
13 ಮಂದಿಯ ಜೀವ ತೆಗೆದ ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆ*ತ್ಮಾಹುತಿ ಬಾಂಬರ್ ಎಂದು ಶಂಕಿಸಲಾಗಿರುವ ಡಾ. ಉಮರ್ ಮೊಹಮ್ಮದ್ ಬಗ್ಗೆ ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತನ ಸಂಬಂಧಿಕರ ಜಾಡು ಹಿಡಿದು ಹೋಗಿದ್ದಾರೆ. ಇದಾಗಲೇ ಈತನ ಮೊದಲ ಚಿತ್ರವೂ ಲಭ್ಯವಾಗಿದೆ. ಇವನ ಬಗ್ಗೆ ಮಾಹಿತಿ ಕಲೆ ಹಾಕುವಾಗ ಭಯಾನಕ ಎನ್ನುವಂಥ ಕೃತ್ಯಗಳು ಬೆಳಕಿಗೆ ಬಂದಿವೆ. ಈತ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಉಮರ್, ಭಯೋತ್ಪಾದನಾ ಜಾಲದ ಪ್ರಮುಖ ಸದಸ್ಯ ಆಗಿದ್ದ ಎನ್ನುವುದು ತಿಳಿದಿದೆ. ತಾನು ಕೆಲಸ ಮಾಡುತ್ತಿದ್ದ ಪ್ರಯೋಗಾಲಯದಲ್ಲಿಯೇ ಅಮೋನಿಯಂ ನೈಟ್ರೇಟ್ ಫ್ಯುಯೆಲ್ ಆಯಿಲ್ ತಯಾರಿಸಿ ಅದನ್ನು ಕಾರಿನಲ್ಲಿ ಸ್ಫೋಟ ಮಾಡಿದ್ದ. ಈ ಸ್ಫೋಟಕ್ಕೂ ಮುನ್ನ ಕೆಂಪುಕೋಟೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಮೂರು ಗಂಟೆಗೂ ಹೆಚ್ಚು ಕಾರನ್ನು ನಿಲ್ಲಿಸಿರುವುದು ಸಿಸಿಟಿವಿವಿಯಲ್ಲಿ ಕಂಡು ಬಂದಿದೆ.
ಈತ ತುಂಬಾ ಸೀದಾ ಸಾದಾ, ಮನೆಯಲ್ಲಿ ಸೈಲೆಂಟ್ ಇರುತ್ತಿದ್ದ. ಈತ ಇಂಥ ಕೃತ್ಯ ಮಾಡಿದರೆ ನಂಬಲು ಆಗುತ್ತಿಲ್ಲ, ಈತ ಟಾರ್ಗೆಟ್ ಆಗಿದ್ದಾನೆ.... ಹೀಗೆ ಉಮರ್ ಮನೆಯ ಸದಸ್ಯರು ಸಾಮಾನ್ಯವಾಗಿ ಇಂಥ ಪೈಶಾಚಿಕ ಕೃತ್ಯ ನಡೆದಾಗ ಮನೆಯವರು ಹೇಳುವಂತೆಯೇ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಉಮರ್ ಪತ್ನಿ ಈ ಬಗ್ಗೆ ಬಾಯಿ ಬಿಟ್ಟಿದ್ದಾರೆ. Times Now ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಅವರ ಪತ್ನಿ, ನನಗೆ ಈ ವಿಷಯ ನಂಬಲು ಆಗುತ್ತಿಲ್ಲ ಎಂದಿದ್ದಾರೆ. ಆದರೆ ಇದೇ ವೇಳೆ ಬಾಂಬ್ ಬ್ಲಾಸ್ಟ್ ಬಗ್ಗೆ ಪತ್ನಿಗೆ ಸೂಚನೆ ನೀಡಿದ್ದನಾ ಉಮರ್ ಎನ್ನುವುದೂ ಇವರ ಮಾತಿನಿಂದ ತಿಳಿದು ಬರುತ್ತದೆ.
ಅದೇನೆಂದರೆ, ಮನೆಯಲ್ಲಿ ರೇಡ್ ಆಗಿತ್ತು. ನಾನು ಕಳೆದ ಶುಕ್ರವಾರ ಗಾಬರಿಯಿಂದ ಅವರಿಗೆ ಕರೆ ಮಾಡಿದ್ದೆ. ನಾವೆಲ್ಲರೂ ಹೆದರಿದ್ದೇವೆ, ಬನ್ನಿ ಎಂದಿದ್ದೆ. ಆದರೆ ಅವರು ನನಗೆ ಲೈಬ್ರರಿಯಲ್ಲಿ ತುಂಬಾ ಕೆಲಸವಿದೆ. ಮೂರು ದಿನ ಬಿಟ್ಟು ಎಕ್ಸಾಮ್ ಇದೆ. ಎಕ್ಸಾಂ ಮುಗಿಸಿ ಬರುತ್ತೇನೆ ಎಂದಿದ್ದರು. ಮೂರು ದಿನ ಬಿಟ್ಟು ಏಕೆ, ನಮಗೆ ಭಯ ಆಗ್ತಿದೆ, ನಾಳೆಯೇ ಬನ್ನಿ ಎಂದಿದ್ದೆ ಎಂದು ನಡುಗುತ್ತಲೇ ಹೇಳಿಕೆ ನೀಡಿದ್ದಾರೆ. ಇದನ್ನು ನೋಡಿದರೆ ಶುಕ್ರವಾರದಿಂದ ಮೂರು ದಿನ ಎಂದರೆ ಭಾನುವಾರ. ಇದರ ಅರ್ಥ ಭಾನುವಾರ ಬ್ಲಾಸ್ಟ್ ಮಾಡಿ ಸೋಮವಾರ ಮನೆಗೆ ಬರುತ್ತೇನೆ ಎಂದು ಉಮರ್ ಹೇಳಿದ್ದನಾ ಎನ್ನುವ ಪ್ರಶ್ನೆ ಎದುರಾಗಿದೆ. ಇದೇ ವೇಳೆ ಪತ್ನಿ ಪ್ರತಿಕ್ರಿಯೆ ನೀಡುವಾಗ ಭಯದಿಂದ ಇದ್ದಂತೆ ಕಾಣಿಸುತ್ತಿದ್ದ ಪಕ್ಕದಲ್ಲಿಯೇ ಇರುವ ಉಮರ್ ತಾಯಿ ಸಮಾಧಾನದಿಂದ ಇರುವುದನ್ನು ನೋಡಬಹುದಾಗಿದೆ. ಅದೇ ರೇಡ್ ಬಗ್ಗೆ ಮಾತನಾಡಿದ್ದು, ಅದೇನು ಎನ್ನುವುದು ಸ್ಪಷ್ಟವಾಗಿಲ್ಲ.
ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿ ಸ್ಫೋಟ ನಡೆದಿದ್ದರಿಂದ ಹಾನಿ ಹೆಚ್ಚಾಗಿದೆ. ದೆಹಲಿ ಪೊಲೀಸ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ನಗರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ವಿವಿಧ ರಾಜ್ಯಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಬ್ಲಾಸ್ಟ್ ಸಂಭವಿಸಬಹುದಾದ ಸೂಚನೆಯೂ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ