
ನವದೆಹಲಿ (ಫೆ.14): ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದು ಇಂದಿಗೆ ಏಳು ವರ್ಷಗಳು ಕಳೆದಿವೆ. ಈ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ತಮ್ಮ ಪ್ರಾಣವನ್ನು ಅರ್ಪಿಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತ, ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ತರಬೇತಿ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಹುತಾತ್ಮರಾದ ಯೋಧರಲ್ಲಿ ಕೇರಳದ ವಯನಾಡು ಲಕ್ಕಿಡಿ ನಿವಾಸಿ ವಿ.ವಿ.ವಸಂತಕುಮಾರ್ ಕೂಡ ಸೇರಿದ್ದರು.
ಆ ದಿನ ನಡೆದ ಘಟನೆಯನ್ನು ಕೇಳಿ ಇಡೀ ದೇಶವೇ ಆಘಾತಕ್ಕೆ ಒಳಗಾಗಿತ್ತು. ರಜೆ ಮುಗಿಸಿ ಕರ್ತವ್ಯಕ್ಕೆ ಮರಳುತ್ತಿದ್ದ ಯೋಧರು ಸೇರಿದಂತೆ ಒಟ್ಟು 2547 ಸಿಆರ್‌ಪಿಎಫ್ ಯೋಧರು 78 ವಾಹನಗಳಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದರು. ಆಗಲೇ ಪುಲ್ವಾಮಾ ಜಿಲ್ಲೆಯ ಅವಂತಿಪುರ ಬಳಿ ಈ ಭೀಕರ ದಾಳಿ ನಡೆಯಿತು. ಆತ್ಮಾಹುತಿ ದಾಳಿಕೋರನೊಬ್ಬ 100 ಕೆ.ಜಿ. ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಯೋಧರ ಬಸ್‌ಗೆ ಬಂದು ಗುದ್ದಿಸಿದ್ದ. ಈ ಸ್ಫೋಟದ ತೀವ್ರತೆಗೆ ಕಾರು ಮತ್ತು ಬಸ್ ಗುರುತು ಸಿಗದಂತೆ ನಜ್ಜುಗುಜ್ಜಾಗಿದ್ದವು. ಯೋಧರ ಮೃತದೇಹಗಳು 100 ಮೀಟರ್ ವ್ಯಾಪ್ತಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಿಂದಿನಿಂದ ಬರುತ್ತಿದ್ದ ಇತರ ಬಸ್‌ಗಳಿಗೂ ಸ್ಫೋಟದಿಂದ ಹಾನಿಯಾಗಿತ್ತು. ಸಂಪೂರ್ಣವಾಗಿ ಜಖಂಗೊಂಡ ಬಸ್ 76ನೇ ಬೆಟಾಲಿಯನ್‌ಗೆ ಸೇರಿದ್ದಾಗಿದ್ದು, ಅದರಲ್ಲಿ 40 ಯೋಧರಿದ್ದರು. ಕೇರಳದ ವಸಂತಕುಮಾರ್ 82ನೇ ಬೆಟಾಲಿಯನ್ ಯೋಧರಾಗಿದ್ದರು. ಪುಲ್ವಾಮಾದ ಕಾಕಪೋರಾ ನಿವಾಸಿ ಆದಿಲ್ ಅಹ್ಮದ್ ಈ ಆತ್ಮಾಹುತಿ ದಾಳಿ ನಡೆಸಿದ್ದ. ಘಟನೆ ನಡೆದ ಆರು ದಿನಗಳ ನಂತರ, ಕಾಶ್ಮೀರ ಪೊಲೀಸರಿಂದ ರಾಷ್ಟ್ರೀಯ ತನಿಖಾ ದಳ (NIA) ತನಿಖೆಯನ್ನು ವಹಿಸಿಕೊಂಡಿತು.
ಈ ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ್ದು 23 ವರ್ಷದ ಜೈಶ್-ಎ-ಮೊಹಮ್ಮದ್ ಉಗ್ರ ಮುದಾಸಿರ್ ಅಹ್ಮದ್ ಖಾನ್ ಎಂದು ತನಿಖೆಯಿಂದ ಬಯಲಾಯಿತು. ನಂತರ ನಡೆದ ಎನ್‌ಕೌಂಟರ್‌ನಲ್ಲಿ ಸೇನೆ ಆತನನ್ನು ಹತ್ಯೆ ಮಾಡಿತು. ಲೋಕಸಭಾ ಚುನಾವಣೆಗೂ ಎರಡು ತಿಂಗಳು ಮುಂಚೆ ಈ ದಾಳಿ ನಡೆದಿದ್ದರಿಂದ, ರಾಜಕೀಯವಾಗಿಯೂ ಇದು ದೊಡ್ಡ ಚರ್ಚೆಗೆ ಕಾರಣವಾಯಿತು. ದಾಳಿ ನಡೆದ 12ನೇ ದಿನಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿತು. ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಉಗ್ರರ ತರಬೇತಿ ಕೇಂದ್ರವನ್ನು ಭಾರತೀಯ ವಾಯುಸೇನೆ ಮಿಂಚಿನ ಕಾರ್ಯಾಚರಣೆಯಲ್ಲಿ ಧ್ವಂಸಗೊಳಿಸಿತು. ಈ ವೈಮಾನಿಕ ದಾಳಿಯಲ್ಲಿ ಸುಮಾರು 300 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ