡಾ. ಮುಜಮ್ಮಿಲ್ ಕಾಶ್ಮೀರದಿಂದ ಹಣ್ಣುಗಳನ್ನು ಆಮದು ಮಾಡಿಕೊಂಡು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಾಗಿ ಮಾಜಿ ಸರಪಂಚ್‌ಗೆ ಹೇಳಿದ್ದ. ಇದಕ್ಕಾಗಿ ಅವರಿಗೆ ಹೆಚ್ಚಿನ ಸ್ಥಳಾವಕಾಶ ಬೇಕು ಎಂದಿದ್ದ. ಮುಜಮ್ಮಿಲ್ ಮನೆಯನ್ನು ಬಾಡಿಗೆಗೆ ಪಡೆದಾಗ, ಡಾ. ಶಾಹೀನ್ ಸಯೈದ್ ಕೂಡ ಆತನೊಂದಿಗೆ ಬಂದಿದ್ದಳು ಆತ ಶಾಹೀನಾಳನ್ನು ತನ್ನ ಕುಟುಂಬದ ಸದಸ್ಯೆ ಎಂದು ಪರಿಚಯಿಸಿದ್ದ.
ಮುಜಮ್ಮಿಲ್ ಆ ಮನೆಯಲ್ಲಿ ಸುಮಾರು ಮೂರು ತಿಂಗಳುಗಳ ಕಾಲ ಇದ್ದ. ಈ ಅವಧಿಯಲೆಲ್ಲಾ ಆತ ಶಾಹೀನಾಳನ್ನು ಹಲವಾರು ಬಾರಿ ತನ್ನೊಂದಿಗೆ ಅಲ್ಲಿಗೆ ಕರೆದುಕೊಂಡು ಹೋಗಿದ್ದ ಆದರೆ ಜುಲೈನಲ್ಲಿ ಅಲ್ಲಿ ಶಾಖ ಹೆಚ್ಚು ಎಂದು ಹೇಳಿ ಕೊಠಡಿಯನ್ನೇ ಇವರು ಖಾಲಿ ಮಾಡಿದರು.
ಇದನ್ನೂ ಓದಿ: 5 ಕೋಟಿ ಕೊಡಿ ಇಲ್ಲ ಚಿನ್ನ ಹಾಕೋದು ನಿಲ್ಸಿ: ಕೇಜಿಗಟ್ಟಲೇ ಚಿನ್ನ ಹಾಕಿ ಓಡಾಡ್ತಿದ್ದ ಚಿತೋರಗಢದ ಗೋಲ್ಡ್‌ಮ್ಯಾನ್‌ಗೆ ಬೆದರಿಕೆ
ಇತ್ತ ದೆಹಲಿಯಲ್ಲಿ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ದೆಹಲಿ ಆತ್ಮ*ಹತ್ಯಾ ಬಾಂಬರ್ ಭಯೋತ್ಪಾದಕ ಡಾ. ಉಮರ್ ನಬಿಯ ಸಹಚರ ಶೋಯೆಬ್‌ನನ್ನು ಬುಧವಾರ ಫರಿದಾಬಾದ್‌ನ ಧೌಜ್‌ನಲ್ಲಿ ಬಂಧಿಸಿದೆ. ದೆಹಲಿ ಸ್ಫೋಟ ಪ್ರಕರಣದಲ್ಲಿ ಇದು ಏಳನೇ ಬಂಧನವಾಗಿದೆ. ಶೋಯೆಬ್ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡ್ತಿದ್ದ. ನವೆಂಬರ್ 10 ರ ದಾಳಿಗೆ ಸ್ವಲ್ಪ ಮೊದಲು ಉಮರ್ ನಬಿಗೆ ಆಶ್ರಯ ನೀಡಿ ಸರಕುಗಳನ್ನು ಸಾಗಿಸಲು ಸಹಾಯ ಮಾಡಿದ ಆರೋಪ ಶೋಯೆಬ್ ಮೇಲಿದೆ. ಈತ ನುಹ್‌ನಲ್ಲಿರುವ ತನ್ನ ಅತ್ತಿಗೆ ಅಫ್ಸಾನಾ ಅವರ ಮನೆಯಲ್ಲಿ ಉಮರ್‌ಗೆ ಬಾಡಿಗೆ ಕೊಠಡಿ ವ್ಯವಸ್ಥೆ ಮಾಡಿದ. ಸ್ಫೋಟದ ದಿನ ಅವನು ನುಹ್‌ನಲ್ಲಿರುವ ಅದೇ ಮನೆಯಿಂದ ದೆಹಲಿಗೆ ಹೊರಟು ಹೋಗಿದ್ದ.
ಶೋಯೆಬ್‌ನನ್ನು ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಅಲ್ಲಿ ಆತನನ್ನು ಹತ್ತು ದಿನಗಳ ಎನ್‌ಐಎ ಕಸ್ಟಡಿಗೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ