Home Quarantine: ವಿದೇಶದಿಂದ ಬಂದರೆ 7 ದಿನ ಹೋಂ ಕ್ವಾರಂಟೈನ್‌

By Kannadaprabha News  |  First Published Jan 8, 2022, 9:44 AM IST

ಭಾರತ ಸರ್ಕಾರವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಶುಕ್ರವಾರ ಹೊಸ ಮಾರ್ಗಸೂಚಿ ಜಾರಿಗೆ ತಂದಿದೆ. ದೇಶಕ್ಕೆ ಆಗಮಿಸುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ಇನ್ನು ಕಡ್ಡಾಯವಾಗಿ 7 ದಿನಗಳ ಹೋಮ್‌ ಕ್ವಾರೆಂಟೈನ್‌ಗೆ ಒಳಗಾಗಬೇಕು. ಎಂಟನೇ ದಿನ ಮತ್ತೆ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದೆ.
 


ನವದೆಹಲಿ (ಜ. 08): ಭಾರತ ಸರ್ಕಾರವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ (International Travellers) ಶುಕ್ರವಾರ ಹೊಸ ಮಾರ್ಗಸೂಚಿ ಜಾರಿಗೆ ತಂದಿದೆ. ದೇಶಕ್ಕೆ ಆಗಮಿಸುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ಇನ್ನು ಕಡ್ಡಾಯವಾಗಿ 7 ದಿನಗಳ ಹೋಂ ಕ್ವಾರಂಟೈನ್‌ಗೆ (Home Quarantine) ಒಳಗಾಗಬೇಕು. ಎಂಟನೇ ದಿನ ಮತ್ತೆ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ (RTPCR Test) ಒಳಗಾಗಬೇಕು ಎಂದು ಹೇಳಿದೆ.

ಹೊಸ ಮಾರ್ಗಸೂಚಿಯು ಜ.11ರಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೂ ಜಾರಿಯಲ್ಲಿರಲಿದೆ. ಈವರೆಗೆ ಕೇವಲ ರಿಸ್ಕ್‌ ದೇಶಗಳಿಗೆ ಮಾತ್ರ ಈ ನಿಯಮ ಅನ್ವಯವಾಗಿತ್ತು. ಆದರೆ ಇನ್ನು ಮುಂದೆ ಎಲ್ಲ ಪ್ರಯಾಣಿಕರು ಆರಂಭಿಕ ಪರೀಕ್ಷೆಯಲ್ಲಿ ಕೋವಿಡ್‌ ನೆಗೆಟಿವ್‌ (Covid Negative) ಬಂದರೂ 7 ದಿನಗಳ ಕ್ವಾರೆಂಟೈನ್‌ ಹಾಗೂ 8ನೇ ದಿನ ಪುನಃ ಆರ್‌ಸಿ-ಪಿಟಿಆರ್‌ ಪರೀಕ್ಷೆಗೆ ಒಳಗಾಗಬೇಕು. ಆಗಲೂ ನೆಗೆಟಿವ್‌ ವರದಿ ಬಂದಲ್ಲಿ ಇನ್ನೂ 7 ದಿನಗಳ ಕಾಲ ಆರೋಗ್ಯವನ್ನು ಸ್ವಯಂ ಮೇಲ್ವಿಚಾರಣೆಗೆ ಒಳಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

Tap to resize

Latest Videos

Coronavirus: ಇಟಲಿಯಿಂದ ಬಂದ 173 ಜನರಿಗೆ ಕೋವಿಡ್‌ ಪಾಸಿಟಿವ್‌

ಒಂದು ವೇಳೆ ಆರಂಭಿಕ ಪರೀಕ್ಷೆಯಲ್ಲಿ ಅಥವಾ 8ನೇ ದಿನ ಪಾಸಿಟಿವ್‌ ಆದಲ್ಲಿ ಕೂಡಲೇ ಐಸೋಲೇಶನ್‌ಗೆ ಒಳಪಡಿಸಲಾಗುವುದು. ಜೊತೆಗೆ ಅವರ ಪ್ರಾಥಮಿಕ ಸಂಪರ್ಕಿತರನ್ನು ಐಸೋಲೇಶನ್‌ನಲ್ಲಿಟ್ಟು ಅರೋಗ್ಯದ ಮೇಲೆ ನಿಗಾ ವಹಿಸಲಾಗುವುದು. ಸಮುದ್ರಮಾರ್ಗ ಅಥವಾ ಭೂಮಾರ್ಗದ ಮೂಲಕ ಬಂದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಈ ನಿಯಮಗಳು ಅನ್ವಯಿಸುತ್ತವೆ. 5 ವರ್ಷಕ್ಕಿಂತ ಕಡಿಮೆಯಿರುವ ಮಕ್ಕಳಿಗೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದ್ದು, ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಮಾತ್ರ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುವುದು ಎಂದು ಮಾರ್ಗಸೂಚಿ ತಿಳಿಸಿದೆ.

ವಿಸ್ತರಣೆ: ಅಲ್ಲದೇ ಸರ್ಕಾರ ರಿಸ್ಕ್‌ ದೇಶಗಳ ಪಟ್ಟಿಯನ್ನು ವಿಸ್ತರಿಸಿದ್ದು, ಯುನೈಟೆಡ್‌ ಕಿಂಗ್‌ಡಮ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಬೋಟ್ಸ್‌ವಾನಾ, ಚೀನಾ, ಘಾನಾ, ಮಾರಿಷಸ್‌, ನ್ಯೂಜಿಲೆಂಡ್‌, ಜಿಂಬಾಬ್ವೆ, ತಾಂಜಾನಿಯಾ, ಹಾಂಗ್‌ಕಾಂಗ್‌, ಇಸ್ರೇಲ್‌, ಕಾಂಗೋ, ಇಥಿಯೋಪಿಯಾ, ಕಜಕಿಸ್ತಾನ, ಕೀನ್ಯಾ, ನೈಜೀರಿಯಾ, ತುನಿಸಿಯಾ, ಜಾಂಬಿಯಾ ಈ ಪಟ್ಟಿಯಲ್ಲಿವೆ.

Coronavirus: ದೆಹಲಿ ಸೇರಿದಂತೆ ಮತ್ತಷ್ಟು ರಾಜ್ಯಗಳಲ್ಲಿ ಕೋವಿಡ್‌ ಅಬ್ಬರ

ಹೊಸ ಮಾರ್ಗಸೂಚಿಯಂತೆ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ತಮ್ಮ ಮಾಹಿತಿಯನ್ನು, 14 ದಿನಗಳ ಮುಂಚಿನ ಪ್ರವಾಸದ ವಿವರವನ್ನು ‘ಏರ್‌ ಸುವಿಧಾ’ ಪೋರ್ಟಲ್‌ನಲ್ಲಿ ದಾಖಲಿಸಬೇಕು. 72 ಗಂಟೆಗಳಿಗೂ ಮುಂಚೆ ಆರ್‌ಸಿ-ಪಿಟಿಆರ್‌ ಪರೀಕ್ಷೆಗೆ ಒಳಗಾಗಿ ಕೋವಿಡ್‌ ನೆಗೆಟಿವ್‌ ವರದಿಯನ್ನು ಸಲ್ಲಿಸಬೇಕು. ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಆಗಮನದ ನಂತರ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು. ಸಮಯದ ಉಳಿತಾಯಕ್ಕಾಗಿ ಪೋರ್ಟಲ್‌ನಲ್ಲಿ ಪರೀಕ್ಷೆಯನ್ನು ಮೊದಲೇ ಬುಕ್‌ ಮಾಡಬಹುದು.

ಪ್ರಯಾಣಿಕರು ಕೋವಿಡ್‌ ಪರೀಕ್ಷೆಯ ಫಲಿತಾಂಶ ಬರುವವರೆಗೆ ಅವರು ವಿಮಾನ ನಿಲ್ದಾಣವನ್ನು ಬಿಟ್ಟು ತೆರಳುವುದಾಗಲೀ, ಇನ್ನೊಂದು ಸಂಪರ್ಕ ವಿಮಾನದಲ್ಲಿ ಪ್ರಯಾಣಿಸುವುದಾಗಲೀ ಮಾಡುವಂತಿಲ್ಲ. ಈ ‘ರಿಸ್ಕ್‌’ದೇಶಗಳನ್ನು ಹೊರತುಪಡಿಸಿ ಇನ್ನಿತರ ದೇಶಗಳಿಂದ ಆಗಮಿಸಿದ ಪ್ರಯಾಣಿಕರಲ್ಲಿ ಎರಡು ಪ್ರತಿಶತ ಜನರನ್ನು ಆಯ್ಕೆಮಾಡಿ ಅವರ ಮಾದರಿಗಳನ್ನು ಕೋವಿಡ್‌ ಪರೀಕ್ಷೆಗೆ ಕಳುಹಿಸಲಾಗುವುದು.

click me!