
ನವದೆಹಲಿ (ಸೆ.9): ಕಳೆದ ವರ್ಷ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಭೀಕರ ಹಿಂಸಾಚಾರ ಪ್ರಕರಣದ ಮಾಸ್ಟರ್‌ಮೈಂಡ್ ಎನ್ನಲಾದ ಇತ್ತಿಹಾದ್-ಎ-ಮಿಲ್ಲತ್ ಕೌನ್ಸಿಲ್ (IMC) ಅಧ್ಯಕ್ಷ ಮೌಲಾನಾ ತೌಕೀರ್ ರಜಾ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಈ ವೇಳೆ ಕಟು ವೀಕ್ಷಣೆ ಮಾಡಿರುವ ನ್ಯಾಯಾಲಯ, ಹಿಂಸಾಚಾರದ ಸಂದರ್ಭದಲ್ಲಿ ಕೂಗಲಾದ 'ಸರ್ ತನ್ ಸೆ ಜುದಾ' ಘೋಷಣೆಯು ದೇಶದ ಕಾನೂನಿನ ಹಾಕುವ ನೇರ ಸವಾಲಾಗಿದ್ದು, ಇದು ಸಶಸ್ತ್ರ ದಂಗೆಗೆ ಜನರನ್ನು ಪ್ರಚೋದಿಸುತ್ತದೆ ಎಂದು ಹೇಳಿದೆ.
ನ್ಯಾಯಮೂರ್ತಿ ಅಶುತೋಷ್ ಶ್ರೀವಾಸ್ತವ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ಲಭ್ಯವಿರುವ ದಾಖಲೆಗಳ ಪ್ರಕಾರ ತೌಕೀರ್ ರಜಾ ಖಾನ್ ತಮ್ಮ ಸ್ವಂತ ಧಾರ್ಮಿಕ ಹಾಗೂ ಖಾಸಗಿ ರಾಜಕೀಯ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಇಂತಹ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ವಿಚಾರಣೆ ವೇಳೆ ಸರಕಾರ ಸಲ್ಲಿಸಿದ್ದ ವಾದವನ್ನು ಎತ್ತಿಹಿಡಿದ ನ್ಯಾಯಪೀಠ, 'ಸರ್ ತನ್ ಸೆ ಜುದಾ' ಘೋಷಣೆಯನ್ನು 'ಜೈ ಶ್ರೀರಾಮ್', 'ಹರ್ ಹರ್ ಮಹಾದೇವ್' ಅಥವಾ 'ನಾರಾ ಏ ತಕ್ಬೀರ್ ಅಲ್ಲಾಹು-ಅಕ್ಬರ್' ನಂತಹ ಧಾರ್ಮಿಕ ಘೋಷಣೆಗಳಿಗೆ ಹೋಲಿಸಲು ಸಾಧ್ಯವೇ ಇಲ್ಲ. ಏಕೆಂದರೆ ಆ ಧಾರ್ಮಿಕ ಘೋಷಣೆಗಳು ಆಯಾ ದೇವರು ಅಥವಾ ಗುರುಗಳಿಗೆ ಗೌರವ ಮತ್ತು ಶ್ರದ್ಧೆಯನ್ನು ಸಲ್ಲಿಸುವ ಮಾಧ್ಯಮಗಳಾಗಿವೆ. ಆದರೆ 'ಸರ್ ತನ್ ಸೆ ಜುದಾ' ಎನ್ನುವುದು ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಗೆ ಧಕ್ಕೆ ತರುವಂತಹದ್ದಾಗಿದೆ ಎಂದು ಕೋರ್ಟ್ ಗಮನಿಸಿದೆ.
ಘಟನೆ ನಡೆದ ನಂತರ ತೌಕೀರ್ ರಜಾ ಖಾನ್ ನೀಡಿರುವ ಭಾಷಣವನ್ನು ಉಲ್ಲೇಖಿಸಿದ ನ್ಯಾಯಾಲಯ, ತಮ್ಮ ಕರೆಗೆ ಓಗೊಟ್ಟು ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಜನರಿಗೆ ಧನ್ಯವಾದ ತಿಳಿಸಿ, ಹಿಂಸಾಚಾರದಲ್ಲಿ ತೊಡಗಿದ ಕೃತ್ಯವನ್ನು ಶ್ಲಾಘಿಸಿದ ಅವರ ನಡವಳಿಕೆಯನ್ನು ಯಾವುದೇ ರೀತಿಯಲ್ಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಖಂಡಿಸಿತು.
2025 ರ ಸೆಪ್ಟೆಂಬರ್ 26 ರಂದು "ಐ ಲವ್ ಮುಹಮ್ಮದ್" ಪ್ರಚಾರದ ಬೆಂಬಲವಾಗಿ ನಡೆದ ಪ್ರತಿಭಟನೆಯ ವೇಳೆ ಬರೇಲಿಯಲ್ಲಿ ಭಾರಿ ಹಿಂಸಾಚಾರ ಮತ್ತು ಘರ್ಷಣೆಗಳು ಸಂಭವಿಸಿದ್ದವು. ಬರೇಲಿ ಪ್ರದೇಶದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕವಾಗಿ ಅಪಾರ ಪ್ರಭಾವ ಹೊಂದಿರುವ ಬರೇಲ್ವಿ ಸುನ್ನಿ ಸಮುದಾಯದ ಪ್ರಮುಖ ನಾಯಕ ತೌಕೀರ್ ರಜಾ ಖಾನ್ ಅವರನ್ನು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸೆಪ್ಟೆಂಬರ್ 27, 2025 ರಂದು ಬಂಧಿಸಲಾಗಿತ್ತು. ಅಂದಿನಿಂದ ಅವರು ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಗಲಭೆ ಸೃಷ್ಟಿ, ಧರ್ಮದ ಆಧಾರದ ಮೇಲೆ ಶತ್ರುತ್ವ ಉತ್ತೇಜನ, ಕೊಲೆ ಯತ್ನ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಪರ ವಾದ: ತೌಕೀರ್ ರಜಾ ಪರ ವಕೀಲರು ವಾದ ಮಂಡಿಸಿ, ರಾಜಕೀಯ ದುರುದ್ದೇಶ ಹಾಗೂ ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಅವರನ್ನು ಈ ಪ್ರಕರಣದಲ್ಲಿ ಸುಳ್ಳಾಗಿ ಸಿಲುಕಿಸಲಾಗಿದೆ. ಸೆಪ್ಟೆಂಬರ್ 19, 2025 ರಂದು ಐಎಂಸಿ ಕೇವಲ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಅನ್ಯಾಯ ಹಾಗೂ ಸರ್ಕಾರದ ಸುಳ್ಳು ಪ್ರಕರಣಗಳ ವಿರುದ್ಧ ಪ್ರತಿಭಟಿಸಲು ಇಸ್ಲಾಮಿಯಾ ಇಂಟರ್ ಕಾಲೇಜು ಮೈದಾನದಲ್ಲಿ ಶಾಂತಿಯುತವಾಗಿ ಸೇರಲು ಕರೆ ನೀಡಿತ್ತು. ರಜಾ ಖಾನ್ ಯಾವುದೇ ಹಿಂಸಾಚಾರಕ್ಕೆ ಕರೆ ನೀಡಿಲ್ಲ ಮತ್ತು ಅವರು ಈ ಘಟನೆಯ ಮಾಸ್ಟರ್‌ಮೈಂಡ್ ಅಲ್ಲ ಎಂದು ವಾದಿಸಿದರು.
ಸರ್ಕಾರದ ಪರ ವಾದ: ಇದನ್ನು ತೀವ್ರವಾಗಿ ವಿರೋಧಿಸಿದ ಸರ್ಕಾರಿ ವಕೀಲರು, ರಜಾ ಖಾನ್ ಅವರೇ ಈ ಹಿಂಸಾಚಾರದ ಮೂಲ ರೂವಾರಿ. ಸೆಪ್ಟೆಂಬರ್ 19 ರಂದು ನಡೆದ ಸಭೆಯಲ್ಲೇ 'ಗುಸ್ತಾಖ್-ಎ-ನಬಿ ಕಿ ಏಕ್ ಹಿ ಸಜಾ, ಸರ ತನ್ ಸೆ ಜುದಾ' ಎಂಬ ರಾಜ್ಯದ ವಿರುದ್ಧದ ಘೋಷಣೆಗಳನ್ನು ಕೂಗಲಾಗಿತ್ತು. ಸೆಪ್ಟೆಂಬರ್ 26 ರ ನಮಾಜ್ ನಂತರ ಇಸ್ಲಾಮಿಯಾ ಕಾಲೇಜು ಮೈದಾನದಲ್ಲಿ ಸೇರಲು ಕರೆ ನೀಡಲಾಗಿತ್ತು. ಆ ನಂತರ ಗುಂಪು ಗಲಭೆ ನಡೆಸಿ, ಭದ್ರತಾ ಸಿಬ್ಬಂದಿಯ ಮೇಲೆ ಮಾರಕ ಶಸ್ತ್ರಾಸ್ತ್ರಗಳು, ಪೆಟ್ರೋಲ್ ಬಾಂಬ್, ಗಾಜಿನ ಬಾಟಲಿ ಹಾಗೂ ಕಲ್ಲುಗಳಿಂದ ದಾಳಿ ನಡೆಸಿತ್ತು. ಪೋಲಿಸರ ಸಮವಸ್ತ್ರ ಹರಿದು, ಕೊಲೆ ಯತ್ನ ನಡೆಸಲಾಗಿತ್ತು. ರಜಾ ಖಾನ್ ವಿರುದ್ಧ ಈಗಾಗಲೇ 24 ಕ್ರಿಮಿನಲ್ ಪ್ರಕರಣಗಳಿದ್ದು, ಅವರು ಜನರನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ಶಾಂತಿ ಸುವ್ಯವಸ್ಥೆ ಕಾಪಾಡಲು ಯತ್ನಿಸುತ್ತಿದ್ದ ಪೋಲಿಸರ ಮೇಲೆಯೇ ಗುಂಪು ದಾಳಿ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದೆ. ಈ ವೇಳೆ ಕೂಗಲಾದ 'ಸರ್ ತನ್ ಸೆ ಜುದಾ' ಘೋಷಣೆಯು ಕಾನೂನುಬಾಹಿರವಾಗಿದ್ದು, ಸಶಸ್ತ್ರ ದಂಗೆಯ ಸ್ವರೂಪದ್ದಾಗಿದೆ ಎಂದು ಅಭಿಪ್ರಾಯಪಟ್ಟು, ಜಾಮೀನು ಅರ್ಜಿಯನ್ನು ವಜಾಗೊಳಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ