ಶಾಂಘೈ ಸಹಕಾರ ಶೃಂಗಕ್ಕಾಗಿ ಮೋದಿ ಉಜ್ಬೇಕಿಸ್ತಾನಕ್ಕೆ ತೆರಳಿದ್ದು, ಪುಟಿನ್ ಸೇರಿ ಹಲವು ನಾಯಕರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಆದರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ ಸಾಧ್ಯತೆ ಇಲ್ಲ.
ನವದೆಹಲಿ/ಸಮರ್‌ಕಂಡ್ (ಸೆ.16): ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಉಜ್ಬೇಕಿಸ್ತಾನಕ್ಕೆ ತೆರಳಿದ್ದಾರೆ. ಶುಕ್ರವಾರ ಅವರು ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಜ್ಬೇಕ್ ಅಧ್ಯಕ್ಷ ಶೌಕತ್ ಮಿರ್ಜಿಯೊಯೆವ್ ಸೇರಿದಂತೆ ಹಲವು ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಆದರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜತೆ ಮೋದಿ ಮಾತುಕತೆ ನಡೆಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಭಾರತ-ಚೀನಾ ಗಡಿ ವಿವಾದ, ರಷ್ಯಾ-ಉಕ್ರೇನ್ ಯುದ್ಧ, ಅಮೆರಿಕ-ಚೀನಾ ನಡುವಿನ ತೈವಾನ್ ಬಿಕ್ಕಟ್ಟಿನ ವೇಳೆಯಲ್ಲಿ ಈ ಶೃಂಗಸಭೆ ಅತ್ಯಂತ ಮಹತ್ವವಾದದ್ದು ಎನಿಸಿಕೊಂಡಿದೆ. ‘ಶಾಂಘೈ ಸಹಕಾರ ಶೃಂಗದಲ್ಲಿ ಪ್ರಾದೇಶಿಕ, ಅಂತಾರಾಷ್ಟ್ರೀಯ ವಿಚಾರಗಳು, ಶಾಂಘೈ ಸಹಕಾರ ಸಂಘದ ವಿಸ್ತರಣೆ, ಪರಸ್ಪರ ಪ್ರಯೋಜನಕಾರಿ ಸಹಭಾಗಿತ್ವವನ್ನು ಇನ್ನಷ್ಟುಬಲಪಡಿಸುವ ನಿಟ್ಟಿನಲ್ಲಿ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದೇನೆ’ ಎಂದು ವಿದೇಶ ಭೇಟಿಗೂ ಮುನ್ನ ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿಯವರು ಉಜ್ಬೇಕಿಸ್ತಾನದಲ್ಲಿ ಸುಮಾರು 24 ಗಂಟೆ ಕಳೆಯಲಿದ್ದು ವಿವಿಧ ದೇಶದ ನಾಯಕರೊಂದಿಗೆ ವಲಯದ ಭದ್ರತೆ, ಭಯೋತ್ಪಾದನಾ ನಿಗ್ರಹ, ಸಹಕಾರ, ವ್ಯಾಪಾರ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ ಕ್ವಾತ್ರಾ ಹೇಳಿದ್ದಾರೆ.
ಶಾಂಘೈ ಶೃಂಗದ ವೇಳೆ ಪುಟಿನ್-ಜಿನ್‌ಪಿಂಗ್ ಮುಖಾಮುಖಿ ಮಾತುಕತೆ
ಸಮರಕಂಡ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಬಳಿದ ಮೊದಲ ಬಾರಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮುಖಾಮುಖಿ ಮಾತುಕತೆ ನಡೆಸಿದ್ದಾರೆ.
ಉಜ್ಬೇಕಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯಲ್ಲಿ ಭಾಗಿಯಾಗಿರುವ ನಾಯಕರು ಪರಸ್ಪರ ಹಿತಾಸಕಸ್ತಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ಪ್ರಮುಖ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯದಲ್ಲಿ ರಷ್ಯಾಗೆ ಸದಾ ಬೆಂಬಲ ನೀಡುವುದಾಗಿ ಜಿನ್‌ಪಿಂಗ್ ಪುಟಿನ್ ಜೊತೆ ನಡೆಸಿದ ಸಭೆಯ ವೇಳೆ ಹೇಳಿದರು ಎಂದು ಚೀನಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಉಕ್ರೇನ್ ಮೇಲಿನ ದಾಳಿಯ ವೇಳೆಯೂ ಚೀನಾ ರಷ್ಯಾಗೆ ಬೆಂಬಲ ವ್ಯಕ್ತಪಡಿಸಿತ್ತು.
ಮೋದಿ-ಕ್ಸಿ ದ್ವಿಪಕ್ಷೀಯ ಮಾತುಕತೆ ಅನುಮಾನ: ಚೀನಾ ಸುಳಿವು
ಬೀಜಿಂಗ್: ಉಜ್ಬೇಕಿಸ್ತಾನದಲ್ಲಿ ಸೆ.15ರಿಂದ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗ ಸಮ್ಮೇಳನದಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪಾಲ್ಗೊಳ್ಳುತ್ತಿದ್ದರೂ, ದ್ವಿಪಕ್ಷೀಯ ಮಾತುಕತೆ ನಡೆಯುವುದು ಅನುಮಾನವಾಗಿದೆ ಎಂಬ ಸುಳಿವನ್ನು ಚೀನಾ ಸರ್ಕಾರ ನೀಡಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಉಭಯ ನಾಯಕರ ಭೇಟಿ ಬಗ್ಗೆ ಚೀನಾ ವಿದೇಶಾಂಗ ವಕ್ತಾರರನ್ನು ಸುದ್ದಿಗಾರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು. ಈ ಮೂಲಕ ಭೇಟಿ ಅನುಮಾನವಾಗಿದೆ ಎಂಬ ಊಹಾಪೋಹ ಸೃಷ್ಟಿಯಾಗಿವೆ.
PM Modi to visit SCO summit: ಸೆಪ್ಟೆಂಬರ್ 15, 16 ರಂದು ಉಜ್ಬೇಕಿಸ್ತಾನಕ್ಕೆ ಪ್ರಯಾಣ
3 ವರ್ಷ ಬಳಿಕ ಕ್ಸಿ ಹಾಗೂ ಮೋದಿ 8 ದೇಶಗಳ ಈ ಶೃಂಗದಲ್ಲಿ ಮುಖಾಮುಖಿ ಆಗುತ್ತಿದ್ದಾರೆ. ಮೋದಿ ಈ ವೇಳೆ ಕೆಲವು ದೇಶಗಳ ನಾಯಕರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಆದರೆ ಕ್ಸಿ ಜತೆ ದ್ವಿಪಕ್ಷೀಯ ಚರ್ಚೆ ಬಗ್ಗೆ ಭಾರತವೂ ಯಾವುದೇ ಹೇಳಿಕೆ ನೀಡಿಲ್ಲ. ಕೋವಿಡ್ ಹಾವಳಿ ಹಾಗೂ ಗಲ್ವಾನ್ ಕದನದ ಬಳಿಕ ಉಭಯ ದೇಶಗಳ ಸಂಬಂಧ ಹಳಸಿ ಹೋಗಿದೆ.