
ಥಿಂಪು (ಭೂತಾನ್) (ನ.12): ‘ದೆಹಲಿಯಲ್ಲಿ ಸ್ಫೋಟಕ್ಕೆ ಕಾರಣಕರ್ತರಾದವರನ್ನು ಸುಮ್ಮನೇ ಬಿಡುವುದಿಲ್ಲ. ನಮ್ಮ ತನಿಖಾ ಸಂಸ್ಥೆಗಳು ಆಳದವರೆಗೆ ತನಿಖೆ ಮಾಡಿ ಸಂಚುಕೋರರನ್ನು ನ್ಯಾಯದ ಕಟಕಟೆಗೆ ಎಳೆದು ತರಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಭೂತಾನ್ ಪ್ರವಾಸ ಆರಂಭಿಸಿ ರಾಜಧಾನಿ ಥಿಂಪುದಲ್ಲಿ ಮಾತನಾಡಿದ ಮೋದಿ. ‘ಇಂದು ತುಂಬ ಭಾರವಾದ ಮನಸ್ಸಿನಿಂದ ಇಲ್ಲಿಗೆ ಬಂದಿರುವೆ. ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಭೀಕರ ಘಟನೆಯು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ.
ಮೃತರ ಕುಟುಂಬದ ದುಃಖ ನನಗೆ ಅರ್ಥವಾಗುತ್ತದೆ. ಅವರೊಂದಿಗೆ ಇಡೀ ದೇಶವೇ ನಿಂತಿದೆ. ನಾನು ತನಿಖಾ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಸಂಸ್ಥೆಗಳು ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ತಪ್ಪಿತಸ್ಥರನ್ನು ನ್ಯಾಯದ ಕಟಕಟೆಗೆ ಎಳೆದು ತರುತ್ತವೆ. ಅವರಿಗೆ ಸರಿಯಾದ ಶಿಕ್ಷೆಯಾಗುವಂತೆ ಮಾಡುತ್ತದೆ ಎಂದು ಹೇಳಿದರು. ಇದೇ ವೇಳೆ ಭೂತಾನ್ ದೊರೆ ಜಿಗ್ಮೆ ಖೇಸರ್ ನಮ್‌ಗ್ಯಾಲ್ ವಾಂಗ್‌ಚುಕ್ ಅವರೂ ಸಹ ಸಂತಾಪ ಸೂಚಿಸಿದರು.
ಕಪಟಿಗಳನ್ನು ಬಿಡುವುದಿಲ್ಲ-ರಾಜನಾಥ್
‘ದೆಹಲಿ ಸ್ಫೋಟದ ದೋಷಿಗಳನ್ನು ಯಾವುದೇ ಸಂದರ್ಭಗಳಲ್ಲಿಯೂ ಬಿಡುವುದಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ‘ದೇಶದ ಪ್ರಮುಖ ತನಿಖಾ ಸಂಸ್ಥೆಗಳು ಘಟನೆಯ ಬಗ್ಗೆ ತ್ವರಿತ ಮತ್ತು ಸಂಪೂರ್ಣ ತನಿಖೆ ನಡೆಸುತ್ತಿವೆ ನಾನು ಭರವಸೆ ನೀಡುತ್ತಾರೆ. ಜೊತೆಗೆ ವರದಿಯನ್ನು ಶೀಘ್ರವೇ ಬಹಿರಂಗ ಮಾಡುತ್ತೇವೆ. ದುರುಳರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅವರನ್ನು ನ್ಯಾಯದ ಮುಂದಿಡುತ್ತೇವೆ’ ಎಂದು ಹೇಳಿದರು.
ಭೂತಾನ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಬಹುಪಾಲು ಭಾಷಣವನ್ನು ಹಿಂದಿಯಲ್ಲೇ ಮಾಡಿದರು. ಆದರೆ ದಾಳಿಕೋರರನ್ನು ಸುಮ್ಮನೇ ಬಿಡಲ್ಲ ಎಂದು ಅವರು ಇಂಗ್ಲಿಷ್‌ನಲ್ಲಿ ಎಚ್ಚರಿಸಿದರು. ಈ ಹಿಂದೆ ಪಹಲ್ಗಾಂ ದಾಳಿ ಬಳಿಕ ಅವರು ಮಾತನಾಡಿದಾಗ ಎಂದಿನಂತೆ ಹಿಂದಿ ಬಳಕೆ ಬದಲು ಇಂಗ್ಲಿಷ್‌ನಲ್ಲಿ ಸಂದೇಶ ನೀಡಿದ್ದರು. ಹೀಗಾಗಿ ಪಾಕಿಸ್ತಾನಕ್ಕೆ ಹಾಗೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮೋದಿ ಪ್ರತೀಕಾರದ ಸಂದೇಶ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ