ರದ್ದಾದ ನೋಟು ಬಳಸಿ ಶಶಿಕಲಾ ಭಾರಿ ಆಸ್ತಿ ಖರೀದಿ

By Kannadaprabha NewsFirst Published Dec 22, 2019, 7:51 AM IST
Highlights

ಬೆಂಗಳೂರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿ.ಕೆ. ಶಶಿಕಲಾ ನಟರಾಜನ್‌ ರದ್ದಾದ ನೋಟುಗಳನ್ನು ಬಳಸಿ ಭಾರೀ ಪ್ರಮಾಣದಲ್ಲಿ ಆಸ್ತಿ ಖರೀದಿ ಮಾಡಿದ್ದರು ಎನ್ನುವ ವಿಚಾರ ಹೊರಬಿದ್ದಿದೆ. 

ಚೆನ್ನೈ[ಡಿ.22]:  ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಅತ್ಯಾಪ್ತ ಗೆಳತಿ, ಬೆಂಗಳೂರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿ.ಕೆ. ಶಶಿಕಲಾ ನಟರಾಜನ್‌ ಅವರು ನಡೆಸಿದ್ದಾರೆ ಎನ್ನಲಾದ ಇನ್ನಷ್ಟುಅಕ್ರಮಗಳನ್ನು ಆದಾಯ ತೆರಿಗೆ (ಐಟಿ) ಇಲಾಖೆ ಬಯಲಿಗೆಳೆದಿದೆ. ‘ಶಶಿಕಲಾ ಅವರು ನೂರಾರು ಕೋಟಿ ರುಪಾಯಿ ಮೌಲ್ಯದ ನಿಷೇಧಿತ 500 ರು. ಹಾಗೂ 1000 ರು. ನೋಟುಗಳನ್ನು ಬಳಸಿ ಒಂದು ರೆಸಾರ್ಟ್‌, 2 ಶಾಪಿಂಗ್‌ ಮಾಲ್‌, ಒಂದು ಸಾಫ್ಟ್‌ವೇರ್‌ ಕಂಪನಿ, ಒಂದು ಸಕ್ಕರೆ ಕಾರ್ಖಾನೆ, ಒಂದು ಕಾಗದ ಕಾರ್ಖಾನೆ ಹಾಗೂ 50 ಪವನ ವಿದ್ಯುತ್‌ ಉತ್ಪಾದನಾ ಯಂತ್ರಗಳನ್ನು (ವಿಂಡ್‌ ಮಿಲ್‌) ಖರೀದಿಸಿದ್ದರು’ ಎಂದು ಐಟಿ ಇಲಾಖೆಯು ಮದ್ರಾಸ್‌ ಹೈಕೋರ್ಟ್‌ಗೆ ತಿಳಿಸಿದೆ.

‘2012-13ರಿಂದ 2017-18ರವರೆಗೆ ಶಶಿಕಲಾ ಅವರು ನಡೆಸಿದ ವ್ಯವಹಾರಗಳ ಮೌಲ್ಯಮಾಪನವನ್ನು ಐಟಿ ಇಲಾಖೆ ಮಾಡಿದೆ. ಇದಕ್ಕೆ ಸಂಬಂಧಿಸಿದ ಮೌಲ್ಯಮಾಪನ ಆದೇಶವನ್ನು ಕಳೆದ ಬುಧವಾರವೇ ತನ್ನ ವೆಬ್‌ಸೈಟ್‌ನಲ್ಲಿ ಐಟಿ ಇಲಾಖೆ ಪ್ರಕಟಿಸಿದೆ’ ಎಂದು ಹೈಕೋರ್ಟ್‌ಗೆ ಐಟಿ ಪರ ವಕೀಲರು ಮಾಹಿತಿ ನೀಡಿದ್ದಾರೆ.

‘2012-13ರಿಂದ 2016-17ರವರೆಗೆ ಶಶಿಕಲಾ ಪಾಲುದಾರರಾಗಿದ್ದ ಕಂಪನಿಗಳ ತೆರಿಗೆ ಮೌಲ್ಯಮಾಪನ ಮಾಡಲಾಗಿದೆ. 2017-18ರಲ್ಲಿ ಅವರು ರದ್ದಾದ 500 ರು. ಹಾಗೂ 1000 ರು. ನೋಟುಗಳನ್ನು ಬಳಸಿ ಇಷ್ಟೊಂದು ಆಸ್ತಿಪಾಸ್ತಿ ಖರೀದಿಸಿದ್ದಾರೆ’ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಕೇಂದ್ರದ ವಿರುದ್ಧ ತಿರುಗಿಬಿದ್ದ ಬ್ಯಾಂಕ್ ನೌಕರರು, ಜನವರಿಯಲ್ಲಿ ಸಾರ್ವತ್ರಿಕ ಮುಷ್ಕರ!..

ಈ ಖರೀದಿ ಪ್ರಕ್ರಿಯೆಯಲ್ಲಿ ಶಶಿಕಲಾಗೆ ಸಹಕರಿಸಿದ್ದರು ಎನ್ನಲಾದ ಅವರ ಬಂಧು ಜೆ. ಕೃಷ್ಣಪ್ರಿಯಾ, ವಕೀಲ ಎಸ್‌.ಸೆಂಥಿಲ್‌ ಅವರನ್ನು ಹಾಗೂ ಇನ್ನೂ ಕೆಲವರನ್ನು ಪಾಟೀಸವಾಲು ನಡೆಸಬೇಕು ಎಂದು ಶಶಿಕಲಾ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ತೆರಿಗೆ ಇಲಾಖೆ ಈಗಾಗಲೇ ಮೌಲ್ಯಮಾಪನ ಮಾಡಿರುವುದನ್ನು ಪರಿಗಣನೆಗೆ ತೆಗೆದುಕೊಂಡ ಹೈಕೋರ್ಟ್‌ ನ್ಯಾಯಾಧೀಶೆ ನ್ಯಾ

ಅನಿತಾ ಸುಮಂತ್‌, ‘ಪಾಟೀಸವಾಲು ಅಗತ್ಯವಿಲ್ಲ’ ಎಂದು ಅಭಿಪ್ರಾಯಪಟ್ಟು ಶಶಿಕಲಾ ಅರ್ಜಿ ವಜಾ ಮಾಡಿತು.

ಖರೀದಿಗೆ ಇವೆ ಸಾಕ್ಷ್ಯ:  ‘ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಶಿಕಲಾ ಅವರು ಒಮ್ಮೆ ಪೆರೋಲ್‌ ಮೇಲೆ ಬಿಡುಗಡೆ ಹೊಂದಿ ತಮ್ಮ ಚೆನ್ನೈ ನಿವಾಸಕ್ಕೆ ಬಂದಿದ್ದರು. ಆಗ ಅವರು ಮನೆಯಲ್ಲಿದ್ದ ಕೆಲವು ಕಾಗದಪತ್ರಗಳನ್ನು ತೆಗೆದು ಇವನ್ನು ನಾಶ ಮಾಡಿ ಎಂದಿದ್ದರು. ಅವುಗಳಲ್ಲಿ ಅವರು ಉದ್ಯಮಿಗಳ ಜತೆ ನಡೆಸಿದ ವ್ಯವಹಾರದ ಮಾಹಿತಿ ಇತ್ತು. ಅದನ್ನು ನಾಶಪಡಿಸುವ ಮುನ್ನ ನಾನು 2 ಕಾಗದಗಳ ಫೋಟೋ ತೆಗೆದುಕೊಂಡಿದ್ದೆ’ ಎಂದು ಈ ಹಿಂದೆ ವಿಚಾರಣೆಯ ವೇಳೆ ಕೃಷ್ಣಪ್ರಿಯಾ ಬಾಯಿ ಬಿಟ್ಟಿದ್ದಳು. ಆ ಫೋಟೋಗಳು ಕೂಡ ಆಕೆಯ ಮೊಬೈಲ್‌ನಲ್ಲಿ ದಾಳಿ ವೇಳೆ ಸಿಕ್ಕಿದ್ದವು. ಈ ಕಾಗದ ಪತ್ರಗಳು ನಿಷೇಧಿತ ನೋಟಿನ ಮೂಲಕ ಶಶಿಕಲಾ ನಡೆಸಿದ ಆಸ್ತಿ ಖರೀದಿ ವಹಿವಾಟಿಗೆ ಸಂಬಂಧಿಸಿದ್ದವಾಗಿದ್ದವು’ ಎಂದು ಐಟಿ ಇಲಾಖೆ ಹೇಳಿದೆ.

ಇನ್ನು ನಿಷೇಧಿತ ಕರೆನ್ಸಿ ಮೂಲಕ ಈ ಆಸ್ತಿಗಳ ಖರೀದಿಗೆ ವಕೀಲ ಸೆಂಥಿಲ್‌ ಅವರು ಕಾನೂನು ಸಲಹೆಗಳನ್ನು ಶಶಿಕಲಾ ಅವರಿಗೆ ನೀಡಿದ್ದು ವಿಚಾರಣೆ ವೇಳೆ ದೃಢಪಟ್ಟಿತ್ತು.

click me!