ಒತ್ತಡ ತಾಳಲು ಆಗದೇ ಲಂಡನ್‌ಗೆ ಬಂದಿರುವೆ: ಸೀರಂ ಇನ್‌ಸ್ಟಿಟ್ಯೂಟ್ ಸಿಇಒ ಆರೋಪ| ಎಲ್ಲ ಹೊಣೆ ನನ್ನ ಹೆಗಲ ಮೇಲಿದೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದ್ದಕ್ಕೆ ನನ್ನ ಬಗ್ಗೆ ಟೀಕೆ| ಯಾರೋ ವ್ಯಕ್ತಿಗಳಿಂದ ಟೀಕೆ ಬರುತ್ತಿವೆ, ಅವರು ಏನು ಮಾಡುತ್ತಾರೋ ಗೊತ್ತಿಲ್ಲ: ಆತಂಕ
ಲಂಡನ್(ಮೇ.02): ‘ಎಲ್ಲ ನನ್ನ ಹೆಗಲ ಮೇಲೇ ಬಿದ್ದಿದೆ. ಇಷ್ಟೊಂದು ಒತ್ತಡ ಹೊರಲು ನನ್ನೊಬ್ಬನಿಂದ ಆಗದು. ಅದಕ್ಕೆಂದೇ ಈಗ ಲಂಡನ್‌ನಲ್ಲಿದ್ದೇನೆ’ ಎಂದು ಕೋವಿಡ್ ಲಸಿಕೆ ಪೂರೈಕೆಯ ಒತ್ತಡದಲ್ಲಿರುವ ‘ಕೋವಿಶೀಲ್ಡ್’ ಉತ್ಪಾದಕ ಕಂಪನಿಯಾದ ಸೀರಂ ಇನ್ಸ್‌ಟಿಟ್ಯೂಟ್ ಮುಖ್ಯಸ್ಥ ಅದಾರ್ ಪೂನಾವಾಲಾ ಹೇಳಿದ್ದಾರೆ.
ತಮ್ಮ ಪತ್ನಿ ಹಾಗೂ ಮಕ್ಕಳ ಜತೆ ಸಮಯ ಕಳೆಯಲು ಲಂಡನ್‌ಗೆ ಆಗಮಿಸಿರುವ ಅವರು ‘ದ ಟೈಮ್ಸ್’ ಪತ್ರಿಕೆಗೆ ಶುಕ್ರವಾರ ಸಂದರ್ಶನ ನೀಡಿದ್ದಾರೆ. ‘ನಾನು ಲಂಡನ್‌ನಲ್ಲಿ ರಜೆ ವಿಸ್ತರಿಸಿದ್ದೇನೆ. ನಾನು ಮತ್ತೆ ಆ ಸ್ಥಿತಿಗೆ (ಒತ್ತಡದ ವಾತಾವರಣ) ಹೋಗಲು ಆಗದು. ಎಲ್ಲ ಒತ್ತಡ ನನ್ನ ಹೆಗಲಿಗೇ ಬೀಳುತ್ತಿದೆ. ಅದನ್ನು ನಿಭಾಯಿಸಲು ನನ್ನಿಂದ ಆಗದು. ಎಕ್ಸ್, ವೈ, ಝಡ್... ವ್ಯಕ್ತಿಗಳ ಬೇಡಿಕೆ ಪೂರೈಸಲು ಆಗಲಿಲ್ಲ ಎಂದ ಮಾತ್ರಕ್ಕೆ ನನ್ನ ವಿರುದ್ಧ ಟೀಕೆಗಳು ಬರುತ್ತಿವೆ. ಅವರು ಏನು ಮಾಡುತ್ತಾರೋ ಹೇಳಲಾಗದು’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಲಸಿಕೆ ಪೂರೈಕೆ ಒತ್ತಡದಲ್ಲಿರುವ ಪೂನಾವಾಲಾ ಅವರಿಗೆ ಈಗ ಭಾರತ ಸರ್ಕಾರ ‘ವೈ’ ದರ್ಜೆ ಭದ್ರತೆ ನೀಡಿದೆ.
undefined
‘ಲಸಿಕೆ ಇಷ್ಟೊಂದು ಬೇಡಿಕೆ ಬರುತ್ತದೆ ಎಂದು ಎಣಿಸಿರಲಿಲ್ಲ. ಎಲ್ಲರೂ ಲಸಿಕೆ ಬೇಕು ಎನ್ನುತ್ತಿದ್ದಾರೆ. ಆದರೆ ತಮಗಿಂತ ಮೊದಲು ಕೆಲ ವರ್ಗದವರಿಗೆ ಆದ್ಯತೆಯ ಮೇಲೆ ಲಸಿಕೆ ದೊರಕಬೇಕು ಎಂಬುದನ್ನು ಅವರು ಯೋಚಿಸುತ್ತಿಲ್ಲ’ ಎಂದು ಬೇಸರಿಸಿದ್ದಾರೆ. ಅಲ್ಲದೆ, ‘ಕೊರೋನಾ ಪರಿಸ್ಥಿತಿ ಇಷ್ಟೊಂದು ಉಲ್ಬಣ ಆಗುತ್ತದೆ ಎಂದು ದೇವರೂ ಯೋಚನೆ ಮಾಡಿರಲಿಕ್ಕಿಲ್ಲ’ ಎಂದಿದ್ದಾರೆ.
ಇದೇ ವೇಳೆ, ‘ಲಾಭ ಗಿಟ್ಟಿಸಲು ಲಸಿಕೆ ಮಾರುತ್ತಿಲ್ಲ. ಕೋವಿಶೀಲ್ಡ್ ಕೈಕೆಟಕುವ ದರದಲ್ಲಿ ಸಿಗುತ್ತಿದೆ’ ಎಂದು ಅವರು ದರದ ಬಗ್ಗೆ ಕೇಳಿಬಂದ ಆಕ್ಷೇಪಕ್ಕೆ ಉತ್ತರಿಸಿದ್ದಾರೆ.