ನೂತನ ಸಿಜೆಐ ಆಗಿ ನ್ಯಾ ಬೋಬ್ಡೆ ನೇಮಕ; ನ.18 ಕ್ಕೆ ಪ್ರತಿಜ್ಞಾ ವಿಧಿ

By Kannadaprabha NewsFirst Published Oct 30, 2019, 12:18 PM IST
Highlights

ಸುಪ್ರೀಂಕೋರ್ಟ್‌ನ 47ನೇ ಮುಖ್ಯ ನ್ಯಾಯಾಧೀಶರಾಗಿ ಶರದ್‌ ಅರವಿಂದ ಬೋಬ್ಡೆ ನೇಮಕ | ನ.18 ರಂದು ಪ್ರಮಾಣ ವಚನ ಸ್ವೀಕಾರ | 2021 ಏ.23 ರವರೆಗೆ 17 ತಿಂಗಳ ಕಾಲ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ನವದೆಹಲಿ (ಅ. 30): ನ್ಯಾ. ಶರದ್‌ ಅರವಿಂದ ಬೋಬ್ಡೆ ಸುಪ್ರೀಂಕೋರ್ಟ್‌ನ 47ನೇ ಮುಖ್ಯ ನ್ಯಾಯಾಧೀಶರಾಗಿ ಮಂಗಳವಾರ ನೇಮಕಗೊಂಡಿದ್ದಾರೆ. ಹಾಲಿ ಸಿಜೆಐ ನ್ಯಾ ರಂಜನ್‌ ಗೊಗೋಯ್‌ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನವನ್ನು ನ.18ರಂದು ಬೋಬ್ಡೆ (63) ತುಂಬಲಿದ್ದು, 2021 ಏ.23ರವರೆಗೆ 17 ತಿಂಗಳ ಕಾಲ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ನ್ಯಾ. ಬೋಬ್ಡೆ ಅವರ ನೇಮಕ ಅಧಿಸೂಚನೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಸಹಿ ಮಾಡಿ ಕಾನೂನು ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಖ್ಯಾತ ವಕೀಲ ಅರವಿಂದ್‌ ಶ್ರೀನಿವಾಸ್‌ ಬೋಬ್ಡೆ ಅವರ ಪುತ್ರನಾಗಿರುವ ನ್ಯಾ. ಬೋಬ್ಡೆ ಅವರ ಹೆಸರನ್ನು ಹಿರಿತನದ ಆಧಾರದ ಮೇಲೆ ನ್ಯಾ. ಗೊಗೋಯ್‌ ಅವರು ಕಳೆದ ತಿಂಗಳು ಸಿಜೆಐ ಹುದ್ದೆಗೆ ಶಿಫಾರಸು ಮಾಡಿದ್ದರು.

ಯಾರಿವರು ನ್ಯಾ ಬೋಬ್ಡೆ?

ಮಹಾರಾಷ್ಟ್ರದ ವಕೀಲ ಕುಟುಂಬವೊಂದರಲ್ಲಿ 1956 ಏ.24ರಂದು ಜನಿಸಿದ ಬೋಬ್ಡೆ , ನಾಗ್ಪುರ ವಿಶ್ವ ವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಪಡೆದಿದ್ದರು. 1978ರಲ್ಲಿ ಮಹಾರಾಷ್ಟ್ರ ಬಾರ್‌ ಕೌನ್ಸಿಲ್‌ನಲ್ಲಿ ವಕೀಲರಾಗಿ ನೇಮಕಗೊಂಡಿದ್ದರು. ಬಳಿಕ 1998ರಲ್ಲಿ ಹಿರಿಯ ವಕೀಲರಾಗಿ ಕಾರ್ಯನಿರ್ವಹಿಸಿದ್ದರು. 2000 ಮಾ.29ರಂದು ಬಾಂಬೆ ಹೈಕೋರ್ಟ್‌ಗೆ ಬಡ್ತಿ ಹೊಂದಿದ್ದರು. 2013 ಏ.12ರಂದು ಸುಪ್ರೀಂಕೋರ್ಟ್‌ ನ್ಯಾಯಾಧೀಶರಾಗಿ ಬಡ್ತಿ ಪಡೆದಿದ್ದರು.

2017ರಲ್ಲಿ ಖಾಸಗಿತನ ವ್ಯಕ್ತಿಯ ಮೂಲಭೂತ ಹಕ್ಕು ಎಂದು ತೀರ್ಪು ನೀಡಿದ ಸುಪ್ರೀಂಕೋರ್ಟ್‌ನ 9 ಸದಸ್ಯರ ಪೀಠದ ಸದಸ್ಯರಾಗಿದ್ದರು. ಅಯೋಧ್ಯಾ ಪ್ರಕರಣದ ವಿಚಾರಣೆ ನಡೆಸುತ್ತಿರುವ 5 ಪಂಚ ಸದಸ್ಯ ಪೀಠದಲ್ಲಿಯೂ ಬೋಬ್ಡೆ ಇದ್ದು, ನ.15ರಂದು ತೀರ್ಪು ಹೊರ ಬೀಳುವ ನಿರೀಕ್ಷೆ ಇದೆ.

"

click me!