
ಹೆದ್ದಾರಿ ಅಥವಾ ರಸ್ತೆ ನಿರ್ಮಾಣಕ್ಕೆ ಸರ್ಕಾರ ಜಾಗ ಕೇಳಿದರೆ ಆ ಜಾಗವನ್ನು ಹಣಕ್ಕೆ ನೀಡಲಾಗುತ್ತದೆ ಅಥವಾ ಮನೆ ಇದ್ದರೆ ಆ ಮನೆಯನ್ನೇ ಕೆಡವಲಾಗುತ್ತದೆ. ಆದರೆ, ಕಷ್ಟಪಟ್ಟು ಕಟ್ಟಿಸಿರುವ ಮನೆ ಹಾಗೂ ಕೋಟ್ಯಂತರ ರೂ. ಖರ್ಚು ಮಾಡಿ ಮನೆ ನಿರ್ಮಿಸಿದಾಗ ಅದನ್ನು ಸುಲಭವಾಗಿ ಕೆಡವಲು ಎಲ್ಲರಿಗೂ ಮನಸ್ಸು ಬರೋದಿಲ್ಲ ಅಲ್ವೇ. ಈ ಹಿನ್ನೆಲೆ ಪಂಜಾಬಿನ ಈ ರೈತ ಮಾಡಿರುವ ಪ್ಲಾನ್ ನೋಡಿ.
ಹಚ್ಚ ಹಸಿರಿನ ಜಮೀನಿನಲ್ಲಿ ನಿರ್ಮಿಸಲಾದ ಕೋಟ್ಯಂತರ ರೂ. ವೆಚ್ಚದ ಬಂಗಲೆ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ ಯೋಜನೆಯ ಮಾರ್ಗದಲ್ಲಿ ಬಂದ ಹಿನ್ನೆಲೆ, ಸಂಗ್ರೂರ್ ಜಿಲ್ಲೆಯ ರೋಶನ್‌ವಾಲಾ ಗ್ರಾಮದ ನಿವಾಸಿ ಸುಖ್ವಿಂದರ್ ಸಿಂಗ್ ಸುಖಿ ಅವರು ಅದನ್ನು ಕೆಡವುವಿಕೆಯಿಂದ ರಕ್ಷಿಸಲು ತಮ್ಮ ಮನೆಯನ್ನೇ ಸ್ಥಳಾಂತರ ಮಾಡುತ್ತಿದ್ದಾರೆ. ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಅನುಕೂಲವಾಗುವಂತೆ ಮತ್ತು ಅವರ ಕನಸಿನ ನಿವಾಸವನ್ನು ಉಳಿಸಿಕೊಳ್ಳಲು ಅವರು ತಮ್ಮ ಎರಡು ಅಂತಸ್ತಿನ ಮನೆಯನ್ನು ಅಸ್ತಿತ್ವದಲ್ಲಿರುವ ಸ್ಥಳದಿಂದ 500 ಅಡಿಗಳಷ್ಟು ಹಿಂದಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಅಲ್ಲದೆ, ಈಗಾಗಲೇ 250 ಅಡಿಗಳಷ್ಟು ಸ್ಥಳಾಂತರ ಮಾಡುವಲ್ಲಿ ಯಶಸ್ವಿಯೂ ಆಗಿದ್ದಾರೆ.
ಬಳ್ಳಾರಿ ಗ್ರಾಮ ಸ್ಥಳಾಂತರ ಪ್ರಸ್ತಾಪ : ಎಕರೆಗೆ 1 ಕೋಟಿ, ಕುಟುಂಬಕ್ಕೊಂದು ಉದ್ಯೋಗಕ್ಕೆ ಬೇಡಿಕೆ
2017 ರಲ್ಲಿ ತಮ್ಮ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದಾಗ, ಸುಖ್ವಿಂದರ್ ಸಿಂಗ್ ಸುಖಿ ಅವರು ಒಂದು ದಿನ ತನ್ನ ಸಂಪೂರ್ಣ ಮನೆಯನ್ನು ಬದಲಾಯಿಸಬೇಕಾಗುತ್ತದೆ ಎಂದು ಊಹಿಸಿರಲಿಲ್ಲ. ಆದರೆ, ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಸರ್ಕಾರದ ನಿರ್ಧಾರದಿಂದ ತನ್ನ ಜಮೀನಿನಲ್ಲಿ ಹಾದು ಹೋಗಬೇಕಾಗಿದ್ದ ಸಂಗ್ರೂರಿನ ರೈತನಿಗೆ ಪಂಜಾಬ್ ಸರ್ಕಾರದಿಂದ ಪರಿಹಾರ ನೀಡಲಾಯಿತಾದರೂ, ಮನೆಯನ್ನು ಕೆಡವುವ ಬದಲು, ತಮ್ಮ ಮನೆಯ ಸ್ಥಳವನ್ನು ಬದಲಾಯಿಸಲು ನಿರ್ಧರಿಸಿದರು. ಇನ್ನು, ಮನೆ ಸುಮಾರು 3000-3500 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ ಮತ್ತು ಅದರ ನಿರ್ಮಾಣಕ್ಕಾಗಿ ಅವರು 1.5 ಕೋಟಿ ರೂ. ಖರ್ಚು ಮಾಡಿದ್ದಾರೆ. ಇದಲ್ಲದೆ ಹೊಸ ಮನೆ ಕಟ್ಟಲು ಅವರಿಗೆ ಇನ್ನೂ 2 ವರ್ಷ ಬೇಕಾಗುತ್ತಿತ್ತು ಎಂದೂ ರೈತ ಹೇಳಿದ್ದಾರೆ.
“ಎರಡು ವರ್ಷಗಳಲ್ಲಿ ಅಪಾರ ಹಣ ಖರ್ಚು ಮಾಡಿ ಈ ಕನಸಿನ ಮನೆಯನ್ನು ನಿರ್ಮಿಸಿದ್ದೆ. ಹಾಗಾಗಿ, ನಾನು ಹೊಸ ಮನೆಯನ್ನು ನಿರ್ಮಿಸಲು ಬಯಸಲಿಲ್ಲ; ಹಾಗಾಗಿ ಈ ಮನೆಯನ್ನು ಎಕ್ಸ್‌ಪ್ರೆಸ್‌ವೇಯಿಂದ ದೂರ ಸರಿಸಲು ನಿರ್ಧರಿಸಿದೆ. ನಾನು ನನ್ನ ಮನೆಯನ್ನು 500 ಅಡಿ ಹಿಂದಕ್ಕೆ ಸರಿಸಬೇಕಾಗಿದೆ, ನಾವು ಈಗಾಗಲೇ 250 ಅಡಿ ಹಿಂದಕ್ಕೆ ತಳ್ಳಿದ್ದೇವೆ ಮತ್ತು ಕೆಲಸ ಇನ್ನೂ ನಡೆಯುತ್ತಿದೆ’’ ಎಂದೂ ಹೇಳಿದ್ದಾರೆ.
ಬಾಗಲಕೋಟೆ: ಐತಿಹಾಸಿಕ ಸ್ಮಾರಕ ಬಳಿಯ ಮನೆಗಳ ಸ್ಥಳಾಂತರ ಶೀಘ್ರ
ಇನ್ನು, ಸಮೀಪದ ಕೃಷ್ಣಪುರ ಗ್ರಾಮದ ಪರ್ದೀಪ್ ಸಿಂಗ್ "ಹಿಂದೆ, ಜನರು ತಮ್ಮ ಮನೆಗಳ ಎತ್ತರವನ್ನು ಹೆಚ್ಚಿಸುವುದನ್ನು ನಾವು ನೋಡಿದ್ದೇವೆ, ಆದರೆ ಮನೆಯನ್ನು ಮೂಲ ನಿರ್ಮಾಣ ಸ್ಥಳದಿಂದ 500 ಅಡಿ ದೂರಕ್ಕೆ ಸ್ಥಳಾಂತರಿಸಿರುವುದು ಇದೇ ಮೊದಲು" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು, ಮನೆಯನ್ನು ಹಿಂದಕ್ಕೆ ಸ್ಥಳಾಂತರಿಸುವ ಕಾಮಗಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡಲಾಗಿದೆ. ಕಳೆದ ಎರಡು ತಿಂಗಳಿಂದ ಈ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳ್ಳಲು ಇನ್ನೂ 2 ತಿಂಗಳು ಬೇಕು. ಕಾರ್ಮಿಕರು ಇದನ್ನು ಪ್ರತಿದಿನ ಸುಮಾರು 10 ಅಡಿಗಳಷ್ಟು ಚಲಿಸಲು ಸಾಧ್ಯವಾಗುತ್ತದೆ. ಹಾಗೂ ಸ್ಥಳಾಂತರಿಸಲು ಒಟ್ಟು 50 ಲಕ್ಷ ರೂ. ಬೇಕು ಎಂದು ತಿಳಿದುಬಂದಿದೆ.
ಈ ಮನೆ ಈಗ ಸ್ಥಳೀಯ ನಿವಾಸಿಗಳಲ್ಲಿ ಆಕರ್ಷಣೆಯ ಕೇಂದ್ರವಾಗಿದೆ, ಅವರು ಅದರ ಸ್ಥಳಾಂತರವನ್ನು ನೋಡಲು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಸಂಗ್ರೂರ್ ಮಾರ್ಗವಾಗಿ ಹಾದು ಹೋಗಲಿರುವ ದೆಹಲಿ-ಕತ್ರಾ ಎಕ್ಸ್‌ಪ್ರೆಸ್‌ವೇ ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದೆ ಮತ್ತು ಹರಿಯಾಣ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಮೂಲಕ 668 ಕಿ.ಮೀ ದೂರವನ್ನು ಹಾದು ಹೋಗುತ್ತದೆ ಮತ್ತು 37,525 ಕೋಟಿ ರೂ. ಗೂ ಅಧಿಕ ವೆಚ್ಚವಾಗುತ್ತದೆ. ಈ ಎಕ್ಸ್‌ಪ್ರೆಸ್‌ವೇನ ಒಂದು ಪ್ರಮುಖ ಪ್ರಯೋಜನವೆಂದರೆ ದೆಹಲಿಯಿಂದ ಕತ್ರಾಗೆ ಪ್ರಯಾಣದ ಸಮಯ ಪ್ರಸ್ತುತ ಸುಮಾರು 11 ರಿಂದ 12 ಗಂಟೆಗಳಿಂದ ಕನಿಷ್ಠ 5 ರಿಂದ 6 ಗಂಟೆಗಳವರೆಗೆ ಕಡಿಮೆಯಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ