
India-Pakistan Ceasefire impact: ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿ ಬಳಿಕ ಸತತವಾಗಿ ಹಲವು ದಿನ ಇಳಿಕೆ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 2975 ಅಂಕಗಳ ಭರ್ಜರಿ ಏರಿಕೆ ಕಂಡು 82429 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದು ಕಳೆದ 7 ತಿಂಗಳಲ್ಲೇ ಸೆನ್ಸೆಕ್ಸ್‌ನ ಗರಿಷ್ಠ ಮೊತ್ತವಾಗಿದೆ. ಮಧ್ಯಂತರ ಅವಧಿಯಲ್ಲಿ ಸೂಚ್ಯಂಕ 3041 ಅಂಕಗಳವರೆಗೆ ಏರಿಕೆ ಕಂಡಿತ್ತಾದರೂ ದಿನದಂತ್ಯಕ್ಕೆ ಅಲ್ಪ ಇಳಿಕೆ ಕಂಡಿತು. ಇನ್ನೊಂದೆಡೆ ನಿಫ್ಟಿ 916 ಅಂಕಗಳ ಏರಿಕೆ ಕಂಡು 24924 ಅಂಕಗಳಲ್ಲಿ ಮುಕ್ತಾಯವಾಯಿತು.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಸುದ್ದಿ, ಅಮೆರಿಕ - ಚೀನಾ ನಡುವಿನ ತೆರಿಗೆ ಯುದ್ಧಕ್ಕೆ ಬ್ರೇಕ್ ಸುದ್ದಿಗಳು ಷೇರುಪೇಟೆಗೆ ಬಲ ತುಂಬಿದವು. ಐಟಿ, ಲೋಹ, ಟೆಕ್, ರಿಯಾಲ್ಟಿ, ರಕ್ಷಣಾ ವಲಯದ ವಲಯದ ಷೇರುಗಳು ಏರಿಕೆ ಕಂಡವು. ಸೋಮವಾರದ ಷೇರುಪೇಟೆಯ ಒಟ್ಟಾರೆ ಏರಿಕೆ ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 16.11 ಲಕ್ಷ ಕೋಟಿ ರು.ನಷ್ಟು ಭಾರೀ ಹೆಚ್ಚಳವಾಗಿದೆ.
ಇದನ್ನೂ ಓದಿ: ಭಾರತ-ಪಾಕ್ ಕದನವಿರಾಮದ ಹಿಂದಿನ ರಹಸ್ಯ ಬಯಲು! ಎರಡು ದೇಶಗಳಿಗೆ ಟ್ರಂಪ್ ಬೆದರಿಕೆ ಏನು?
ಪಾಕ್ ಷೇರುಪೇಟೆ ಶೇ.9ರಷ್ಟು ಏರಿಕೆ: 26 ವರ್ಷಗಳ ದಾಖಲೆ
ಇಸ್ಲಾಮಾಬಾದ್: ಭಾರತ- ಪಾಕ್ ಕದನ ವಿರಾಮ ಸುದ್ದಿ ಪಾಕಿಸ್ತಾನ ಸರ್ಕಾರ, ಸೇನೆ ಮಾತ್ರವಲ್ಲದೇ ಷೇರುಪೇಟೆಗೂ ಸಿಹಿ ನೀಡಿದೆ. ಪಿಎಸ್‌ಇ ಸೂಚ್ಯಂಕ ಸೋಮವಾರ 9929 ಅಂಕಗಳ ಏರಿಕೆ ಕಂಉ 1,17104 ಅಂಕಗಳಲ್ಲಿ ಮುಕ್ತಾಯವಾಗಿದೆ. ಅಂದರೆ ಒಂದೇ ದಿನ ಶೇ.9ರಷ್ಟು ಏರಿಕೆ ದಾಖಲಾಗಿದೆ. ಪಿಎಸ್‌ಇ ಸೂಚ್ಯಂಕದ ಈ ಪ್ರಮಾಣದ ದೈನಂದಿನ ಏರಿಕೆ 26 ವರ್ಷಗಳ ದಾಖಲೆಯಾಗಿದೆ.
ಚಿನ್ನ ಭರ್ಜರಿ ಇಳಿಕೆ: 10 ಗ್ರಾಂಗೆ 3400 ರು. ಕುಸಿತ
ನವದೆಹಲಿ: ಲಕ್ಷದ ಗಡಿ ದಾಟಿ ಗ್ರಾಹಕರಿಗೆ ಶಾಕ್ ನೀಡಿದ್ದ ಚಿನ್ನದ ಬೆಲೆ ಸೋಮವಾರ ಭಾರೀ ಇಳಿಕೆ ಕಂಡಿದೆ ಇಲ್ಲಿನ ಮಾರುಕಟ್ಟೆಯಲ್ಲಿ ಸೋಮವಾರ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ಒಂದೇ ದಿನ ಬರೋಬ್ಬರಿ 3400 ರು, ಇಳಿಕೆಯಾಗುವ ಮೂಲಕ 96550 ರು.ಗೆ ತಲುಪಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ, ಅಮೆರಿಕ ಮತ್ತು ಚೀನಾ ತೆರಿಗೆ ಸಂಘರ್ಷದ ಮಾತುಕತೆ ಪ್ರಗತಿ ಕಂಡು ಬಂದಿರುವುದು ಬೆಲೆ ಇಳಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಅಖಿಲ ಭಾರತೀಯ ಸರಾಫಾ ಅಸೋಸಿಯೇಷನ್ ಪ್ರಕಾರ, 99.5 ಶುದ್ಧತೆಯ ಚಿನ್ನ 10 ಗ್ರಾಂಗೆ 3400 ಇಳಿಕೆ ಕಂಡು 96,100 ರು.ಗೆ ತಲುಪಿದೆ. ಇದು ಕಳೆದ 10 ತಿಂಗಳಿನಲ್ಲಿಯೇ ಗರಿಷ್ಠ ದೈನಂದಿನ ಕುಸಿತದ ಪ್ರಮಾಣವಾಗಿದೆ. ಇನ್ನೊಂದೆಡೆ ಇನ್ನು ಬೆಳ್ಳಿ ದರದಲ್ಲಿಯೂ 200 ರು. ಇಳಿಕೆಯಾಗಿದ್ದು, 1 ಕೇಜಿ ಬೆಳ್ಳಿ ದರ ಸದ್ಯ 99700 ರು. ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ