ಇಂದಿನಿಂದಲೇ ಉಳಿತಾಯ ಹಬ್ಬ : ಪ್ರಧಾನಿ ನರೇಂದ್ರ ಮೋದಿ

Kannadaprabha News   | Kannada Prabha
Published : Sep 22, 2025, 04:54 AM IST
Prime Minister Narendra Modi

ಸಾರಾಂಶ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತ ಮತ್ತು ಹಿಂದಿನ ಆದಾಯ ತೆರಿಗೆ ಕಡಿತದ ಸಂಯೋಜಿತ ಲಾಭದಿಂದ ಜನರು ವಾರ್ಷಿಕ 2.5 ಲಕ್ಷ ಕೋಟಿ ರು. ಉಳಿಸುತ್ತಾರೆ. ತೆರಿಗೆ ಕಡಿತದಿಂದ ವಹಿವಾಟು ಕೂಡ ಹೆಚ್ಚಲಿದ್ದು, ದೇಶದ ಆರ್ಥಿಕ ಪ್ರಗತಿಯೂ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತ ಮತ್ತು ಹಿಂದಿನ ಆದಾಯ ತೆರಿಗೆ ಕಡಿತದ ಸಂಯೋಜಿತ ಲಾಭದಿಂದ ಜನರು ವಾರ್ಷಿಕ 2.5 ಲಕ್ಷ ಕೋಟಿ ರು. ಉಳಿಸುತ್ತಾರೆ. ತೆರಿಗೆ ಕಡಿತದಿಂದ ವಹಿವಾಟು ಕೂಡ ಹೆಚ್ಚಲಿದ್ದು, ದೇಶದ ಆರ್ಥಿಕ ಪ್ರಗತಿಯೂ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜಿಎಸ್‌ಟಿ 2.0 ಜಾರಿಗೆ ಮುನ್ನ ಭಾನುವಾರ ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ‘ನವರಾತ್ರಿಯ ಮೊದಲ ದಿನದಂದು, ದೇಶವು ಆತ್ಮನಿರ್ಭರ ಭಾರತಕ್ಕಾಗಿ ಒಂದು ಮಹತ್ವದ ಮತ್ತು ದೊಡ್ಡ ಹೆಜ್ಜೆ ಇಡಲಿದೆ. ಇದೇ ಶುಭದಿನ ‘ಜಿಎಸ್‌ಟಿ ಬಚತ್ ಉತ್ಸವ’ (ಉಳಿತಾಯ ಹಬ್ಬ) ಆರಂಭವಾಗಲಿದ್ದು, ಆದಾಯ ತೆರಿಗೆ ವಿನಾಯಿತಿಯೊಂದಿಗೆ ಇದು ಹೆಚ್ಚಿನ ಜನರಿಗೆ ‘ಡಬಲ್ ಬೊನಾನ್ಜಾ’ ಆಗಲಿದೆ’ ಎಂದರು.

‘ಸರಳೀಕೃತ ಜಿಎಸ್ಟಿಯಿಂದ ವ್ಯವಹಾರ ಸುಲಭವಾಗಲಿದೆ ಮತ್ತು ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸುತ್ತವೆ. ಅಭಿವೃದ್ಧಿ ಓಟದಲ್ಲಿ ಎಲ್ಲಾ ರಾಜ್ಯಗಳು ಸಮಾನ ಪಾಲುದಾರರಾಗಿರುತ್ತವೆ. ‘ಆತ್ಮನಿರ್ಭರ ಭಾರತ’ ಮತ್ತು ಸ್ವದೇಶಿ ಅಭಿಯಾನಗಳನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆಗೆ ವೇಗ ನೀಡಬೇಕು’ ಎಂದು ಒತ್ತಾಯಿಸಿದರು.

‘ನೀವು ಇಷ್ಟಪಡುವ ವಸ್ತುಗಳನ್ನು ಸುಲಭವಾಗಿ ಖರೀದಿಸಲು ಸಾಧ್ಯವಾಗುತ್ತದೆ. ಬಡವರು, ಮಧ್ಯಮ ವರ್ಗ, ನವ ಮಧ್ಯಮ ವರ್ಗ, ಯುವಕರು, ರೈತರು, ಮಹಿಳೆಯರು, ವ್ಯಾಪಾರಿಗಳು ಮತ್ತು ಅಂಗಡಿಯವರು ಇದರಿಂದ ಪ್ರಯೋಜನ ಪಡೆಯುತ್ತಾರೆ. ಈ ಹಬ್ಬದ ಋತುವಿನಲ್ಲಿ ಎಲ್ಲರ ಸಂತೋಷ ಹೆಚ್ಚಾಗುತ್ತದೆ ಎಂದು ಮೋದಿ ಹೇಳಿದರು.

2014ರಲ್ಲಿನ ಬೆಂಗಳೂರು ಉದಾಹರಣೆ:

‘2014ರಲ್ಲಿ (ಯುಪಿಎ ಅವಧಿಯಲ್ಲಿ) ನಾನು ಪ್ರಧಾನಿ ಆಗುವ ಮುನ್ನ ವಿದೇಶಿ ಪತ್ರಿಕೆಯೊಂದು ಭಾರತದಲ್ಲಿನ ವ್ಯಾಪಾರ ಹಾಗೂ ಸರಕು ಸಾಗಣೆಯಲ್ಲಿನ ಸಮಸ್ಯೆಯ ಬಗ್ಗೆ ಹೇಳಿತ್ತು. ಬೆಂಗಳೂರಿನಿಂದ ಯುರೋಪ್‌ಗೆ ಸರಕು ಸಾಗಣೆಯು ಬೆಂಗಳೂರಿನಿಂದ ಹೈದರಾಬಾದ್‌ಗೆ ಸರಕು ಸಾಗಿಸುವುದಕ್ಕಿಂತ ಅಗ್ಗ ಎಂದಿತ್ತು. ಆದರೆ 2017 ರಲ್ಲಿ ಭಾರತ ಜಿಎಸ್ಟಿ ಸುಧಾರಣೆಗಳತ್ತ ಹೆಜ್ಜೆ ಇಟ್ಟಾಗ, ಇತಿಹಾಸದಲ್ಲಿ ಹೊಸ ಆರಂಭವಾಯಿತು. ಜಿಎಸ್ಟಿ ‘ಒಂದು ರಾಷ್ಟ್ರ-ಒಂದು ತೆರಿಗೆ’ ಕನಸನ್ನು ನನಸಾಗಿಸಿದೆ’ ಎಂದು ಅವರು ಹೇಳಿದರು.

‘12 ಲಕ್ಷ ರು.ವರೆಗಿನ ಆದಾಯದ ಮೇಲೆ ಆದಾಯ ತೆರಿಗೆ ವಿನಾಯಿತಿ ಮತ್ತು ಜಿಎಸ್‌ಟಿ ಸುಧಾರಣೆ ಬಡವರು, ನವ-ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗಕ್ಕೆ ‘ಡಬಲ್ ಬೊನಾನ್ಜಾ’ ಎಂದು ಬಣ್ಣಿಸಿದರು.

ಹೆಮ್ಮೆಯಿಂದ ಸ್ವದೇಶಿ ವಸ್ತು ಖರೀದಿಸಿ: ಮೋದಿ

ನವದೆಹಲಿ: ಸ್ವದೇಶಿ (ಸ್ಥಳೀಯ) ಉತ್ಪನ್ನಗಳನ್ನು ಉತ್ತೇಜಿಸುವ ಮೂಲಕ ನಾಗರಿಕರು ಸ್ವಾವಲಂಬನೆಯತ್ತ ಸಾಗುವಂತೆ ಮತ್ತು ವಿದೇಶಿ ನಿರ್ಮಿತ ವಸ್ತುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ. ಅಮೆರಿಕದ ತರಿಗೆ ಹಾಗೂ ಎಚ್1ಬಿ ವೀಸಾ ಪ್ರಹಾರದ ನಡುವೆಯೇ ಮೋದಿ ಮತ್ತೆ ಸ್ವದೇಶಿ ಮಂತ್ರ ಪಠಿಸಿದ್ದಾರೆ.ಭಾನುವಾರ ಸಂಜೆ ದೇಶವನ್ನು ಉದ್ದೇಶಿಸಿ ಟೀವಿ ಭಾಷಣ ಮಾಡಿದ ಅವರು. ‘ಹೆಮ್ಮೆಯಿಂದ ಹೇಳಿ, ನಾನು ಸ್ವದೇಶಿ ಉತ್ಪನ್ನ ಖರೀದಿಸುತ್ತೇನೆ’ ಎಂದು ಕರೆ ನೀಡಿದರು.

‘ನಮ್ಮ ಜೇಬಿನಲ್ಲಿರುವ ಬಾಚಣಿಗೆ ಭಾರತದಲ್ಲಿ ತಯಾರಾಗುತ್ತದೆಯೋ ಅಥವಾ ವಿದೇಶದಲ್ಲಿ ತಯಾರಾಗುತ್ತದೆಯೋ ಎಂದು ನಮಗೆ ತಿಳಿದಿರುವುದಿಲ್ಲ. ನಾವು ಭಾರತದಲ್ಲಿ ತಯಾರಾದ ಉತ್ಪನ್ನಗಳನ್ನು, ನಮ್ಮ ದೇಶದ ಯುವಕರ ಕಠಿಣ ಪರಿಶ್ರಮದಿಂದ ತಯಾರಿಸಿದ ಉತ್ಪನ್ನಗಳನ್ನು, ನಮ್ಮ ಪುತ್ರರು ಮತ್ತು ಪುತ್ರಿಯರ ಬೆವರು ಹರಿಸುವ ಉತ್ಪನ್ನಗಳನ್ನು ಖರೀದಿಸಬೇಕು’ ಎಂದು ಕೋರಿದರು.

‘ಸ್ವದೇಶಿಯ ಮಂತ್ರವು ನಮ್ಮ ಸ್ವಾತಂತ್ರ್ಯ ಚಳವಳಿಗೆ ಬಲ ನೀಡಿತು; ಇಂದು, ಅದು ನಮ್ಮ ಸಮೃದ್ಧಿಯ ಅನ್ವೇಷಣೆಗೆ ಶಕ್ತಿ ತುಂಬುತ್ತದೆ’ ಎಂದು ಬಣ್ಣಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್