
ನವದೆಹಲಿ (ಅ. 15): ಅಪನಗದೀಕರಣದ ಸಂದರ್ಭದಲ್ಲಿ ಚಲಾವಣೆಗೆ ಬಂದ 2 ಸಾವಿರ ರು. ಮುಖಬೆಲೆಯ ನೋಟುಗಳ ಮುದ್ರಣವನ್ನೇ ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ) ಸದ್ದಿಲ್ಲದೇ ಸ್ಥಗಿತಗೊಳಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಇದರಿಂದಾಗಿ ಈ ನೋಟಿನ ಚಲಾವಣೆ ಸ್ಥಗಿತವಾಗುತ್ತಾ ಎಂಬ ಪ್ರಶ್ನೆ ಕೇಳಿಬರಲು ಆರಂಭಿಸಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ 2000 ರು. ಮುಖಬೆಲೆಯ ಒಂದೇ ಒಂದು ನೋಟನ್ನೂ ಮುದ್ರಿಸಲಾಗಿಲ್ಲ ಎಂದು ಮಾಹಿತಿ ಹಕ್ಕು (ಆರ್‌ಟಿಐ) ಅಡಿ ಸ್ವತಃ ಆರ್‌ಬಿಐ ಮಾಹಿತಿ ನೀಡಿದೆ. ಜತೆಗೆ ವರ್ಷದಿಂದ ವರ್ಷಕ್ಕೆ 2000 ರು. ಮುಖಬೆಲೆಯ ನೋಟುಗಳ ಮುದ್ರಣ ಪ್ರಮಾಣವನ್ನು ಇಳಿಕೆ ಮಾಡಿದ ವಿಷಯವನ್ನೂ ಬಹಿರಂಗಪಡಿಸಿದೆ.
2016-17ನೇ ಸಾಲಿನಲ್ಲಿ 2 ಸಾವಿರ ರು. ಮುಖಬೆಲೆಯ 3542.991 ದಶಲಕ್ಷ ನೋಟುಗಳನ್ನು ಮುದ್ರಿಸಲಾಗಿತ್ತು. 2017-18ರಲ್ಲಿ ಇದು 111.507 ದಶಲಕ್ಷಕ್ಕೆ ಇಳಿಕೆಯಾಗಿತ್ತು. 2018-19ರಲ್ಲಿ 46.690 ದಶಲಕ್ಷ ನೋಟುಗಳನ್ನು ಪ್ರಿಂಟ್ ಮಾಡಲಾಗಿತ್ತು ಎಂಬ ವಿಷಯ ಆರ್‌ಬಿಐ ನೀಡಿರುವ ಉತ್ತರದಲ್ಲಿದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.
ಕಾರಣ ಏನಿರಬಹುದು?:
ಕಪ್ಪು ಹಣವನ್ನು ನಿರ್ನಾಮ ಮಾಡುವ ಸಲುವಾಗಿಯೇ ರಿಸವ್‌ರ್ ಬ್ಯಾಂಕ್ 2000 ರು. ಮುಖಬೆಲೆಯ ನೋಟುಗಳನ್ನು ಹಿಂಪಡೆಯುತ್ತಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 2000 ರು. ಮುಖಬೆಲೆಯ ನೋಟುಗಳನ್ನು ಕಳ್ಳ ಸಾಗಣೆ ಹಾಗೂ ಅಕ್ರಮ ಉದ್ದೇಶಕ್ಕೆ ಬಳಸುವುದು ಭಾರಿ ಸುಲಭವಾಗಿದೆ. ಸರ್ಕಾರ ನಡೆಸುತ್ತಿರುವ ಕಪ್ಪು ಹಣ ವಿರುದ್ಧದ ಹೋರಾಟಕ್ಕೆ ಇದು ಪ್ರತಿಕೂಲವಾಗಿ ಪರಿಣಮಿಸಿದೆ ಎಂಬುದು ತಜ್ಞರ ಅಂಬೋಣ. ಇದಕ್ಕೆ ಇಂಬು ನೀಡುವಂತೆ, ಆಂಧ್ರಪ್ರದೇಶ- ತಮಿಳುನಾಡು ಗಡಿಯಲ್ಲಿ 2 ಸಾವಿರ ರು. ಮುಖಬೆಲೆಯ 6 ಕೋಟಿ ರು. ಮೌಲ್ಯದ ನೋಟುಗಳನ್ನು ಇತ್ತೀಚೆಗೆ ವಶಪಡಿಸಿಕೊಳ್ಳಲಾಗಿತ್ತು.
ಪಾಕಿಸ್ತಾನ ಮೂಲಕ 2000 ರು. ಮುಖಬೆಲೆಯ, ಉತ್ಕೃಷ್ಟದರ್ಜೆಯ ಖೋಟಾನೋಟು ದೇಶಕ್ಕೆ ಬರುತ್ತಿರುವುದನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇತ್ತೀಚೆಗಷ್ಟೇ ಬಯಲಿಗೆ ಎಳೆದಿತ್ತು. ಈ ಸಂದರ್ಭದಲ್ಲೇ ಆ ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತಗೊಂಡಿರುವುದು ಗಮನಾರ್ಹವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ