
ಕೀವ್(ಏ.19): ಪಶ್ಚಿಮ ಉಕ್ರೇನಿನ ಬೃಹತ್ ನಗರಗಳ ಮೇಲೆ ರಷ್ಯಾ ತನ್ನ ಕ್ಷಿಪಣಿ ಮತ್ತು ಶೆಲ್ ದಾಳಿಯನ್ನು ಮತ್ತಷ್ಟುತೀವ್ರಗೊಳಿಸಿದೆ. ಸೋಮವಾರ ಉಕ್ರೇನ್‌ನ ಪ್ರಮುಖ ನಗರ ಲಿವಿವ್ ಗುರಿಯಾಗಿಸಿಕೊಂಡು ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. ಕ್ಷಿಪಣಿಗಳ ಸ್ಫೋಟದ ತೀವ್ರತೆಗೆ ಲಿವಿವ್‌ನಾದ್ಯಂತ ದಟ್ಟಹೊಗೆ ಆವರಿಸಿದೆ. ಇನ್ನು ಖಾರ್ಕೀವ್‌ನಲ್ಲಿ ರಷ್ಯಾ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ 3 ಮಂದಿ ಸಾವಿಗೀಡಾಗಿದ್ದಾರೆ. ದಾಳಿ ತೀವ್ರತೆಗೆ ನಗರಗಳ ಅಪಾರ್ಚ್‌ಮೆಂಟ್ ಮತ್ತು ಕಟ್ಟಡಗಳು ಧ್ವಂಸಗೊಂಡಿದ್ದು, ರಸ್ತೆಗಳು ಒಡೆದ ಗಾಜು ಮತ್ತಿತರ ಅವಶೇಷಗಳಿಂದ ತುಂಬಿ ಹೋಗಿವೆ.
ರಷ್ಯಾ ಪಡೆಗಳು ನಾಗರಿಕರನ್ನು ಸ್ಥಳಾಂತರಿಸುವ ಕಾರಿಡಾರ್‌ಗಳನ್ನು ಗುರಿಯಾಗಿಸಿಕೊಂಡಿವೆ. ಹಾಗಾಗಿ 2ನೇ ದಿನದ ಸ್ಥಳಾಂತರ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಈ ಮಧ್ಯೆ ಶಸ್ತ್ರಾಸ್ತ್ರ ಫ್ಯಾಕ್ಟರಿ, ರೈಲ್ವೆ ಮತ್ತಿತರ ಮೂಲಭೂತ ಸೌಕರ‍್ಯಗಳನ್ನು ಗುರಿಯಾಗಿಸಿಕೊಡು ರಷ್ಯಾ ತನ್ನ ದಾಳಿಯನ್ನು ಇನ್ನಷ್ಟುತೀವ್ರಗೊಳಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಶರಣಾಗತಿ ಆಗಲ್ಲ: ರಷ್ಯಾ ಪಡೆಗಳು ನಡೆಸುತ್ತಿರುವ ತೀವ್ರ ದಾಳಿಗೆ ಉಕ್ರೇನಿನ ಬಂದರು ನಗರಿ ಮರಿಯುಪೋಲ್ ಸಂಪೂರ್ಣ ತತ್ತರಿಸಿದೆ. ಆದಾಗ್ಯೂ ಕೊನೆಯವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಅಧ್ಯಕ್ಷ ಜೆಲೆನ್‌ಸ್ಕಿ ಪ್ರತಿಜ್ಞೆ ಮಾಡಿದ್ದಾರೆ. ಈ ಮೂಲಕ ಶರಣಾಗತಿಗೆ ಗಡುವು ನೀಡಿದ್ದ ರಷ್ಯಾದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ತನ್ನ ನಿಯಂತ್ರಣದಲ್ಲಿರುವ ಪ್ರದೇಶದ ಜನರನ್ನು ರಷ್ಯಾ ಅಪಹರಿಸುತ್ತಿವೆ ಮತ್ತು ಅವರಿಗೆ ಚಿತ್ರ ಹಿಂಸೆ ನೀಡುತ್ತಿವೆ ಎಂದು ಜೆಲೆನ್‌ಸ್ಕಿ ಆರೋಪಿಸಿದ್ದಾರೆ.
ರಷ್ಯಾಗೆ ಸಿರಿಯಾ ಸೈನಿಕರ ಬೆಂಬಲ
ಉಕ್ರೇನ್ ಮೇಲೆ ತೀವ್ರ ದಾಳಿ ನಡೆಸುತ್ತಿರುವ ರಷ್ಯಾ ಪಡೆಗಳಿಗೆ ಸಿರಿಯಾ ಸೈನಿಕರೂ ಬೆಂಬಲ ನೀಡಿದ್ದಾರೆ ಎಂದು ವರದಿಯಾಗಿದೆ. ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹಲವು ವರ್ಷಗಳ ಕಾಲ ಹೋರಾಡಿದ್ದ, ರಷ್ಯಾದಿಂದ ತರಬೇತಿ ಪಡೆದ ನೂರಾರು ಸಿರಿಯಾ ಸೈನಿಕರು, ಮಾಜಿ ಬಂಡುಕೋರರು ಮತ್ತು ಅನುಭವಿ ಹೋರಾಟಗಾರರು ರಷ್ಯಾ ಪಡೆ ಸೇರ್ಪಡೆಗೆ ಸಹಿ ಮಾಡಿದ್ದಾರೆ. ಈ ಪೈಕಿ ಸಿರಿಯಾದಲ್ಲಿ ಬಂಡುಕೋರರನ್ನು ಹುಟ್ಟಡಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜ| ಸುಹೇಲ್ ಅಲ್-ಹಸನ್ ನೇತೃತ್ವದ ಹೋರಾಟಗಾರರ ಪಡೆಯೂ ಇದೆ ಎನ್ನಲಾಗುತ್ತಿದೆ. ಈವರೆಗೆ 40,000 ಜನರು ನೋಂದಣಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈವರೆಗೆ ಸಣ್ಣ ಸಂಖ್ಯೆಯ ಸಿರಿಯಾ ಪಡೆ ಮಾತ್ರ ರಷ್ಯಾಗೆ ಆಗಮಿಸಿದೆ. ಆದರೆ ಪೂರ್ವ ಉಕ್ರೇನಿನ ಮೇಲೆ ಪೂರ್ಣಪ್ರಮಾಣದ ದಾಳಿ ನಡೆಸಲು ರಷ್ಯಾ ತಯಾರಿ ನಡೆಸುತ್ತಿರುವುದರಿಂದ ಮುಂದಿನ ವಾರದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆ ಸಿರಿಯಾ ಸೈನಿಕರು ರಷ್ಯಾ ಪಡೆ ಸೇರ್ಪಡೆಯಾಗಬಹುದು ಎಂದು ಅಂದಾಜಿಸಲಾಗಿದೆ.
2017ರಲ್ಲಿ ಸಿರಿಯಾಗೆ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜ| ಸುಹೇಲ್ ಅವರನ್ನು ಹೊಗಳಿದ್ದರು. ಮತ್ತು ರಷ್ಯಾದ ಪಡೆಗಳೊಂದಿಗಿನ ಸಹಕಾರವು ಭವಿಷ್ಯದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ