
ಲಖನೌ (ಸೆ.11): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ದೇಣಿಗೆ ಸಂಗ್ರಹಿಸಲೆಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತೆರೆದಿರುವ ಬ್ಯಾಂಕ್ ಖಾತೆಗೆ ದುಷ್ಕರ್ಮಿಗಳು 6 ಲಕ್ಷ ರು. ವಂಚನೆ ಎಸಗಿದ್ದಾರೆ. ಈ ಖಾತೆಯಿಂದ ಅನಾಮಧೇಯ ಖದೀಮರು 2.5 ಲಕ್ಷ ರು. ಹಾಗೂ 3.5 ಲಕ್ಷ ರು.ಗಳ ಎರಡು ನಕಲಿ ಚೆಕ್ ಬಳಸಿ ಹಣ ವಿತ್‌ಡ್ರಾ ಮಾಡಿದ್ದಾರೆ. ಈ ಕುರಿತು ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರೈ ಪೊಲೀಸರಿಗೆ ದೂರು ನೀಡಿದ್ದಾರೆ.
ಖದೀಮರು ಬಳಸಿದ ನಕಲಿ ಚೆಕ್‌ನ ಸೀರಿಯಲ್ ನಂಬರ್ ಇರುವ ಅಸಲಿ ಚೆಕ್‌ಗಳು ಟ್ರಸ್ಟ್ ಬಳಿಯೇ ಇವೆ. ಎರಡು ನಕಲಿ ಚೆಕ್ ಬಳಸಿ ಸೆ.1 ಮತ್ತು 3ರಂದು ಒಟ್ಟು 6 ಲಕ್ಷ ರು. ವಿತ್‌ಡ್ರಾ ಮಾಡಿದ ಖದೀಮರು ಮತ್ತೆ 9.86 ಲಕ್ಷ ರು. ವಿತ್‌ಡ್ರಾ ಮಾಡಲು ಇನ್ನೊಂದು ನಕಲಿ ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದ್ದರು. ಆಗ ಬ್ಯಾಂಕ್‌ನಿಂದ ಚಂಪತ್ ರೈ ಅವರಿಗೆ ವೆರಿಫಿಕೇಶನ್ ಕರೆ ಬಂದಿದೆ. ಅದರಿಂದಾಗಿ ವಂಚನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಕೆಲ ಬ್ಯಾಂಕ್ ಸಿಬ್ಬಂದಿಯೇ ಈ ಅವ್ಯವಹಾರದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ನಕಲಿ ಚೆಕ್‌ಗೆ ಚಂಪತ್ ರೈ ಹಾಗೂ ಟ್ರಸ್ಟ್‌ನ ಸದಸ್ಯರ ಸಹಿ ಫೋರ್ಜರಿ ಮಾಡಲಾಗಿದೆ. ಹಣವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಲಾಗಿದೆ. ಬ್ಯಾಂಕ್‌ನ ನಿರ್ಲಕ್ಷ್ಯದಿಂದ ಈ ವಂಚನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ ಮಂದಿರ ನಕ್ಷೆಗೆ ಗ್ರೀನ್ ಸಿಗ್ನಲ್
ಏತನ್ಮಧ್ಯೆ ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲಾಗುತ್ತಿದ್ದು, ಅದಕ್ಕೆ ರಾಮನ ಹೆಸರಿಡಲು ಚಿಂತಿಸಲಾಗಿದ್ದು, ಇದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಇರಲಿದೆ, ಎನ್ನಲಾಗಿದೆ.
ಮಂಗಳೂರಿನಿಂದ ಅಯೋಧ್ಯೆಗೆ ಹೊಸ ರೈಲಿಗೆ ಬೇಡಿಕೆ
ಮಂಗಳೂರು: ಮಂಗಳೂರು ಸೆಂಟ್ರಲ್‌ನಿಂದ ಅಯೋಧ್ಯೆಗೆ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವ ಕುರಿತು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಂಘವು ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಮನವಿ ಮಾಡಿದೆ.
ಈಗಾಗಲೇ ಅಯೋಧ್ಯೆಯಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ್ದಾರೆ. ಮಂದಿರ ನಿರ್ಮಾಣವಾದ ಬಳಿಕ ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಮಂದಿ ಅಯೋಧ್ಯೆಗೆ ಬರುವ ನಿರೀಕ್ಷೆಯಿದೆ. ಕರಾವಳಿ ಕಡೆಯಿಂದಲೂ ಅಪಾರ ಭಕ್ತರು ತೆರಳಲಿದ್ದಾರೆ. ಹೀಗಾಗಿ ಮಂಗಳೂರಿನಿಂದ ಗೋಕರ್ಣದ ಮೂಲಕ ಅಯೋಧ್ಯೆಗೆ ತೆರಳುವ ಎಕ್ಸ್‌ಪ್ರೆಸ್ ರೈಲೊಂದನ್ನು ಆರಂಭಿಸುವಂತೆ ಮನವಿ ಪತ್ರದಲ್ಲಿ ವಿನಂತಿಸಲಾಗಿದೆ.
ರಾಮ ಮಂದಿರ ಕಾಮಗಾರಿ ಆರಂಭಕ್ಕೆ ತಾಮ್ರ ದಾನ ಕೋರಿದ ಟ್ರಸ್ಟ್
ಪ್ರಸ್ತುತ ಕೇರಳದಿಂದ ಉತ್ತರ ಭಾರತದ ಕಡೆಗೆ ಸಂಚರಿಸುತ್ತಿರುವ ರೈಲುಗಳು ಪ್ರಯಾಣಿಕರಿಂದ ತುಂಬಿರುತ್ತಿದ್ದು, ಇದರಲ್ಲಿ ಪ್ರಯಾಣಿಸಲು ಕರಾವಳಿ ಭಾಗದ ಪ್ರಯಾಣಿಕರಿಗೆ ಟಿಕೆಟ್ ಸಿಗುವುದು ಕಷ್ಟ. ಆದ್ದರಿಂದ ಕರಾವಳಿ ಕರ್ನಾಟಕದಿಂದ ಪ್ರತ್ಯೇಕ ರೈಲನ್ನು ಮಂಗಳೂರಿನಿಂದ ದೆಹಲಿ ಕಡೆಗೆ ಆರಂಭಿಸಿದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.
ಮಂಗಳೂರು ಸೆಂಟ್ರಲ್‌ನಿಂದ ಪಶ್ಚಿಮ ಕರಾವಳಿ ನಗರಗಳಾದ ಉಡುಪಿ, ಮಡಗಾಂವ, ಪನ್ವೆಲ್, ಬರೋಡ, ಅಹ್ಮದಾಬಾದ್, ಅಜ್ಮೈರ್, ದೆಹಲಿ, ಲಕ್ನೋ, ಕಾನ್ಪುರ, ಪ್ರಯಾಗರಾಜ್ ಮುಖಾಂತರ ಅಯೋಧ್ಯೆಗೆ ತೆರಳುವ ರೈಲು ಲಭ್ಯವಾದರೆ ಭಾರತದ ಹಲವು ನಗರಗಳು ಮತ್ತು ರಾಮಾಯಣ ಐತಿಹ್ಯ ಇರುವ ಸ್ಥಳಗಳು ಒಂದೊನ್ನೊಂದು ಸಂಪರ್ಕಿಸಲಿವೆ. ಹೀಗಾಗಿ ಮಂಗಳೂರು ಸೆಂಟ್ರಲ್‌ನಿಂದ ಮಡಗಾಂವ್- ಅಹ್ಮದಾಬಾದ್- ಅಜ್ಮೈರ್- ದೆಹಲಿ- ಲಕ್ನೋ- ಕಾನ್ಪುರ- ಪ್ರಯಾಗರಾಜ್ ಮೂಲಕ ಅಯೋಧ್ಯೆಗೆ ಹೊಸ ಎಕ್ಸ್‌ಪ್ರೆಸ್ ರೈಲು ಆರಂಭಿಸಬೇಕು ಎಂದು ಸಂಘದ ಅಧ್ಯಕ್ಷ ಹನುಮಂತ ಕಾಮತ್ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ