
ತಿರುವನಂತಪುರ (ಫೆ.13): ಅಪಘಾತದಲ್ಲಿ ಗಾಯಗೊಂಡಿದ್ದ 10 ತಿಂಗಳ ಹೆಣ್ಣು ಮಗುವಿನ ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ, ಮಗುವಿನ ಪೋಷಕರು ಕಂದಮ್ಮನ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಘಟನೆ ಕೇರಳದಲ್ಲಿ ನಡೆದಿದೆ. ಈ ಮೂಲಕ ಅಲಿನ್ ಶೆರಿನ್ ಅಬ್ರಹಾಂ ಎಂಬ 10 ತಿಂಗಳ ಹಸುಗೂಸು ದೇಶದ ಅತಿ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದೆ.
ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಅಲಿನ್ ಶೆರಿನ್ ಅಬ್ರಹಾಂ ಎನ್ನುವ ಮಗು ತಂದೆ- ತಾಯಿ ಜತೆ ತೆರಳುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿತ್ತು. ಆದರೆ ಹೆತ್ತ ಮಗುವನ್ನು ಕಳೆದುಕೊಂಡ ದುಃಖದಲ್ಲಿಯೂ ಪಾಲಕರು ಮಗುವಿನ ಮೂತ್ರಪಿಂಡ, ಯಕೃತ್ತು, ಹೃದಯ ಕವಾಟುಗಳನ್ನು ದಾನ ಮಾಡಿದ್ದಾರೆ.
ಈ ಪೈಕಿ ಮೂತ್ರಪಿಂಡವನ್ನು ತಿರುವನಂತಪುರಂನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ 10 ವರ್ಷದ ಬಾಲಕಿಗೆ ಕಸಿ ಮಾಡಲಾಗಿದೆ. ಈ ಮಾಹಿತಿಯನ್ನು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಜಾಲತಾಣದಲ್ಲಿ ಹಂಚಿಕೊಂಡು ಮಗುವಿನ ಹೆತ್ತವರಿಗೆ ಧನ್ಯವಾದ ತಿಳಿಸಿದ್ದಾರೆ.
ಅಂಗಾಂಗ ದಾನದಲ್ಲಿ ಹೊಸ ಇತಿಹಾಸ ಇದಾಗಿದ್ದು, 10 ತಿಂಗಳ ಮಗುವಿನ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅಲಿನ್ ಶೆರಿನ್ ಅಬ್ರಹಾಂ ಹೆಸರಿನ ಹೆಣ್ಣುಮಗುವಿನ ಮೂತ್ರಪಿಂಡಗಳು, ಯಕೃತ್ತು ಮತ್ತು ಹೃದಯ ಕವಾಟಗಳನ್ನು ಮಹಾದಾನ ಮಾಡಲಾಗಿದೆ. ಈ ಅಂಗಾಂಗವನ್ನು ಕೊಚ್ಚಿಯಿಂದ ರಸ್ತೆ ಮೂಲಕ ತಿರುವನಂತಪುರಂಗೆ ಅದನ್ನು ತೆಗೆದುಕೊಂಡುಹೋಗಲಾಗಿದೆ. ಕಾರು ಅಪಘಾತದಲ್ಲಿ ಅಲಿನ್‌ಳ ಮೆದುಳು ನಿಷ್ಕ್ರಿಯವಾಗಿತ್ತು.
ಅಲಿನ್ ಕೇರಳ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿಯೇ ಅತ್ಯಂತ ಕಿರಿಯ ಅಂಗಾಂಗ ದಾನಿ. ಆಕೆಯ ಪೋಷಕರು ಆಕೆಯ ಅಂಗಾಂಗಗಳನ್ನು ದಾನ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದರು. ತಿರುವನಂತಪುರಂ ವೈದ್ಯಕೀಯ ಕಾಲೇಜು SAT ಆಸ್ಪತ್ರೆಯ ಪೀಡಿಯಾಟ್ರಿಕ್ ನೆಫ್ರಾಲಜಿ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿಗೆ 2 ಮೂತ್ರಪಿಂಡಗಳನ್ನು ನೀಡಲಾಗುತ್ತದೆ. ಎರಡು ಮೂತ್ರಪಿಂಡಗಳು, ಯಕೃತ್ತು ಮತ್ತು ಹೃದಯ ಕವಾಟವನ್ನು ಸಂಜೆ ಎರ್ನಾಕುಲಂ ಅಮೃತ ಆಸ್ಪತ್ರೆಯಿಂದ ತಿರುವನಂತಪುರಂ ವೈದ್ಯಕೀಯ ಕಾಲೇಜು, ತಿರುವನಂತಪುರಂ KIMS ಆಸ್ಪತ್ರೆ ಮತ್ತು ಶ್ರೀ ಚಿತ್ರಾಗೆ ರಸ್ತೆ ಮೂಲಕ ತೆಗೆದುಕೊಂಡು ಹೋಗಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ