22 ಕೇಜಿ ಬೆಳ್ಳಿ ಇಟ್ಟಿಗೆ ಇಟ್ಟು ಮಂದಿರಕ್ಕೆ ಆ.5ರಂದು ಮೋದಿ ಶಂಕು| ಇಟ್ಟಿಗೆ ಫೋಟೋ ಟ್ವೀಟ್ ಮಾಡಿದ ಬಿಜೆಪಿ ವಕ್ತಾರ| 12:15:15ಕ್ಕೆ ಶಂಕುಸ್ಥಾಪನೆ
ನವದೆಹಲಿ(ಜು.29: ಅಯೋಧ್ಯೆಯಲ್ಲಿ ಆ.5ರಂದು ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಇಟ್ಟಿಗೆಯಾಗಿ 22 ಕೆ.ಜಿ. ತೂಕದ ಬೆಳ್ಳಿ ಇಟ್ಟಿಗೆಯನ್ನು ಇರಿಸಲಿದ್ದಾರೆ. ಬಿಜೆಪಿ ವಕ್ತಾರ ಸುರೇಶ್ ನಖುವಾ ಈ ಬೆಳ್ಳಿ ಇಟ್ಟಿಗೆಯ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
ಬೆಳ್ಳಿ ಇಟ್ಟಿಗೆಯ ಮೇಲೆ ‘ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ದಾಮೋದರ ದಾಸ್ ಮೋದಿಜಿ ಅವರಿಂದ ಶಂಕುಸ್ಥಾಪನೆ. ಜೈ ಶ್ರೀರಾಂ. ಆಗಸ್ಟ್ 5, 2020, ಗಂಟೆ 12:15:15’ ಎಂದು ಕೆತ್ತಲಾಗಿದೆ. ಇಟ್ಟಿಗೆಯ ತೂಕ 22,600 ಗ್ರಾಂ ಇದೆ.
undefined
ಮೂಲಗಳ ಪ್ರಕಾರ ಅಂದು ಬೆಳಿಗ್ಗೆ 11 ಗಂಟೆಗೆ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. 200 ಮಂದಿ ವಿವಿಐಪಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಮಮಂದಿರದ ಆವರಣಕ್ಕೆ ಪ್ರಧಾನಿ ಮೋದಿ ಬೆಳಗ್ಗೆ 11.30ಕ್ಕೆ ತಲುಪಲಿದ್ದಾರೆ. ನಂತರ ಅವರು ಭಾಷಣ ಮಾಡಲಿದ್ದಾರೆ. 200 ಅತಿಥಿಗಳನ್ನು 50 ಆಸನಗಳ ಪ್ರತ್ಯೇಕ ನಾಲ್ಕು ಬ್ಲಾಕ್‌ನಲ್ಲಿ ಕುಳ್ಳಿರಿಸಲಾಗುತ್ತದೆ. ಒಂದು ಬ್ಲಾಕ್‌ನಲ್ಲಿ ಸಾಧು-ಸಂತರು, ಇನ್ನೊಂದರಲ್ಲಿ ರಾಮಮಂದಿರ ಹೋರಾಟ ನಡೆಸಿದವರು, ಮತ್ತೊಂದರಲ್ಲಿ ರಾಜಕೀಯ ನಾಯಕರು ಮತ್ತು ಕೊನೆಯ ಬ್ಲಾಕ್‌ನಲ್ಲಿ ಇತರ ಗಣ್ಯರು ಆಸೀನರಾಗಲಿದ್ದಾರೆ.
ಕಾರ್ಯಕ್ರಮಕ್ಕಾಗಿ ಅಯೋಧ್ಯೆಯಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು, ಪಟ್ಟಣದಾದ್ಯಂತ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಲೈವ್ ತೋರಿಸಲು ದೊಡ್ಡ ದೊಡ್ಡ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮವನ್ನು ದೂರದರ್ಶನದಲ್ಲಿ ಲೈವ್ ಪ್ರಸಾರ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ. 161 ಅಡಿ ಎತ್ತರದ ರಾಮಮಂದಿರದ ನಿರ್ಮಾಣವನ್ನು 3ರಿಂದ 3.5 ವರ್ಷದೊಳಗೆ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ.