
ನವದೆಹಲಿ: ಬ್ರಿಟಿಷ್ ಕಾಲದ ಹಳೆಯ ಕಟ್ಟಡದಿಂದ ಸ್ಥಳಾಂತರವಾಗಿ ಶುಕ್ರವಾರ ಉದ್ಘಾಟನೆಯಾದ ಪ್ರಧಾನಮಂತ್ರಿಗಳ ನೂತನ ಕಚೇರಿ ಸೇವಾ ತೀರ್ಥವನ್ನು ಕರ್ನಾಟಕದ ಧೀಮಂತ ರಾಜಮನೆತನವಾದ ಚಾಲುಕ್ಯರ ವಾಸ್ತುಶಿಲ್ಪದಿಂದ ಪ್ರೇರಿತವಾಗಿ, ವಿಶೇಷವಾಗಿ ಹಾಸನ ಜಿಲ್ಲೆ ಬೆಲೂರಿನ ಚೆನ್ನಕೇಶವ ದೇವಾಲಯದಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗಿದೆ. ಇಲ್ಲಿನ ಅನೇಕ ರಚನೆಗಳು ಕರ್ನಾಟಕದ ಪುರಾತನ ದೇಗುಲಗಳ ವಿಶಿಷ್ಟ ವಿನ್ಯಾಸವನ್ನು ಹೋಲುವಂತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಧಾನಿಗಳ ಕಚೇರಿ, ಸಂಪುಟ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯಗಳನ್ನು ಒಳಗೊಂಡಿರುವ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಲಾಗಿದೆ. ಇದರ ಪ್ರವೇಶ ದ್ವಾರವನ್ನು ಕ್ರಿ.ಶ.11ರಿಂದ13ರ ಅವಧಿಯಲ್ಲಿ ನಿರ್ಮಾಣವಾದ ಚಾಲುಕ್ಯರ ದೇವಾಲಯಗಳಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗಿದೆ. ಕೆತ್ತಿದ ಕಲ್ಲಿನ ಸ್ತಂಭದ ಪಟ್ಟಿಯು ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನ 12ನೇ ಶತಮಾನದ ಚೆನ್ನಕೇಶವ ದೇವಾಲಯದ ಅಚ್ಚುಗಳಿಂದ ಪ್ರೇರಿತವಾಗಿದೆ. ದೇವಸ್ಥಾನದ ಫಲಕಗಳಲ್ಲಿ ಕಂಡುಬರುವ ಚದರ-ಆಧರಿತ ಜ್ಯಾಮಿತೀಯ ಮಾದರಿಯಲ್ಲಿ ಕಲ್ಲಿನ ಮೇಲೆ ಹೂವಿನ ಚಿತ್ತಾರಗಳನ್ನು ಬಿಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೇವಾ ತೀರ್ಥಕ್ಕೆ ಬೌದ್ಧ ಸ್ತೂಪಗಳ ರೀತಿಯಲ್ಲಿ ಲೋಹದ ಹೊದಿಕೆಯ ಗುಮ್ಮಟಗಳನ್ನು ಅಳವಡಿಸಲಾಗಿದೆ. ಇದು ಬಾಳಿಕೆ ಮತ್ತು ನಿರ್ವಹಣೆ ಎರಡೂ ದೃಷ್ಟಿಯಿಂದ ಉತ್ತಮ. ಬಿಳಿ ಮತ್ತು ಕೆಂಪು ಮರಳುಗಲ್ಲಿನಿಂದ ಇಡೀ ಕಟ್ಟಡ ಆವೃತವಾಗಿದ್ದು, ಐತಿಹಾಸಿಕ ಭಾರತೀಯ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವಂತಿದೆ ಎಂದು ತಿಳಿಸಿದ್ದಾರೆ.
ದಿನವಿಡೀ ಕಚೇರಿ ಸ್ಥಳಗಳಲ್ಲಿ ನೈಸರ್ಗಿಕ ಬೆಳಕು ಒಳಬರುವಂತೆ ಮಾಡಲು ಮುಂಭಾಗದ ಉದ್ದಕ್ಕೂ ಜಾಲಿ ಪರದೆಗಳನ್ನು ಅಳವಡಿಸಲಾಗಿದೆ. ಈ ಪರದೆಗಳು ಸಾಂಪ್ರದಾಯಿಕತೆಯನ್ನು ಪ್ರತಿಬಿಂಬಿಸುವುದರ ಜೊತೆಗೆ ಬೆಳಕು, ಗಾಳಿ ಮತ್ತು ಖಾಸಗಿತನಕ್ಕೂ ಅನುಕೂಲ ಕಲ್ಪಿಸುತ್ತವೆ. ಕಟ್ಟಡದುದ್ದಕ್ಕೂ ಸಾಂಪ್ರದಾಯಿಕ ಕಲ್ಲಿನ ಕರಕುಶಲತೆ ಕಂಡುಬರುತ್ತದೆ. ಜೊತೆಜೊತೆಗೆ ಆಧುನಿಕತೆಯ ಸ್ಪರ್ಶವೂ ಮನಸೆಳೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ