ನವದೆಹಲಿ: ಹಲವು ದೇಶಗಳು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಮಾಡಲು ಬಯಸುತ್ತವೆ. ಆದರೆ ಅವರಿಗೆ ನಮ್ಮ ಪ್ರತಿಭೆಯ ಬಗ್ಗೆ ಭಯವಿದೆ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಎಚ್1ಬಿ ವೀಸಾ ವಿವಾದದ ಬೆನ್ನಲ್ಲೇ ಹೇಳಿದ್ದಾರೆ.
ಸಭೆಯೊಂದರಲ್ಲಿ ಮಾತನಾಡಿದ ಅವರು,‘ಪ್ರಪಂಚದಾದ್ಯಂತ ವಿವಿಧ ದೇಶಗಳು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಲು ಬಯಸುತ್ತವೆ. ಭಾರತದೊಂದಿಗೆ ವ್ಯಾಪಾರವನ್ನು ಹೆಚ್ಚಿಸಲು ಇಷ್ಟಪಡುತ್ತವೆ. ಸಂಬಂಧ ಸುಧಾರಿಸಿಕೊಳ್ಳಲು ಯತ್ನಿಸುತ್ತವೆ. ಆದರೆ ಅವರಿಗೆ ನಮ್ಮ ದೇಶದಲ್ಲಿರುವ ಪ್ರತಿಭೆಗಳ ಬಗ್ಗೆ ಭಯವೂ ಇದೆ. ಆದರೆ ಇದಕ್ಕೆ ನಮ್ಮ ಆಕ್ಷೇಪವಿಲ್ಲ’ ಎಂದರು.
ಎಚ್ 1 ಬಿ ವೀಸಾ ದರ ಹೆಚ್ಚಳ ಬೆನ್ನಲ್ಲೇ ಗೋಯಲ್ ನೇತೃತ್ವದ ನಿಯೋಗ ಸೋಮವಾರ ಅಮೆರಿಕಗೆ ತೆರಳಲಿದ್ದಾರೆ. ಅದಕ್ಕೂ ಮುನ್ನ ಭಾರತೀಯ ಯುವ ಉದ್ಯೋಗಿಗಳಿಗೆ ಅವರು, ‘ ಭಾರತಕ್ಕೆ ಬಂದು ಇಲ್ಲೇ ಹೊಸತನ್ನು ಕಂಡುಕೊಳ್ಳಿ. ಅದು ಆರ್ಥಿಕತೆಯನ್ನು ಇನ್ನಷ್ಟು ವೇಗವಾಗಿ ಬೆಳೆಯುವಂತೆ ಮಾಡುತ್ತದೆ’ ಎಂದು ಇದೇ ವೇಳೆ ಹೇಳಿದರು.
ಅಮೆರಿಕ ಕೈಕೊಟ್ರೆ 40 ದೇಶಗಳಿಗೆ ಜವಳಿ ವಿಸ್ತರಣೆಗೆ ಭಾರತ ಸಜ್ಜು!
ನವದೆಹಲಿ : ಅಮೆರಿಕ ಹೇರಿರುವ ಶೇ.50ರಷ್ಟು ತೆರಿಗೆಯಿಂದ ಭಾರತದ ಜವಳಿ ಉದ್ಯಮ ಭಾರೀ ಹೊಡೆತ ತಿನ್ನುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್‌ಗೆ ಟಕ್ಕರ್ ಕೊಡಲು ಮುಂದಾಗಿರುವ ಭಾರತ, ಅನ್ಯ 40 ದೇಶಗಳ ಮಾರುಕಟ್ಟೆಗಳತ್ತ ತನ್ನ ಜವಳಿ ಉದ್ಯಮವನ್ನು ತಿರುಗಿಸಿ ವಿಸ್ತರಿಸಲು ಯತ್ನಿಸುತ್ತಿದೆ.
ಇದಕ್ಕಾಗಿ ಆಸ್ಟ್ರೇಲಿಯಾ, ಬೆಲ್ಜಿಯಂ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಮೆಕ್ಸಿಕೊ, ಪೋಲೆಂಡ್, ರಷ್ಯಾ, ದಕ್ಷಿಣ ಕೊರಿಯಾ, ಟರ್ಕಿ, ಯುಎಇ, ಬ್ರಿಟನ್ ಸೇರಿ 40 ರಾಷ್ಟ್ರಗಳಲ್ಲಿ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದ ಆಮದು ಕುಸಿದ ಕಾರಣ ದೇಶದ ಪ್ರಮುಖ ಜವಳಿ ಉತ್ಪಾದಕರು ಬಾಗಿಲು ಹಾಕಿರುವ ಹೊತ್ತಿನಲ್ಲಿ ಅವರ ರಕ್ಷಣೆಗೆ ಭಾರತ ಈ ಹೆಜ್ಜೆ ಇಡುತ್ತಿದೆ.
ಭಾರತದ ಒಟ್ಟು ಜವಳಿ ರಫ್ತಿನಲ್ಲಿ ಶೇ.29ರಷ್ಟನ್ನು ಅಮೆರಿಕ ಆಮದು ಮಾಡಿಕೊಳ್ಳುತ್ತಿದ್ದರೆ, ಈ 40 ರಾಷ್ಟ್ರಗಳು ಶೇ.5-6ರಷ್ಟು ತರಿಸಿಕೊಳ್ಳುತ್ತಿವೆ. ಈಗ ಇದನ್ನು ಇನ್ನಷ್ಟು ಹೆಚ್ಚಿಸುವ ಗುರಿಯಿದೆ.
ತೆರಿಗೆ ರಿಯಾಯಿತಿಗೆ ಇಯು ಬಳಿ ಕೋರಿಕೆ
ಅಮೆರಿಕದ ತೆರಿಗೆ ಜಾರಿಯಾಗಿರುವ ಹೊತ್ತಿನಲ್ಲಿ, ಯುರೋಪಿಯನ್ ಯೂನಿಯನ್ ಬಳಿ ಭಾರತ ಕಾರ್ಬನ್ ಸುಂಕದಲ್ಲಿ ರಿಯಾಯಿತಿಗಾಗಿ ಬೇಡಿಕೆ ಇಡಬಹುದು ಎಂದು ವರದಿಯಾಗಿದೆ. ಇಯು ಈಗಾಗಲೇ ಅಮೆರಿಕಕ್ಕೆ ಕೊಂಚ ತೆರಿಗೆ ವಿನಾಯಿತಿ ನೀಡಿದೆ. ಅದೇ ಮಾದರಿಯಲ್ಲಿ ಭಾರತಕ್ಕೂ ರಿಯಾಯಿತಿ ನೀಡುವಂತೆ ಭಾರತ ಕೋರಿದ್ದು, ಈ ಸಂಬಂಧ ಯೂನಿಯನ್‌ನ ವ್ಯಾಪಾರ ಮತ್ತು ಆರ್ಥಿಕ ಭದ್ರತೆಯ ಆಯುಕ್ತರು, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ಅವರೊಂದಿಗೆ ಸಭೆ ನಡೆಸುವ ನಿರೀಕ್ಷೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ