
ನವದೆಹಲಿ (ಜ. 29): ದೇಶದ ಅನೇಕ ನಗರಗಳಲ್ಲಿ ಹಾಗೂ ರಾಜ್ಯಗಳಲ್ಲಿ ಕೊರೋನಾ (Coronavirus) 3ನೇ ಅಲೆ ಇಳಿಮುಖ ಆಗುತ್ತಿರಬಹುದು. ಆದರೆ ಹಾಗಂತ ನಿರಾಳರಾಗುವಂತಿಲ್ಲ. ಅಪಾಯ ಇದ್ದೇ ಇದೆ. ಸೋಂಕು ಹರಡುವಿಕೆ ತಡೆಯತ್ತ ಹಾಗೂ ಪರಿಸ್ಥಿತಿಗೆ ಅನುಗುಣವಾದ ಕ್ರಮಗಳನ್ನು ಕೈಗೊಳ್ಳುವ ಅಗತ್ಯತೆ ಸರ್ಕಾರಕ್ಕೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಡಾ ಪೂನಂ ಖೇತ್ರಪಾಲ್ ಸಿಂಗ್ (WHO Regional director for South East Asia Poonam Khetrapal Singh) ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಶನಿವಾರ ಸಂದರ್ಶನ ನೀಡಿದ ಡಾ ಪೂನಂ, ‘ಈಗ ಯಾವುದೇ ದೇಶದಲ್ಲಿ ಯಾವುದೇ ರೀತಿಯ ಪರಿಸ್ಥಿತಿ ಇರಲಿ, ಅಪಾಯ ಇದ್ದೇ ಇದೆ. ಕೊರೋನಾ ಕಪಿಮುಷ್ಟಿಯಿಂದ ತಾವು ಹೊರಬಂದಿದ್ದೇವೆ ಎಂದು ಬೀಗುವಂತಿಲ್ಲ’ ಎಂದರು. ‘ಇನ್ನು ಮುಂದಿನ ದಿನಗಳಲ್ಲೂ ಹೆಚ್ಚು ಜಾಗರೂಕರಾಗಿರಬೇಕು. ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವಿಕೆ ನಿಯಂತ್ರಣ ಮಾಡುವತ್ತ ಗಮನ ಹರಿಸಬೇಕು. ಲಸಿಕೆ ನೀಡಿಕೆ ಅಧಿಕಗೊಳಿಸಬೇಕು ಹಾಗೂ ಆಯಾ ಸ್ಥಳದಲ್ಲಿ ಉದ್ಭವಿಸುವ ಪರಿಸ್ಥಿತಿಗೆ ಅನುಗುಣವಾಗಿ ಆರೋಗ್ಯ ಹಾಗೂ ಇತರ ಕ್ರಮಗಳನ್ನು ಕೈಗೊಳ್ಳಬೇಕು. ಜನತೆ ಕೂಡ ಮಾಸ್ಕ್, ಸಾಮಾಜಿಕ ಅಂತರದಂಥ ಕೋವಿಡ್ ಸನ್ನಡತೆ ಪಾಲನೆ ಮುಂದುವರಿಸಬೇಕು’ ಎಂದರು.
ಜ.21ರಂದು 3.47 ಲಕ್ಷ ಕೊರೋನಾ ಪ್ರಕರಣ ವರದಿಯಾಗಿದ್ದವು. ಆನಂತರ ಕೊರೋನಾ ಪ್ರಕರಣ ಇಳಿಯುತ್ತಿದ್ದು, ಶನಿವಾರ ಸುಮಾರು 2.3 ಲಕ್ಷ ಪ್ರಕರಣ ದಾಖಲಾಗಿವೆ. ಈ ಬಗ್ಗೆ ಪ್ರಸ್ತಾಪಿಸಿದ ವರದಿಗಾರರು, ‘ಹಾಗಿದ್ದರೆ ಸೋಂಕು ಮುಕ್ತಾಯದ ಹಂತಕ್ಕೆ ಬಂದಿದೆಯೇ?’ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಡಾ ಪೂನಂ, ‘ನಾವು ಇನ್ನೂ ಸಾಂಕ್ರಾಮಿಕದ ಮಧ್ಯಭಾಗದಲ್ಲಿದ್ದೇವೆ. ಹೀಗಾಗಿ ಸೋಂಕು ಹರಡುವಿಕೆಗೆ ಮತ್ತು ಸಾವಿನ ತಡೆಗೆ ಗಮನ ಹರಿಸಬೇಕು. ಅಂತ್ಯಭಾಗಕ್ಕೆ ಬಂದಿದ್ದೇವ ಎಂದ ಮಾತ್ರಕ್ಕೆ ಅಪಾಯದಿಂದ ಹೊರಬಂದಿದ್ದೇವೆ ಎಂದಲ್ಲ’ ಎಂದರು.
‘ಒಮಿಕ್ರೋನ್ (Omicron) ರೂಪಾಂತರಿಯು ಡೆಲ್ಟಾದಂತೆ (Delta) ಶ್ವಾಸಕೋಶಕ್ಕೆ ಹರಡುವುದಿಲ್ಲ. ಆದರೆ ಉಸಿರಾಟ ವ್ಯವಸ್ಥೆ ಕೋಶಳಿಗೆ ಸೋಂಕು ತಾಗಿಸುತ್ತದೆ. ಹೀಗಾಗಿ ಡೆಲ್ಟಾಗಿಂತ ವೇಗದಲ್ಲಿ ಒಮಿಕ್ರೋನ್ ಹರಡುತ್ತಿದೆ. ಆದರೂ ಸಾವುನೋವಿನ ಸಂಖ್ಯೆ ಕಡಿಮೆ ಇದೆ. ಆದರೆ ಲಸಿಕೆ ಪಡೆಯದವರಿಗೆ ಹಾಗೂ ಅನಾರ್ಯೋಪೀಡಿತರಿಗೆ, ವೃದ್ಧರಿಗೆ ಅಪಾಯಕಾರಿಯಾಗಿದೆ. ಹೀಗಾಗಿ ಲಸಿಕಾಕರಣ ತೀವ್ರಗೊಳಿಸಬೇಕು’ ಎಂದರು. ‘ಒಮಿಕ್ರೋನ್ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿಲ್ಲ ಎಂಬ ವಾದವಿದೆ. ಹೀಗಾಗಿ ಬೂಸ್ಟರ್ ಡೋಸ್, ಇದಕ್ಕೆ ರಾಮಬಾಣ ಎನ್ನಬಹುದು. ಆದರೂ ಸೋಂಕು ತೀವ್ರತೆಗೆ ಹೋಗದಂತೆ ಲಸಿಕೆಗಳು ತಡೆಗಟ್ಟುವಲ್ಲಿ ಯಶಸ್ವಿಯಾಗಿವೆ’ ಎಂದು ಅಭಿಪ್ರಾಯಪಟ್ಟರು.
Night Curfew Lifts ರಾಜ್ಯದಲ್ಲಿ ನೈಟ್ ಕರ್ಫ್ಯೂ ರದ್ದು, ಜ.31ರಿಂದ ಜನತೆಗೆ ರಿಲ್ಯಾಕ್ಸ್
2.35 ಲಕ್ಷ ಕೇಸ್, 871 ಜನರ ಸಾವು
ದೆಹಲಿ: ಶನಿವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳಲ್ಲಿ ದೇಶಾದ್ಯಂತ 2,35,532 ಮಂದಿಗೆ ಕೊರೋನಾ (Corona) ದೃಢಪಟ್ಟಿದ್ದು, 871 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ಭಾರತದ ಒಟ್ಟಾರೆ ಸೋಂಕಿತರ ಸಂಖ್ಯೆ 4.08 ಕೋಟಿಗೆ ಹಾಗೂ ಸಾವಿಗೀಡಾದವರ ಸಂಖ್ಯೆ 4,93,198ಕ್ಕೆ ತಲುಪಿದೆ. ಸಕ್ರಿಯ ಸೋಂಕಿತರ ಸಂಖ್ಯೆ ಒಂದೇ ದಿನ 1ಲಕ್ಷದಷ್ಟುಇಳಿಕೆಯಾಗುವ ಮೂಲಕ 20,04,333ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಜೊತೆಗೆ ದೈನಂದಿನ ಪಾಸಿಟಿವಿಟಿ ದರ ಶೇ.13.39ರಷ್ಟುಹಾಗೂ ವಾರದ ಪಾಸಿಟಿವಿಟಿ ಪ್ರಮಾಣ ಶೇ.16.89ರಷ್ಟುದಾಖಲಾಗಿದೆ. ಇದೇ ವೇಳೆ 165.04 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದೆ.
Corona Update ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ದುಪ್ಪಟ್ಟು, ಸಾವಿನ ಸಂಖ್ಯೆ ಏರಿದೆ ಮತ್ತಷ್ಟು
ಕೋವಿಡ್ 3ನೇ ಅಲೆಯಿಂದ ಮಹಾರಾಷ್ಟ್ರ ಪಾರು: ಸಚಿವ
ಮುಂಬೈ: ಕೊರೋನಾ ವೈರಸ್ಸಿನ ಮೊದಲೆರಡು ಅಲೆಗಳಿಂದ ಭಾರೀ ಹೈರಾಣಾಗಿದ್ದ ಮಹಾರಾಷ್ಟ್ರ(Maharastra) ಇದೀಗ 3ನೇ ಅಲೆಯಿಂದ ಪಾರಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘‘ಅತಿಹೆಚ್ಚು ಕೇಸ್‌ಗಳು ದಾಖಲಾಗುತ್ತಿದ್ದ ಮುಂಬೈ, ಥಾಣೆ, ರಾಯ್‌ಗಢ ಮತ್ತು ಪಾಲ್ಗಡ್ ನಗರಗಳಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಇದು ರಾಜ್ಯದಲ್ಲಿ ಕೊರೋನಾ 3ನೇ ಅಲೆಯಿಂದ ರಾಜ್ಯ ಪಾರಾದ ಸಂಕೇತ. ಆದರೆ ನಾಶಿಕ್, ನಾಗ್ಪುರ, ಪುಣೆ, ಔರಂಗಬಾದ್ ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದಾಗ್ಯೂ, ಗುಳಿಗೆ ಮತ್ತು ಸಾಮಾನ್ಯ ಚಿಕಿತ್ಸೆಯಿಂದ ಸೋಂಕಿತರು 5ರಿಂದ 7 ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಈಗಲೂ ಆಸ್ಪತ್ರೆಗಳಲ್ಲಿ ಶೇ.92ರಿಂದ ಶೇ.96ರಷ್ಟುಬೆಡ್‌ಗಳು ಖಾಲಿಯಾಗಿವೆ. ಅಲ್ಲದೆ ಐಸಿಯು, ವೆಂಟಲೇಟರ್ ಮತ್ತು ಕೃತಕ ಆಮ್ಲಜನಕದ ವ್ಯವಸ್ಥೆಯಲ್ಲಿ ಶೇ.1ಕ್ಕಿಂತ ಕಡಿಮೆ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ಬೆಡ್‌ಗಳು ಖಾಲಿ ಉಳಿದಿವೆ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ