
ನವದೆಹಲಿ (ನ.12): ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಪೋಟ ಪ್ರಕರಣದ ಹಿಂದಿರುವ ಉಗ್ರರ ಬೇಟೆ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ತಂಡ, ಫರೀದಾಬಾದ್‌ನ ಅಲ್ ಫಲಾ ವಿವಿಯಿಂದ ಮತ್ತೆ ಇಬ್ಬರು ವೈದ್ಯರನ್ನು ಬಂಧಿಸಿದೆ. ಇದರೊಂದಿಗೆ ಉಗ್ರ ಕೃತ್ಯಗಳ ಹಿಂದೆ ಇರುವ ವೈದ್ಯರ ಸಂಖ್ಯೆ 6ಕ್ಕೇರಿದಂತಾಗಿದೆ. ಈ ಮುಂಚೆ ಗುಜರಾತ್‌ನಲ್ಲಿ ಒಬ್ಬ ಹಾಗೂ ಫರೀದಾಬಾದಲ್ಲಿ 3 ವೈದ್ಯರನ್ನು ಬಂಧಿಸಲಾಗಿತ್ತು. ವೈದ್ಯ ವೃತ್ತಿಯಲ್ಲಿ ಇದ್ದುಕೊಂಡು ಇವರು ನಡೆಸಿದ ಕೃತ್ಯಗಳು ದೇಶವನ್ನೇ ಬೆಚ್ಚಿ ಬೀಳಿಸಿವೆ.
ನಿನ್ನೆ ಇಬ್ಬರ ಸೆರೆ: ಫರೀದಾಬಾದ್‌ನಲ್ಲಿ ಮಂಗಳವಾರ ಮತ್ತಿಬ್ಬರು ವೈದ್ಯರನ್ನು ಬಂಧಿಸಲಾಗಿದೆ. ಮುಜಮ್ಮಿಲ್ ಶಕೀಲ್, ಉಮರ್ ಮೊಹಮ್ಮದ್ ತನಿಖಾಧಿಕಾರಿಗಳು ಬಂಧಿಸಿರುವ ಶಂಕಿತ ಉಗ್ರರು ಎಂದು ಗೊತ್ತಾಗಿದೆ. ಸೋಮವಾರ ಭಾರತದಲ್ಲಿ ಮಹಿಳಾ ಉಗ್ರರನ್ನು ಸಂಘಟಿಸುವ ಹೊಣೆ ಹೊತ್ತಿದ್ದ ಶಂಕಿತ ಭಯೋತ್ಪಾದಕೆ ಶಹೀನಾ ಶಾಹಿದ್ ಸೇರಿ 8 ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು.
12 ಮಂದಿ ಬಲಿಪಡೆದ ಕೆಂಪುಕೋಟೆ ಸೋಟದ ಬೆನ್ನಲ್ಲೇ ಅಲ್ ಫಲಾ ವಿವಿಯ ವೈದ್ಯರ ಮೇಲೆ ತನಿಖಾಧಿಕಾರಿಗಳ ಕಣ್ಣುನೆಟ್ಟಿದೆ. ಈ ವಿವಿಯಲ್ಲಿ ಕಾಶ್ಮೀರ ಮೂಲದ ಶೇ.40 ವೈದ್ಯರಿದ್ದಾರೆ. ಇವರಲ್ಲಿ ಹಲವು ವೈದ್ಯರು ಉಗ್ರ ಚಟುವಟಿಕೆಗಳಲ್ಲಿ ತೊಡಗಿರು ವುದು ಖಚಿತವಾಗುತ್ತಿದ್ದಂತೆ ಇದೀಗ ತನಿಖಾಧಿಕಾರಿ ಗಳು ಅವರುಹಾಗೂ ಅವರಜತೆಗೆ ಸಂಪರ್ಕದಲ್ಲಿರುವ ಇತರ ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ.
ದೆಹಲಿ ಕ್ರೈಂ ಬ್ರಾಂಚ್‌ನ ಪೊಲೀಸರು ವಿವಿಯ ಕ್ಯಾಂಪಸ್‌ನ ಸಿಸಿಟೀವಿ ಫುಟೇಜ್ ಅನ್ನು ಪರಿಶೀಲಿಸಿ ದ್ದಾರೆ. ತನಿಖೆ ವೇಳೆ ಕೇಳಿ ಬಂದ ಇಬ್ಬರೂ ವೈದ್ಯರ ಕುರಿತು ವಿವಿಯಲ್ಲಿ ಮಾಹಿತಿ ಕಲೆಹಾಕಿದ್ದಾರೆ.
ಕೆಂಪುಕೋಟೆ ಸ್ಫೋಟಕ್ಕೂ ಮುನ್ನ ಫರೀದಾಬಾದ್ ನ ಎರಡು ಮನೆಯಲ್ಲಿ 2,900ಕೆ.ಜಿ. ಸ್ಫೋಟಕ ವಶಕ್ಕೆ ಪಡೆದ ಪ್ರಕರಣದ ತನಿಖೆ ವೇಳೆ ಮುಜಮ್ಮಿಲ್ ಹೆಸರು ಕೇಳಿಬಂದಿತ್ತು. ಈ ಮನೆಯನ್ನು ಮುಜಾಮಿಲ್ ಬಾಡಿಗೆಗೆ ಪಡೆದಿದ್ದ. ಅಚ್ಚರಿಯ ವಿಚಾರವೆಂದರೆ ಮುಜಮ್ಮಿಲ್, ವಿವಿಯ ಕ್ಯಾಂಪಸ್‌ನಲ್ಲಿ ಉಳಿದು ಕೊಂಡಿದ್ದರೂ ಈ ರೂಮ್ ಬಾಡಿಗೆಗೆ ಪಡೆದಿದ್ದ. ಈ ರೂಮ್‌ಗಳನ್ನು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡಲೆಂದೇ ಬಾಡಿಗೆಗೆ ಪಡೆಯಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಇನ್ನು ಈ ಎರಡು ರೂಮ್ ಗಳಲ್ಲದೆ ಅಲ್ ಫಲಾ ವಿವಿಯಲ್ಲಿ ಮುಜಮ್ಮಿಲ್‌ನ ಸಹೋದ್ಯೋಗಿ ಶಹೀನಾ ಶಹೀದ್ ಕಾರಿನಲ್ಲಿ ರೈಫಲ್‌ಗಳು ಮತ್ತು ಮದ್ದುಗುಂಡುಗಳನ್ನೂ ವಶಕ್ಕೆ ಪಡೆಯಲಾಗಿದೆ.
ಫರೀದಾಬಾದ್‌ನಲ್ಲಿ ಭಾರೀ ಸ್ಫೋಟಕಗಳನ್ನು ವಶಕ್ಕೆ ಪಡೆದ ಬಳಿಕ ಕೆಂಪು ಕೋಟೆ ಬಳಿ ಸ್ಫೋಟ ನಡೆಸಲಾಯಿತು. ತನಿಖೆ ವೇಳೆ ಉಗ್ರ ಉಮರ್ ಮೊಹಮ್ಮದ್ ಹೆಸರು ಬೆಳಕಿಗೆ ಬಂತು. ಅಲ್ ಫಲಾ ವಿವಿಯಲ್ಲಿ ಕೆಲಸ ಮಾಡುತ್ತಿದ್ದ ಉಮರ್ ಸದ್ಯ ವಶಕ್ಕೆ ಪಡೆದಿರುವ ಮುಜಮ್ಮಿಲ್‌ನ ಅತ್ಮೀಯನಾಗಿದ್ದಾನೆ. ಫರೀದಾಬಾದ್‌ನ ಮನೆ ಮೇಲೆ ದಾಳಿ ನಡೆಸಿದ ಬಳಿಕ ಉಗ್ರ ಉಮರ್ ಈ ಸ್ಪೋಟದ ಸಂಚು ರೂಪಿಸಿದ ಎಂದು ಹೇಳಲಾಗಿದೆ. ಈ ಎಲ್ಲರನ್ನೂ ವಿಚಾರಣೆ ಮಾಡಲಾಗುತ್ತಿದ್ದು, ರೂವಾರಿಗಳ ಹೆಸರು ಬಾಯಿ ಬಿಡಿಸಲು ಯತ್ನಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ