
ನವದೆಹಲಿ (ನ.12): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ಅತಿ ಗಂಭೀರ ಸೂಚ್ಯಂಕ ಮಟ್ಟವಾದ 427ಕ್ಕೆ ಏರಿದೆ. ಹೀಗಾಗಿ ಸರ್ಕಾರ 3ನೇ ಹಂತದ ನಿರ್ಬಂಧ ಕ್ರಮ ಜಾರಿಗೆ ತಂದಿದೆ. ಆ ಪ್ರಕಾರ, ದೆಹಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ, ಕ್ರಷರ್, ಗಣಿಗಾರಿಕೆ ನಿರ್ಬಂಧಿಸಲಾಗಿದೆ. ಜೊತೆಗೆ ಬಿಎಸ್ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ಕಾರುಗಳಿಗೆ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. 5ನೇ ಕ್ಲಾಸಿನವರೆಗಿನ ಮಕ್ಕಳಿಗೆ ಆನ್‌ಲೈನ್ ಕ್ಲಾಸ್‌ಗೆ ಸೂಚಿಸಲಾಗಿದೆ.
ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ತೀರಾ ಕಳಪೆ ಮಟ್ಟಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಜನರು ಶುದ್ಧಗಾಳಿಯನ್ನು ಅರಸುತ್ತಾ ಬೆಂಗಳೂರು, ಪುಣೆಯಂತಹ ನಗರಗಳಿಗೆ ಧಾವಿಸುತ್ತಿದ್ದಾರೆ ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಈ ಪೈಕಿ ಕೆಲವರು ಶಾಶ್ವತವಾಗಿ ದೆಹಲಿಯಲ್ಲಿನ ಮನೆ ಮತ್ತು ಉದ್ಯೋಗವನ್ನು ತೊರೆದರೆ, ಇನ್ನು ಕೆಲವರು ಚಳಿಗಾಲದಲ್ಲಿ ಮಾತ್ರ ತಾತ್ಕಾಲಿಕವಾಗಿ ಉತ್ತಮ ವಾತಾವರಣವುಳ್ಳ ನಗರಗಳಿಗೆ ತೆರಳುತ್ತಿದ್ದಾರೆ. ಶುದ್ಧ ವಾತಾವರಣ ಹೊಂದಿರುವ ಬೆಂಗಳೂರಲ್ಲದೆ ಪುಣೆ ಹಾಗೂ ಚಳಿಗಾಲದ ತಾಣಗಳಾದ ಮಸ್ಸೂರಿ, ಚೈಲ್, ಕಸೌಲಿಯಂಥ ಪ್ರದೇಶಗಳು ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ ಎಂದು ವರದಿಯಾಗಿದೆ.
ಬೆಂಗಳೂರಿಗೆ ವಲಸೆ- ಕಾರಣವೇನು?: ದೆಹಲಿಯ ಗಾಳಿ ಗುಣಮಟ್ಟವು ವರ್ಷ ಕಳೆದಂತೆ ವಿಷಮ ಸ್ಥಿತಿಗೆ ಹೋಗುತ್ತಿದ್ದು, ಕಳೆದ ವರ್ಷ ದೆಹಲಿ ಇತಿಹಾಸದಲ್ಲಿಯೇ ಅತ್ಯಂತ ಕಳಪೆ (491) ಎಕ್ಯುಐಗೆ ಕುಸಿದಿತ್ತು. ಈ ವರ್ಷವೂ ಸಹ 400ಕ್ಕೂ ಹೆಚ್ಚು ಅಂಕ ದಾಖಲಿಸತೊಡಗಿದೆ. ಇದಕ್ಕೆ ಹೋಲಿಸಿದರೆ, ಬೆಂಗಳೂರಿನ ವಾಯುಗುಣಮಟ್ಟ ಸೂಚ್ಯಂಕ ಸರಾಸರಿ 77ರ ಆಸುಪಾಸಿನಲ್ಲಿರುತ್ತದೆ. ಇದು ‘ತೃಪ್ತಿದಾಯಕ’ ಗುಣಮಟ್ಟ. ಮೇಲಾಗಿ ಇಲ್ಲಿ ಇದುವರೆಗೂ ದಾಖಲಾದ ಅತ್ಯಂತ ಕಳಪೆ ಗುಣಮಟ್ಟವೇ 101 ಆಗಿದೆ. ಇದು ಸಹ 2022ರಲ್ಲಿ ದಾಖಲಾಗಿತ್ತು. ಹೀಗಾಗಿ ಬೆಂಗಳೂರು ಎಲ್ಲರಿಗೂ ಅಚ್ಚುಮೆಚ್ಚು.
ಬೆಂಗಳೂರಿಗೆ ಬಂದೆ- ದೆಹಲಿಗನ ನುಡಿ: ಮೂಲತಃ ದೆಹಲಿಯವರಾಗಿರುವ ಕೇತನ್ ಶರ್ಮಾ, ದೆಹಲಿಯ ವಿಷಮ ವಾತಾವರಣದಿಂದ ಬೇಸತ್ತು, ಸ್ವಂತ ಮನೆಯನ್ನೂ ಮಾರಿ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಈ ಕುರಿತು ತಮ್ಮ ಅನುಭವ ಹಂಚಿಕೊಂಡಿರುವ ಅವರು, ‘ನನ್ನ ವೃದ್ಧ ತಂದೆ- ತಾಯಿ ಅನಾರೋಗ್ಯಕ್ಕೆ ತುತ್ತಾಗುವವರೆಗೂ ದೆಹಲಿಯ ಕೆಟ್ಟ ಗಾಳಿಯ ಭೀಕರತೆ ನನಗೆ ಅರ್ಥವಾಗಿರಲಿಲ್ಲ. ಪ್ರತಿ ವರ್ಷ ಚಳಿಗಾಲದಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ನನಗೆ ಮಗುವೂ ಹುಟ್ಟಿತು. ಅವರೆಲ್ಲರ ಆರೋಗ್ಯದ ದೃಷ್ಟಿಯಿಂದ ನಾನು ಹುಟ್ಟಿ ಬೆಳೆದ ದೆಹಲಿಯನ್ನು ತೊರೆದು, ಮನೆಯನ್ನೂ ಮಾರಿ ಬೆಂಗಳೂರಿಗೆ ಬಂದು ನೆಲೆಸಿದ್ದೇವೆ’ ಎಂದು ನೋವಿನಿಂದ ನುಡಿದಿದ್ದಾರೆ.
‘ನನ್ನ ತಾಯಿಗೆ ಹೃದ್ರೋಗವಿದೆ. ಯಾವಾಗಲೂ ಮಾಸ್ಕ್ ಹಾಕಿಕೊಂಡೇ ಇರುತ್ತಾರೆ. ಮನೆಯಲ್ಲಿ ಸದಾಕಾಲ ವಾಯು ಶುದ್ಧೀಕರಣ ಯಂತ್ರವನ್ನು (ಏರ್ ಪ್ಯೂರಿಫೈಯರ್) ಹಾಕಿಕೊಂಡೇ ಇರಬೇಕು ಎಂದು ವೈದ್ಯರು ಖಡಾಖಂಡಿತವಾಗಿ ತಿಳಿಸಿದ್ದಾರೆ. ಹಾಗಾಗಿ ದೆಹಲಿ ತೊರೆದು, ಬೇರೆ ಊರಿಗೆ ಹೋಗಿ ನೆಲೆಸಬೇಕೆಂದಿದ್ದೇವೆ’ ಎಂದು ಶಾಲಾ ಶಿಕ್ಷಕಿ ವಿತಸ್ತಾ ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿ ವಿವಿ ವಿದ್ಯಾರ್ಥಿ ಡ್ಯಾನಿಷ್, ‘2 ವರ್ಷಗಳ ಹಿಂದೆ ನನ್ನ ತಾಯಿ ಇಲ್ಲಿಗೆ ಬಂದಾಗಿನಿಂದ, ವಾಯುಮಾಲಿನ್ಯದಿಂದಾಗಿ ಅವರ ಆರೋಗ್ಯ ಹದಗೆಟ್ಟಿದೆ. ನನ್ನ ಓದು ಮುಗಿದ ತಕ್ಷಣ, ಬೇರೆಡೆಗೆ ಸ್ಥಳಾಂತರಗೊಳ್ಳಲು ಯೋಜಿಸುತ್ತಿದ್ದೇನೆ. ಬಹುಶಃ ಇದು ಈ ನಗರದಲ್ಲಿ ನನ್ನ ಕೊನೆಯ ವರ್ಷವಾಗಿರಬಹುದು’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ