ಟಿಎಂಸಿ ನಾಯಕರ ಭೂಕಬಳಿಕೆ ಮತ್ತು ಹಿಂದೂ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಶುಕ್ರವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.
ಕೋಲ್ಕತಾ (ಫೆ.24): ಟಿಎಂಸಿ ನಾಯಕರ ಭೂಕಬಳಿಕೆ ಮತ್ತು ಹಿಂದೂ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಶುಕ್ರವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಆಕ್ರೋಶಗೊಂಡ ಸ್ಥಳೀಯರು ಟಿಎಂಸಿ ನಾಯಕರಿಗೆ ಸೇರಿದ ಆಸ್ತಿಗಳಿಗೆ ಬೆಂಕಿ ಹಚ್ಚಿದ್ದಾರೆ.
ಶುಕ್ರವಾರ ಮುಂಜಾನೆ ಪ್ರತಿಭಟನಾನಿರತರು ಅತ್ಯಾಚಾರ ಆರೋಪಿ ಟಿಎಂಸಿ ನಾಯಕರ ಮನೆಗಳಿಗೆ ನುಗ್ಗಿ ಲೂಟಿ ಮಾಡಿದ್ದಾರೆ. ಅಲ್ಲದೇ ಇದೇ ವೇಳೆ ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಬಡಿಗೆಗಳನ್ನು ಹಿಡಿದುಕೊಂಡಿದ್ದ ಗುಂಪು ಬೆಳ್ಮಜೂರ್ ಶಿಪ್‌ಯಾರ್ಡ್ ಬಳಿ ಮನೆಗಳಿಗೆ ಬೆಂಕಿ ಹಚ್ಚಿದೆ. ವರ್ಷಗಳಿಂದ ಇಲ್ಲಿ ಅನ್ಯಾಯ ನಡೆಯುತ್ತಿದ್ದರೂ ಸಹ ಪೊಲೀಸರು ಏನು ಮಾಡುತ್ತಿಲ್ಲ. ಹೀಗಾಗಿ ನಾವು ಇದನ್ನೆಲ್ಲಾ ಮಾಡುತ್ತಿದ್ದೇವೆ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿರುವ ಡಿಜಿಪಿ ಅಪರಾಧಿಗಳಿಗೆ ಮರಣದಂಡನೆ ನೀಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಪೊಲೀಸರು ಬರದಂತೆ ಅನೇಕ ಕಡೆ ಬ್ಯಾರಿಕೇಡ್‌ಗಳನ್ನು ಪ್ರತಿಭಟನಾಕಾರರು ಹಾಕಿದ್ದಾರೆ.
ಬಿಜೆಪಿ ನಿಯೋಗಕ್ಕೆ ತಡೆ: ಸಂದೇಶ್‌ಖಾಲಿಗೆ ಭೇಟಿ ನೀಡುತ್ತಿದ್ದ ಬಿಜೆಪಿಯ ಮಹಿಳಾ ನಿಯೋಗವನ್ನು ಪೊಲೀಸರು ತಡೆದಿದ್ದಾರೆ. ಬಳಿಕ ಪ್ರತಿಕ್ರಿಯಿಸಿರುವ ನಿಯೋಗ, ಸತ್ಯವನ್ನು ಮುಚ್ಚಿಡುವುದಕ್ಕಾಗಿ ರಾಜ್ಯ ಸರ್ಕಾರ ನಮ್ಮನ್ನು ತಡೆಯುತ್ತಿದೆ ಎಂದು ಆರೋಪಿಸಿದೆ. ಇದರ ನಡುವೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ 6 ಮಂದಿಯ ತಂಡ ಭೇಟಿ ನೀಡಿದ್ದು, ಪರಿಸ್ಥಿತಿಯ ಮಾಹಿತಿ ಕಲೆ ಹಾಕಿದ್ದಾರೆ.
ಏನಿದು ಪ್ರಕರಣ?: ಪ.ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಕಳೆದ ತಿಂಗಳು ಇ.ಡಿ. ಅಧಿಕಾರಿಗಳು ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಶಹಜಹಾನ್ ಆಸ್ತಿಗಳ ಮೇಲೆ ದಾಳಿ ಮಾಡಿದ್ದರು. ಆಗ ಶಹಜಹಾನ್ ಪರಾರಿ ಆಗಿದ್ದ. ಈ ವೇಳೆ ಟಿಎಂಸಿ ಕಾರ್ಯಕರ್ತರಿಂದ ಗಲಭೆ ನಡೆದಿತ್ತು. ಇದೇ ವೇಳೆ, ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಕೆಲವು ಶಹಜಹಾನ್ ಬೆಂಬಲಿಗ ಟಿಎಂಸಿ ಕಾರ್ಯಕರ್ತರು ಸುಂದರ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಇತ್ತೀಚೆಗೆ 17 ಶಹಜಹಾನ್ ಬೆಂಬಲಿಗರನ್ನು ಬಂಧಿಸಲಾಗಿದೆ.
ಶಾಜಹಾನ್ ಶೇಖ್ ಮೇಲೆ ಮತ್ತೆ ಇ.ಡಿ. ದಾಳಿ: ಪ.ಬಂಗಾಳದ ಸಂದೇಶ್‌ಖಾಲಿ ಭೂಕಬಳಿಕೆ ಪ್ರಮುಖ ಆರೋಪಿ, ತಲೆಮರೆಸಿಕೊಂಡಿರುವ ಟಿಎಂಸಿ ನಾಯಕ ಶಾಜಹಾನ್ ಶೇಖ್ ಹಾಗೂ ಆತನ ಸಹಚರರಿಗೆ ಸೇರಿದ ಆಸ್ತಿಗಳ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ.
ಭೂ ಕಬಳಿಕೆಗೆ ಸಂಬಂಧಿಸಿದಂತೆ ಹಳೆಯ ಪ್ರಕರಣವೊಂದರ ಸಂಬಂಧ ದಾಳಿ ನಡೆಸಲಾಗಿದ್ದು, ದಾಖಲಾತಿಗಳಿಗಾಗಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೌರಾ, ಬಿಜೋಯ್ ಗರ್ ಮತ್ತು ಬಿರಾತಿ ನಗರಗಳಲ್ಲಿನ 5ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಶಾಜಹಾನ್ ಮತ್ತು ಆತನ ಮೀನು ಉದ್ಯಮದಲ್ಲಿ ಪಾಲುದಾರರಾದ ಇತತರ ಮೇಲೆ ಇ.ಡಿ. ದಾಳಿ ನಡೆಸಿದೆ.
ದಾಳಿಯ ಸಮಯದಲ್ಲಿ ಕೇಂದ್ರೀಯ ಭದ್ರತಾ ಪಡೆ ಇ.ಡಿ. ಅಧಿಕಾರಿಗಳಿಗೆ ಭದ್ರತೆ ಒದಗಿಸಿದೆ. ದಾಳಿಗೆ ಒಳಗಾದವರಲ್ಲಿ ಹಲವರು ರಫ್ತು ಉದ್ಯಮದಲ್ಲೂ ತೊಡಗಿಕೊಂಡಿದ್ದು, ಯಾವ ರೀತಿಯ ವ್ಯವಹಾರ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಜಹಾನ್‌ಗೆ ಇ.ಡಿ. 4 ಬಾರಿ ಸಮನ್ಸ್ ಜಾರಿ ಮಾಡಿದ್ದು, ಆತ ವಿಚಾರಣೆಗೆ ಹಾಜರಾಗಿಲ್ಲ.
ಮಾ.6ಕ್ಕೆ ಬಂಗಾಳಕ್ಕೆ ಮೋದಿ: ಟಿಎಂಸಿ ನಾಯಕರಿಂದ ಬುಡಕಟ್ಟು ಸಮುದಾಯದ ಜನರ ಭೂಕಬಳಿಕೆ ಮತ್ತು ಹಿಂದೂ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಭಾರೀ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳಕ್ಕೆ ಮಾ.6ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.
ಸರ್ಕಾರ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಇದೇ ವೇಳೆ ಭೂಕಬಳಿಕೆ ಮತ್ತು ಅತ್ಯಾಚಾರ ಸಂತ್ರಸ್ತರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಮೋದಿ ಮಾ.6ರಂದು ಬರಸಾತ್‌ನಲ್ಲಿ ಮಹಿಳಾ ರ್‍ಯಾಲಿ ಉದ್ದೇಶಿಸಿ ಮಾತನಾಡಲಿದ್ದು, ಅದು ಕೂಡಾ ಸಂದೇಶ್‌ಖಾಲಿ ವ್ಯಾಪ್ತಿಗೆ ಬರುತ್ತದೆ. ಟಿಎಂಸಿ ನಾಯಕ ಶಹಜಹಾನ್‌ನ ಬೆಂಬಲಿಗರಿಂದ ನಡೆದಿರುವ ಈ ದುಷ್ಕೃತ್ಯದ ವಿರುದ್ಧ ಹಾಲಿ ಅಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದೆ.