ರಾಮನ ದೇಗುಲದಲ್ಲಿ ಕೃಷ್ಣನ ಲೆಕ್ಕ! 500 ವರ್ಷಗಳ ಕನಸು ನನಸಾದ ಖುಷಿಯಲ್ಲಿದ್ದ ಕೋಟ್ಯಂತರ ರಾಮಭಕ್ತರಿಗೆ ಘಾಸಿ ಮಾಡಿದ ಹುಂಡಿ ಕಳ್ಳರು!

Kannadaprabha News   | Kannada Prabha
Published : Jul 02, 2026, 09:32 AM IST
vRam Temple Donation Theft Explained how did and who committed it

ಸಾರಾಂಶ

ಅಯೋಧ್ಯೆ ರಾಮಮಂದಿರದ ಹುಂಡಿಯಿಂದ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ದೇಗುಲದ ನೌಕರರೇ ಕದ್ದಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. 42 ದಿನಗಳಲ್ಲಿ 70ಕ್ಕೂ ಹೆಚ್ಚು ಬಾರಿ ನಡೆದ ಈ ವ್ಯವಸ್ಥಿತ ಲೂಟಿಯ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದ್ದು, 8 ಆರೋಪಿಗಳನ್ನು ಬಂಧಿಸಲಾಗಿದೆ. ಸಂಪೂರ್ಣ ವಿವರ ಇಲ್ಲಿದೆ.

ಶಿವರಾಜ ವಿಶ್ವನಾಥ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಎಂಬುದು 500 ವರ್ಷಗಳ ಕನಸು. 2024ರ ಜ.22ರಂದು ಅದು ಸಾಕಾರಗೊಂಡಾಗ ಕೋಟ್ಯಂತರ ರಾಮಭಕ್ತರ ಸಂತಸಕ್ಕೆ ಪಾರವೇ ಇರಲಿಲ್ಲ. ದೇಶದ ಮೂಲೆಮೂಲೆಗಳಿಂದ ಜನರು ಅಯೋಧ್ಯೆಗೆ ಹೋಗುವುದು, ರಾಮನ ದರ್ಶನ ಪಡೆದು ಮರಳುವುದು ನಡೆದೇ ಇತ್ತು. ಆದರೆ ಮಂದಿರ ಲೋಕಾರ್ಪಣೆಗೊಂಡ ಎರಡೇ ವರ್ಷಗಳಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ದೇಗುಲದ ಹುಂಡಿಗೇ ನೌಕರರು ಎಂದು ಕರೆಸಿಕೊಳ್ಳುತ್ತಿದ್ದ ಕೆಲವು ದುಷ್ಕರ್ಮಿಗಳು ಕನ್ನ ಹಾಕಿರುವುದರಿಂದ ರಾಮಭಕ್ತರ ಮನಸ್ಸಿಗೆ ಘಾಸಿ ಆಗಿದೆ. ಉತ್ತಮ ಆಡಳಿತಕ್ಕೆ ‘ರಾಮರಾಜ್ಯ’ ಎಂಬ ಉದಾಹರಣೆ ನೀಡುತ್ತೇವೆ. ಅಂತಹ ರಾಮನ ಸನ್ನಿಧಾನದಲ್ಲೇ ಕಳ್ಳತನ ನಡೆದಿರುವುದು ಈಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.

ಇದು ಒಂದೆರಡು ಬಾರಿ ಆಗಿರುವ ಕಳ್ಳತನವಂತೂ ಇಲ್ಲ. ಏ.27 ರಿಂದ ಜೂ.5ರವರೆಗೆ (ಒಟ್ಟು 42 ದಿನದಲ್ಲಿ) 70ಕ್ಕೂ ಹೆಚ್ಚು ಬಾರಿ 8 ಆರೋಪಿಗಳು ಹುಂಡಿ ಹಣ ಎಗರಿಸಿದ್ದಾರೆ. ಸಣ್ಣದಾಗಿ ಕೇಳಿಬಂದ ಆರೋಪ ದೊಡ್ಡದಾಗುತ್ತಲೇ ಈ ಪ್ರಕರಣವನ್ನು ಜೂ.13ರಂದು ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿಗೆ ನೀಡಿದ್ದು 8 ಆರೋಪಿಗಳನ್ನು ಬಂಧಿಸಲಾಗಿದೆ. ಸ್ಥಳೀಯ ನ್ಯಾಯಾಲಯ ಆರೋಪಿಗಳಿಗೆ ಜುಲೈ 13ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಗಳಿಂದ ₹80 ಲಕ್ಷ, 1 ಕಾರು, 3 ಐಫೋನ್‌ ಜಪ್ತಿ ಮಾಡಲಾಗಿದೆ. 7.5 ಕೋಟಿ ರು. ಹುಂಡಿ ಹಣ ಲೂಟಿಯಾಗಿದೆ ಎಂದು ಎಸ್‌ಐಟಿ ತನಿಖಾ ಸಂಸ್ಥೆ ತಿಳಿಸಿದೆ.

ಬೆಳಕಿಗೆ ಬಂದಿದ್ದು ಹೇಗೆ?

ಜೂನ್ 7: ಅಯೋಧ್ಯೆ ರಾಮಮಂದಿರದಲ್ಲಿ 5 ರಿಂದ 7.5 ಕೋಟಿ ರು.ವರೆಗೆ ಹಣ ಲೂಟಿಯಾಗಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಪವನ್ ಪಾಂಡೆ ಆರೋಪ

ಜೂನ್ 8:200 ಕೋಟಿ ರು.ಗೂ ಹೆಚ್ಚು ಹಣ ಲೂಟಿಯಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಗಂಭೀರ ಆರೋಪ

ಜೂನ್ 9: ಸಿಬಿಐ ಮತ್ತು ಇ.ಡಿ. ತನಿಖೆ ಕೋರಿ ವಹಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಬಿಜೆಪಿ ನಾಯಕ ರಜನೀಶ್ ಸಿಂಗ್

ಜೂನ್ 10: ದೇಗುಲದಲ್ಲಿನ\B ಅಕ್ರಮದ ಬಗ್ಗೆ ವರದಿ ಕೇಳಿದ ಪ್ರಧಾನ ಮಂತ್ರಿ ಕಾರ್ಯಾಲಯ

ಜೂನ್ 11: ದೇಣಿಗೆ ಕಳವು ಆರೋಪವೇ ಸುಳ್ಳೆಂದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್

ಜೂನ್ 12: ಬ್ಯಾಂಕ್ ಖಾತೆಯ ಮಾಜಿ ಉಸ್ತುವಾರಿ ಮಹಿಪಾಲ ಸಿಂಗ್‌ರಿಂದ ಕೂಡ ದೇಣಿಗೆ ಲೂಟಿ ಬಗ್ಗೆ ಆರೋಪ

ಜೂನ್ 13: ಪ್ರಕರಣದ ಬಗ್ಗೆ ಉನ್ನತ ತನಿಖೆಗಾಗಿ 3 ಅಧಿಕಾರಿಗಳ ಎಸ್ಐಟಿ ರಚಿಸಿದ ಉತ್ತರ ಪ್ರದೇಶ ಸರ್ಕಾರ

ಜೂನ್ 24: ಉತ್ತರ ಪ್ರದೇಶ ಸರ್ಕಾರಕ್ಕೆ 150 ಪುಟದ ಮಧ್ಯಂತರ ವರದಿ ನೀಡಿದ ಎಸ್ಐಟಿ ಅಧಿಕಾರಿಗಳು

ಜೂನ್ 25: ಅಕ್ರಮದ ಬಗ್ಗೆ ಮೊದಲ ಎಫ್‌ಐಆರ್. ದೇಗುಲದಲ್ಲಿ ಕಾರ್ಯನಿರ್ವಹಿಸುತ್ತಿದ್ದ 8 ನೌಕರರ ಬಂಧನ

ಜೂನ್ 26: ಟ್ರಸ್ಟಿಗಳಾದ ಚಂಪತ್ ರಾಯ್ ಹಾಗೂ ಡಾ.ಅನಿಲ್ ಮಿಶ್ರಾ ರಾಜೀನಾಮೆ

=============

ಅಯೋಧ್ಯೆ ಮಾನ ಕಳೆದ 8 ಮಂದಿ

ರಾಮ್ ಶಂಕರ್ ಯಾದವ್ ಅಲಿಯಾಸ್‌ ಟಿನ್ನು ಯಾದವ್:\B ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಜಿ ಕಾರು ಚಾಲಕ. ಹಣ ಎಣಿಕೆ ಉಸ್ತುವಾರಿಯಾಗಿದ್ದ. ದೇಣಿಗೆ ಬಾಕ್ಸ್ ಸಾಗಿಸುತ್ತಿದ್ದ.

ಚಾಲಕ ಈಗ 50 ಕೋಟಿ ಆಸ್ತಿ ಮಾಲೀಕ!

ಮೊದಲು ಆಟೋ ಚಾಲಕನಾಗಿದ್ದ ಟಿನ್ನು ಯಾದವ್ ನಂತರ ರಾಮಮಂದಿರ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ಅವರ ಕಾರು ಚಾಲಕನಾಗಿ ಸೇರಿದ್ದ. ಬಳಿಕ ಚಾಲಕನ ಕೆಲಸ ಬಿಟ್ಟು ಅಯೋಧ್ಯೆಯ ವಿಮಾನ ನಿಲ್ದಾಣ ಬಳಿ ₹50 ಕೋಟಿ ಬೆಲೆಬಾಳುವ 10 ರೂಂಗಳ ವಸತಿಗೃಹ, 3 ರೆಸ್ಟೋರೆಂಟ್‌ನಲ್ಲಿ ಪಾಲುದಾರಿಕೆ, ಲಖನೌದಲ್ಲಿ ಮನೆ, ಫಾರ್ಚುನರ್ ಕಾರ್ ಹೊಂದಿದ್ದಾನೆ.

2. ರಾಮ ಶಂಕರ್ ಮಿಶ್ರಾ: ರಾಮಮಂದಿರದ ಕಾಣಿಕೆ ಹುಂಡಿ ಎಣಿಸುತ್ತಿದ್ದ ಸಿಬ್ಬಂದಿ

3. ಅನುಕಲ್ಪ ಮಿಶ್ರಾ: ರಾಮ್ ಶಂಕರ್ ಮಿಶ್ರಾ ಮಗ, ಹುಂಡಿ ಎಣಿಕೆಯ ನೌಕರ

20 ಸಾವಿರ ರು. ಸಂಬಳ ಪಡೆವವನ ಬಳಿ ಫ್ಲಾಟ್‌

20,000 ರು. ಸಂಬಳ ಪಡೆಯುವ ಈತ ನೋಯ್ಡಾದಲ್ಲಿ ₹65 ಲಕ್ಷದ ಫ್ಲ್ಯಾಟ್ ಖರೀದಿಸಿದ್ದಾನೆ ಮತ್ತು ಈತನ ಹುಟ್ಟೂರಲ್ಲಿ ಕೋಟಿ ರು. ವೆಚ್ಚದ ಫಾರ್ಮ್‌ ಹೌಸ್‌ ನಿರ್ಮಿಸಿದ್ದಾನೆ. ಒಂದು ವಾಹನ ಹೊಂದಿದ್ದು, ಮತ್ತೊಂದು ಸ್ಕಾರ್ಪಿಯೋ ಎಸ್‌ಯುವಿ ಕಾರ್‌ ಬುಕ್‌ ಮಾಡಲು ಮುಂದಾಗಿದ್ದ.

4. ಲವ್ ಕುಶ್ ಮಿಶ್ರಾ: ರಾಮ ಶಂಕರ್ ಮಿಶ್ರಾ ಅಳಿಯ, ಹುಂಡಿ ಎಣಿಕೆ ಸಿಬ್ಬಂದಿ

₹15000 ಸಂಬಳದವನ ಬಳಿ ₹25 ಲಕ್ಷದ ಮನೆ

ದೇಗುಲದಲ್ಲಿ 12-15 ಸಾವಿರ ರು. ಸಂಬಳ ಪಡೆಯುತ್ತಿದ್ದ. ಅಯೋಧ್ಯೆ-ಲಖನೌ ಹೈವೇ ಬಳಿ 8.8 ಲಕ್ಷ ರು. ಕೊಟ್ಟು ಹೆಂಡತಿಯ ಹೆಸರಿನಲ್ಲಿ ಸೈಟ್ ಖರೀದಿಸಿ ಮನೆ ಕಟ್ಟಿಸುತ್ತಿದ್ದಾನೆ. ಮನೆಯ ಇಂದಿನ ಮೌಲ್ಯ ಸುಮಾರು 25 ಲಕ್ಷ ರು. ಆಗಿದೆ. ಎಸ್ಐಟಿ ದಾಳಿ ವೇಳೆ ಈತನ ಮನೆಯಲ್ಲಿ ₹12 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಈತ ₹1 ಲಕ್ಷಕ್ಕೂ ಹೆಚ್ಚಿನ ಮೊತ್ತದ ಬೈಕ್‌ ಸಹ ಖರೀದಿಸಿದ್ದಾನೆ.

5. ಅವಿನಾಶ್ ಶುಕ್ಲಾ: ರಾಮ ಮಂದಿರದ ಪರಿಚಾರಕ.

ಬ್ಯಾಂಕ್ ಖಾತೆಯಲ್ಲಿ ₹5 ಲಕ್ಷ ಹಣ ಸೇರಿ ₹58 ಲಕ್ಷ ಜಪ್ತಿ.

6. ಮನೀಶ್‌ ಯಾದವ್:ಹುಂಡಿ ಎಣಿಕೆ ಸಿಬ್ಬಂದಿ

ಈತನ ಬ್ಯಾಂಕ್‌ ಖಾತೆಯಲ್ಲಿದ್ದ ₹36 ಲಕ್ಷ ಜಪ್ತಿ.

7. ಸುಭಾಷ್ ಚಂದ್ರ ಶ್ರೀ ವಾಸ್ತವ: ಬ್ಯಾಂಕ್ ಮಾಜಿ ಉದ್ಯೋಗಿ, ಎಣಿಕೆ ಸಿಬ್ಬಂದಿ ಉಸ್ತುವಾರಿ

8. ಕರುಣೇಶ್ ಪಾಂಡೆ:ಟ್ರಸ್ಟ್ ಹೆಸರಲ್ಲಿ ನಕಲಿ ರಶೀದಿ ಕೊಟ್ಟು ದುಡ್ಡು ಪಡೆದಿದ್ದ ಆರೋಪಿ

ನಕಲಿ ರಶೀದಿಯನ್ನು ಸೃಷ್ಟಿಸಿ ಭಕ್ತರಿಂದ ದೇಣಿಗೆ ರೂಪದಲ್ಲಿ ಬಂದಿದ್ದ ಚಿನ್ನ-ಬೆಳ್ಳಿ ಆಭರಣಗಳನ್ನು ಕದಿಯುತ್ತಿದ್ದ

ಹುಂಡಿ ಎಣಿಸುವ ಕೆಲಸಕ್ಕೆ 50 ಜನ

ಅಯೋಧ್ಯೆ ರಾಮಮಂದಿರದಲ್ಲಿ ಹುಂಡಿ ಎಣಿಸುವ ಕೆಲಸದಲ್ಲಿ 50 ಜನರು ಇದ್ದರು. ಆ ಪೈಕಿ 24 ಮಂದಿ ಎಣಿಸಲಾದ ದೇಣಿಗೆ ಹಣದ ಬಂಡಲ್ ಕಟ್ಟುವ ಸಿಬ್ಬಂದಿ. 12 ಜನರ ಅದರ ಮೇಲ್ವಿಚಾರಣೆ ಹೊಣೆ ಹೊತ್ತಿದ್ದರು. 14 ಜನರು ಎಸ್‌ಬಿಐ ಹಾಗೂ ಖಾಸಗಿ ಕಂಪನಿಯ ಆಡಿಟರ್‌ಗಳಾಗಿದ್ದರು.

ಹಲವು ರೀತಿಯಲ್ಲಿ ರಾಮನ ಹಣ ಲೂಟಿ

-ರಾಮಮಂದಿರದ ಹುಂಡಿ ಹಣವನ್ನು ಎಣಿಸುವ ಜಾಗಕ್ಕೆ ಸಿಬ್ಬಂದಿ ಬರುವಾಗ ಮತ್ತು ವಾಪಸ್‌ ಹೋಗುವಾಗ ತಪಾಸಣೆಯೇ ಆಗುತ್ತಿರಲಿಲ್ಲ

- ಸಿಸಿ ಕ್ಯಾಮೆರಾಗೆ ಒಬ್ಬ ಅಡ್ಡ ನಿಂತು, ಅದಕ್ಕೆ ಕಣ್ತಪ್ಪಿಸುತ್ತಿದ್ದ. ಉಳಿದವರು ಹಣವನ್ನು ಪ್ಯಾಂಟ್ ಹಾಗೂ ಶರ್ಟ್ ಜೇಬಿಗೆ ತುಂಬಿಕೊಳ್ಳುತ್ತಿದ್ದರು

- ಕದ್ದ ಹಣವನ್ನು ಶೌಚಾಲಯದಲ್ಲಿ ಬಚ್ಚಿಡುತ್ತಿದ್ದರು. ಕೆಲಸ ಮುಗಿದ ಬಳಿಕ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಹಂಚಿಕೊಳ್ಳುತ್ತಿದ್ದರು

- ಹಣ ಎಣಿಸುವಾಗ ಬಂಡಲ್‌ನಲ್ಲಿ ಜಾಸ್ತಿ ನೋಟು ಸೇರಿಸಿ ಕಂತೆ ಕಟ್ಟುತ್ತಿದ್ದರು. ಬ್ಯಾಂಕಿಗೆ ಹಣ ತುಂಬುವಾಗ ಹೆಚ್ಚುವರಿ ಸೇರಿಸಿದ್ದ ನೋಟುಗಳನ್ನು ಎಗರಿಸುತ್ತಿದ್ದರು

- ಇದಲ್ಲದೆ ದೇಗುಲಕ್ಕೆ ಕಾಣಿಕೆಯಾಗಿ ಬಂದ ಬಂಗಾರ, ಬೆಳ್ಳಿ ಆಭರಣ, ವಿಗ್ರಹಗಳೂ ನಾಪತ್ತೆಯಾದ ಬಗ್ಗೆ ಆರೋಪಗಳು ಇವೆ.

ಇವರೆಲ್ಲಾ ನೌಕರರಾಗಿದ್ದು ಹೇಗೆ?

ಟ್ರಸ್ಟ್‌ನವರು ದೇಣಿಗೆ ಎಣಿಕೆ ಜವಾಬ್ದಾರಿಯನ್ನು ಭಾರತೀಯ ಸ್ಟೇಟ್ ಬ್ಯಾಂಕ್‌ (ಎಸ್‌ಬಿಐ)ಗೆ ವಹಿಸಿದ್ದರು

ಎಸ್‌ಬಿಐನವರು ಹೊರಗುತ್ತಿಗೆ ಆಧಾರದ ಮೇಲೆ ಖಾಸಗಿ ಏಜೆನ್ಸಿಗೆ ಹಣ ಎಣಿಕೆ ಜವಾಬ್ದಾರಿ ನೀಡಿದ್ದರು.

ಹಲವು ಗಣ್ಯರ ಶಿಫಾರಸ್ಸಿನ ಮೇಲೆ ಈ ಆರೋಪಿಗಳು ಏಜೆನ್ಸಿಗೆ ಸೇರ್ಪಡೆಗೊಂಡಿದ್ದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈಲಿನಲ್ಲಿ ಅನಧಿಕೃತ ವ್ಯಾಪಾರ, ಧೂಮಪಾನ, ಭಿಕ್ಷೆಗೆ ₹2000 ದಂಡ!
ವಿವಾಹವೆಂದರೆ ಬರೀ ಹಾಡು, ಕುಣಿತವಲ್ಲ, ಅದು ಸಂಸ್ಕಾರ; ಸಪ್ತಪದಿ ಇಲ್ಲದಿದ್ರೆ ಹಿಂದು ಮದುವೆ ಅಮಾನ್ಯ: ಹೈಕೋರ್ಟ್‌