ಕಲ್ಲಿದ್ದಲು ದಾಸ್ತಾನು ಕೊರತೆ: 12 ರಾಜ್ಯಗಳಲ್ಲಿ ವಿದ್ಯುತ್‌ ಕ್ಷಾಮ ಭೀತಿ

Published : Apr 19, 2022, 07:48 AM IST
ಕಲ್ಲಿದ್ದಲು ದಾಸ್ತಾನು ಕೊರತೆ: 12 ರಾಜ್ಯಗಳಲ್ಲಿ ವಿದ್ಯುತ್‌ ಕ್ಷಾಮ ಭೀತಿ

ಸಾರಾಂಶ

* ಕಲ್ಲಿದ್ದಲು ದಾಸ್ತಾನು ಕುಸಿತವಾಗಿದ್ದು, ಥರ್ಮಲ್‌ ವಿದ್ಯುತ್‌ ಘಟಕಗಳ ಕೆಲಸ ಕುಂಠಿತ * 12 ರಾಜ್ಯಗಳಲ್ಲಿ ವಿದ್ಯುತ್‌ ಬಿಕ್ಕಟ್ಟು ಎದುರಾಗಬಹುದು * ಅಖಿಲ ಭಾರತ ಎಂಜಿನಿಯರ್ಸ್‌ ಫೆಡರೇಷನ್‌ (ಎಐಪಿಇಇ) ಎಚ್ಚರಿಕೆ 

ನವದೆಹಲಿ(ಏ.19): ಕಲ್ಲಿದ್ದಲು ದಾಸ್ತಾನು ಕುಸಿತವಾಗಿದ್ದು, ಥರ್ಮಲ್‌ ವಿದ್ಯುತ್‌ ಘಟಕಗಳ ಕೆಲಸ ಕುಂಠಿತಗೊಂಡಿದೆ. ಹೀಗಾಗಿ 12 ರಾಜ್ಯಗಳಲ್ಲಿ ವಿದ್ಯುತ್‌ ಬಿಕ್ಕಟ್ಟು ಎದುರಾಗಬಹುದು ಎಂದು ಅಖಿಲ ಭಾರತ ಎಂಜಿನಿಯರ್ಸ್‌ ಫೆಡರೇಷನ್‌ (ಎಐಪಿಇಇ) ಎಚ್ಚರಿಕೆ ನೀಡಿದೆ.

2022ರ ಏಪ್ರಿಲ್‌ ಮೊದಲರ್ಧ ಭಾಗದಲ್ಲಿ ದೇಶೀಯ ವಿದ್ಯುತ್‌ ಬೇಡಿಕೆ 38 ವರ್ಷದ ಗರಿಷ್ಠಕ್ಕೆ ಮುಟ್ಟಿದೆ. ಅಕ್ಟೋಬರ್‌ 2021ರಲ್ಲಿ ಕಲ್ಲಿದ್ದಲು ಕೊರತೆ ಶೇ.1.1ರಷ್ಟಿತ್ತು. ಅದು 2022ರ ಏಪ್ರಿಲ್‌ನಲ್ಲಿ ಶೇ.1.4ಕ್ಕೆ ಏರಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್‌, ಪಂಜಾಬ್‌, ಜಾರ್ಖಂಡ್‌ ಹಾಗೂ ಹರಾರ‍ಯಣದಂಥ ರಾಜ್ಯಗಳಲ್ಲಿ ವಿದ್ಯುತ್‌ ಕಡಿತವಾಗುತ್ತಿದೆ. ಉತ್ತರಪ್ರದೇಶದಲ್ಲಿ ಬೇಡಿಕೆ 21000 ಮೆಗಾವ್ಯಾಟ್‌ ತಲುಪಿದ್ದರೆ, ಪೂರೈಕೆ 19000-20000 ಮೆಗಾವ್ಯಾಟ್‌ನಷ್ಟಿದೆ. ಹೀಗಾಗಿ ಥರ್ಮಲ್‌ ಘಟಕಕ್ಕೆ ಕಲ್ಲಿದ್ದಲು ಪೂರೈಕೆ ಚುರುಕುಗೊಳಿಸಿ ಬಿಕ್ಕಟ್ಟು ಪರಿಹರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಫೆಡರೇಷನ್‌ ಆಗ್ರಹಿಸಿದೆ.

ಕಳೆದ ವರ್ಷ ಸುರಿದ ಭಾರೀ ಮಳೆ, ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಿದ ಪರಿಣಾಮ ದರ ಏರಿಕೆ ಮೊದಲಾದ ಕಾರಣಗಳಿಂದಾಗಿ ದೇಶದ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಸಂಗ್ರಹ ಕಳೆದೊಂದು ವರ್ಷದಿಂದ ಭಾರೀ ಪ್ರಮಾಣದಲ್ಲಿ ಕುಸಿದಿದೆ.

ರಾಜ್ಯದಲ್ಲಿ ತೀವ್ರ ವಿದ್ಯುತ್‌ ಕ್ಷಾಮ

 ತೀವ್ರ ಕಲ್ಲಿದ್ದಲಿನ ಕೊರತೆಯಿಂದಾಗಿ ಶನಿವಾರ ಹಾಗೂ ಭಾನುವಾರ ಆರು ಶಾಖೋತ್ಪನ್ನ ವಿದ್ಯುತ್‌ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಂಡಿತ್ತು. ಪರಿಣಾಮ ವಿದ್ಯುತ್‌ ಪೂರೈಕೆಯಲ್ಲಿ ಸಾಕಷ್ಟುವ್ಯತ್ಯಯವಾಗಿದ್ದು, ರಾಜ್ಯಾದ್ಯಂತ ಕಳೆದ ಎರಡು ದಿನಗಳಿಂದ ತೀವ್ರ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ.

ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳಲ್ಲಿನ ಉತ್ಪಾದನೆ 6220 ಮೆ.ವ್ಯಾ.ನಿಂದ 1915 ಮೆ.ವ್ಯಾಗೆ ಕುಸಿದಿದೆ. ಇದೇ ವೇಳೆ, ಬೇಸಿಗೆ ಹಿನ್ನೆಲೆಯಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗಿದ್ದರೂ, ಒಟ್ಟಾರೆ ಎಲ್ಲ ಮೂಲಗಳಿಂದ ಪೂರೈಕೆ ಆಗುತ್ತಿದ್ದ ವಿದ್ಯುತ್‌ ನಿತ್ಯದ ಸರಾಸರಿ 14,000 ಮೆ.ವ್ಯಾಟ್‌ನಿಂದ 11,550 ಮೆ.ವ್ಯಾಟ್‌ಗೆ (ಗರಿಷ್ಠ) ಶನಿವಾರ ಕುಸಿದಿದೆ. ಭಾನುವಾರ ಈ ಪ್ರಮಾಣ ಮತ್ತಷ್ಟುಕಡಿಮೆಯಾಗಿ 9,918 ಮೆ.ವ್ಯಾಟ್‌ಗೆ (ಗರಿಷ್ಠ) ಕುಸಿದಿದೆ. ಪರಿಣಾಮ, ಮಳೆಯ ನೆಪದಲ್ಲಿ ರಾಜ್ಯಾದ್ಯಂತ ತೀವ್ರ ವಿದ್ಯುತ್‌ ಕಡಿತ ಆರಂಭವಾಗಿದೆ ಎನ್ನಲಾಗಿದೆ.

ರಾಜ್ಯದ ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳಲ್ಲಿ ಕಲ್ಲಿದ್ದಲು ತಳಕಚ್ಚಿದೆ. ಕಲ್ಲಿದ್ದಲು ಗಣಿಗಳಿಂದ ರೇಕ್‌ಗಳಲ್ಲಿ ಸಾಗಣೆಯಾಗುವ ಕಲ್ಲಿದ್ದಲಿಗೆ ಕಾದು ಕುಳಿತು ನಂತರ ಬಳಕೆ ಮಾಡುವಂತಾಗಿದ್ದು, ಎರಡು ದಿನಗಳಿಗೆ ಆಗುವಷ್ಟೂಕಲ್ಲಿದ್ದಲು ಸಹ ಶೇಖರಣೆಯಿಲ್ಲ.

ಕಲ್ಲಿದ್ದಲು ಕೊರತೆಯಿಂದ ಬಳ್ಳಾರಿಯ ಕುಡುತಿನಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ ಒಂದು ಘಟಕ, ರಾಯಚೂರಿನ ಶಕ್ತಿನಗರದ (ಆರ್‌ಟಿಪಿಎಸ್‌) ಕೇಂದ್ರದಲ್ಲಿ ಮೂರು ಘಟಕ, ಉಡುಪಿಯ ಯುಪಿಸಿಎಲ್‌ (ಅದಾನಿ) ಕೇಂದ್ರದ ಎರಡೂ ಘಟಕ ಸ್ಥಗಿತಗೊಂಡಿದ್ದವು. ಪರಿಣಾಮ ಒಟ್ಟು 6,220 ಮೆ.ವ್ಯಾಟ್‌ ವಿದ್ಯುತ್‌ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್‌ ಘಟಕಗಳಲ್ಲಿ ಕೇವಲ ಗರಿಷ್ಠ 2,365 ಮೆ.ವ್ಯಾಟ್‌ ವಿದ್ಯುತ್‌ ಮಾತ್ರ ಶನಿವಾರ ಉತ್ಪಾದನೆಯಾಗಿದೆ. ಇನ್ನು ಭಾನುವಾರ ಆರ್‌ಟಿಪಿಎಸ್‌ನ 3 ಘಟಕ (2,6,7ನೇ ಘಟಕ), ಬಿಟಿಪಿಎಸ್‌ನ 1 ಘಟಕ, ಉಡುಪಿಯ ಯುಪಿಸಿಎಲ್‌ (ಅದಾನಿ​​) ಕೇಂದ್ರದ ಎರಡೂ ಘಟಕ ಸ್ಥಗಿತಗೊಂಡಿದ್ದವು. ಹೀಗಾಗಿ ಭಾನುವಾರ ಈ ಪ್ರಮಾಣ 1,915 ಮೆ.ವ್ಯಾಟ್‌ಗೆ ಕುಸಿದಿದೆ.

ವಿದ್ಯುತ್‌ ಉತ್ಪಾದನೆ ತೀವ್ರ ಕುಸಿತ:

ಆರ್‌ಟಿಪಿಎಸ್‌ನ ಎಂಟು ಘಟಕಗಳಿಗೆ 1,720 ಮೆ.ವ್ಯಾಟ್‌ ಉತ್ಪಾದನೆ ಸಾಮರ್ಥ್ಯವಿದೆ. ಮೊದಲೇ 5 ಘಟಕಗಳಿಂದ ಮಾತ್ರ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದ ಕೇಂದ್ರದಲ್ಲಿ ಶನಿವಾರ ಹಾಗೂ ಭಾನುವಾರ 2, 6 ಮತ್ತು 7ನೇ ಘಟಕವನ್ನು ಕಲ್ಲಿದ್ದಲು ಕೊರತೆಯಿಂದ ಸ್ಥಗಿತಗೊಳಿಸಲಾಗಿತ್ತು. ಪರಿಣಾಮ ಭಾನುವಾರ 454 ಮೆ.ವ್ಯಾಟ್‌ (ಗರಿಷ್ಠ ಲೋಡ್‌) ವಿದ್ಯುತ್‌ ಉತ್ಪಾದನೆಯಾಗಿದೆ.

ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದಲ್ಲಿ ಎರಡು ಘಟಕಗಳಿಂದ 1,600 ಮೆ.ವ್ಯಾಟ್‌. ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವಿದ್ದರೂ 810 ಮೆ.ವ್ಯಾಟ್‌ ಮಾತ್ರ ಉತ್ಪಾದನೆಯಾಗಿದ್ದು, ಬಳ್ಳಾರಿಯ ಬಿಟಿಪಿಎಸ್‌ನ 3 ಘಟಕಗಳಿಂದ 1,700 ಮೆ.ವ್ಯಾಟ್‌ ಉತ್ಪಾದನೆ ಸಾಮರ್ಥ್ಯವಿದ್ದರೂ ಗರಿಷ್ಠ 651 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗಿದೆ. ಇದರಿಂದ ತೀವ್ರ ವಿದ್ಯುತ್‌ ಕೊರತೆ ಉಂಟಾಗಿದೆ.

ಸಾಮರ್ಥ್ಯದ 3ನೇ 1 ಭಾಗದಷ್ಟೂಪೂರೈಕೆಯಿಲ್ಲ:

ರಾಜ್ಯದ ವಿವಿಧ ಯೋಜನೆಗಳಲ್ಲಿ 8,852 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿದ್ದರೂ ಶನಿವಾರ 4,755 ಗರಿಷ್ಠ ಹಾಗೂ 2,738 ಮೆ.ವ್ಯಾಟ್‌ ಕನಿಷ್ಠ ವಿದ್ಯುತ್‌ ಮಾತ್ರ ಉತ್ಪಾದನೆಯಾಗಿದೆ. ಭಾನುವಾರ ಗರಿಷ್ಠ ಉತ್ಪಾದನೆಯೂ 2,988 ಮೆ.ವ್ಯಾಟ್‌ಗೆ ಕುಸಿದಿದೆ.

ಕೇಂದ್ರದ ಮೂಲಗಳಿಂದ 15,479 ಮೆ.ವ್ಯಾಟ್‌ ಪೂರೈಕೆ ಸಾಮರ್ಥ್ಯವಿದ್ದರೂ ಶನಿವಾರ ಕೇವಲ 3,533 ಮೆ.ವ್ಯಾಟ್‌ ಗರಿಷ್ಠ ಹಾಗೂ 2,175 ಮೆ.ವ್ಯಾಟ್‌ ಕನಿಷ್ಠ, ಭಾನುವಾರ 4,541 ಮೆ.ವ್ಯಾಟ್‌ ಗರಿಷ್ಠ 1,529 ಮೆ.ವ್ಯಾಟ್‌ ಕನಿಷ್ಠ ವಿದ್ಯುತ್‌ ಪೂರೈಕೆಯಾಗಿದೆ. ಇತರೆ ಎಕ್ಸ್‌ಚೇಂಜ್‌ಗಳಾದ ಜಿಂದಾಲ್‌ನಿಂದಲೂ ಕಡಿಮೆ ವಿದ್ಯುತ್‌ ಪೂರೈಕೆಯಾಗಿದ್ದು, ಒಟ್ಟು 31,393 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿರುವ ರಾಜ್ಯದಲ್ಲಿ ಕೇವಲ ಮೂರನೇ ಒಂದು ಭಾಗದಷ್ಟೂವಿದ್ಯುತ್‌ ಪೂರೈಕೆಯಾಗಿಲ್ಲ. ಇದರಿಂದಲೇ ಸಮಸ್ಯೆ ಉಂಟಾಗುತ್ತಿದೆ ಎಂದು ಎಸ್ಕಾಂಗಳು ದೂರಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಾಕ್ ಹೋಗಿದ್ದ 79 ವರ್ಷದ ಅಜ್ಜಿ ನಾಪತ್ತೆ: ನೆಕ್ಲೇಸ್‌ಗೆ ಮೊಮ್ಮಗ ಅಳವಡಿಸಿದ ಜಿಪಿಎಸ್‌ನಿಂದ ಪತ್ತೆ
ಯಾವ ಭಯವೂ ಇಲ್ಲದೆ ಬೇಲಿ ಹಾರಿ ಭಾರತ ಪ್ರವೇಶಿಸುತ್ತಿದ್ದಾರೆ ಬಾಂಗ್ಲಾದೇಶಿಗಳು, ವಿಡಿಯೋ ವೈರಲ್