ಗುಜರಾತ್‌ ಸಿಎಂ ದಿಢೀರ್‌ ಬದಲಾವಣೆ, ಮೋದಿ ಚಾಣಾಕ್ಷ ಆಟ, ಬದಲಾಯ್ತು ಕಾರ‍್ಯತಂತ್ರ!

By Suvarna NewsFirst Published Sep 13, 2021, 3:27 PM IST
Highlights

ಗುಜರಾತ್‌ನಲ್ಲಿ ನರೇಂದ್ರ ಮೋದಿ ಪರಮೋಚ್ಚ ಜನಪ್ರಿಯ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಕೆಳಗಡೆ ಹತ್ತಾರು ಬಣಗಳಿವೆ. ಅಮಿತ್‌ ಶಾಗೆ ಗುಜರಾತ್‌ನ ಹೊರಗಡೆ ಭಾರಿ ಗೌರವ, ಮಾನ್ಯತೆ ಇದೆ. 

2014ರಲ್ಲಿ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯಗಳಲ್ಲಿ ಅತ್ಯಂತ ಸಣ್ಣ ಸಮುದಾಯದವರನ್ನು ಮುಖ್ಯಮಂತ್ರಿಯಾಗಿ ನೇಮಿಸುವ ಪರಿಪಾಠವನ್ನು ಬಿಜೆಪಿ ಆರಂಭಿಸಿತ್ತು. ಹೀಗಾಗಿ ಆದಿವಾಸಿ ಬಾಹುಳ್ಯದ ಜಾರ್ಖಂಡ್‌ನಲ್ಲಿ ಬನಿಯಾ ಸಮುದಾಯದ ರಘುಬರ್‌ ದಾಸ್‌, ಜಾಟ್‌ ಬಾಹುಳ್ಯದ ಹರ್ಯಾಣದಲ್ಲಿ ಪಂಜಾಬಿ ಮನೋಹರಲಾಲ್ ಖಟ್ಟರ್‌, ಮರಾಠಾ ಬಾಹುಳ್ಯದ ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ದೇವೇಂದ್ರ ಫಡ್ನವೀಸ್‌ರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಆದರೆ ಬಿಜೆಪಿ ಮತ್ತು ನರೇಂದ್ರ ಮೋದಿ ನಿಧಾನವಾಗಿ ರಾಜ್ಯ ರಾಜಕಾರಣದಲ್ಲಿ ಪ್ರಬಲ ಜಾತಿಗಳಿಗೆ ನೇತೃತ್ವ ಕೊಡುವುದು ಸುಲಭ ಮತ್ತು ಸುರಕ್ಷಿತ ಮಾರ್ಗ ಎನ್ನುವ ತೀರ್ಮಾನಕ್ಕೆ ಬಂದಂತಿದೆ.

ಹೀಗಾಗಿ ಕರ್ನಾಟಕದಲ್ಲಿ ಯಡಿಯೂರಪ್ಪನವರ ಜಾಗಕ್ಕೆ ಅದೇ ಲಿಂಗಾಯತ ಸಮುದಾಯದ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದಂತೆ, ಗುಜರಾತ್‌ನಲ್ಲಿ ಕೂಡ ಸಣ್ಣ ಜೈನ್‌ ಸಮುದಾಯದ ವಿಜಯ್‌ ರೂಪಾಣಿ ಅವರನ್ನು ಬದಲಾಯಿಸಿ ಪಾಟಿದಾರ ಪಟೇಲ್ ಸಮುದಾಯದ ಭೂಪೇಂದ್ರ ಪಟೇಲ್‌ರನ್ನು ಮುಖ್ಯಮಂತ್ರಿ ಮಾಡಲಾಗಿದೆ. 2017ರ ಚುನಾವಣೆಯಲ್ಲಿ ಪಟೇಲ್ ಸಮುದಾಯ ಪ್ರಮುಖವಾಗಿ ಸೌರಾಷ್ಟ್ರದಲ್ಲಿ ಬಿಜೆಪಿಯಿಂದ ದೂರ ಹೋಗಿದ್ದರಿಂದ ಬಿಜೆಪಿ 20 ವರ್ಷಗಳಲ್ಲಿ ಮೊದಲ ಬಾರಿಗೆ ಎರಡಂಕಿಗೆ ಬಂದು ತಲುಪಿತ್ತು.

Latest Videos

90 ರ ದಶಕದ ಮಂಡಲ ಹೋರಾಟದ ಬಳಿಕ ಮತ್ತೆ ದೇಶದಲ್ಲೀಗ 'ಜಾತಿ ಹೋರಾಟ'ದ ಸುಳಿವು?

ಈ ಬಾರಿ ಕೂಡ ಕೋವಿಡ್‌ 2ನೇ ಅಲೆಯ ಪ್ರಬಂಧನದಲ್ಲಿ ರೂಪಾಣಿ ವಿಫಲರಾದ ಬಳಿಕ ಬರೀ ಮೋದಿ ಹೆಸರಿನ ಮೇಲೆ ಗುಜರಾತ್‌ನಲ್ಲೂ ಚುನಾವಣೆ ಎದುರಿಸುವುದು ಅಸಾಧ್ಯ ಎಂದು ಅರಿವಿಗೆ ಬಂದ ನಂತರ ತರಾತುರಿಯಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲಾಗಿದೆ. ಬಿಜೆಪಿ ದಿಲ್ಲಿ ಮೂಲಗಳು ಹೇಳುವ ಪ್ರಕಾರ ಮೋದಿ ಮತ್ತು ಆರ್‌ಎಸ್‌ಎಸ್‌ ಮಧ್ಯೆ ಮಾಚ್‌ರ್‍ನಲ್ಲಿಯೇ ಬಿಜೆಪಿಯ ಅನೇಕ ಮುಖ್ಯಮಂತ್ರಿಗಳ ಬದಲಾವಣೆ ಮಾಡಲು ತೀರ್ಮಾನ ಆಗಿತ್ತು.

ಆದರೆ ಮನೋಹರ ಲಾಲ್ ಖಟ್ಟರ್‌ರನ್ನು ಬದಲಾಯಿಸಲು ಮೋದಿಗೆ ಇಷ್ಟಇರಲಿಲ್ಲ, ಯೋಗಿ ಆದಿತ್ಯನಾಥರನ್ನು ಬದಲಾಯಿಸಲು ಆರ್‌ಎಸ್‌ಎಸ್‌ ಒಪ್ಪಿರಲಿಲ್ಲ. ಹೀಗಾಗಿ ಸರಬಾನಂದ್‌ ಸೋನವಾಲ್, ತೀರಥ ಸಿಂಗ್‌ ರಾವತ್‌, ಯಡಿಯೂರಪ್ಪ ನಂತರ ವಿಜಯ್ ರೂಪಾಣಿಯನ್ನು ಬದಲಾಯಿಸಲಾಗಿದೆ. ಅಂದ ಹಾಗೆ ವಿಜಯ್ ರೂಪಾಣಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಅತ್ಯಂತ ಆಪ್ತ ಮಿತ್ರ, ಜೊತೆಗೆ ಜೈನ್‌ ಕೂಡ ಹೌದು. ಆದರೆ ಚುನಾವಣೆ ಗೆಲ್ಲಲು ಪಟೇಲ್ ಲಾಬಿ ಬೇಕೇ ಬೇಕು ಎಂದು ಪಾಟಿದಾರ ಪಟೇಲ್  ಸಮುದಾಯಕ್ಕೆ ಕುರ್ಚಿ ಕೊಟ್ಟು ಸಮಾಧಾನ ಮಾಡಿಸುವ ಪ್ರಯತ್ನ ನಡೆದಿದೆ.

ಪಾಟಿದಾರರಿಗೆ ಈಗ ಮಣೆ ಏಕೆ?

ಒಂದು ವರ್ಷದ ಹಿಂದೆ ಪರಂಪರಾಗತ ಗುಜರಾತಿಯೇ ಅಲ್ಲದ ಸೂರತ್‌ ಸಂಸದ ಸಿ.ಆರ್‌.ಪಾಟೀಲ್‌ರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಮಾಡಿದಾಗಲೇ ವಿಜಯ್ ರೂಪಾಣಿ ಚುನಾವಣೆವರೆಗೆ ಮುಂದುವರೆಯಲಿಕ್ಕಿಲ್ಲ, ಪಾಟಿದಾರ ಪಟೇಲ… ಒಬ್ಬರನ್ನು ಮುಖ್ಯಮಂತ್ರಿ ಮಾಡಬಹುದು ಎಂಬ ಗುಸುಗುಸುಗಳಿದ್ದವು. ಆದರೆ ಅಮಿತ್‌ ಶಾ, ವಿಜಯ್ ರೂಪಾಣಿ ಮೈತ್ರಿಯ ಘನಿಷ್ಠತೆ ಕಾರಣದಿಂದ ಅಂತಹ ಸುದ್ದಿಗಳು ವೇಗ ಪಡೆದುಕೊಳ್ಳುತ್ತಿರಲಿಲ್ಲ. ಗುಜರಾತ್‌ನಲ್ಲಿ ಮುಖ್ಯಮಂತ್ರಿ ಅಥವಾ ರಾಜ್ಯ ಅಧ್ಯಕ್ಷರಲ್ಲಿ ಒಬ್ಬರು ಪಟೇಲ್‌ ಸಮುದಾಯದವರು ಇರಲೇಬೇಕು.

ಗುಜರಾತ್‌ನಲ್ಲಿ ಬಿಜೆಪಿಗೆ ದೊಡ್ಡ ವೋಟ್‌ ಬ್ಯಾಂಕ್‌ ಅಂದರೆ ಜಮೀನು ಹೊಂದಿರುವ ಪಟೇಲ್‌ ಸಮುದಾಯ. ಬಿಜೆಪಿಯ ಪ್ರತಿ 4 ಮತದಾರರಲ್ಲಿ ಒಬ್ಬರು ಪಟೇಲರು ಇರುತ್ತಿದ್ದರು. ರಾಜ್ಯದ 6 ಕೋಟಿ ಮತದಾರದಲ್ಲಿ 14 ಪ್ರತಿಶತ ಇರುವ ಪಟೇಲರು ಗುಜರಾತ್‌ನ 182ರಲ್ಲಿ 80 ಕ್ಷೇತ್ರಗಳಲ್ಲಿ ಫಲಿತಾಂಶ ಅದಲು ಬದಲು ಮಾಡಬಲ್ಲರು. ಮೋದಿ ದಿಲ್ಲಿಗೆ ಹೋದಾಗಲೇ ಗುಜರಾತ್‌ನಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಶುರುವಾಗಿತ್ತು. ಆದರೆ 2017ರಲ್ಲಿ ಕಾಂಗ್ರೆಸ್‌ ಹಾರ್ದಿಕ್‌ ಪಟೇಲ್‌ ನೆರವಿನಿಂದ ಸೌರಾಷ್ಟ್ರದ ಗ್ರಾಮೀಣ ಭಾಗದ ಪಟೇಲ್‌ರನ್ನು ಸೆಳೆಯಲು ಯಶಸ್ವಿಯಾಗಿತ್ತಾದರೂ ಸೂರತ್‌ ಆಸುಪಾಸಿನ ದಕ್ಷಿಣ ಮತ್ತು ಉತ್ತರ ಗುಜರಾತ್‌ನ ಶಹರ ಭಾಗದ ಪಟೇಲರು ಬಿಜೆಪಿ ಬೆನ್ನಿಗೆ ನಿಂತಿದ್ದರು.

ಆದರೆ 8 ತಿಂಗಳ ಹಿಂದೆ ಸೂರತ್‌ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿ 124ರಲ್ಲಿ 24 ಸ್ಥಾನ ಪಟೇಲ್‌ ಸಮುದಾಯದ ನೆರವಿನಿಂದ ಪಡೆದಾಗ ಬಿಜೆಪಿಗೆ ಚಿಂತೆಯ ಗೆರೆಗಳು ಕಂಡಿದ್ದವು. ಇದು ಅಷ್ಟಕ್ಕೇ ನಿಲ್ಲಲಿಲ್ಲ. ಕಳೆದ ತಿಂಗಳು ರಾಜಕೋಟ್‌ನ ಖೋದಲಧಾಮ್‌ನ ಸಮಾವೇಶದಲ್ಲಿ ಲೆಹುವಾ ಪಟೇಲ್ ಸಮುದಾಯ ‘ಪಾಟಿದಾರ ಪಟೇಲ್ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಬಿಜೆಪಿ ಕೊಡದೇ ಇದ್ದರೆ ಆಮ್ ಆದ್ಮಿ ಪಕ್ಷ ಒಂದು ಒಳ್ಳೆ ವಿಕಲ್ಪ’ ಎಂದು ಘೋಷಿಸಿತ್ತು.

ಆಪ್‌ ಏನಾದರೂ ಪಟೇಲರ ಸಿಟ್ಟಿನ ಲಾಭ ಪಡೆದರೆ ಕಾಂಗ್ರೆಸ್‌ಗೆ ಲಾಭ ಆಗಬಹುದು ಎಂಬ ಲೆಕ್ಕಾಚಾರದಿಂದ ಬಿಜೆಪಿ ಮತ್ತು ಮೋದಿ ಪಟೇಲರನ್ನೇ ಮುಖ್ಯಮಂತ್ರಿಯಾಗಿ ಮಾಡಿದ್ದಾರೆ. ಅಪರಿಚಿತ ಅನನುಭವಿ ಆದರೂ ಸರಿ, ಮಾತು ಕೇಳುವ ಪ್ರಬಲ ಸಮುದಾಯದವನಾದರೆ ಸಾಕು, ನಷ್ಟತಡೆಯಬಹುದು. ಹೇಗೂ ಮೋದಿ ಹೆಸರು ಇದ್ದೇ ಇದೆ ಎಂಬುದು ಬಿಜೆಪಿ ಲೆಕ್ಕಾಚಾರ ಇದ್ದ ಹಾಗೆ ಕಾಣುತ್ತಿದೆ. ಹೀಗಾಗಿ 6 ವರ್ಷದ ಹಿಂದೆ ಅಹಮದಾಬಾದ್‌ನಲ್ಲಿ ಕಾರ್ಪೊರೇಟರ್‌ ಆಗಿದ್ದ ಭೂಪೇಂದ್ರ ಭಾಯಿ ಪಟೇಲ್ ಇವತ್ತು ಮುಖ್ಯಮಂತ್ರಿ ಆಗಿದ್ದಾರೆ. ಮೋದಿ ಮನಸ್ಸಿನಲ್ಲೇನಿದೆ ಬಲ್ಲವರಾರು?

ಕರ್ನಾಟಕದ ರಾಜಕಾರಣಿಗಳಿಗೆ ದೆಹಲಿಯಲ್ಲೀಗ ಪ್ರಹ್ಲಾದ್ ಜೋಶಿ ಆಪತ್ಪಾಂಧವ

ಮೂಲೆಯಲ್ಲಿ ಕುಳಿತಿದ್ದ ಭೂಪೇಂದ್ರ!

ನಿನ್ನೆ ಗಾಂಧಿನಗರದ ಕಮಲಮ…ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಗೆ ಬರುವುದಕ್ಕಿಂತ ಮುಂಚೆ ಮೊದಲ ಬಾರಿಯ ಶಾಸಕ ಭೂಪೇಂದ್ರ ಭಾಯಿ ಪಟೇಲ್‌ಗೆ ಸಾದಾ ಕುರ್ಚಿ ಬಿಟ್ಟುಕೊಡಲೂ ಯಾರೂ ತಯಾರಿರಲಿಲ್ಲ. ಸಭೆಗೆ ಬಂದವರು ಮೂಲೆಯಲ್ಲಿ ಸಿಕ್ಕ ಕುರ್ಚಿಯಲ್ಲಿ ಕುಳಿತುಕೊಂಡಿದ್ದರು. ಯಾವಾಗಲೂ ಗೆಲ್ಲುವ ಎತ್ತಿನ ಬೆನ್ನು ಹತ್ತುವ ಪತ್ರಕರ್ತರು ಮತ್ತು ಕ್ಯಾಮೆರಾಗಳು ನಿತಿನ್‌ ಪಟೇಲ್‌, ಮನಸುಖ್‌ ಮಾಂಡವೀಯ, ಪುರುಷೋತ್ತಮ್‌ ರೂಪಾಲಾ ಬೆನ್ನು ಹತ್ತಿದ್ದವೇ ಹೊರತು ಭೂಪೇಂದ್ರ ಭಾಯಿಯನ್ನು ಒಬ್ಬರೂ ಮಾತನಾಡಿಸಿರಲಿಲ್ಲ.

ಆದರೆ ನಿರ್ಗಮಿತ ಮುಖ್ಯಮಂತ್ರಿ ವಿಜಯ… ರೂಪಾಣಿ ಅವರು ಭೂಪೇಂದ್ರ ಭಾಯಿ ಹೆಸರು ಸೂಚಿಸಿದಾಗ ಎಲ್ಲರೂ ಆವಾಕ್ಕಾಗಿದ್ದರು. ಆಗ ಮುಖ್ಯಮಂತ್ರಿ ಆಗುವ ಆಸೆ ಇಟ್ಟುಕೊಂಡಿದ್ದ ನಿತಿನ್‌ ಪಟೇಲ್‌ ಮುಖ ಸಿಂಡರಿಸಿಕೊಂಡಿದ್ದು ಬಿಜೆಪಿಯೊಳಗಿನ ಬಣ ರಾಜಕೀಯದ ಕಥೆ ಹೇಳುತ್ತಿತ್ತು. ಏಕಾಏಕಿ ಎಲ್ಲವೂ ಬದಲಾಯಿತು. ಭೂಪೇಂದ್ರ ಭಾಯಿಗೆ ಹಾರ ತುರಾಯಿ ತೊಡಿಸಿ, ಸಿಹಿ ತಿನ್ನಿಸುವುದು ಆರಂಭ ಆದರೆ, ಮೋದಿ ಸಮಕಾಲೀನ ನಿತಿನ್‌ ಪಟೇಲ್‌ ಕಾಟಾಚಾರಕ್ಕೆ ಮುಖ್ಯಮಂತ್ರಿಯನ್ನು ಅಭಿನಂದಿಸಿ ನಿರ್ಗಮಿಸಿದರು. ಈ ಸಿಂಹಾಸನದ ಮಹಿಮೆ ನೋಡಿ, ಒಂದು ಕ್ಷಣದಲ್ಲಿ ಒಬ್ಬರನ್ನು ಎಲ್ಲಿಂದ ಎಲ್ಲಿಗೋ ಒಯ್ಯಬಲ್ಲದು. ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ 7 ವರ್ಷ ಮಂತ್ರಿಯಾದರೂ ಆಗಿದ್ದರು. ಭೂಪೇಂದ್ರ ಹೊಚ್ಚ ಹೊಸಬ. ಏಕ್‌ದಂ ಮುಖ್ಯಮಂತ್ರಿ ಕುರ್ಚಿ ಮೇಲೆ ವಿರಾಜಮಾನರಾಗಲಿದ್ದಾರೆ. ಕರ್ನಾಟಕದ ಜೊತೆ ಸಮೀಕರಿಸಿ ಹೇಳುವುದಾದರೆ ಅರವಿಂದ ಬೆಲ್ಲದರನ್ನು ಮುಖ್ಯಮಂತ್ರಿ ಮಾಡಿದ ಹಾಗೆ.

ಅಮಿತ್‌ ಶಾ ವರ್ಸಸ್‌ ಆನಂದಿ ಬೆನ್‌

ಗುಜರಾತ್‌ನಲ್ಲಿ ನರೇಂದ್ರ ಮೋದಿ ಪರಮೋಚ್ಚ ಜನಪ್ರಿಯ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಕೆಳಗಡೆ ಹತ್ತಾರು ಬಣಗಳಿವೆ. ಅಮಿತ್‌ ಶಾಗೆ ಗುಜರಾತ್‌ನ ಹೊರಗಡೆ ಭಾರಿ ಗೌರವ, ಮಾನ್ಯತೆ ಇದೆ. ಆದರೆ ಅಮಿತ್‌ ಶಾರ ಒಂದು ಕಾಲದ ಸಹೋದ್ಯೋಗಿಗಳಾದ ಆನಂದಿ ಬೆನ್‌ ಪಟೇಲ್‌, ನಿತಿನ್‌ ಪಟೇಲ್‌, ಪುರುಷೋತ್ತಂ ರೂಪಾಲಾ ತರಹದ ಪ್ರಬಲ ಜಾತಿಯ ನಾಯಕರ ನಿಷ್ಠೆ ಮೋದಿಗೆ ಮಾತ್ರ. ಅಮಿತ್‌ ಭಾಯಿ ಜೊತೆ ಅವರ ಸಂಬಂಧ ಅಷ್ಟಕಷ್ಟೆ.

ಅಮಿತ್‌ ಶಾ ಮೋದಿಯನ್ನು ಒಪ್ಪಿಸಿ ಆನಂದಿ ಬೆನ್‌ ಪಟೇಲ್‌ರನ್ನು ತೆಗೆಸಿ ತನ್ನ ಮಿತ್ರ ವಿಜಯ್‌ ರೂಪಾಣಿಯನ್ನು ಕೂರಿಸಿದರು ಎಂಬ ಸಿಟ್ಟು ಪಾಟಿದಾರ ಪಟೇಲ್ ಸಮುದಾಯದಲ್ಲಿ ಜಾಸ್ತಿ ಇತ್ತು. ಹೀಗಾಗಿ 2 ತಿಂಗಳ ಹಿಂದೆ ಸೌರಾಷ್ಟ್ರದ ಪಾಟಿದಾರ ಪಟೇಲರಾದ ಮನಸುಖ್‌ ಮಾಂಡವೀಯ ಮತ್ತು ಪುರುಷೋತ್ತಮ ರೂಪಾಲಾರಿಗೆ ಕ್ಯಾಬಿನೆಟ್‌ ದರ್ಜೆಗೆ ಬಡ್ತಿ ನೀಡಿದ್ದ ಮೋದಿ, ಈಗ ಮತ್ತೊಬ್ಬ ಪಾಟಿದಾರನನ್ನು ತಂದು ಮುಖ್ಯಮಂತ್ರಿ ಮಾಡಿದ್ದಾರೆ.

ಗುಜರಾತ್‌ ಬಿಜೆಪಿ ಮೂಲಗಳು ಹೇಳುವ ಪ್ರಕಾರ ಭೂಪೇಂದ್ರ ಪಟೇಲ್ ಆನಂದಿ ಬೆನ್‌ ಪಟೇಲ್‌ರ ಆತ್ಮೀಯರು. ಭೂಪೇಂದ್ರ ಭಾಯಿ ಆನಂದಿ ಬೆನ್‌ ಘಟಿಲೋಡಿಯಾದ ಶಾಸಕಿ ಆಗಿದ್ದಾಗ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಅಹಮದಾಬಾದ್‌ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. 2017ರಲ್ಲಿ ಆನಂದಿ ಬೆನ್‌ ಪಟೇಲರ ಒಪ್ಪಿಗೆ ನಂತರವೇ ಭೂಪೇಂದ್ರ ಭಾಯಿಗೆ ಟಿಕೆಟ್‌ ನೀಡಲಾಗಿತ್ತು. ಈಗ ಶಾಸಕರಾದ 4 ವರ್ಷದಲ್ಲಿ ಮುಖ್ಯಮಂತ್ರಿ ಆಗಿದ್ದಾರೆ. ಸಂಕೇತಗಳನ್ನು ಗಮನಿಸಿದರೆ ನಿತಿನ್‌ ಪಟೇಲ್ ಸೌರಭ ಪಟೇಲ್‌, ರಣಚೋಡ್‌ ದಾಸ್‌ ಫಾಲ್ದುರಂಥ ಹಿರಿಯರೆಲ್ಲರೂ ಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ.

ಕೊನೆ ಕ್ಷಣದವರೆಗೂ ಗಪ್‌ಚುಪ್‌

ಗುರುವಾರ ರಾತ್ರಿ ಅಮಿತ್‌ ಶಾ ಏಕಾಏಕಿ ಗಾಂಧಿನಗರಕ್ಕೆ ಬಂದು ತಡರಾತ್ರಿ ವಿಜಯ್ ರೂಪಾಣಿಯನ್ನು ಕರೆಸಿ ಮೋದಿ ತೆಗೆದುಕೊಂಡ ನಿರ್ಣಯದ ಬಗ್ಗೆ ತಿಳಿಸಿದ್ದರು. ಆದರೆ ಶನಿವಾರ ಮಧ್ಯಾಹ್ನ ರಾಜೀನಾಮೆ ನೀಡುವ ವಿಷಯ ಮೋದಿ, ಅಮಿತ್‌ ಶಾ, ಬಿ.ಎಲ್ ಸಂತೋಷ್‌, ಭೂಪೇಂದ್ರ ಯಾದವ್‌ ಮತ್ತು ವಿಜಯ್ ರೂಪಾಣಿ ಬಿಟ್ಟರೆ ಯಾರಿಗೂ ಗೊತ್ತಿರಲಿಲ್ಲ. ಶನಿವಾರ ಬೆಳಿಗ್ಗೆ ಪಟೇಲ್ ಸಮುದಾಯದ ಸರ್ದಾರ್‌ ಡ್ಯಾಮ್‌ ಉದ್ಘಾಟನೆಯಲ್ಲಿ ನರೇಂದ್ರ ಮೋದಿ ದಿಲ್ಲಿಯಿಂದ ಪಾಲ್ಗೊಂಡಿದ್ದರೆ, ವಿಜಯ್ ರೂಪಾಣಿ, ನಿತಿನ್‌ ಪಟೇಲ್ ಗಾಂಧಿನಗರದಿಂದ ಪಾಲ್ಗೊಂಡಿದ್ದರು.

ಅಲ್ಲಿಂದ ನೇರವಾಗಿ ರಾಜಭವನಕ್ಕೆ ತೆರಳಿದ ವಿಜಯ್ ರೂಪಾಣಿ ರಾಜೀನಾಮೆ ಸಲ್ಲಿಸಿದಾಗ ಗುಜರಾತ್‌ನಿಂದ ದಿಲ್ಲಿವರೆಗೆ ಆಶ್ಚರ್ಯದ ಗೆರೆಗಳು ಮುಟ್ಟಿದವು. ಭೂಪೇಂದ್ರ ಪಟೇಲ್ ಆಯ್ಕೆ ವಿಷಯವೂ ಅಷ್ಟೇ. ಸಭೆಯಲ್ಲಿ ವಿಜಯ… ರೂಪಾಣಿ ಸೂಚಿಸುವವರೆಗೂ ವೀಕ್ಷಕರಾದ ನರೇಂದ್ರ ಸಿಂಗ್‌ ತೋಮರ್‌ ಮತ್ತು ಪ್ರಹ್ಲಾದ್‌ ಜೋಶಿ ಬಿಟ್ಟರೆ ಯಾರಿಗೂ ಇದು ಗೊತ್ತಿರಲಿಲ್ಲ. ದಿಲ್ಲಿಯಲ್ಲಿ ಫೋನ್‌ ಮೇಲೆಯೇ ಸಂಸದೀಯ ಮಂಡಳಿ ಸಭೆ ನಡೆಸಿದ ನಂತರ ಜೆ.ಪಿ.ನಡ್ಡಾ ನರೇಂದ್ರ ಸಿಂಗ್‌ ತೋಮರ್‌ಗೆ ಫೋನ್‌ ಮಾಡಿ ಭೂಪೇಂದ್ರ ಭಾಯಿ ಹೆಸರು ಅಂತಿಮಗೊಂಡ ಬಗ್ಗೆ ತಿಳಿಸಿದರಂತೆ. ಯಾರನ್ನು ನಾಯಕನಾಗಿ ಕೂರಿಸಬೇಕು, ಇಳಿಸಬೇಕು ಎನ್ನುವುದು ಒಂದು ಪಕ್ಷದ ಆಂತರಿಕ ವಿಷಯ. ಆದರೆ 24 ಗಂಟೆ ಚಾನಲ…ಗಳು, ಸೋಷಿಯಲ… ಮೀಡಿಯಾಗಳು ಮತ್ತು ಸುದ್ದಿಕೊಡುವ ಆಪ್ತ ಸಿಬ್ಬಂದಿಯಿಂದ ಹೇಗೆ ಇದನ್ನೆಲ್ಲ ರಹಸ್ಯವಾಗಿಡುತ್ತಾರೆ ಎನ್ನುವುದು ಮಾತ್ರ ಸೋಜಿಗ.

ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಬೊಮ್ಮಾಯಿ ಒಲ್ಲೆ ಎಂದರೂ ಸ್ಥಾನ ಪಡೆದಿದ್ಹೇಗೆ ಶಶಿಕಲಾ ಜೊಲ್ಲೆ?

ಮೋದಿ ಆಡಿದ್ದ ಚಾಣಾಕ್ಷ ಆಟ

ಕರ್ನಾಟಕದ ಲಿಂಗಾಯತರು, ಒಕ್ಕಲಿಗರು, ಗುಜರಾತ್‌ನ ಪಟೇಲರು, ಉತ್ತರ ಪ್ರದೇಶದ ಜಾಟರು 1947ರಿಂದ 1967ರ ವರೆಗೂ ಕಾಂಗ್ರೆಸ್‌ನ ನಿಷ್ಠಾವಂತ ಮತದಾರರು. ಪ್ರಮುಖವಾಗಿ ಜಮೀನುದಾರ ಜಾತಿಗಳು. 1967ರಿಂದ ಈ ಜಾತಿಗಳು ನಿಧಾನವಾಗಿ ಕಾಂಗ್ರೆಸ್‌ನಿಂದ ದೂರ ಸರಿಯಲು ಆರಂಭಿಸಿದವು. 1970ರಲ್ಲಿ ಗುಜರಾತ್‌ನಲ್ಲಿ ಮಾಧವ ಸಿಂಗ್‌ ಸೋಲಂಕಿ ಕ್ಷತ್ರಿಯ, ಹರಿಜನ, ಅಹಿರರು ಮತ್ತು ಮುಸ್ಲಿಮರನ್ನು ಒಟ್ಟಿಗೆ ತಂದಾಗ ದುಡ್ಡಿನಿಂದ ಪ್ರಬಲ ಪಾಟಿದಾರ ಪಟೇಲರು ಮೊದಲು ಚಿಮನ್‌ ಭಾಯಿ ಪಟೇಲರ ಜೊತೆ ಜನತಾ ಪಕ್ಷದ ಹಿಂದೆ, ನಂತರ ಕೇಶುಭಾಯಿ ಪಟೇಲರ ಜೊತೆಗೆ ಬಿಜೆಪಿ ಹಿಂದೆ ಬಂದರು.

ಆದರೆ ಕೇಶುಭಾಯಿ ಆಡಳಿತದ ವಿರುದ್ಧ ಪದೇ ಪದೇ ಬಂಡಾಯಗಳು ಆಗಿ ಆಡಳಿತ ಕುಸಿದಾಗ ಅತ್ಯಂತ ಸಣ್ಣ ಗಾಣಿಗ ಜಾತಿಯ ನರೇಂದ್ರ ಮೋದಿ ಮುಖ್ಯಮಂತ್ರಿ ಆದರು. ಆಗ ಸಹಜವಾಗಿ ಪಟೇಲರಿಗೆ ಖುಷಿ ಇರಲಿಲ್ಲ. ಆದರೆ ದಂಗೆಗಳು ಆಗಿ ಹಿಂದೂ ಮುಸ್ಲಿಂ ಧ್ರುವೀಕರಣಗೊಂಡಾಗ ಪಟೇಲರು ಬಿಜೆಪಿಯಿಂದ ದೂರ ಹೋಗಿರಲಿಲ್ಲ. ನರೇಂದ್ರ ಮೋದಿ ವಿರುದ್ಧ ಕೇಶುಭಾಯಿ, ಗೋವರ್ಧನ್‌ ಝಡಾಫಿಯಾರಂಥ ಪಟೇಲ… ನಾಯಕರು ಬಂಡಾಯ ಹೂಡಿದರೂ ಹಿಂದುತ್ವ ಮತ್ತು ಅಭಿವೃದ್ಧಿಯ ಕಾರಣದಿಂದ ಸಾಮಾನ್ಯ ಪಟೇಲ… ಮತದಾರರಲ್ಲಿ 60 ಪ್ರತಿಶತ ಜನ ಬಿಜೆಪಿ ಬಿಟ್ಟು ದೂರ ಹೋಗಿರಲಿಲ್ಲ. ಕರ್ನಾಟಕದಲ್ಲಿ ದೇವರಾಜ್‌ ಅರಸ್‌ ಅಕ್ಕಪಕ್ಕದಲ್ಲಿ ಲಿಂಗಾಯತರು, ಒಕ್ಕಲಿಗರನ್ನು ಕೂರಿಸಿಕೊಂಡಂತೆ ಮೋದಿ ಕೂಡ ತಮ್ಮ ಸಂಪುಟದಲ್ಲಿ 8 ಪಟೇಲರನ್ನು, ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪಟೇಲರು ಇರುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಯಾವಾಗ ಮೋದಿ ದಿಲ್ಲಿಗೆ ಹೋದರೋ ಬಿಜೆಪಿಯಿಂದ ಅಸಮಾಧಾನಗೊಂಡಿದ್ದ ಯುವ ಪಟೇಲ… ಹುಡುಗರು ಮೀಸಲಾತಿ ಬೇಕೆಂದು ಬೀದಿಗೆ ಇಳಿದರು. 2017ರಲ್ಲಿ ಕೊನೆಯ 8 ದಿನ ಮೋದಿ ನನಗೆ ಮತ ನೀಡಿ ಎಂದು ಕೇಳಿಕೊಂಡಿದ್ದಕ್ಕೆ ಹೇಗೋ ಪ್ರಯಾಸದಿಂದ ಬಿಜೆಪಿ ಗೆದ್ದಿತ್ತು. ಆದರೆ ಪ್ರತಿ ಬಾರಿ ಅದು ಸಾಧ್ಯ ಆಗಲಿಕ್ಕಿಲ್ಲ ಎಂದು ಸ್ವತಃ ಮೋದಿಗೆ ಅನ್ನಿಸಿದೆ. ಅದಕ್ಕೇ ಒಂದು ವರ್ಷದ ಮೊದಲು ಮೋದಿ ಪ್ರಬಲ ಜಾತಿಗೆ ಸೇರಿದ, ಆದರೆ ಹೆಚ್ಚು ಪರಿಚಯ ಇಲ್ಲದ, ಮೊದಲ ಬಾರಿಯ ಶಾಸಕನನ್ನು ಮುಖ್ಯಮಂತ್ರಿ ಮಾಡಿದ್ದಾರೆ.

ಇನ್ನೊಬ್ಬ ಭೂಪೇಂದ್ರ ಬಗ್ಗೆ ಎಚ್ಚರ!

ಮೋದಿ ಮತ್ತು ಅಮಿತ್‌ ಶಾ ಮುಖ್ಯಮಂತ್ರಿ ಬದಲಾಯಿಸುವುದಿದ್ದರೆ ಪರಮಾಪ್ತ ಭೂಪೇಂದ್ರ ಯಾದವ್‌ರನ್ನು ಆ ರಾಜ್ಯಕ್ಕೆ ಕಳುಹಿಸಿ ವರದಿ ತರಿಸುತ್ತಾರೆ ಅನ್ನಿಸುತ್ತದೆ. ಕರ್ನಾಟಕದಲ್ಲಿ ಮೇನಲ್ಲಿ ಮೂರು ದಿನ ಬೆಂಗಳೂರಿಗೆ ಬಂದಿದ್ದ ಭೂಪೇಂದ್ರ ಯಾದವ್‌ ಒಂದು ರೀತಿ ಜನರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ದಿಲ್ಲಿಗೆ ವರದಿ ಒಯ್ದಿದ್ದರು. ಕೇಳಿದರೆ, ‘ಇಲ್ಲ. ಸಂಬಂಧಿಕರ ಮದುವೆಗೆ ಬಂದಿದ್ದೆ’ ಎಂದು ಹೇಳಿದ್ದರು. ಗುಜರಾತ್‌ಗೂ ಜೂನ್‌ನಲ್ಲಿ ಎರಡು ದಿನ ಹೋಗಿದ್ದ ಭೂಪೇಂದ್ರ ಯಾದವ್‌ ಅಲ್ಲಿ ಕಾರ್ಯಕರ್ತರನ್ನು ಭೇಟಿ ಆಗಿದ್ದರು. ಕೇಳಿದರೆ, ‘ವಿಜಯ… ರೂಪಾಣಿ ಬಳಿ ತುಂಬಾ ಆಮ್ಲಜನಕ ಇದೆ’ ಎಂದಿದ್ದರು. ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳು ಭೂಪೇಂದ್ರ ಯಾದವ್‌ ಭೇಟಿಗಳ ಬಗ್ಗೆ ಜಾಗರೂಕರಾಗಿರುವುದು ಒಳ್ಳೆಯದು. ಬಹುಶಃ ಭೂಪೇಂದ್ರ ಯಾದವ್‌ ಅವರು ಮೋದಿ ಮತ್ತು ಅಮಿತ್‌ ಶಾರ ಕಣ್ಣು, ಕಿವಿ, ಮೂಗು ಇರಬಹುದು.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!