
ಚೆನ್ನೈ (ಜೂ.25): ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಬಳಿಯ ಪಡವೇಡುವಿನಲ್ಲಿರುವ ಅರುಲ್ಮಿಗು ರೇಣುಗಾಂಬಲ್ ಅಮ್ಮನ್ ದೇವಾಲಯದ ಅಧಿಕಾರಿಗಳಿಗೆ ದೇವಾಲಯದ ಹುಂಡಿಯಿಂದ ಕಾಣಿಕೆಗಳನ್ನು ಎಣಿಸುವಾಗ 4 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆಗಳು ಸಿಕ್ಕಿದೆ. ಇದರ ಮೂಲವನ್ನು ಹುಡುಕಿದಾಗ ಅದೇ ಊರಿನ ನಿವೃತ್ತ ಸೈನಿಕರೊಬ್ಬರು ಇಷ್ಟು ದೊಡ್ಡ ಪ್ರಮಾಣದ ಆಸ್ತಿಯನ್ನು ದೇವರಿಗೆ ದಾನ ನೀಡಿದ್ದಾರೆ ಎಂದು ವರದಿಯಾಗಿದೆ.
ಜೂನ್ 24 ರಂದು ದೇವಾಲಯದ ಸಿಬ್ಬಂದಿ ಆವರಣದೊಳಗಿನ 11 ಹುಂಡಿಗಳಲ್ಲಿ ಒಂದನ್ನು ತೆರೆದಾಗ, ಅವರಿಗೆ ಮೂಲ ಭೂಮಿ ಮತ್ತು ಮನೆ ಮಾಲೀಕತ್ವದ ದಾಖಲೆಗಳ ಬಂಡಲ್ ಕಂಡುಬಂದಿದ್ದು, ಜೊತೆಗೆ ಆಸ್ತಿಯನ್ನು ದೇವಾಲಯಕ್ಕೆ ಸ್ವಯಂಪ್ರೇರಣೆಯಿಂದ ದಾನ ಮಾಡಲಾಗಿದೆ ಎಂದು ಬರೆದಿರುವ ಕೈಬರಹದ ಟಿಪ್ಪಣಿಯೂ ಸಿಕ್ಕಿದೆ.
ಈ ಆಸ್ತಿ 65 ವರ್ಷದ ನಿವೃತ್ತ ಸೇನಾಧಿಕಾರಿ ಎಸ್. ವಿಜಯನ್ ಅವರಿಗೆ ಸೇರಿದ್ದು ಎಂದು ಪತ್ತೆ ಮಾಡಲಾಗಿದೆ. ಪಿತ್ರಾರ್ಜಿತ ಆಸ್ತಿಯ ವಿಷಯದಲ್ಲಿ ತಮ್ಮ ಹೆಣ್ಣುಮಕ್ಕಳಿಂದ ಅವಮಾನಕ್ಕೊಳಗಾದ ಬಳಿಕ ಅವರು ಈ ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ. ಹೆಣ್ಣುಮಕ್ಕಳ ಕುಹಕದ ಮಾತಿನಿಂದ ನೊಂದ ಅವರು ತಮ್ ಹೆಸರಲ್ಲಿದ್ದ 4 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅರುಲ್ಮಿಗು ರೇಣುಗಾಂಬಲ್ ಅಮ್ಮನ್ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ.
ತನ್ನ ಹೆಣ್ಣುಮಕ್ಕಳು ಪಿತ್ರಾರ್ಜಿತ ಆಸ್ತಿಗಾಗಿ ಜಗಳವಾಡುತ್ತಿದ್ದರು. ಅಷ್ಟು ಮಾತ್ರವಲ್ಲದೆ ಇದೇ ಕಾರಣಕ್ಕೆ ನನ್ನನ್ನು ಕೂಡ ಕಡೆಗಣಿಸಿದ್ದರು. ನನ್ನ ನೋವನ್ನು ಅವರು ಅರ್ಥ ಮಾಡಿಕೊಳ್ಳದ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವಿಜಯನ್ ತಿಳಿಸಿದ್ದಾರೆ. ಇನ್ನೊಂದೆಡೆ ವಿಜಯನ್ ಅವರ ಹೆಣ್ಣುಮಕ್ಕಳು ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಮಾತನಾಡುತ್ತಿದ್ದು, ಆಸ್ತಿ ಪತ್ರವನ್ನು ದೇವಸ್ಥಾನದಿಂದ ವಾಪಾಸ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ.
ತಮಿಳುನಾಡಿನ ಅರಣಿ ಪಟ್ಟಣದ ಬಳಿಯ ಕೇಶವಪುರಂ ಗ್ರಾಮದ ವಿಜಯನ್, ಎರಡು ಆಸ್ತಿ ಪತ್ರಗಳೊಂದಿಗೆ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದ ಸನಿಹದಲ್ಲೇ ಇರುವ ಜಾಗ ಮೂರು ಕೋಟಿ ರೂಪಾಯಿ ಮೌಲ್ಯದ್ದಾಗಿದ್ದರೆ, ಇನ್ನೊಂದು ಆಸ್ತಿ 1 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಎರಡನ್ನೂ ಕೂಡ ತಮ್ಮ ಕೈಬರಹದ ಪತ್ರದೊಂದಿಗೆ ದೇವಸ್ಥಾನದ ಹುಂಡಿಗೆ ಹಾಕಿದ್ದರು.
"ಇಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು" ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ. ಸಿಲಂಬರಸನ್ ಹೇಳಿದರು. ದಾಖಲೆಗಳನ್ನು ದೇಣಿಗೆ ಪೆಟ್ಟಿಗೆಯಲ್ಲಿ ಹಾಕುವುದರಿಂದ ದೇವಾಲಯವು ಸ್ವಯಂಚಾಲಿತವಾಗಿ ಆಸ್ತಿಯನ್ನು ಹೊಂದುತ್ತದೆ ಎಂದು ಅರ್ಥವಲ್ಲ ಎಂದೂ ತಿಳಿಸಿದ್ದಾರೆ. ದೇವಾಲಯವು ಕಾನೂನುಬದ್ಧವಾಗಿ ಅದನ್ನು ಪಡೆಯಲು ಭಕ್ತರು ಇಲಾಖೆಯಲ್ಲಿ ಅಧಿಕೃತವಾಗಿ ದೇಣಿಗೆಯನ್ನು ನೋಂದಾಯಿಸಿಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಜಯನ್ ತಮ್ಮ ಬಾಲ್ಯದಿಂದಲೂ ರೇಣುಕಾಂಬ ಅಮ್ಮನವರ ಪರಮ ಭಕ್ತ ಎಂದು ಹೇಳಲಾಗುತ್ತದೆ. ತನಿಖೆಯ ಸಮಯದಲ್ಲಿ, ದೇವಾಲಯದ ಅಧಿಕಾರಿಗಳು ವಿಜಯನ್ ತಮ್ಮ ಪತ್ನಿಯೊಂದಿಗೆ ಭಿನ್ನಾಭಿಪ್ರಾಯದ ನಂತರ ಸುಮಾರು 10 ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ಅವಧಿಯಲ್ಲಿ ಅವರಿಗೆ ಅವರ ಕುಟುಂಬದಿಂದ ಯಾವುದೇ ಬೆಂಬಲ ಸಿಗಲಿಲ್ಲ. ಇತ್ತೀಚಿನ ತಿಂಗಳುಗಳಲ್ಲಿ, ಅವರ ಹೆಣ್ಣುಮಕ್ಕಳು ಅವರ ಆಸ್ತಿಗಳನ್ನು ತಮಗೆ ನೀಡುವಂತೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.
ಹುಂಡಿಯಲ್ಲಿ ಕಂಡುಬಂದಿರುವ ಎರಡು ಆಸ್ತಿ ದಾಖಲೆಗಳು ದೇವಾಲಯದ ಬಳಿಯ 10 ಸೆಂಟ್ಸ್ ಭೂಮಿ ಮತ್ತು ಒಂದು ಅಂತಸ್ತಿನ ಮನೆಗೆ ಸಂಬಂಧಿಸಿದ್ದಾಗಿವೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹಿರಿಯ HR&CE ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಅವರು ಏನು ಮಾಡಬೇಕೆಂದು ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು. ಅಲ್ಲಿಯವರೆಗೆ, ಇಲಾಖೆ ದಾಖಲೆಗಳನ್ನು ಸುರಕ್ಷಿತವಾಗಿಡುತ್ತದೆ.
"ದೇವಾಲಯದ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ ಕಾನೂನಿನ ಪ್ರಕಾರ ನನ್ನ ಆಸ್ತಿಯನ್ನು ದೇವಾಲಯದ ಹೆಸರಿಗೆ ಅಧಿಕೃತವಾಗಿ ನೋಂದಾಯಿಸುತ್ತೇನೆ. ನಾನು ನನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ನನ್ನ ಮಕ್ಕಳು ನನ್ನ ದೈನಂದಿನ ಅಗತ್ಯಗಳಿಗೂ ನನ್ನನ್ನು ಅವಮಾನಿಸಿದರು" ಎಂದು ವಿಜಯನ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ