ಬಡತನದ ರಾಕ್ಷಸನನ್ನು ಸಂಹರಿಸುವುದು ಅಗತ್ಯವಾಗಿದೆ. 20 ಕೋಟಿ ಜನರು ಬಡತನ ರೇಖೆಯ ಅಡಿಯಲ್ಲಿ ಬದುಕುತ್ತಿದ್ದಾರೆ ಎಂಬುದು ನೋವಿನ ಸಂಗತಿ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಕೇಂದ್ರ ಬಿಜೆಪಿ ಸರ್ಕಾರದ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಬಡತನ, ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆಯ ವಿಷಯದಲ್ಲಿ ದೇಶದ ರಿಪೋರ್ಟ್ ಕಾರ್ಡ್ ಅನ್ನು ನೀಡಿದೆ. ಹಾಗೂ, ಈ ವಿಚಾರಗಳಲ್ಲಿ ಪ್ರತಿಪಕ್ಷಗಳು ಮೋದಿ ಸರ್ಕಾರದ ಮೇಲೆ ಆಗಾಗ್ಗೆ ಟೀಕೆ ಮಾಡುತ್ತದೆ ಎಂದೂ ಉಲ್ಲೇಖಿಸಿದೆ. 20 ಕೋಟಿ ಜನರನ್ನು ಒಳಗೊಂಡಿರುವ ಬಡವರ ಸ್ಥಿತಿಯತ್ತ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಗಮನ ಹರಿಸಿದ್ದಾರೆ. ಅಲ್ಲದೆ, ಕಳೆದ ಹಲವು ದಶಕಗಳ ಆರ್ಥಿಕ ನೀತಿಗಳೇ ಈ ಪರಿಸ್ಥಿತಿಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಹಾಗೂ, ಈ ಸವಾಲನ್ನು ಎದುರಿಸಲು ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
RSS ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್ ತನ್ನ ಸ್ವಾವಲಂಬಿ ಭಾರತ ಅಭಿಯಾನ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ದತ್ತಾತ್ರೇಯ ಹೊಸಬಾಳೆ, ಹಲವಾರು ಪ್ರಗತಿಗಳ ಹೊರತಾಗಿಯೂ, ದೇಶವು ಇನ್ನೂ ಕೆಲವು ಕ್ಷೇತ್ರಗಳಲ್ಲಿ ಸವಾಲುಗಳನ್ನು ಎದುರಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ದಸರಾ ಸಮಯದಲ್ಲಿ ಹಾಗೂ ವಿಜಯದಶಮಿಗೆ 3 ದಿನ ಮುನ್ನ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಸಾಂಪ್ರದಾಯಿಕ ಭಾಷಣ ಮಾಡಿದ್ದು, ಅದೇ ಕಾರ್ಯಕ್ರಮದಲ್ಲಿ ದತ್ತಾತ್ರೇಯ ಹೊಸಬಾಳೆ ಅವರು, “ಬಡತನವು ನಮ್ಮ ಮುಂದೆ ರಾಕ್ಷಸನಂತಿರುವ ಸವಾಲು, ಬಡತನದ ರಾಕ್ಷಸನನ್ನು ಸಂಹರಿಸುವುದು ಅಗತ್ಯವಾಗಿದೆ. 20 ಕೋಟಿ ಜನರು ಬಡತನ ರೇಖೆಯ ಅಡಿಯಲ್ಲಿ ಬದುಕುತ್ತಿದ್ದಾರೆ ಎಂಬುದು ನೋವಿನ ಸಂಗತಿ. ನಾನು ಕಂಡುಕೊಂಡ ಇನ್ನೊಂದು ಅಂಕಿ ಅಂಶದ ಪ್ರಕಾರ, 23 ಕೋಟಿಗೂ ಹೆಚ್ಚು ಜನರು ದಿನಕ್ಕೆ ₹ 275 ಕ್ಕಿಂತ ಕಡಿಮೆ ಆದಾಯ ಹೊಂದಿದ್ದಾರೆ ಎಂದೂ ಹೇಳಿದ್ದಾರೆ.
ಇದನ್ನು ಓದಿ: ಬೆಲೆ ಏರಿಕೆಯನ್ನು ನಿಯಂತ್ರಿಸಿ, ರೈತರಿಗೆ ನೆರವಾಗಿ: ಮೋದಿ ಸರ್ಕಾರಕ್ಕೆ ಹೊಸಬಾಳೆ ಸಲಹೆ
ಅಲ್ಲದೆ, ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರು 20 ಕೋಟಿ ಜನರನ್ನು ಒಳಗೊಂಡಿರುವ ಬಡವರನ್ನು ಬಡತನದಿಂದ ಮೇಲೆತ್ತಲು ಯತ್ನಿಸಬೇಕು ಎಂದೂ ಅವರು ಹೇಳಿದರು. ಹಾಗೂ, "ದೇಶದಲ್ಲಿ ನಾಲ್ಕು ಕೋಟಿ ನಿರುದ್ಯೋಗಿಗಳಿದ್ದಾರೆ. ಕಾರ್ಮಿಕ ಬಲದ ಸಮೀಕ್ಷೆಯು ನಮ್ಮಲ್ಲಿ 7.6% ನಿರುದ್ಯೋಗ ದರವಿದೆ ಎಂದು ಹೇಳುತ್ತದೆ" ಎಂದೂ ಅವರು ಹೇಳಿದರು.
ಇನ್ನು, ಬಡತನವನ್ನು ಉಂಟುಮಾಡುವ ಪ್ರತ್ಯೇಕ ಅಂಶಗಳನ್ನು ವಿವರಿಸಿದ ಅವರು - ಉದ್ಯೋಗದ ಕೊರತೆ, ಸರಿಯಾದ ಶಿಕ್ಷಣ, ಕಳಪೆ ಪೋಷಣೆ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆ ಹಾಗೂ ಪರಿಸರ ಸಮಸ್ಯೆಗಳು ಇದಕ್ಕೆ ಕಾರಣ ಎಂದರು. ಅಲ್ಲದೆ, ತಮ್ಮ ಕಾರಣಗಳಿಗೆ ವಿಶ್ವಸಂಸ್ಥೆಯ ಡೇಟಾ ಮತ್ತು ಅಭಿಪ್ರಾಯವನ್ನು ಸಹ ದತ್ತಾತ್ರೇಯ ಹೊಸಬಾಳೆ ಅವರು ಉಲ್ಲೇಖಿಸಿದ್ದಾರೆ. ಹಾಗೂ, "ಅಂತರ್ ಕಲಹ ಸಹ ಬಡತನಕ್ಕೆ ಒಂದು ಕಾರಣ... ಹವಾಮಾನ ಬದಲಾವಣೆಯು ಸಹ ಬಡತನಕ್ಕೆ ಕಾರಣವಾಗಿದೆ. ಮತ್ತು ಕೆಲವು ಸ್ಥಳಗಳಲ್ಲಿ ಸರ್ಕಾರದ ಅಸಮರ್ಥತೆಯು ಕೂಡ ಬಡತನಕ್ಕೆ ಕಾರಣವಾಗಿದೆ’’ ಎಂದೂ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದರು.
ಇದನ್ನೂ ಓದಿ: ದೇಶದ ಎಲ್ಲ ಭಾಗಗಳಿಗೂ RSS ಕಾರ್ಯಚಟುವಟಿಕೆ ವಿಸ್ತಾರ: ದತ್ತಾತ್ರೇಯ ಹೊಸಬಾಳೆ
ಈ ಮಧ್ಯೆ, ಉದ್ಯಮಶೀಲತೆಯ ಅಗತ್ಯದ ಬಗ್ಗೆಯೂ ಹೇಳಿದ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, "ಉದ್ಯೋಗ ಹುಡುಕುವವರಿಗೆ ಉದ್ಯೋಗ ಒದಗಿಸುವವರಾಗಲು ಪ್ರೋತ್ಸಾಹಿಸಬೇಕಾಗಿದೆ" ಎಂದು ಹೇಳಿದರು. ಅಲ್ಲದೆ, "ನಾವು ಉದ್ಯಮಶೀಲತೆಗೆ ವಾತಾವರಣವನ್ನು ನಿರ್ಮಿಸಬೇಕಾಗಿದೆ. ಸಮಾಜವು ಎಲ್ಲಾ ಕೆಲಸಗಳು ಮುಖ್ಯ ಮತ್ತು ಸಮಾನ ಗೌರವವನ್ನು ಪಡೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತೋಟಗಾರನಿಗೆ ಅವನ ಕೆಲಸಕ್ಕೆ ಗೌರವ ಸಿಗದಿದ್ದರೆ, ಯಾರೂ ಆ ಕೆಲಸವನ್ನು ಮಾಡಲು ಬಯಸುವುದಿಲ್ಲ. ಈ ಹಿನ್ನೆಲೆ ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದೂ ಅವರು ಹೇಳಿದರು.