
ನವದೆಹಲಿ(ಆ.14): ಕೊರೋನಾ ವೈರಸ್‌ಗೆ ತರಾತುರಿಯಲ್ಲಿ ಲಸಿಕೆ ಬಿಡುಗಡೆ ಮಾಡಿರುವ ರಷ್ಯಾ ಈಗ ಆ ಲಸಿಕೆಯನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಲು ಭಾರಿ ಕಸರತ್ತು ಆರಂಭಿಸಿದೆ.
ಭಾರತ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳು ನಮ್ಮ ‘ಸ್ಪುಟ್ನಿಕ್ 5’ ಲಸಿಕೆಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿವೆ ಎಂದು ರಷ್ಯಾ ಹೇಳಿಕೊಂಡಿದ್ದು, ಈ ದೇಶಗಳಲ್ಲಿ 3ನೇ ಹಂತದ ಪ್ರಯೋಗ ನಡೆಸುವುದಾಗಿ ತಿಳಿಸಿದೆ. ಆದರೆ, ಭಾರತದ ಆರೋಗ್ಯ ಸಚಿವಾಲಯ ಹಾಗೂ ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧಿಕಾರಿಗಳು ನಾವು ಈ ವಿಷಯದಲ್ಲಿ ರಷ್ಯಾ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಷ್ಯಾದ ಗಾಮಾಲೇಯ ರೀಸರ್ಚ್ ಇನ್‌ಸ್ಟಿಟ್ಯೂಟ್ ಹಾಗೂ ರಕ್ಷಣಾ ಸಚಿವಾಲಯ ಜಂಟಿಯಾಗಿ ಕೊರೋನಾ ವೈರಸ್‌ಗೆ ಜಗತ್ತಿನಲ್ಲೇ ಮೊದಲನೆಯದು ಎನ್ನಲಾದ ‘ಸ್ಪುಟ್ನಿಕ್ 5’ ಎಂಬ ಇಂಜೆಕ್ಷನ್ ಅನ್ನು ಮಂಗಳವಾರ ಬಿಡುಗಡೆ ಮಾಡಿವೆ. ಆದರೆ, 3ನೇ ಹಂತದ ಪ್ರಯೋಗವನ್ನೇ ಸರಿಯಾಗಿ ನಡೆಸದೆ ಈ ಲಸಿಕೆ ಬಿಡುಗಡೆ ಮಾಡಲಾಗಿದೆ ಎಂದು ಜಗತ್ತಿನೆಲ್ಲೆಡೆಯಿಂದ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ತನ್ನ ಲಸಿಕೆಯ 3ನೇ ಹಂತದ ಪ್ರಯೋಗ ನಡೆಸಲು ರಷ್ಯಾ ಮುಂದಾಗಿದೆ.
ಅದರಂತೆ ‘ಸ್ಪುಟ್ನಿಕ್ 5’ ಲಸಿಕೆಯ ಕುರಿತಾದ ವೆಬ್‌ಸೈಟಿನಲ್ಲಿ ‘ಸೌದಿ ಅರೇಬಿಯಾ, ಯುಎಇ, ಬ್ರೆಜಿಲ್, ಭಾರತ ಹಾಗೂ ಫಿಲಿಪ್ಪೀನ್ಸ್ ಸೇರಿದಂತೆ ವಿವಿಧ ದೇಶಗಳಲ್ಲಿ ಕೊರೋನಾ ಲಸಿಕೆಯ 3ನೇ ಹಂತದ ಪ್ರಯೋಗ ನಡೆಸಲು ರಷ್ಯಾ ಯೋಜನೆ ರೂಪಿಸಿದೆ’ ಎಂದು ಬರೆಯಲಾಗಿದೆ. ಇನ್ನು, ಈ ಲಸಿಕೆಯನ್ನು ಅಭಿವೃದ್ಧಿಪಡಿಸಲು ಬಂಡವಾಳ ಹೂಡಿರುವ ರಷ್ಯಾದ ಸರ್ಕಾರಿ ಸ್ವಾಮ್ಯದ ಆರ್‌ಡಿಐಎಫ್ ಸಂಸ್ಥೆ ಕೂಡ ತಾನು ಭಾರತ, ದಕ್ಷಿಣ ಕೊರಿಯಾ, ಬ್ರೆಜಿಲ್, ಸೌದಿ ಅರೇಬಿಯಾ, ಟರ್ಕಿ ಮತ್ತು ಕ್ಯೂಬಾ ದೇಶಗಳಲ್ಲಿ ಅಲ್ಲಿನ ಸರ್ಕಾರಿ ಹೂಡಿಕೆ ಸಂಸ್ಥೆಗಳ ಜೊತೆ ಸೇರಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಗೆ ಯೋಜನೆ ರೂಪಿಸಿರುವುದಾಗಿ ಹೇಳಿಕೊಂಡಿದೆ.
ಗುರುವಾರ ದೇಶದಲ್ಲಿ ದಾಖಲೆಯ 69612 ಕೊರೋನಾ ಕೇಸ್, 1010 ಸಾವು..!
ಆದರೆ, ಭಾರತದ ಆರೋಗ್ಯ ಸಚಿವಾಲಯ ಮತ್ತು ಐಸಿಎಂಆರ್‌ನ ಉನ್ನತ ಅಧಿಕಾರಿಗಳು ಇಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ರಷ್ಯಾದ ಲಸಿಕೆಗೆ ಸಂಬಂಧಿಸಿದ 1 ಮತ್ತು 2ನೇ ಹಂತದ ಪ್ರಯೋಗದ ದತ್ತಾಂಶಗಳೇ ನಮಗೆ ಇನ್ನೂ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ.
ಇನ್ನು, ಹೈದರಾಬಾದ್‌ನಲ್ಲಿರುವ ಭಾರತ್ ಬಯೋಟೆಕ್ ಕಂಪನಿಯಲ್ಲಿ ಸ್ಪುಟ್ನಿಕ್ 5 ಇಂಜೆಕ್ಷನ್ ಉತ್ಪಾದಿಸಲು ರಷ್ಯಾ ಆಸಕ್ತಿ ತೋರಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಭಾರತ್ ಬಯೋಟೆಕ್ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ