ಶಾಲೆ, ಕಾಲೇಜು ಆರಂಭಿಸಿ: ಏಮ್ಸ್ ತಜ್ಞರಿಂದ ಶಿಫಾರಸು| ಮಕ್ಕಳು ಹೊರಬಂದರೆ ರೋಗ ನಿರೋಧಕ ಶಕ್ತಿ ಉತ್ಪತ್ತಿ| ಇದರಿಂದ ವೈರಸ್ ಶಕ್ತಿ ಕುಗ್ಗಿ ಕೊರೋನಾ ನಿಯಂತ್ರಣ
ನವದೆಹಲಿ(ಜು.21): ‘ಶಾಲೆಗಳು ಆರಂಭವಾಗಬೇಕು. ಇದರಿಂದ ಮಕ್ಕಳು ಮನೆಯಿಂದ ಹೊರಬಂದು, ಅವರಲ್ಲಿ ‘ಸಮೂಹ ರೋಗ ನಿರೋಧಕ ಶಕ್ತಿ’ (ಹರ್ಡ್ ಇಮ್ಯುನಿಟಿ) ಉತ್ಪತ್ತಿ ಆಗುತ್ತದೆ ಎಂದು ದಿಲ್ಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ಕೆಲವು ತಜ್ಞರು ಪ್ರತಿಪಾದಿಸಿದ್ದಾರೆ.
‘ಒಮ್ಮೆ ಸೋಂಕಿನ ಏರುಗತಿ ಸ್ಥಿರವಾಗುತ್ತಲೇ ಶಾಲೆ-ಕಾಲೇಜುಗಳನ್ನು ತೆರೆಯಲು ಅವಕಾಶ ನೀಡಿದರೆ, ಜನರಲ್ಲಿ ಸಮೂಹ ಸೋಂಕು ನಿರೋಧಕ ಶಕ್ತಿ ಉತ್ಪತ್ತಿಯಾಗುವ ಅತ್ಯಂತ ದಟ್ಟವಾಗಿದೆ. ಒಂದು ವೇಳೆ ಅದು ಸಾಧ್ಯವಾದಲ್ಲಿ ನಾವು ಅನೇಕ ಜನರನ್ನು ರಕ್ಷಿಸಬಹುದು. ಅಮೆರಿಕವನ್ನೇ ತೆಗೆದುಕೊಳ್ಳಿ. ಅಲ್ಲಿನ 24 ಜಿಲ್ಲೆಗಳಲ್ಲಿ ಒಂದೇ ಒಂದು ಮಗುವಿನ ಸಾವು ಕೂಡ ಸಂಭವಿಸಿಲ್ಲ. ಏಕೆಂದರೆ ಮಕ್ಕಳು ಹಾಗೂ ಯುವಕರಲ್ಲಿ ತಾಜಾ ರೋಗನಿರೋಧಕ ಶಕ್ತಿ ಇರುತ್ತದೆ. ಇದು ಅವರಿಗೆ ಸೋಂಕನ್ನು ಎದುರಿಸಲು ಹೆಚ್ಚಿನ ಸನ್ನದ್ಧ ಸ್ಥಿತಿಯನ್ನು ಕಲ್ಪಿಸಿಕೊಟ್ಟಿರುತ್ತದೆ’ ಎಂದು ಏಮ್ಸ್‌ನಲ್ಲಿ ಪ್ರಾಧ್ಯಾಪಕರಾಗಿರುವ ಪುಣೆಯ ಡಿ.ವೈ. ಪಾಟೀಲ್ ಮೆಡಿಕಲ್ ಕಾಲೇಜಿನ ಸಾಮುದಾಯಿಕ ಔಷಧ ವಿಭಾಗದ ಮುಖ್ಯಸ್ಥ ಡಾ| ಅಮಿತಾವ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾದಿಂದ ಕೊರೋನಾಗೆ ಲಸಿಕೆ: ಮುಂದಿನ ತಿಂಗಳೇ ಜನ ಬಳಕೆಗೆ ಲಭ್ಯ!
ಆದರೆ, ಸಮೂಹ ಸೋಂಕು ನಿರೋಧಕ ಶಕ್ತಿ ಹೊಂದುವುದು ಅಷ್ಟುಸುಲಭದ ಮಾತಲ್ಲ ಎಂದೂ ತಜ್ಞರು ಇದೇ ವೇಳೆ ಎಚ್ಚರಿಸುತ್ತಾರೆ. ‘ಈ ಶಕ್ತಿ ಹೊಂದುವಲ್ಲಿ 2 ವಿಧಾನಗಳಿವೆ. ಮೊದಲನೆಯದಾಗಿ ಲಸಿಕೆ ಅಭಿವೃದ್ಧಿಪಡಿಸುವುದು ಹಾಗೂ ಎರಡನೆಯದಾಗಿ ಸೋಂಕಿಗೆ ನಮ್ಮನ್ನು ನಾವು ತರೆದುಕೊಳ್ಳುವುದು’ ಎಂದಿದ್ದಾರೆ ದಿಲ್ಲಿ ಏಮ್ಸ್ ಕಮ್ಯುನಿಟಿ ಮೆಡಿಸಿನ್ ಕೇಂದ್ರದ ಪ್ರಾಧ್ಯಾಪಕ ಡಾ| ಸಂಜಯ ರಾಯ್.
‘ಲಸಿಕೆ ಯಾವಾಗ ಬರುತ್ತದೋ ಹೇಳಲು ಆಗದು. ಹೀಗಾಗಿ ಈಗ ಅದಕ್ಕೆ ಇರುವ ಪರ್ಯಾಯ ಮಾರ್ಗವೆಂದರೆ ಸೋಂಕಿಗೆ ನಮ್ಮನ್ನು ನಾವು ತೆರೆದುಕೊಂಡು ನಿರೋಧಕ ಶಕ್ತಿಯನ್ನು ಗಿಟ್ಟಿಸಿಕೊಳ್ಳುವುದು. ಶಾಲೆ-ಕಾಲೇಜುಗಳು ಆರಂಭವಾದರೆ ಎಲ್ಲ ಮಕ್ಕಳೂ ಹೊರಬಂದು ಸೋಂಕಿಗೆ ತೆರೆದುಕೊಳ್ಳುತ್ತಾರೆ. ಮಕ್ಕಳಲ್ಲಿ ತಾಜಾ ರೋಗ ನಿರೋಧಕ ಶಕ್ತಿ ಇರುವ ಕಾರಣ ಹರ್ಡ್ ಇಮ್ಯೂನಿಟಿಯಲ್ಲಿ ಅವರು ಯಶ ಕಂಡರೆ ಸೋಂಕಿನ ವಿರುದ್ಧದ ಹೋರಾಟದಲ್ಲಿ ದೊಡ್ಡ ಯಶಸ್ಸು ಸಿಗಲಿದೆ’ ಎಂದು ರಾಯ್ ಹೇಳಿದ್ದಾರೆ.
ಬುಧವಾರದಿಂದ ಬೆಂಗಳೂರು ಅನ್‌ಲಾಕ್: ಲಾಕ್‌ಡೌನ್ ವಿಸ್ತರಣೆ ಇಲ್ಲ!
ಏನಿದು ಹರ್ಡ್ ಇಮ್ಯೂನಿಟಿ?
ಹೆಚ್ಚು ಜನರು ಮನೆಯಿಂದ ಹೊರಬಂದಾಗ ಅವರಿಗೆ ವೈರಸ್ ತಾಗಬಹುದು. ಆದರೆ ಸೋಂಕು ನಿರೋಧಕ ಶಕ್ತಿ ಅವರಲ್ಲಿ ಇದ್ದರೆ ಅವರಿಗೆ ವೈರಸ್ ಅಂಟುವುದಿಲ್ಲ. ಅವರಿಂದ ಇತರರಿಗೂ ವ್ಯಾಪಿಸುವುದಿಲ್ಲ. ಬಹುತೇಕ ಜನರಿಗೆ ಹೀಗೆ ಆದರೆ ವೈರಾಣು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆಗ ತನ್ನಿಂತಾನೇ ‘ಸಮೂಹ ಸೋಂಕು ನಿರೋಧಕ ಶಕ್ತಿ’ (ಹರ್ಡ್ ಇಮ್ಯೂನಿಟಿ) ಉತ್ಪತ್ತಿ ಆಗಿ ವೈರಾಣುವಿನ ಆರ್ಭಟ ತಗ್ಗುತ್ತದೆ.
ಆದರೆ, ಮಾನಸಿಕವಾಗಿ ಪೋಷಕರೇ ಸಿದ್ಧರಿಲ್ಲ
ದೇಶಾದ್ಯಂತ ಕೊರೋನಾ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಈ ಹಂತದಲ್ಲಿ ಶಾಲಾ, ಕಾಲೇಜು ಆರಂಭಿಸಿದರೂ ಮಕ್ಕಳನ್ನು ಕಳುಹಿಸಲು ಪೋಷಕರೇ ಮಾನಸಿಕವಾಗಿ ಸಿದ್ಧರಿಲ್ಲ. ಹಾಗಾಗಿ, ತಜ್ಞರ ಶಿಫಾರಸು ಕಾರ್ಯಗತವಾಗುವ ಸಾಧ್ಯತೆ ತೀರಾ ಕಡಿಮೆ.