ದೆಹಲಿ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ| ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮುನ್ನಡೆ ಅಂಕಿ ಅಂಶ| ಆಪ್ 49, ಬಿಜೆಪಿ 21, ಕಾಂಗ್ರೆಸ್ ಶೂನ್ಯ ಸ್ಥಾನದಲ್ಲಿ ಮುನ್ನಡೆ| ಕಾಂಗ್ರೆಸ್’ನ್ನು ಕಂಗಾಲು ಮಾಡಿದ ದೆಹಲಿ ಮತದಾರರು| ಶೂನ್ಯ ಸ್ಥಾನದಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್| ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳನ್ನು ಹುಡುಕುತ್ತಾ...| ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆಗೆ ಕಾರಣಗಳೇನು?|
ನವದೆಹಲಿ(ಫೆ.11): ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಆಡಳಿತಾರೂಢ ಆಪ್ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಮುನ್ನಡೆ ಆಟದಲ್ಲಿ ಬಿಜೆಪಿ ಗಮನ ಸೆಳೆಯುತ್ತಿದೆ.
ಇದುವರೆಗೂ ಬಂದ ಅಂಕಿ ಅಂಶಗಳ ಪ್ರಕಾರ ಆಪ್ 49, ಬಿಜೆಪಿ 21, ಕಾಂಗ್ರೆಸ್ ಶೂನ್ಯ ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ. ಆಪ್ ಮುನ್ನಡೆ ಕ್ಷಣಕ್ಷಣಕ್ಕೆ ಕುಸಿಯುತ್ತಿದ್ದು, ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಮುನ್ನಡೆ ಅಂಕಿ ಅಂಶ ಏರಿಕೆಯಾಗುತ್ತಿದೆ.
ಆದರೆ ಕಾಂಗ್ರೆಸ್ ಮಾತ್ರ ಈ ಚುನಾವಣೆ ಆಟದಲ್ಲಿ ಲೆಕ್ಕಕ್ಕೆ ಇಲ್ಲದಂತಾಗಿದ್ದು, ಶೂನ್ಯ ಮುನ್ನಡೆ ಸಾಧಿಸುವ ಮೂಲಕ ದೆಹಲಿಯಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಹೊಸ್ತಿಲಿಗೆ ಬಂದು ನಿಂತಿದೆ.
ಬದಲಾಗುತ್ತಿರುವ ಸಮೀಕರಣ: ಮುನ್ನಡೆ ಜಿದ್ದಾಜಿದ್ದಿಯಲ್ಲಿ ಬಿಜೆಪಿ ಸಂಖ್ಯೆ ಏರಿಕೆ!
ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆಗೆ ಕಾರಣ ನೋಡುವುದಾದರೆ...
1. ಚುನಾವಣೆ ಬಗ್ಗೆ ಒಲವು ತೋರದ ಸೋನಿಯಾ ಗಾಂಧಿ: ದೆಹಲಿ ಚುನಾವಣೆಯಲ್ಲಿ ಪಕ್ಷದ ಹಣೆಬರಹ ಕುರಿತು ಮೊದಲೇ ಅರಿತಿದ್ದಂತೆ ಕಂಡ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಚುನಾವಣೆಗೆ ಒಲವು ತೋರಿಸಿರುವುದು ಸ್ಪಷ್ಟ.
2. ರಾಹುಲ್, ಪ್ರಿಯಾಂಕ ಗಾಂಧಿ ಪ್ರಚಾರವೂ ಅಷ್ಟಕಷ್ಟೇ: ದೆಹಲಿ ಚುನಾವಣಾ ಪ್ರಚಾರದ ಅಖಾಡಕ್ಕೆ ತಡವಾಗಿ ಬಂದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ, ನೆಪ ಮಾತ್ರಕ್ಕೆ ಪ್ರಚಾರ ನಡೆಸಿದ್ದು ಕಣ್ಣ ಮುಂದಿರುವ ಸತ್ಯ.
3. ಆಪ್ ಎದುರು ಹೋರಾಟದ ಪ್ರಯತ್ನವನ್ನೂ ಮಾಡದ ಕಾಂಗ್ರೆಸ್: ದೆಹಲಿಯಲ್ಲಿ ಆಪ್ ಎದುರು ತಮ್ಮ ಆಟ ನಡೆಯುವುದಿಲ್ಲ ಎಂದು ಅರಿತ ಕಾಂಗ್ರೆಸ್, ಹೋರಾಟದ ಹುಮ್ಮಸ್ಸನ್ನೇ ಕಳೆದುಕೊಂಡಿದ್ದು ಸುಳ್ಳಲ್ಲ.
4. ದೆಹಲಿ ಕಾಂಗ್ರೆಸ್ ನಾಯಕರೆಲ್ಲರ ವಿರುದ್ಧ ಭ್ರಷ್ಟಾಚಾರ ಆರೋಪ: ಯಾರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ದೆಹಲಿ ಚುನಾವಣೆ ಅಖಾಡಕ್ಕೆ ಇಳಿದಿತ್ತೋ, ಅವರೆಲ್ಲರ ವಿರುದ್ಧವೂ ಭ್ರಷ್ಟಾಚಾರದ ಆರೋಪ ಇದ್ದಿದ್ದು ಪಕ್ಷಕ್ಕೆ ಮುಳುವಾಯಿತು.
ದೆಹಲಿಯಲ್ಲಿ ಕೇಜ್ರಿವಾಲ್ ಜತೆ ಮೈತ್ರಿಗೆ ಕಾಂಗ್ರೆಸ್ ರೆಡಿ?
5. ದೆಹಲಿ ಕಾಂಗ್ರೆಸ್ ಮುನ್ನಡೆಸುವ ಸಮರ್ಥ ನಾಯಕರೇ ಇರಲಿಲ್ಲ: ಪ್ರತಿ ಬಾರಿಯಂತೆ ಈ ಬಾರಿಯೂ ಕೇವಲ ಗಾಂಧಿ ಕುಟುಂಬವನ್ನಷ್ಟೇ ನೆಚ್ಚಿಕೊಂಡು ಕಾಂಗ್ರೆಸ್ ಚುನಾವಣಾ ಅಖಾಡಕ್ಕಿಳಿದಿದ್ದು, ದೆಹಲಿಯಲ್ಲಿ ಸಮರ್ಥ ನಾಯಕತ್ವ ಗುರುತಿಸುವಲ್ಲಿ ಪಕ್ಷ ವಿಫಲವಾಗಿದ್ದು ಕಣ್ಣ ಮುಂದಿರುವ ಸತ್ಯ.
6. ತನ್ನ ಗೆಲುವಿಗಿಂತ ಬಿಜೆಪಿ ಸೋಲನ್ನೇ ನಿರೀಕ್ಷಿಸಿದ್ದ ಕಾಂಗ್ರೆಸ್: ಗೆಲುವಿನ ಆಸೆಯನ್ನೇ ಹೊಂದಿರದ ಕಾಂಗ್ರೆಸ್, ತಾನು ಗೆಲ್ಲುವುದಕ್ಕಿಂತ ಬಿಜೆಪಿಯನ್ನು ಸೋಲಿಸುವುದನ್ನು ತನ್ನ ಚುನಾವಣಾ ತಂತ್ರ ಮಾಡಿಕೊಂಡಿತ್ತು. ದೆಹಲಿಯಲ್ಲಿ ಬಿಜೆಪಿ ಸೋಲುವುದು ಆಪ್’ಗಿಂತಲೂ ಕಾಂಗ್ರೆಸ್’ಗೆ ಬೇಕಾಗಿತ್ತು. ಇದೇ ಕಾರಣವನ್ನು ಮುಂದು ಮಾಡಿ ಮುಂಬರುವ ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೊಡೆ ತಟ್ಟುವುದು ಕಾಂಗ್ರೆಸ್ ತಂತ್ರವಾಗಿತ್ತು.
7. ಚುನಾವಣೆಯಲ್ಲಿ ಪರೋಕ್ಷವಾಗಿ ಆಪ್‌ಗೆ ಬೆಂಬಲ: ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬುದನ್ನು ಅರಿತಿದ್ದ ಕಾಂಗ್ರೆಸ್, ಬಿಜೆಪಿಯನ್ನು ಸೋಲಿಸಲು ಪರೋಕ್ಷವಾಗಿ ಆಪ್’ಗೆ ಬೆಂಬಲ ನೀಡಿದ್ದು ಕೂಡ ಸತ್ಯ.