ರುದ್ರಾಭಿಷೇಕ, ಗುದ್ದಲಿಪೂಜೆ: ಬುಧವಾರದಿಂದ ರಾಮಮಂದಿರ ನಿರ್ಮಾಣ ಶುರು!

By Kannadaprabha NewsFirst Published Jun 9, 2020, 9:25 AM IST
Highlights

ನಾಳೆಯಿಂದ ರಾಮಮಂದಿರ ನಿರ್ಮಾಣ ಶುರು| ಬೆಳಗ್ಗೆ ರುದ್ರಾಭಿಷೇಕ, ನಂತರ ಗುದ್ದಲಿಪೂಜೆ| ಬೆಳಗ್ಗೆ 8 ಗಂಟೆಯಿಂದ ಕಾರ್ಯಕ್ರಮ ಆರಂಭ| ಸರಳವಾಗಿ ಕಾರ್ಯಕ್ರಮ ಆಯೋಜನೆ

ಅಯೋಧ್ಯೆ(ಜೂ.09): ಉತ್ತರಪ್ರದೇಶದ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಕಾರ್ಯಗಳಿಗೆ ಬುಧವಾರ ಅಧಿಕೃತವಾಗಿ ಚಾಲನೆ ಸಿಗಲಿದೆ. ಇದರೊಂದಿಗೆ ಮಂದಿರ ನಿರ್ಮಾಣ ಕನಸು ಸಾಕಾರಗೊಳ್ಳುವತ್ತ ಮಹತ್ವದ ಹೆಜ್ಜೆ ಇರಿಸಿದಂತಾಗಿದೆ.

ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯಗೋಪಾಲ ದಾಸ್‌ ಅವರ ವಕ್ತಾರ ಮಹಾಂತ ಕಮಲ ನಯನ ದಾಸ್‌, ‘ರಾಮಜನ್ಮಭೂಮಿಯಲ್ಲಿರುವ ಕುಬೇರ್‌ ತಿಲಾದಲ್ಲಿ ಶಿವನಿಗೆ ರುದ್ರಾಭಿಷೇಕ ನೆರವೇರಿಸಿ, ಪೂಜೆ ಸಲ್ಲಿಸಲಾಗುತ್ತದೆ. ಮಂದಿರದ ತಳಪಾಯಕ್ಕೆ ಇಟ್ಟಿಗೆ ಇಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಲಂಕೆಗೆ ರಾವಣನ ವಿರುದ್ಧ ಯುದ್ಧಕ್ಕೆ ಹೊರಟಾಗ ರಾಮನು ರಾಮೇಶ್ವರದಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದ. ಈ ಕಾರಣಕ್ಕೇ ರುದ್ರಾಭಿಷೇಕದ ಮೂಲಕ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.

ಟ್ರಸ್ಟ್‌ನ ಪರವಾಗಿ ಕಮಲ ನಯನ ದಾಸ್‌ ಅವರೇ ಬುಧವಾರ ಪೂಜಾ ಕೈಂಕರ‍್ಯ ನೆರವೇರಿಸಲಿದ್ದಾರೆ. ಬೆಳಗ್ಗೆ 8 ಗಂಟೆಗೆ ಪೂಜೆಗಳು ಆರಂಭವಾಗಿ 2 ತಾಸು ನಡೆಯಲಿವೆ. ಆ ಬಳಿಕ ಮಂದಿರ ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆಸಲಾಗುತ್ತದೆ. ಈವರೆಗೂ ಭೂಮಿ ಸಮತಟ್ಟು ಮಾಡುವ ಕೆಲಸ ನಡೆದಿತ್ತು. ಮಂದಿರ ನಿರ್ಮಾಣದ ಹೊಣೆಯನ್ನು ಖಾಸಗಿ ವಲಯದ ಎಲ್‌ ಆ್ಯಂಡ್‌ ಟಿ ಪಡೆದುಕೊಂಡಿದ್ದು, ಅದರ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳು ಈಗಾಗಲೇ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ವಿವಾದಿತ 67 ಎಕರೆ ಜಮೀನನ್ನು ರಾಮಜನ್ಮಭೂಮಿ ಎಂದು ಕಳೆದ ವರ್ಷ ಸುಪ್ರೀಂ ಕೋರ್ಟ್‌ ಘೋಷಿಸಿತ್ತು. ಆ ಬಳಿಕ ಮಂದಿರಕ್ಕಾಗಿ ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ರಾಮಮಂದಿರ ಟ್ರಸ್ಟ್‌ ರಚನೆ ಆಗಿತ್ತು.

click me!